2 ವರ್ಷಗಳಿಂದ ತೊಡಿಕಾನ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಗಿತ
Team Udayavani, Nov 5, 2018, 10:58 AM IST
ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡದ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಗಳೇ ಆಗಿವೆ. ಶಿಥಿಲಗೊಂಡ ಹಳೆಯ ಕಟ್ಟಡದಲ್ಲಿಯೇ ಎಳೆಯ ಮಕ್ಕಳು ಕಾಲ ಕಳೆಯುವಂತಾಗಿದೆ. 2015ರ ಜನವರಿ ತಿಂಗಳಲ್ಲಿ ನೂತನ ಅಂಗವಾಡಿ ಕಟ್ಟಡಕ್ಕೆ ಹಳೆಯ ಅಂಗವಾಡಿ ಕಟ್ಟಡದ ಪಕ್ಕದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಿ 4.18 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಸ್ಲ್ಯಾಬ್ ಕೆಲಸ ಪೂರ್ಣಗೊಂಡು ಗೋಡೆಯ ಗಾರೆ ಕೆಲಸವನ್ನು ಮುಗಿಸಲಾಗಿದೆ. ಶೌಚಾಲಯ, ಅಡುಗೆ ಕೊಠಡಿಯ ಕೆಲಸ, ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕಕ್ಕೆ ವಯರಿಂಗ್ ಕೆಲಸ ಆಗಿಲ್ಲ. ಆರ್‌ಸಿಸಿ ಮೇಲ್ಭಾಗ ಬದಿಗಳನ್ನು ಕಟ್ಟಿ ಮಳೆ ನೀರು ಹೋಗಲು ಪೈಪ್‌ನ ವ್ಯವಸ್ಥೆ ಮಾಡಿಲ್ಲ. ಮಳೆ ಬರುವಾಗ ನೀರು ಒಳಬರುತ್ತಿವೆ. ಒಳಗಿನ ಕೆಲವು ಭಾಗ ಟೈಲ್ಸ್ ಹಾಕಲು ಬಾಕಿ ಉಳಿದಿದೆ ಹಾಗೂ ಇತರ ಕೆಲಸವೂ ಬಾಕಿ ಇದೆ.
ನೀರಿನ ವ್ಯವಸ್ಥೆಯೂ ಇಲ್ಲ!
ಅಂಗನವಾಡಿ ಹಳೆಯ ಕಟ್ಟಡ ಭಾರಿ ಶಿಥಿಲಗೊಂಡಿದ್ದು, ಇದರಲ್ಲಿಯೇ 23 ಮಕ್ಕಳು ಕಾಲ ಕಳೆಯುವಂತಾಗಿದೆ. ಅಂಗವಾಡಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಕ್ಕದ ಪ್ರಾಥಮಿಕ ಶಾಲೆಯ ನೀರನ್ನು ಅಂಗನವಾಡಿಗೆ ಬಳಸುತ್ತಿದ್ದು, ಪ್ರಾಥಮಿಕ ಶಾಲೆಗೆ ಪ್ರತಿ ತಿಂಗಳು ಬರುವ ವಿದ್ಯುತ್‌ನ ಮೂರನೇ ಒಂದು ಭಾಗವನ್ನು ಅಂಗವಾಡಿ ಮಕ್ಕಳ ಹೆತ್ತವರಿಂದ ಸಂಗ್ರಹ ಮಾಡಿ ನೀಡಲಾಗುತ್ತಿದೆ. ಹಳೆಯ ಕಟ್ಟಡವನ್ನು ದುರಸ್ತಿ ಮಾಡಲು ಅನುದಾನ ಒದಗಿಸಿಕೊಡಬೇಕೆಂದು ಗ್ರಾ.ಪಂ. ಗೆ ಕೇಳಿಕೊಳ್ಳಲಾಗಿದೆ. ಇತ್ತ ಹಳೆ ಕಟ್ಟಡವು ದುರಸ್ತಿಗೊಂಡಿಲ್ಲ. ಅತ್ತ ನೂತನ ಕಟ್ಟಡದ ಕಾಮಗಾರಿ ಅಪೂರ್ಣವಾಗಿರುವುದರಿಂದ ಪುಟಾಣಿಗಳಿಗೆ ಈಗ ಯಾವ ಭಾಗ್ಯವೂ ಇಲ್ಲದಾಗಿದೆ.
ಗ್ರಾ.ಪಂ. ಅಲ್ಪ ಅನುದಾನ
ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಅಂಗವಾಡಿ ನೂತನ ಕಟ್ಟಡಕ್ಕೆ ಸ್ವಲ್ಪ ಅನುದಾನ ಇರಿಸಲಾಗಿದೆ. ಪಂಚಾಯತ್ ವತಿಯಿಂದ ಹೆಚ್ಚು ಅನುದಾನ ನೀಡಲು ಅಸಾಧ್ಯ.
– ಧನಲಕ್ಷ್ಮೀ, ಅರಂತೋಡು ಗ್ರಾ.ಪಂ. ಸದಸ್ಯರು
ಅನುದಾನದ ಕೊರತೆ
ತೊಡಿಕಾನ ಅಂಗವಾಡಿ ಕಾಮಗಾರಿ ಸ್ಥಗಿತಗೊಂಡಿರುವುದು ನಿಜ. ಇದಕ್ಕೆ ಅನುದಾನದ ಕೊರತೆ ಎದುರಾಗಿದೆ. ಶಾಸಕರಿಗೆ ನಾವು ಅನುದಾನ ಒದಗಿಸಿ ಕೊಡಬೇಕೆಂದು ಲಿಖಿತವಾಗಿ ಮನವಿ ಮಾಡಿಕೊಂಡಿದ್ದೇವೆ. ಅನುದಾನ ಬಂದಿಲ್ಲ. ಬಂದ ತತ್‌ಕ್ಷಣ ಕಾಮಗಾರಿ ಪೂರ್ಣಗೊಳಿಸಲಾಗುವುದು.
- ಸರಸ್ವತಿ ಸುಳ್ಯ, ಸಿಡಿಪಿಒ
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.