ಮೂಲಸೌಕರ್ಯ ಅಭಿವೃದ್ಧಿಗೆ ಮೊದಲ ಆದ್ಯತೆ
Team Udayavani, Nov 11, 2018, 6:00 AM IST
ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದ ಮೂರು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಳ್ಳಾರಿಯಿಂದ ಕಾಂಗ್ರೆಸ್‌ನ ಉಗ್ರಪ್ಪ, ಮಂಡ್ಯದಿಂದ ಜೆಡಿಎಸ್‌ನ ಎಲ್.ಆರ್.ಶಿವರಾಮೇಗೌಡ, ಶಿವಮೊಗ್ಗದಿಂದ ಬಿಜೆಪಿಯ ಬಿ.ವೈ.ರಾಘವೇಂದ್ರ ಆಯ್ಕೆಯಾಗಿದ್ದು, ಸೀಮಿತ ಅವಧಿಯಲ್ಲೇ ತಮ್ಮ ಕ್ಷೇತ್ರಗಳ ಅಭಿವೃದಿಟಛಿಯ ಬಗ್ಗೆ ತಮ್ಮ ಕಾರ್ಯಯೋಜನೆ ಏನು ಎಂಬ ಕುರಿತು “ಉದಯವಾಣಿ’ ಕೇಳಿದ ನಾಲ್ಕು ಪ್ರಶ್ನೆಗಳಿಗೆ ನೂತನ ಸಂಸದರು ಹೀಗೆ ಉತ್ತರಿಸಿದ್ದಾರೆ.
ಜನರ ಸಮಸ್ಯೆಗೆ ಮೊದಲ ಸ್ಪಂದನೆ
ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮೊದಲ ಆದ್ಯತೆ. ಸಂಸದನಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಡಿ ಜನರಿಗೆ ಯಾವುದೇ ಅಡೆತಡೆಯಿಲ್ಲದೆ ಸೌಲಭ್ಯ ದೊರಕಿಸಿಕೊಡುವುದು ನನ್ನ ಗುರಿ. ಮೊದಲಿಗೆ ಚಾಲ್ತಿಯಲ್ಲಿರುವ ಕಾಮಗಾರಿಗಳು ಪೂರ್ಣಗೊಳಿಸಿ ಜಿಲ್ಲೆಗೆ ಅಗತ್ಯ ಇರುವ ಹೊಸ ಯೋಜನೆಗಳನ್ನು ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ತತಕ್ಷಣದಿಂದಲೇ ಕಾರ್ಯಪ್ರವೃತ್ತನಾಗಿದ್ದೇನೆ.
ಸಂಸತ್ ಸದಸ್ಯತ್ವದ ಅವಧಿ ಆರು ತಿಂಗಳು ಮಾತ್ರ. ಇಷ್ಟು ಕಡಿಮೆ ಆವಧಿಯಲ್ಲಿ ಇದೆಲ್ಲವೂ ಸಾಧ್ಯವೇ?
ಕ್ಷೇತ್ರದಲ್ಲಿ ನಾನು ಸೆಟಲ್ ಆಗಲು ಆರು ತಿಂಗಳು ಬೇಕು ನಿಜ. ಆರು ತಿಂಗಳಲ್ಲಿ ಕ್ಷೇತ್ರಕ್ಕೆ ಏನೇನೋ ಮಾಡಿಬಿಡುತ್ತೇನೆ ಎಂದು ನಾನು ಹೇಳಲು ಹೋಗುವುದಿಲ್ಲ. ಮಂಡ್ಯ ಜನತೆ ಪ್ರಜ್ಞಾವಂತರಿದ್ದಾರೆ. ಪ್ರಾಕ್ಟಿಕಲ್ ಆಗಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಉದಾಹರಣೆಗೆ ಡೆಮೋ ರೈಲು ಬೆಳಗ್ಗೆ ಬೆಂಗಳೂರಿನಿಂದ ಹೊರಟು 11 ಗಂಟೆಗೆ ಚನ್ನಪಟ್ಟಣಕ್ಕೆ ಬಂದು ನಿಂತಿದ್ದು ಮತ್ತೆ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಗುತ್ತದೆ. ಆದರೆ, ಅದು ಚನ್ನಪಟ್ಟಣದಲ್ಲಿ ನಿಲ್ಲುವ ಬದಲು ಮಂಡ್ಯಗೆ ಬಂದು ಬೆಂಗಳೂರಿಗೆ ಹೋದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಹತ್ತು ರೂ. ದರದಲ್ಲಿ ಪ್ರಯಾಣಿಸಬಹುದು. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಜತೆಯೂ ಮಾತನಾಡಿದ್ದೇನೆ. ಹೀಗೆ ದೊಡ್ಡ ದೊಡ್ಡ ಕೆಲಸಗಳಲ್ಲದಿದ್ದರೂ ಹೆಚ್ಚಿನ ಜನರಿಗೆ ಅನುಕೂಲವಾಗುವ ಕೆಲಸ ಮಾಡಬಹುದಲ್ಲಾ?
ಕ್ಷೇತ್ರದಲ್ಲಿ ನೀವು ಕಂಡಂತೆ ಇರುವ ಸಮಸ್ಯೆಗಳು ಯಾವುವು?
ಸಾಕಷ್ಟು ಸಮಸ್ಯೆಗಳಿವೆ. ಸರ್ಕಾರಿ ಸಕ್ಕರೆ ಕಾರ್ಖಾನೆ ನಿಂತು ಹೋಗಿದೆ. ಯಂತ್ರೋಪಕರಣಗಳ ದುರಸ್ಥಿಗೆ ಹಣ ಕೊಡುತ್ತಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ. ಅದರ ಬದಲು ಸಂಪೂರ್ಣವಾಗಿ ಹೊಸದಾಗಿ ಕಾರ್ಖಾನೆ ಪ್ರಾರಂಭಿಸುವುದು ಸೂಕ್ತ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿಯೂ ಚರ್ಚಿಸಲಾಗಿದೆ. ಪೂರಕವಾಗಿ ಸ್ಪಂದಿಸಿದ್ದಾರೆ. ನಮ್ಮ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಲ್ಪಿಸಬೇಕಿದೆ. ದೇವೇಗೌಡರು, ಕುಮಾರಸ್ವಾಮಿಯವರಿಗೆ ಜಿಲ್ಲೆಯ ಬಗ್ಗೆ ವಿಶೇಷ ಮಮತೆ. ಹೀಗಾಗಿ, ಅವರ ಮಾರ್ಗದರ್ಶನ ಹಾಗೂ ನೆರವು ಪಡೆದು ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಮಾಡುವ ಕನಸು ಇದೆ.ಎರಡು ಬಾರಿ ಶಾಸಕನಾಗಿ ಅದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಕ್ಷೇತ್ರದವರೆಗೆ ಇರುವ ಸಮಸ್ಯೆ ನನಗೆ ಗೊತ್ತಿದೆ. ಮಂಡ್ಯ ಜನರ ನಾಡಿಮಿಡಿತವೂ ಗೊತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.
ಸಂಸತ್ ಪ್ರವೇಶ ಬಗ್ಗೆ ನಿಮಗೆ ಹೇಗನಿಸುತ್ತದೆ?
2008 ರಲ್ಲಿ ನಾನಿದ್ದ ಪಕ್ಷದಲ್ಲಿ ನನಗೆ ಎಂಎಲ್‌ಎ ಟಿಕೆಟ್ ಸಿಗದಿದ್ದಾಗ ಸ್ವಲ್ಪ ಬೇಸರವಾಯಿತು. ಆ ನಂತರ ನಾನು ಎರಡು ಬಾರಿ ಶಾಸಕನಾಗಿದ್ದೆ. ಲೋಕಸಭೆಗೆ ಹೋಗುವುದು ಸೂಕ್ತ ಎಂದು ಅನಿಸಿತು. ಆದರೆ, ನನಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೇನೆ. ಸಂಸತ್ ಸದಸ್ಯನಾಗುವುದು ನನ್ನ ದಶಕದ ಕನಸು ಈಡೇರಿದೆ. ಸಂಸತ್ ಪ್ರವೇಶ ನನಗೆ ನಿಜಕ್ಕೂ ಸಂತಸ ತಂದಿದೆ.
– ಎಲ್.ಆರ್. ಶಿವರಾಮೇಗೌಡ, ಮಂಡ್ಯ ಸಂಸದ (ಜೆಡಿಎಸ್)
ಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟತೆ, ಕಲ್ಪನೆ ಇದೆ
ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?
ಈ ಹಿಂದೆ ನಾನು ಸಂಸದನಾಗಿ, ನಮ್ಮ ತಂದೆಯವರಾದ ಯಡಿಯೂರಪ್ಪನವರು ಸಂಸದರಾಗಿ ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಚಾಲ್ತಿಯಲ್ಲಿರುವ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಮೊದಲ ಆದ್ಯತೆ. ಜತೆಗೆ ಈಗಾಗಲೇ ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿರುವ ಪ್ರಮುಖ ರೈಲು ಯೋಜನೆಗಳಾದ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು, ಶಿವಮೊಗ್ಗ-ಹರಿಹರ-ದಾವಣೆಗೆರೆ, ಬೀರೂರು-ಶಿವಮೊಗ್ಗ ಜೋಡಿ ಮಾರ್ಗ ಅನುಷ್ಟಾನಕ್ಕೆ ಹೆಚ್ಚು ಒತ್ತು ನೀಡಲಿದ್ದೇನೆ.
ಸಂಸತ್ ಸದಸ್ಯತ್ವದ ಅವಧಿ ಆರು ತಿಂಗಳು ಮಾತ್ರ. ಇಷ್ಟು ಕಡಿಮೆ ಆವಧಿಯಲ್ಲಿ ಇದೆಲ್ಲವೂ ಸಾಧ್ಯವೇ?
ಆರು ತಿಂಗಳ ಅವಧಿ ಕಡಿಮೆಯೇನಲ್ಲ. ನನಗೆ ಕ್ಷೇತ್ರ ಹೊಸದಲ್ಲ, ಏನು ಮಾಡಬೇಕು ಎಂಬ ಸ್ಪಷ್ಟತೆಕಲ್ಪನೆಯೂ ಇದೆ. ನಮ್ಮ ತಂದೆಯವರು ಪಕ್ಷದ ಹಿರಿಯರ ಮಾರ್ಗದರ್ಶವೂ ಇದೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ಹೀಗಾಗಿ, ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡಲಿದ್ದೇನೆ. ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ವೇಗ ಕೊಡುವುದು ಹಾಗೂ ಈಗಾಗಲೇ ರೂಪಿಸಲಾಗಿರುವ ಯೋಜನೆಗಳಿಗ ಚಾಲನೆ ಸಿಗುವಂತೆ ಮಾಡಲು ಎಲ್ಲ ರೀತಿಯಲ್ಲೂ ಶ್ರಮಿಸುತ್ತೇನೆ.
ಕ್ಷೇತ್ರದಲ್ಲಿ ನೀವು ಕಂಡಂತೆ ಇರುವ ಸಮಸ್ಯೆಗಳು ಯಾವುವು?
ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಸೇತುವೆ ನಿರ್ಮಾಣ ವಿಚಾರದಲ್ಲಿ ಶಾಶ್ವತವಾದ ಕೆಲಸಗಳು ಆಗಬೇಕಿದೆ. ತುಮಕೂರು-ಶಿವಮೊಗ್ಗ , ಉಡುಪಿ-ಕೊಲ್ಲೂರು-ಹೊಸನಗರ-ಶಿಕಾರಿಪುರ-ರಾಣಿಬೆನ್ನೂರು, ದಾವಣಗೆರೆ-ಹೊನ್ನಾಳಿ-ಹರಿಹರ ಹಾಗೂ ಶಿವಮೊಗ್ಗ-ಆನವಟ್ಟಿ-ತಡಸ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ಸಿಗಬೇಕಿದೆ. ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಪ್ರದೇಶದ ಕಳಸವಳ್ಳಿ ಬಳಿ ತುಮ್ರಿ ಸೇತುವೆ ನಿರ್ಮಾಣ ಆಗಬೇಕಿದೆ. ಸರ್.ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ವಿಎಸ್‌ಎಲ್ ಕಾರ್ಖಾನೆ ಪುನಶ್ಚೇತನ ಕುರಿತು ಭಾರತೀಯ ಉಕ್ಕು ಪ್ರಾಧಿಕಾರ ಜತೆ ಚರ್ಚಿಸಬೇಕಿದೆ. ಅದು ಎರಡೂವರೆ ಸಾವಿರದಷ್ಟು ಕಾರ್ಮಿಕರ ಕುಟುಂಬಗಳ ಭವಿಷ್ಯದ ಪ್ರಶ್ನೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಿದ್ದು ಪ್ರವಾಸೋದ್ಯಮ ಸರ್ಕ್ನೂಟ್ ಮಾಡಬಹುದು. ಹೀಗಾಗಿ, ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅದರ ಬಗ್ಗೆ ನನ್ನ ಗಮನ ಇರಲಿದೆ.
ಸಂಸತ್ ಪ್ರವೇಶ ಬಗ್ಗೆ ನಿಮಗೆ ಹೇಗನಿಸುತ್ತದೆ?
ನನಗೆ ತುಂಬಾ ಸಂತಸವಾಗಿದೆ. ಕ್ಷೇತ್ರದ ಜನತೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಶ್ರಮ ಹಾಕಿದ್ದಾರೆ. ಅವರೆಲ್ಲ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ನಾನು ಎರಡನೇ ಬಾರಿ ಸಂಸತ್ ಪ್ರವೇಶ ಮಾಡುತ್ತಿದ್ದೇನೆ. ಈಹಿಂದೆ ಸಂಸದನಾದಾಗ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು.ಆಗಲೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆ,175 ಕೋಟಿ ರೂ. ವೆಚ್ಚದ ಶಿವಮೊಗ್ಗ-ತಾಳಗುಪ್ಪ ಬ್ರಾಡ್‌ಗೆàಜ್, 75 ಕೋಟಿ ರೂ. ವೆಚ್ಚದ ತುಂಗಾನದಿ ತಡೆಗೋಡೆ ಯೋಜನೆಗೆ ಕ್ರಮ ಕೈಗೊಳ್ಳಲಾಗಿತ್ತು. ಈಗ ನಮ್ಮದೇ ಸರ್ಕಾರವಿದ್ದು ಪ್ರಧಾನಿ ನರೇಂದ್ರಮೋದಿ ಅವರ ನೆರವಿನಿಂದ ನನ್ನ ಕ್ಷೇತ್ರಕ್ಕೆ ಹೆಚ್ಚು ಯೋಜನೆ, ಕಾರ್ಯಕ್ರಮ ತರುವ ವಿಶ್ವಾಸವಿದೆ.
– ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ (ಬಿಜೆಪಿ )
ಜನತೆ ಜತೆ ನಿರಂತರ ಸಂಪರ್ಕ
ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?
ಉದ್ಯೋಗ ಸೃಷ್ಟಿ, ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿ ಮೂಲಸೌಕರ್ಯ ಅಭಿವೃದ್ಧಿ ನನ್ನ ಮೊದಲ ಆದ್ಯತೆ. ಕ್ಷೇತ್ರದ ಜನತೆಯ ಜತೆ ನಿರಂತರ ಸಂಪರ್ಕ ಸಾಧಿಸಿ ಅವರ ಸಮಸ್ಯೆಗಳನ್ನು ಅರಿತು ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಂಸತ್‌ನಲ್ಲಿ ಕ್ಷೇತ್ರದ ಸಮಸ್ಯೆ, ರಾಜ್ಯದ ವಿಚಾರ, ರಾಷ್ಟ್ರೀಯ ವಿಚಾರಗಳ ಚರ್ಚೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ.
ಸಂಸತ್ ಸದಸ್ಯತ್ವದ ಅವಧಿ ಆರು ತಿಂಗಳು ಮಾತ್ರ. ಇಷ್ಟು ಕಡಿಮೆ ಆವಧಿಯಲ್ಲಿ ಇದೆಲ್ಲವೂ ಸಾಧ್ಯವೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಮಹತ್ವವಾದದ್ದು. ಅವಧಿ ಎಷ್ಟೇ ಇದ್ದರೂ ಚುನಾವಣಾ ಆಯೋಗ ಚುನಾವಣೆ ನಿಗದಿ ಮಾಡಿ ಜನತೆ ಆಯ್ಕೆ ಮಾಡಿದ ಮೇಲೆ ಅವಧಿ ಚಿಂತೆ ಬಿಟ್ಟು ಕೆಲಸ ಮಾಡಬೇಕು. ಜನರ ಕೆಲಸ ನಿರಂತರವಾಗಿರಬೇಕು. ರಾಜ್ಯದಲ್ಲಿ ನಮ್ಮದೇ ಸಮ್ಮಿಶ್ರ ಸರ್ಕಾರ ಇದೆ. ಕೇಂದ್ರದ ಯೋಜನೆಗಳೂ ಇವೆ. ಇಲ್ಲಿ ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ.
ಕ್ಷೇತ್ರದಲ್ಲಿ ನೀವು ಕಂಡಂತೆ ಇರುವ ಸಮಸ್ಯೆಗಳು ಯಾವುವು?
ಬಡತನ ಹಾಗೂ ನಿರುದ್ಯೋಗ ಸಮಸ್ಯೆ ಕ್ಷೇತ್ರದಲ್ಲಿ ಹೆಚ್ಚಾಗಿದೆ. ರೈತಾಪಿ ಸಮುದಾಯವೂ ಸಂಕಷ್ಟದಲ್ಲಿದೆ. ಶಿಕ್ಷಣ-ಆರೋಗ್ಯ ವಲಯದಲ್ಲೂ ಕೆಲವೊಂದು ಸಮಸ್ಯೆಗಳಿವೆ. ಹೀಗಾಗಿ, ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನನ್ನದೇ ಆದ ಕ್ರಿಯಾ ಯೋಜನೆ ರೂಪಿಸಲಿದ್ದೇನೆ. ಈಗಾಗಲೇ ಬಳ್ಳಾರಿಯಲ್ಲಿ ಬಾಡಿಗೆ ಮನೆ ಮಾಡಿದ್ದೇನೆ. ಇನ್ಮುಂದೆ ಅಲ್ಲಿಯೇ ವಾಸವಿರುತ್ತೇನೆ. ಕ್ಷೇತ್ರದ ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ. ಪಕ್ಷಾತೀತವಾಗಿ ಬಳ್ಳಾರಿ ಕ್ಷೇತ್ರದ ಜನಪ್ರತಿನಿಧಿಗಳು, ಚಿಂತಕರು, ಸಾಹಿತಿಗಳು, ಹೋರಾಟಗಾರರು, ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಸಲಹೆ-ಸೂಚನೆ ಮಾರ್ಗದರ್ಶನ ಪಡೆಯುತ್ತೇನೆ.
ಸಂಸತ್ ಪ್ರವೇಶ ಬಗ್ಗೆ ನಿಮಗೆ ಹೇಗನಿಸುತ್ತದೆ?
ನಾನು 1989 ಹಾಗೂ 1991 ರಲ್ಲಿ ಚಿತ್ರದುರ್ಗ ಸಾಮಾನ್ಯ ಕ್ಷೇತ್ರದಿಂದ ಸಂಸತ್‌ಗೆ ಸ್ಪರ್ಧೆ ಮಾಡಿದ್ದೆ. ಆದರೆ, ಜನರ ಆರ್ಶೀವಾದ ಸಿಗಲಿಲ್ಲ. ಇದೀಗ ಬಳ್ಳಾರಿ ಕ್ಷೇತ್ರದ ಜನತೆ ನನಗೆ ಆರ್ಶೀವಾದ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ನಾಯಕರು, ಬಳ್ಳಾರಿ ಕ್ಷೇತ್ರದ ಸ್ಥಳೀಯ ನಾಯಕರು, ಮುಖಂಡರ ಶ್ರಮ ಬಳ್ಳಾರಿ ಜನತೆಯ ಆಶೋತ್ತರಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ. ಮೂರು ಬಾರಿ ವಿಧಾನಪರಿಷತ್ ಸದಸ್ಯನಾಗಿ , ಪ್ರತಿಪಕ್ಷ ನಾಯಕನಾಗಿ ಮಾಡಿರುವ ಕೆಲಸದ ಅನುಭವ ಸಂಸತ್‌ನಲ್ಲೂ ನನಗೆ ಸಹಕಾರಿಯಾಗಲಿದೆ. ಅಲ್ಲಿ ನನಗೆ ಹಿಂದಿ ಭಾಷೆ ಒಂದು ಸಣ್ಣ ತೊಡಕಾಗಬಹುದು. ಆದರೆ, ಅದು ಸಮಸ್ಯೆಯಾಗದು ಎನಿಸುತ್ತದೆ.
– ವಿ.ಎಸ್.ಉಗ್ರಪ್ಪ, ಬಳ್ಳಾರಿ ಸಂಸದ (ಕಾಂಗ್ರೆಸ್)
– ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.