ಉಪ ಚುನಾವಣೆ: ಮೈತ್ರಿಗೆ ಅಬ್ಬರದ ಗೆಲುವು ;ಬಿಜೆಪಿಗೆ ಏಟು
Team Udayavani, Nov 7, 2018, 9:20 AM IST
ಬೆಂಗಳೂರು:ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ 4ರಲ್ಲಿ ಮೈತ್ರಿ ಪಕ್ಷಗಳು ಪ್ರಚಂಡ ಜಯ ಗಳಿಸುವುದರ ಮೂಲಕ ರಾಜ್ಯದಲ್ಲಿ ವಿಪಕ್ಷ ಬಿಜೆಪಿಗೆ ಭಾರೀ ಆಘಾತ ನೀಡಿವೆ.
ಈ ಮೂಲಕ ರಾಜ್ಯದ ಸಮ್ಮಿಶ್ರ ಸರಕಾರ ಮತ್ತಷ್ಟು ಗಟ್ಟಿಯಾಗಿದ್ದು, ಮುಂಬರುವ ಲೋಕ ಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದು ವರಿಸಲು ಈ ಉಪ ಚುನಾವಣೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ. ವಿಪಕ್ಷ ಬಿಜೆಪಿಯ ಬೇಕಾಬಿಟ್ಟಿ ರಾಜಕಾರಣಕ್ಕೆ ಎಚ್ಚರಿಕೆಯ ಸಂದೇಶವನ್ನೂ ಈ ಫಲಿತಾಂಶದ ಮೂಲಕ ರವಾನೆ ಮಾಡಿದಂತಾಗಿದೆ.
ಮೂರು ಲೋಕಸಭಾ ಕ್ಷೇತ್ರ, ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ರಾಮನಗರ ವಿಧಾನಸಭೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಫಲಿತಾಂಶ ನಿರೀಕ್ಷಿತವಾಗಿತ್ತು. ಅಲ್ಲಿನ ಜೆಡಿಎಸ್‌ನ ಅಭ್ಯರ್ಥಿ ಗಳು ದಾಖಲೆಯ ಅಂತರದ ಜಯ ಸಾಧಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಬಿಜೆಪಿ(ಚಂದ್ರಶೇಖರ)ಗಿಂತ (ಬಿಜೆಪಿ ಅಭ್ಯರ್ಥಿ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದರಿಂದ, ಅಭ್ಯರ್ಥಿ ಇರಲಿಲ್ಲ. ಆದರೆ, ಪಕ್ಷದ ಚಿಹ್ನೆ ಇತ್ತು) 10,9137 ಮತಗಳ ಅಂತರದಿಂದ ಜಯಗಳಿಸಿ ತಮ್ಮ ಪತಿ ಮುಖ್ಯಮಂತ್ರಿ ಕುಮಾರ ಸ್ವಾಮಿಯ ದಾಖಲೆಯನ್ನೂ ಮೀರಿಸಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಮಂಡ್ಯದ ಇತಿಹಾಸದಲ್ಲಿಯೇ ಅತೀ ಹೆಚ್ಚು ಅಂದರೆ, 3,24,925 ಮತಗಳ ಅಂತರ ದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
ಬಿಜೆಪಿ ಬಲ ವೃದ್ಧಿ
ಜೆಡಿಎಸ್ ಪ್ರಾಬಲ್ಯ ಇರುವ ಎರಡೂ ಕ್ಷೇತ್ರ ಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದು ಬಿಜೆಪಿ ಸೋಲು ಕಂಡಿದ್ದರೂ, ತನ್ನ ಶಕ್ತಿ ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್. ಚಂದ್ರಶೇಖರ್ ಕಣ ದಿಂದ ಹಿಂದೆ ಸರಿದಿದ್ದರೂ ಬಿಜೆಪಿ ಅಧಿಕೃತ ಚಿಹ್ನೆ ಕಮಲಕ್ಕೆ 15,906 ಮತಗಳು ಲಭಿಸಿದ್ದು, ತಳ ಮಟ್ಟದಲ್ಲಿ ಗಟ್ಟಿಗೊಳ್ಳುವ ಸೂಚನೆ ನೀಡಿದೆ.
ಮಂಡ್ಯದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ 40 ಸಾವಿರ ಮತ ಪಡೆದಿದ್ದ ಬಿಜೆಪಿ, ಈ ಬಾರಿ ಸಾಕಷ್ಟು ಬಲ ವೃದ್ಧಿಸಿಕೊಂಡಿದೆ. ಡಾ| ಸಿದ್ದರಾಮಯ್ಯ, 2,44,377 ಮತಗಳನ್ನು ಪಡೆಯುವ ಮೂಲಕ ಮಂಡ್ಯದಲ್ಲಿಯೂ ಬಿಜೆಪಿ ಯನ್ನು ಗಟ್ಟಿಗೊಳಿಸಿದ್ದಾರೆ.
ಬಳ್ಳಾರಿ ಕೋಟೆ ಬೇಧಿಸಿದ ಉಗ್ರಪ್ಪ
ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಹಿ-ಕಹಿ ಎರಡೂ ಅನುಭವವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪುತ್ರ ಬಿ.ವೈ ರಾಘ ವೇಂದ್ರ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರ ವಿರುದ್ಧ ಗೆಲ್ಲಿಸಿಕೊಂಡು ಬರುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಿ. ಶ್ರೀರಾಮುಲು ತಮ್ಮ ಸಹೋದರಿ ಬಿಜೆಪಿಯ ಅಭ್ಯರ್ಥಿ ಜೆ. ಶಾಂತಾ ರನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದು, 14 ವರ್ಷಗಳ ಬಿಜೆಪಿ ಭದ್ರ ಕೋಟೆಯನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಹಾಗೂ ರಾಮುಲು ಅವರ ಅಧಿಪತ್ಯ ಅಂತ್ಯವಾದಂತಾಗಿದೆ.
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರು ಜೆ. ಶಾಂತಾ ವಿರುದ್ಧ ದಾಖಲೆಯ 2,43,161 ಮತಗಳ ಅಂತರದಿಂದ ಗೆಲುವು ಪಡೆವು ಬಳ್ಳಾರಿ ಕೋಟೆಯನ್ನು ಛಿದ್ರಗೊಳಿಸಿದ್ದಾರೆ.
ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ನಿರೀಕ್ಷೆಯಂತೆ ಗೆಲುವು ಪಡೆದಿದ್ದು, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರಿ ಗಿಂತ 39,476 ಹೆಚ್ಚು ಮತ ಪಡೆದು, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಂದೆ ಪಡೆದ ಮತಗಳಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಕೈ ಕಾರ್ಯಕರ್ತರ ಸಂಭ್ರಮ
ಐದು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ತಿಗಳು ನಾಲ್ಕು ಕ್ಷೇತ್ರಗಳಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು. ಕೆಪಿಸಿಸಿ ಕಚೇರಿ ಎದುರು ಪಟಾಕಿಸಿಡಿಸಿ ಸಂಭ್ರಮಿಸಿದರು. ಜಮಖಂಡಿ ವಿಧಾನಸಭೆ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರು ವುದರಿಂದ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಕಾರ್ಯಕರ್ತರು ಪಟಾಕಿ ಸಿಡಿಸಿ, ನಾಯಕರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಬಿಜೆಪಿಗೆ ಏಟು
ಐದು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿ ನಾಯಕರ ತಳಮಳಕ್ಕೆ ಕಾರಣವಾಗಿದೆ. ಕನಿಷ್ಠ ಎರಡು ಲೋಕಸಭಾ ಕ್ಷೇತ್ರಗಳನ್ನಾದರೂ ಉಳಿಸಿಕೊಳ್ಳುವ ಭರವಸೆಯಲ್ಲಿದ್ದ ರಾಜ್ಯ ನಾಯಕರಿಗೆ ಬಳ್ಳಾರಿಯಲ್ಲಿ ರಾಮುಲು ಸಹೋದರಿ ಜೆ.ಶಾಂತಾ ಹೀನಾಯ ವಾಗಿ ಸೋತಿರುವುದು ದೊಡ್ಡ ಆಘಾತಕ್ಕೆ ಕಾರಣ ವಾಗಿದೆ. ಅಷ್ಟೇ ಅಲ್ಲದೇ ಶಿವಮೊಗ್ಗದಲ್ಲಿಯೂ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಕೂಡ ಸಾಕಷ್ಟು ಪೈಪೋಟಿ ನೀಡಿದ್ದು, ಪ್ರಯಾಸದ ಗೆಲುವು ದೊರೆತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಬಿಜೆಪಿಗೆ ಉಪ ಚುನಾವಣೆ ಫಲಿತಾಂಶ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಮೈ ಮರೆತರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮತ್ತಷ್ಟು ಬಲಿಷ್ಠವಾಗುವ ಸಂದೇಶವನ್ನು ಈ ಚುನಾವಣಾ ಫಲಿತಾಂಶ ನೀಡಿದೆ.
ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ನೀಡುವ ಮೂಲಕ ಸಮ್ಮಿಶ್ರ ಸರಕಾರಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಲೋಕಸಭೆಗೂ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ 28 ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸುತ್ತೇವೆ.
ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ.
ಮೋದಿ ಸರಕಾರದ ವಿರುದ್ಧದ ಅಲೆ ದೇಶದಲ್ಲಿ ಬೀಸುತ್ತಿದೆ. ನಾಲ್ಕು ಕ್ಷೇತ್ರಗಳಲ್ಲಿ ಚುನಾವಣ ಗೆಲುವಿನ ಅಂತರ ಹೆಚ್ಚಾಗಿದೆ. ಜನರ ಅಭಿಪ್ರಾಯ ಏನಿದೆ ಎನ್ನುವ ಮುನ್ಸೂಚನೆ ಇದಾಗಿದೆ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಉಪ ಚುನಾವಣೆಯಲ್ಲಿ ಜನತೆಯ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಚುನಾವಣೆಯಲ್ಲಿ ಎರಡೂ ಪಕ್ಷಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ಹಾಗೂ ಹೆಂಡವನ್ನು ರಾಜಾರೋಷವಾಗಿ ಹಂಚಿಕೆ ಮಾಡಿದವು.
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.
ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ರಾಜ್ಯದ ಜನತೆ ನೀಡಿರುವ ಉತ್ತರ ಇದಾಗಿದೆ. ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನಿಸುತ್ತಿದೆ. ರಾಜ್ಯದ ಜನತೆ ಅದನ್ನು ಒಪ್ಪಿಲ್ಲ. ಈಗ ಸೆಮಿಫೈನಲ್ ಗೆದ್ದಿದ್ದೇವೆ. ಲೋಕಸಭೆ ಚುನಾವಣೆ ಫಲಿತಾಂಶ ಏನಿರಲಿದೆ ಎನ್ನುವುದನ್ನು ರಾಜ್ಯದ ಮತದಾರರು ತೋರಿಸಿಕೊಟ್ಟಿದ್ದಾರೆ.
ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ.
ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿರುವುದರಿಂದ ನಾಲ್ಕು ಕ್ಷೇತ್ರಗಳಲ್ಲಿ ಜಯ ದೊರೆತಿದೆ. ಶಿವಮೊಗ್ಗದಲ್ಲಿ ಕಡೆ ಗಳಿಗೆಯಲ್ಲಿ ಅಭ್ಯರ್ಥಿಯನ್ನು ಹಾಕಿದ್ದರಿಂದ ಸೋಲಾಯಿತು. ಹಳೆ ಭಿನ್ನಾಭಿಪ್ರಾಯ ಬಿಟ್ಟು ಕಾಂಗ್ರೆಸ್ ಜೊತೆ ಸೇರಿ ಮುಂದಿನ ಲೋಕಸಭೆ ಚುನಾವಣೆ ಎದುರಿಸುತ್ತೇವೆ.
ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ.
ಮೈತ್ರಿ ಸರಕಾರಕ್ಕೆ ರಾಜ್ಯದ ಜನತೆ ಸಮ್ಮತಿಯ
ಮುದ್ರೆ ಒತ್ತಿದ್ದಾರೆ.ಲೋಕಸಭೆಯಲ್ಲಿಯೂ ಸಮ್ಮಿಶ್ರ ಸರಕಾರ ಅಧಿಕಾರ ಹಿಡಿಯಲು ಸೂಕ್ತ ಎಂಬ ಉತ್ತರ ಸಿಕ್ಕಿದೆ. 28 ಲೋಕಸಭಾ ಕ್ಷೇತ್ರದಲ್ಲಿಯೂ ಗೆಲ್ಲಲು ಶ್ರಮಿಸುತ್ತೇವೆ.
ಡಾ| ಪರಮೇಶ್ವರ್, ಉಪ ಮುಖ್ಯಮಂತ್ರಿ.
ಬಿಜೆಪಿಯ ನಕಾರಾತ್ಮಕ ರಾಜಕಾರಣಕ್ಕೆ ಜನತೆ ಉತ್ತರ ನೀಡಿದ್ದಾರೆ. ಇದು ಬಿಜೆಪಿಗೆ ದೊಡ್ಡ ಪಾಠ, ಅವರು ಇದೇ ಪ್ರವೃತ್ತಿ ಮುಂದುವರೆಸಿದರೆ, ಲೋಕಸಭೆ ಚುನಾವಣೆಯಲ್ಲಿ ಇನ್ನೂ ದೊಡ್ಡ ಅಂತರದ ಸೋಲಾಗಲಿದೆ. ಒಗ್ಗಟ್ಟಿನ ಹೋರಾಟದಲ್ಲಿ ಜಯ ಇದೆ ಎನ್ನುವುದನ್ನು ಜನತೆ ತೋರಿಸಿಕೊಟ್ಟಿದ್ದಾರೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ಬಳ್ಳಾರಿ ಉಪ ಚುನಾವಣೆಯಲ್ಲಿ ಶಾಂತಿಯುತವಾಗಿ ನಡೆಯಲು ಸಹಕರಿಸಿದ್ದಕ್ಕೆ ಅಣ್ಣ ಶ್ರೀರಾಮುಲುಗೆ ಧನ್ಯವಾದ ಅರ್ಪಿಸುತ್ತೇನೆ. ಈ ಚುನಾವಣೆ ಫಲಿತಾಂಶ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನ ಮೇಲೆ ಭರವಸೆ ಇಟ್ಟು ಬಳ್ಳಾರಿಯಲ್ಲಿ ನಾನು ಹೇಳಿದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಹೈಕಮಾಂಡ್ ನಾಯಕರಿಗೂ ಧನ್ಯವಾದ ಅರ್ಪಿಸುತ್ತೇನೆ.
ಡಿ.ಕೆ. ಶಿವಕುಮಾರ್, ಜಲ ಸಂಪನ್ಮೂಲ ಸಚಿವ.
ಬಳ್ಳಾರಿಯಲ್ಲಿ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಚುನವಣಾ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಾರ್ಯಕರ್ತರ ಶ್ರಮ ಫಲ ನೀಡಲಿಲ್ಲ. ಲೋಕಸಭೆ ಚುನಾವಣೆಯ ಮೇಲೆ ಈ ಫಲಿತಾಂಶ ಪರಿಣಾಮ ಬೀರುವುದಿಲ್ಲ
ಬಿ. ಶ್ರೀರಾಮುಲು, ಬಿಜೆಪಿ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.