ಟಿಪ್ಪು ಜಯಂತಿಯಲ್ಲಿ ಬಿಜೆಪಿ ರಾಜಕಾರಣ
Team Udayavani, Nov 11, 2018, 12:18 PM IST
ಬೆಂಗಳೂರು: ಬಿಜೆಪಿಯವರು ಗೋಮುಖ ವ್ಯಾಘ್ರಗಳು, ಅವರಿಗೆ ಯಾವುದೇ ವಿಷಯ ಇಲ್ಲದಿರುವುದಕ್ಕೆ ಟಿಪ್ಪು ಜಯಂತಿ ವಿರೋಧಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಟಿಪ್ಪು ಜಯಂತಿ ಅಂಗವಾಗಿ ವಕ್ಫ್ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ಮುಸ್ಲಿಂ ಧರ್ಮ ಗುರುಗಳ ನಿಯೋಗದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿಯ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಟಿಪ್ಪು ಸುಲ್ತಾನ್‌ನನ್ನು ಹೊಗಳಿರಲಿಲ್ಲವೇ ? ಈಗೇಕೆ ವಿರೋಧ ಮಾಡುತ್ತಿದ್ದಾರೆ. ಬಿಜೆಪಿಯವರ ಮಾತನ್ನು ಜನತೆ ಒಪ್ಪುವುದಿಲ್ಲ. ಟಿಪ್ಪು ಸುಲ್ತಾನ್ ಮತಾಂಧನಾಗಿರಲಿಲ್ಲ. ಎಲ್ಲ ಸಮುದಾಯಗಳ ಪರ ಇದ್ದ ಎಂದು ಹೇಳಿದರು.
ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಗೈರು ಹಾಜರಾಗಿದ್ದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಸರ್ಕಾರದ ವತಿಯಿಂದ ಸಚಿವರಾದ ಜಮೀರ್ ಅಹಮದ್, ಜಯಮಾಲಾ, ಶಾಸಕ ರೋಷನ್‌ಬೇಗ್, ಹ್ಯಾರಿಸ್ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಸಚಿವ ಜಮೀರ್ ಅಹಮದ್ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆರಂಭಿಸಲಾಯಿತು ಇದೀಗ ಸಮ್ಮಿಶ್ರ ಸರ್ಕಾರವು ಮುಂದಿನ ಐದು ವರ್ಷಗಳ ಕಾಲ ಆಚರಿಸಲಿದೆ ಎಂದರು.
ಧಾರ್ಮಿಕ ಗುರುಗಳು ಮಾತನಾಡಿ, ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಅವರು ಆರಂಭಿಸಿದರು. ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ನಾವು ಅವರ ಜೊತೆಗಿದ್ದೇವೆ. ಇಡೀ ಸಮುದಾಯ ಅವರೊಂದಿಗಿದೆ. ಹೀಗಾಗಿ ಅವರಿಗೆ ನಾವು ಮೊದಲು ಸನ್ಮಾನ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿದ್ದು ಸರಣಿ ಟ್ವೀಟ್: ಮೊದಲು ಟಿಪ್ಪುವಿನ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕು. ಇದಕ್ಕಾಗಿ ಬಿಜೆಪಿ ಸರ್ಕಾರವೇ ಪ್ರಕಟಿಸಿದ ಪುಸ್ತಕ ಓದಬೇಕು ಎಂದಿದ್ದಾರೆ. ಇದಕ್ಕೆ ಆಧಾರವಾಗಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪುವಿನ ಬಗ್ಗೆ ಬರೆದಿದ್ದ ಪತ್ರವನ್ನು ಟ್ವಿಟ್‌ಗೆ ಲಗತ್ತಿಸಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಟಿಪ್ಪು ಯುದ್ಧದ ವೇಳೆ, ಜನರನ್ನು ಸಾಯಿಸಿದ್ದ, ಲೂಟಿ ಮಾಡಿದ್ದ ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿರಲಿಲ್ಲ. ಟಿಪ್ಪು ಪ್ರಜಾತಾಂತ್ರಿಕವಾಗಿ ಆಯ್ಕೆಯಾಗಿರಲಿಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ಧ ಧರ್ಮಕ್ಕೆ ತಕ್ಕಂತೆ ಟಿಪ್ಪು ನಡೆದುಕೊಂಡಿದ್ದ ಎಂದು ಸಮರ್ಥಿಸಿಕೊಂಡಿದ್ದಾರೆ.
ಮತ್ತೂಂದು ಟ್ವೀಟ್‌ನಲ್ಲಿ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡು ವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.