ಆಜಾದಿ ಕಣ್ಣಿನ ಲಾಟೀನು
Team Udayavani, Nov 6, 2018, 4:00 AM IST
ಅದೊಂದು ಟೀ ಅಂಗಡಿಯಲ್ಲಿ ಚಹಾದ ಬಟ್ಟಲು ಹಿಡಿದು ಕುಳಿತಿದ್ದೆ. ಚಹಾದ ಹಬೆಯಲ್ಲೂ ಆ ಸೈನಿಕರ ನಿರ್ಭೀತ ನೋಟವೇ ಕಾಡಿತು. ಹಾಗೆ ನೋಡಿದರೆ, ನಮ್ಮನ್ನು ಕಾಪಾಡುತ್ತಿರುವುದೇ ಆ ನಿರ್ಭೀತ ಕಂಗಳು…
ಬದುಕಿದ್ದಾಗಲೇ ಒಮ್ಮೆ ಸ್ವರ್ಗ ನೋಡಿಬಿಡೋಣ ಅಂತ ಕಾಶ್ಮೀರದ ಹಾದಿ ಹಿಡಿದಿದ್ದೆ. ಅಲ್ಲೊಂದು ಮ್ಯಾಜಿಕಲ್ ಬೆಟ್ಟ, ಪೆಹಲ್‌ಗಾಂವ್. ಹಿಂದಿ ಸಿನಿಮಾ “ಜಂಗ್ಲೀ’ಯಲ್ಲಿ ಶಮ್ಮಿ ಕಪೂರ್, “ಯಾಹೂ…’ ಎನ್ನುತ್ತಾ ಹಿಮದ ತಪ್ಪಲಿನಿಂದ ಜಾರುತ್ತಾನೆ ನೋಡಿ, ಅದೇ ಬೆಟ್ಟದ ಬುಡದಲ್ಲಿದ್ದೆ. ಮೈಮನ ರೋಮಾಂಚನಗೊಳಿಸುವಂಥ ಯಾನ. ಒಂದು ಹೆಜ್ಜೆಯನ್ನು ಕಿತ್ತು ಇಡುವುದೂ ಅಲ್ಲಿ ಕಷ್ಟ. ಕೆಳಕ್ಕೆ ಪ್ರಪಾತ.
ಮೇಲಕ್ಕೆ ಆಕಾಶ ತಾಕುವ ಮರಗಳ ಮೇಘಮಲ್ಹಾರ. ಕುದುರೆಯನ್ನೇರಿ ಸಾಗುತ್ತಿದ್ದೆ. ಆ ಕುದುರೆಯೋ, ಜಿಟಿಜಿಟಿ ಮಳೆ, ಜಾರುವ ನೆಲದಲ್ಲೂ ತನಗೆ ಸುಸ್ತಾಗುವುದೇ ಇಲ್ಲ ಎನ್ನುವಂಥ, ಹಿಮದ ನೆಲದ ಮಾಯಾ ಅವತಾರಿ. ನಮ್ಮೊಟ್ಟಿಗೆ ಅದರ ಮಾಲೀಕ, 19 ವರುಷದ ಸಮೀರ್ ಅಹಮದ್ ಇದ್ದ. ಕಂಪಿಸುತ್ತಾ ಕುಳಿತಿದ್ದ ನನಗೆ, “ಮೇಮ್, ಸಾಬ್ ಹಮ್ ಆಪ್ ಕೋ ಗಿರನೇ ನಹೀ ದೇಂಗೆ…’ ಎಂದು ಧೈರ್ಯ ತುಂಬುತ್ತಾ, ಮುನ್ನಡೆಸುತ್ತಿದ್ದ.
ಎಲ್ಲಿ ನೋಡಿದರೂ ಚೆಲ್ಲಾಡಿದ ಬಿಳಿಹಿಮ. ಅದರ ನಡುವೆ, ಮಕ್ಕಳ ಸ್ಟಾಚೂ ಆಟದಲ್ಲಿ ಅಲುಗಾಡದೇ ನಿಂತಿರುತ್ತಾರಲ್ಲ, ಆ ರೀತಿ ಕಂಡರು ಸೈನಿಕರು. ಕೈಯಲ್ಲಿದ್ದ ತೂಕದ ಗನ್ ಕೂಡ ಅವರ ಕೈ- ಎದೆಗೆ ಅಂಟಿಕೊಂಡಂತಿತ್ತು. ಅವರ ತಲೆ ಮಾತ್ರವೇ ಹೊರಳುತ್ತಾ, ಕಂಗಳು ಛೂಪು ನೋಟ ಬೀರುತ್ತಿದ್ದವು. ಅರೆಘಳಿಗೆ ಎಲ್ಲಿದ್ದೇನೆ ಎನ್ನುವುದನ್ನೇ ಮರೆತು, ಹಣೆಗೆ ಕೈಹಚ್ಚಿ ಸೆಲ್ಯೂಟ್ ಹೊಡೆದೆ.
ಆತನೂ ಕಿರುನಗೆಯೊಂದಿಗೆ ಸೆಲ್ಯೂಟ್ ರವಾನಿಸಿದ. ನಮ್ಮ ಕುದುರೆ ನಡೆಸುತ್ತಿದ್ದ, ಸಮೀರ್ ಮಾತ್ರ, ಆ ಸೈನಿಕನಿಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಸಾಗುತ್ತಿದ್ದ. ಅವನ ಭಾವ ಆ ಕ್ಷಣಕ್ಕೆ ಅರ್ಥವಾಗಲಿಲ್ಲ. ಆದರೆ, ಸೈನಿಕನ ತೀಕ್ಷ್ಣ ನೋಟ ನನ್ನನ್ನು ಹೆಜ್ಜೆ ಹೆಜ್ಜೆಗೂ ಕಾಡುತ್ತಲೇ ಇತ್ತು. ಪೆಹಲ್ಗಾಂವ್‌ನ ಆ ಬೆಟ್ಟದ ದಾರಿ ತುದಿ ಮುಟ್ಟುವುದು ಬೈಸರಾನ್ ಎಂಬಲ್ಲಿಗೆ. “ಮಿನಿ ಸ್ವಿಜರ್ಲೆಂಡ್’ ಎನ್ನುತ್ತಾರೆ, ಅದನ್ನು.
ಅಗಾಧ ತಿಳಿ, ಗಾಢ ಹಸಿರಿನ ಪೇಂಟನ್ನು ಬಳಸಿದ ಚಿತ್ತಾರದಂತಿತ್ತು ಆ ತಪ್ಪಲು. ಜತೆಗಿದ್ದವರೆಲ್ಲ ಸೆಲ್ಫಿಯ ಸೆಷನ್‌ನಲ್ಲಿ ಮುಳುಗಿದರೂ, ಅವರ ಕೂಗು ನನ್ನ ಕಿವಿಗೆ ಬೀಳದಷ್ಟು ಮನಸ್ಸು ಏಕಾಂತದಲ್ಲಿ ತೇಲುತ್ತಿತ್ತು. ನಾವೆಲ್ಲಾ ಇಷ್ಟು ಜನ ಒಟ್ಟಾಗಿ ಬಂದಿದ್ದರೂ ಆ ಕಾಡಿನ ಹಾದಿ ಹಿಡಿಸಿದ ದಿಗಿಲಿಗೆ ಒಮ್ಮೆ ಕಂಪಿಸಿದ್ದೆ. ಅಲ್ಲೂ ಒಬ್ಬ ಸೈನಿಕ. ಅವನ ಕಂಗಳಲ್ಲೂ ತೀಕ್ಷ್ಣ ನೋಟದ ಎಂದಿಗೂ ಆರದ ಒಂದು ಟಾರ್ಚ್.
ಹಗಲು- ರಾತ್ರಿ, ಮಳೆ- ಗಾಳಿಯನ್ನು ಲೆಕ್ಕಿಸದೆ, ಆ ನಿರ್ಮಾನುಷ ಕಾಡಿನಲ್ಲಿ ಯಾವ ದಿಕ್ಕಿನಿಂದಲಾದರೂ ಮೃತ್ಯು ಅವನ ಮೇಲೆರಗಬಹುದೆಂಬ ಅರಿವಿದ್ದರೂ, ಅದಕ್ಕೆ ಅವನು ಎದೆಗುಂದಿದಂತೆ ಕಾಣಲಿಲ್ಲ. ಅದ್ಯಾವುದರ ಪರಿವಿಲ್ಲದೆ ಗನ್ ಹಿಡಿದು ನಿಂತಿದ್ದ. ಅವನ ಕತ್ತಷ್ಟೇ ಹೊರಳುತ್ತಿತ್ತು. ಹಿಮದ ನೆಲದ ಪ್ರತಿಮೆಗಳಂತೆ ಆ ಸೈನಿಕರು, ನಿರ್ಭೀತ ನೋಟದಲ್ಲಿ ಕಾವಲು ನಡೆಸುತ್ತಿದ್ದರು.
ಆ ಬೆಟ್ಟದ ಮೇಲೆ ಚಹಾದ ಬಟ್ಟಲು ಹಿಡಿದು ಕುಳಿತಿದ್ದೆ. ಚಹಾದ ಹಬೆಯಲ್ಲೂ ಆ ಸೈನಿಕರ ನಿರ್ಭೀತ ನೋಟವೇ ಕಾಡಿತು. ಹಾಗೆ ನೋಡಿದರೆ, ನಮ್ಮನ್ನು ಕಾಪಾಡುತ್ತಿರುವುದೇ ಆ ನಿರ್ಭೀತ ಕಂಗಳು. ಅಂದು ಪಾಕ್ ಸೈನಿಕರು ಲೇಹ್ ಮಾರ್ಗವಾಗಿ ನುಗ್ಗಿದಾಗ, ಅವರನ್ನು ಬಗ್ಗು ಬಡಿಯುವ ದಿಟ್ಟ ನಿರ್ಧಾರ ಕೈಗೊಂಡ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್, ಜನರಲ್ ತಿಮ್ಮಯ್ಯ, ಜನರಲ್ ಆತ್ಮರಾಮ್ ಅವರ ಕಂಗಳಲ್ಲೂ ಇದ್ದಿದ್ದು ಅದೇ ನಿರ್ಭೀತಿಯೇ ಅಲ್ಲವೇ?
ಹತ್ತು ದಿನ ಅಗಾಧ ಹಿಮದ ರಾಶಿಯಡಿ ಇದ್ದು, ದೇಶಪ್ರೇಮದ ಉಸಿರಿನಲ್ಲಿ ಜೀವ ಹಿಡಿದಿದ್ದ ಹನುಮಂತಪ್ಪನ ಆತ್ಮದ ಕಣ್ಣುಗಳಲ್ಲೂ ಮಿಸುಕಾಡದೇ ಇದ್ದಿದ್ದೂ ಅದೇ ನಿರ್ಭೀತಿಯೇ ಅಲ್ಲವೇ? ಇಂಥ ಅದೆಷ್ಟೋ ಲಕ್ಷ ಲಕ್ಷ ಅಚಲ- ನಿರ್ಭೀತ ದೃಷ್ಟಿಗಳು ಕಾಶ್ಮೀರವನ್ನು ಭಾರತದ ಭೂಪಟದಲ್ಲುಳಿಸಲು ನೆರವಾದ ದೃಶ್ಯಗಳೆಲ್ಲ ಕಣ್ಮುಂದೆ ಬಂದು, ಅರ್ಧ ಕುಡಿದ ಚಹಾ ತಣ್ಣಗಾಗಿದ್ದೇ ಗೊತ್ತಾಗಲಿಲ್ಲ.
ಒಂದಷ್ಟು ದೂರ, ಅಲ್ಲಿ ಬೆಟ್ಟವೇ ಇಲ್ಲ; ಬರೀ ಹಾದಿಯಷ್ಟೇ. ಸಮೀರನೊಂದಿಗೆ ಅದೆಷ್ಟೋ ಮಾತಾಡುವುದಿತ್ತು. ಅವನು ನಮ್ಮನ್ನು ಸೇಫಾಗಿ ಕರೆತರುವ ಭರದಲ್ಲಿ ಕೈಕಾಲು ಕೆತ್ತಿಸಿಕೊಂಡಿದ್ದ. ಮೊಣಕೈ ಕೆತ್ತಿ ರಕ್ತ ಹರಿದಿತ್ತು. ಅಷ್ಟು ದೂರದ ಪಯಣದಲ್ಲಿ, ಚಿಕ್ಕದೊಂದು ಬಂಧ ಮೂಡಿತ್ತು. ಅಕ್ಕ ಅಂತ ಮಾತಾಡಿಸಿದ್ದ. ಅವನಿಗೂ ಹೇಳಿಕೊಳ್ಳುವುದು ಸಾಕಷ್ಟಿತ್ತು. ತಂಗಿ- ಅಮ್ಮನ ಜವಾಬ್ದಾರಿ, ಅದಕ್ಕಾಗಿ ಅವನು ಪಡುತ್ತಿರುವ ಪಾಡು… ಇತ್ಯಾದಿ ಹೇಳುತ್ತಲೇ ಹೋದ. ಅಲ್ಲಿನ ಉಗ್ರವಾದಿಗಳ ಬಗ್ಗೆ ಕೇಳಿದೆ.
ಮೊದಲಿಗೆ ಬಾಯ್ಬಿಡಲಿಲ್ಲ. ತಿರುಗಿಸಿ ಕೇಳಿದ ಪ್ರಶ್ನೆಗಳು ವ್ಯರ್ಥವಾದವು. ಅವನು ನಮ್ಮನ್ನು ಕರೆತಂದ ರೀತಿ, ಅಮ್ಮ ತಂಗಿಗಾಗಿ ಪಡುವ ಜೀವನ ಸಾಹಸವನ್ನು ಹೊಗಳಿದೆ. ತುಸು ಮೆತ್ತಗಾದ. “ಕಾಶ್ಮೀರ ನಮ್ಮದು. ನಮ್ಮ ಸ್ವಾತಂತ್ರ್ಯ ಕಿತ್ತುಕೊಂಡರೆ, ನಾವು ಬಿಡುವುದಿಲ್ಲ’ ಅಂತ ಮಾತಲ್ಲೇ ಬಾಂಬ್ ಸಿಡಿಸಿಬಿಟ್ಟ. ನಿಜಕ್ಕೂ ಅದು ಅವನ ಶಬ್ದಗಳಾಗಿರಲಿಲ್ಲ. ಕಂಠಪಾಠ ಮಾಡಿ, ಹೇಳಿ ಒಪ್ಪಿಸಿದ ಹಾಗಿತ್ತು.
“ಇಲ್ಲ ಮೇಮ್ ಸಾಬ್, ಇನ್ನು ಸ್ವಲ್ಪ ದಿನ ಮಾತ್ರವೇ… ನಾನೂ ಅವರೊಂದಿಗೆ ಸೇರುತ್ತೇನೆ…’ ಈ ವಾಕ್ಯ ಹೇಳಿದವನೇ ಅದೇಕೋ ಮೌನಿಯಾದ. ನನ್ನ ಎದೆ ಝಲ್ಲೆಂದಿತು. ಇಷ್ಟೊತ್ತು ನನ್ನೊಂದಿಗೆ ಮಾತಾಡುತ್ತಿದ್ದ ಸಮೀರ್ ಇವನೇನಾ..? ನಿಜಕ್ಕೂ ಬೆವತಿದ್ದೆ. ಸಮೀರ, ಬಹಳಷ್ಟು ಕಾಶ್ಮೀರಿ ಯುವಜನತೆಯನ್ನು ಪ್ರತಿನಿಧಿಸಿದವನಂತೆ ಕಂಡ. ಅಲ್ಲಿ ಇದ್ದಷ್ಟು ದಿನ ಹಲವರನ್ನು ಮಾತಾಡಿಸಿದ್ದೆ. ಅದರಲ್ಲಿ ಬಹುತೇಕರದ್ದು, ತಮಗೆ ಭಾರತದಿಂದ ಅನ್ಯಾಯವಾಗುತ್ತಿದೆ ಎಂಬ ವಾದವೇ ಆಗಿತ್ತು.
ಅದು ಅವರ ಸ್ವಂತದ ವಿಚಾರವಾಗಿರದೇ, ಚಿಕ್ಕವಯಸ್ಸಿನಲ್ಲಿ ಯಾರೋ ಅವರ ತಲೆಯಲ್ಲಿ ಬಲವಾಗಿ ತುಂಬಿದ ಸರಕಿನಂತೆ ಕಂಡಿತ್ತು, ಆ ಮಾತುಗಳು. ಸಾವರಿಸಿಕೊಂಡು ಹೇಳಿದೆ… “ಇಷ್ಟಕ್ಕೂ ನಿನಗೆ ಈ ದೇಶದಿಂದ ಆದ ಅನ್ಯಾಯವಾದರೂ ಏನು? ನೀನು ಇಷ್ಟಪಡುವ ಆ ಶ್ರೀನಗರ ನೋಡು… ಅಲ್ಲಿ ಏನಿಲ್ಲ… ಎಲ್ಲವೂ ಇದೆ. ಕಾಶ್ಮೀರಕ್ಕಾಗಿ ವಿಶೇಷ ಸಂವಿಧಾನವೂ ಇದೆ. ಅದು ನಿನ್ನ ಯಾವ ಸ್ವಾತಂತ್ರ್ಯ ಕಿತ್ತುಕೊಂಡಿದೆ ಹೇಳು? ಇಷ್ಟು ವರ್ಷ ನೀನು ಬದುಕಿರುವುದು ಇದೇ ದೇಶದ ಗಾಳಿ- ಆಹಾರದಿಂದಲೇ ಅಲ್ಲವೇ?
ನೀನು ಆ ಕಲ್ಲು ತೂರುವವರ, ಬಂದೂಕು ಹಿಡಿಯುವವರ ದಾರಿಯಲ್ಲಿ ಸಾಗಿ, ಮಿಲಿಟರಿಯವರು ನಿನ್ನನ್ನು ಹಿಡಿದರೆ, ನಿನ್ನ ಅಮ್ಮ- ತಂಗಿಯ ಗತಿ..? ಈಗ ಮಾಡುವಂತೆ ಇನ್ನೂ ಹೆಚ್ಚು ಕಷ್ಟಪಟ್ಟು ಕೆಲಸ ಮಾಡು. ಆಗ ನಿನ್ನ ಬದುಕು ಎಷ್ಟು ಸುಂದರ ನೋಡು…’ - ಅಂದೆ. ಅವನಿಗೆಷ್ಟು ತಲುಪಿತೋ… ಮತ್ತೆ ಮೌನಿಯಾದ. ತಿರುಗಿ ನನ್ನನ್ನು ನೋಡಿದ. ಅವನ ಕಂಗಳಲ್ಲೂ ಚೂಪು ನೋಟದ ಕಿಡಿಯಿತ್ತು. ಆರುವ ಲಾಟೀನಂತೆ ಕಂಡಿತು, ಕಣ್ಣು. ಅದೂ ನಿರ್ಭೀತ ನೋಟವೇ… ಕಿರುನಗೆಯಿಂದ ಬೀಳ್ಕೊಟ್ಟ. ನಿರ್ಭೀತ ನೋಟಗಳಿಗೆ ಎರಡು ದಡಗಳು ಅಂತನ್ನಿಸಿದ್ದೂ ಆಗಲೇ.
* ಮಂಜುಳಾ ಡಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.