ಕ್ಲೀನ್ ಸ್ವೀಪ್ ಕನಸಿನಲ್ಲಿ ರೋಹಿತ್ ಪಡೆ
Team Udayavani, Nov 11, 2018, 6:00 AM IST
ಚೆನ್ನೈ: ವಿಶ್ವ ಚಾಂಪಿಯನ್ ಖ್ಯಾತಿಯ ವೆಸ್ಟ್ ಇಂಡೀಸ್ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತ, ರವಿವಾರ ಚೆನ್ನೈಯಲ್ಲಿ 3ನೇ ಹಾಗೂ ಅಂತಿಮ ಪಂದ್ಯದಲ್ಲೂ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ತಯಾರಿಯಲ್ಲಿದೆ. ಈ ಮೂಲಕ ಚುಟುಕು ಕ್ರಿಕೆಟ್ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಳ್ಳುವುದು ರೋಹಿತ್ ಪಡೆಯ ಗುರಿ.
ಇನ್ನೊಂದೆಡೆ ವೆಸ್ಟ್ ಇಂಡೀಸ್ ಪಾಲಿಗೆ ಇದು ಗೆಲ್ಲಲು ಉಳಿದಿರುವ ಅಂತಿಮ ಅವಕಾಶ. ಟೆಸ್ಟ್ ಸರಣಿಯನ್ನು 0-2 ಅಂತರದಿಂದ, ಏಕದಿನ ಸರಣಿಯನ್ನು 1-3 ಅಂತರದಿಂದ ಕಳೆದುಕೊಂಡ ಕೆರಿಬಿಯನ್ ತಂಡ ಕೊನೆಯ ಪ್ರಯತ್ನದಲ್ಲೊಂದು ಗೆಲುವು ಸಾಧಿಸಿ ಭಾರತ ಪ್ರವಾಸಕ್ಕೆ ಮಂಗಳ ಹಾಡೀತೇ ಎಂಬುದೊಂದು ಕುತೂಹಲ.
ಈ ಪಂದ್ಯಕ್ಕಾಗಿ ಭಾರತ ತನ್ನ ಮೀಸಲು ಸಾಮರ್ಥ್ಯವನ್ನು ಪ್ರಯೋಗಿಸುವ ಸಾಧ್ಯತೆ ಹೆಚ್ಚಿದೆ. ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್, ಕುಲದೀಪ್ ಯಾದವ್ ಅವರಿಗೆಲ್ಲ ವಿಶ್ರಾಂತಿ ನೀಡಿದೆ. ಹೀಗಾಗಿ ಸ್ಥಳೀಯ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಸ್ಪಿನ್ನರ್ ಶಾಬಾಜ್ ನದೀಂ ಅವರೆಲ್ಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಸಿದ್ಧಾರ್ಥ್ ಕೌಲ್ ರೇಸ್‌ನಲ್ಲಿರುವ ಮತ್ತೂಬ್ಬ ಆಟಗಾರ. ಇವರಲ್ಲಿ ಒಂದಿಬ್ಬರಾದರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ತಂಡದ ಅಗ್ರ ಕ್ರಮಾಂಕದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ.
ದೀಪಾವಳಿ ಸಂಭ್ರಮದಲ್ಲಿ ಮೇಳೈಸಿದ ಮಂಗಳವಾರದ ಲಕ್ನೊ ಪಂದ್ಯದಲ್ಲಿ ರೋಹಿತ್ ಶರ್ಮ ಅಮೋಘ ಶತಕ ಸಿಡಿಸಿ ವಿಂಡೀಸ್ ಮೇಲೆ ಸವಾರಿ ಮಾಡಿದ್ದರು. ಸರಣಿ ಸಮಬಲ ಸಾಧಿಸುವ ಕೆರಿಬಿಯನ್ನರ ಪ್ರಯತ್ನಕ್ಕೆ ತಣ್ಣೀರೆರಚಿದ್ದರು. ಆದರೆ ಮುಂಬರುವ ಆಸ್ಟ್ರೇಲಿಯ ಪ್ರವಾಸದ ದೃಷ್ಟಿಯಿಂದ ಉಳಿದವರ ಬ್ಯಾಟಿಂಗ್ ಫಾರ್ಮ್ ಕೂಡ ಭಾರತಕ್ಕೆ ಅತ್ಯಂತ ಮಹತ್ವದ್ದಾಗಲಿದೆ. ಧವನ್, ರಾಹುಲ್, ಪಂತ್ ಹೇಗೆ ಬ್ಯಾಟ್ ಬೀಸಬಹುದು ಎಂಬುದನ್ನು ಕಾಣಲು ಎಲ್ಲರೂ ಕಾತರದಿಂದಿದ್ದಾರೆ. ಕಾಂಗರೂ ನಾಡಿಗೆ ನೆಗೆಯುವ ಮುನ್ನ ಟೀಮ್ ಇಂಡಿಯಾದ ಸಾಮರ್ಥ್ಯ ಪರೀಕ್ಷೆಗೆ ಲಭಿಸಿರುವ ಕಟ್ಟಕಡೆಯ ಅವಕಾಶ ಇದಾಗಿದೆ.
ವಿಂಡೀಸ್ ಸತತ ವೈಫಲ್ಯ
ವೆಸ್ಟ್ ಇಂಡೀಸ್ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಾಣುತ್ತ ಬಂದಿದೆ. ಸ್ಫೋಟಕ ಓಪನರ್‌ಗಳಾದ ಕ್ರಿಸ್ ಗೇಲ್, ಎವಿನ್ ಲೆವಿಸ್ ಅನುಪಸ್ಥಿತಿಯಲ್ಲಿ ಭರ್ಜರಿ ಆರಂಭ ಕಾಣಲು ಸಾಧ್ಯವಾಗುತ್ತಿಲ್ಲ. ಶಿಮ್ರನ್ ಹೆಟ್‌ಮೈರ್, ಶೈ ಹೋಪ್ ಅವರ ಬ್ಯಾಟಿಂಗ್ ಅಬ್ಬರ ಮಂಕಾದಂತಿದೆ. ಕೈರನ್ ಪೊಲಾರ್ಡ್, ಡ್ಯಾರನ್ ಬ್ರಾವೊ, ದಿನೇಶ್ ರಾಮಧಿನ್ ಇನ್ನೂ ಲಯ ಕಂಡುಕೊಂಡಿಲ್ಲ.
ಇದು ಬ್ಯಾಟಿಂಗ್ ಸಂಕಟದ ಕತೆಯಾದರೆ, ಬೌಲಿಂಗ್ ವಿಭಾಗದ ಸಮಸ್ಯೆ ಗಂಭೀರ ಮಟ್ಟದಲ್ಲೇ ಇದೆ. ಒಶಾನೆ ಥಾಮಸ್ ತಮ್ಮ ಪೇಸ್ ದಾಳಿ ಮೂಲಕ ಗಮನ ಸೆಳೆದರೂ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲವೇ ಸಿಗುತ್ತಿಲ್ಲ. ಒಟ್ಟಾರೆ, ಟಿ20 ಜೋಶ್ ಮೂಡಿಸುವಲ್ಲಿ ಕೆರಿಬಿಯನ್ನರು ಸಂಪೂರ್ಣ ವಿಫಲರಾಗಿದ್ದಾರೆ.
ಬ್ಯಾಟ್ಸ್‌ಮನ್‌ಗಳ ಮೆರೆದಾಟ?
ಇತ್ತೀಚಿನ ಪಂದ್ಯಗಳನ್ನು ಗಮನಿಸಿದಾಗ ಚೆನ್ನೈ ಟ್ರ್ಯಾಕ್ ನಿಧಾನ ಗತಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದ್ದು ಕಂಡುಬರುತ್ತದೆ. ಆದರೆ ಇದು ಟಿ20 ಕಾದಾಟ ಆಗಿರುವುದರಿಂದ ಬ್ಯಾಟ್ಸ್‌ಮನ್‌ಗಳು ಮೆರೆಯುವ ಸಾಧ್ಯತೆ ಇದೆ.
ಅಂದಹಾಗೆ, ಚೆನ್ನೈಯನ್ನು ಎರಡನೇ ಮನೆಯನ್ನಾಗಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರ ಗೈರು ಇಲ್ಲಿನ ಅಭಿಮಾನಿಗಳನ್ನು ಕಾಡದಿರದು!
6 ವರ್ಷಗಳ ಬಳಿಕ ಚೆನ್ನೈ ಪಂದ್ಯ
ಇದು ಚೆನ್ನೈಯಲ್ಲಿ ನಡೆಯುತ್ತಿರುವ ಕೇವಲ 2ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ. 6 ವರ್ಷಗಳ ಸುದೀರ್ಘ ಅವಧಿಯ ಬಳಿಕ ಆಡಲಾಗುತ್ತಿರುವ ಮೊದಲ ಮುಖಾಮುಖೀಯು ಹೌದು.ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ 2012ರ ಸೆ. 11ರಂದು ಮೊದಲ ಟಿ20 ಪಂದ್ಯ ಏರ್ಪಟ್ಟಿತ್ತು. ಪ್ರವಾಸಿ ನ್ಯೂಜಿಲ್ಯಾಂಡ್ ಸರಣಿಯ ದ್ವಿತೀಯ ಪಂದ್ಯವನ್ನು ಇಲ್ಲಿ ಆಡಿ ಒಂದು ರನ್ನಿನ ರೋಮಾಂಚಕ ಜಯ ಸಾಧಿಸಿತ್ತು. ಇದರೊಂದಿಗೆ 2 ಪಂದ್ಯಗಳ ಸರಣಿ 1-0 ಅಂತರದಿಂದ ಕಿವೀಸ್ ಪಾಲಾಗಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್, ಬ್ರೆಂಡನ್ ಮೆಕಲಮ್ ಅವರ 91 ರನ್ ಸಾಹಸದಿಂದ 5 ವಿಕೆಟಿಗೆ 167 ರನ್ ಪೇರಿಸಿತ್ತು. ಜವಾಬಿತ್ತ ಭಾರತ 4 ವಿಕೆಟಿಗೆ 166 ರನ್ ಗಳಿಸಿ ಸೋತಿತು. ವಿರಾಟ್ ಕೊಹ್ಲಿ 70, ಯುವರಾಜ್ ಸಿಂಗ್ 34 ರನ್ ಗಳಿಸಿ ಗಮನ ಸೆಳೆದರು. ಯುವಿ ಅಂತಿಮ ಓವರಿನಲ್ಲಿ ಔಟಾದುದು ಪಂದ್ಯದ ತಿರುವಿಗೆ ಕಾರಣವಾಯಿತು. ಧೋನಿ 22, ರೋಹಿತ್ ಶರ್ಮ 4 ರನ್ ಮಾಡಿ ಅಜೇಯರಾಗಿ ಉಳಿದಿದ್ದರು.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಯಜುವೇಂದ್ರ ಚಾಹಲ್.
ವೆಸ್ಟ್ ಇಂಡೀಸ್: ಶೈ ಹೋಪ್, ನಿಕೋಲಸ್ ಪೂರಣ್, ಶಿಮ್ರನ್ ಹೆಟ್‌ಮೈರ್, ಡ್ಯಾರನ್ ಬ್ರಾವೊ, ಕೈರನ್ ಪೊಲಾರ್ಡ್, ಕಾರ್ಲೋಸ್ ಬ್ರಾತ್‌ವೇಟ್ (ನಾಯಕ), ರೋವ್‌ಮನ್ ಪೊವೆಲ್, ಕೀಮೊ ಪೌಲ್, ಫ್ಯಾಬಿಯನ್ ಅಲೆನ್, ಖಾರಿ ಪಿಯರೆ, ಒಶಾನೆ ಥಾಮಸ್.
ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.