ಅಮಾಯಕನ ಕೊಂದವರ ಬಂಧನಕ್ಕೆ ಗುಂಡೇಟು
Team Udayavani, Nov 12, 2018, 11:55 AM IST
ಬೆಂಗಳೂರು: ದಾರಿ ಕೇಳಿದ ಯುವಕನನ್ನು ವೈರಿ ಗುಂಪಿನ ಕಡೆಯವನು ಎಂದು ಭಾವಿಸಿ ಕೊಲೆಗೈದು ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಿಗೆ ಗುಂಡೇಟಿನ ರುಚಿ ತೋರಿಸಿರುವ ಕೆ.ಆರ್ ಪುರಂ ಠಾಣೆ ಪೊಲೀಸರು ಆರೋಪಿಗಳಿಬ್ಬರನ್ನು ಭಾನುವಾರ ಬಂಧಿಸಿದ್ದಾರೆ.
ರೌಡಿಶೀಟರ್ ನವೀನ್ ಕುಮಾರ್ ಅಲಿಯಾಸ್ ಅಪ್ಪು, ಗಿರೀಶ್ ಅಲಿಯಾಸ್ ಗಿರಿ ಬಂಧಿತರು. ಕಳೆದ ಜನವರಿಯಿಂದ ಅಪರಾಧಿಕ ಕೃತ್ಯಗಳಲ್ಲಿ ತೊಡಗಿ ಬಂಧಿಸಲು ಹೋದ ವೇಳೆ ಪೊಲೀಸರ, ಮೇಲೆಯೇ ಹಲ್ಲೆಗೆ ಮುಂದಾದ ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಿದ 16ನೇ ಪ್ರಕರಣ ಇದಾಗಿದೆ.
ಸೆ. 13ರಂದು ಚೇತನ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನವೀನ್ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಕೆಆರ್‌ಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನವೀನ್ ಹಾಗೂ ಗಿರಿ ಕಾಟಿನಲ್ಲೂರ್ ಗೇಟ್ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಜಯರಾಜು ನೇತೃತ್ವದ ತಂಡ ಬಂಧಿಸಲು ತೆರಳಿತ್ತು.
ಪೊಲೀಸರನ್ನು ಕಂಡ ಕೂಡಲೇ ಆರೋಪಿ ನವೀನ್ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಪೊಲೀಸ್ ವಾಹನದ ಮೇಲೆ ಮೂರು ಸುತ್ತು ಗುಂಡುಹೊಡೆದಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಜಯರಾಜು, ತಮ್ಮ ಪಿಸ್ತೂಲ್‌ನಿಂದ ನವೀನ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ ಕೂಡಲೇ ಕೆಳಗೆ ಕುಸಿದು ಬಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೂಬ್ಬ ಆರೋಪಿ ಗಿರೀಶ್‌ನನ್ನು ಹಿಡಿಯಲು ಹೋದ ಪೊಲೀಸ್ ಪೇದೆ ಮುನಿರಾಜುಗೆ ಡ್ರ್ಯಾಗರ್‌ನಿಂದ ಇರಿಯಲು ಯತ್ನಿಸಿದ್ದಾನೆ.
ಹೀಗಾಗಿ ಇನ್ಸ್‌ಪೆಕ್ಟರ್ ಪುನ: ಗಿರೀಶ್ ಕಾಲಿಗೂ ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಇಬ್ಬರು ಆರೋಪಿಗಳನ್ನು ಕೆ.ಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳು ಪೇದೆ ಮುನಿರಾಜು ಸತ್ಯ ಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾರಿ ಕೇಳಿದ್ದಕ್ಕೆ ಕೊಲೆಗೈದ ನವೀನ್ ಅಂಡ್ ಟೀಂ!” ಸೆ. 13ರಂದು ತುಮಕೂರು ಮೂಲದ ಚೇತನ್ (22) ಹೆಬ್ಟಾಳದ ”ಇಂಟರ್‌ನೆಟ್ ಗ್ಲೋಬಲ್ ಸರ್ವೀಸ್” ಕಂಪನಿಯ ಉದ್ಯೋಗಿ ತನ್ನ ಸ್ನೇಹಿತ ವಿನಯ್‌ನನ್ನು ಬಸವನಪುರದಲ್ಲಿ ಬಿಟ್ಟು ವಾಪಾಸ್ ಬರುವಾಗ ದಾರಿ ತಿಳಿಯದ ಚೇತನ ದೇವಸಂದ್ರ ರಸ್ತೆಗೆ ತೆರಳಿ ಅಲ್ಲೇ ಮದ್ಯ ಸೇವಿಸುತ್ತಾ ಕುಳಿತಿದ್ದ ನವೀನ್ ಹಾಗೂ ಆತನ ಸಹಚರರನ್ನು ದಾರಿ ಕೇಳಿದ್ದ.
ಅದೇ ದಿನ ಎದುರಾಳಿ ಗುಂಪಿನ ಹರೀಶ್ ಜತೆ ಜಗಳವಾಡಿಕೊಂಡಿದ್ದ ನವೀನ್, ಚೇತನ್ ನವೀನ್ ಕಡೆಯವನಿರಬಹುದು ಎಂದು ಭಾವಿಸಿ ಆತನ ಮೇಲೆ ಹಲ್ಲೆ ನಡೆಸಿದ್ದ. ಜತೆಗೆ, ತನ್ನ ಮನೆಗೆ ಕರೆತಂದು ಸ್ನೇಹಿತರ ಜತೆಗೂಡಿ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದು ದೊಡ್ಡದೇನಹಳ್ಳಿಯ ನೀಲಗಿರಿ ತೋಪಿನಲ್ಲಿ ಮೃತದೇಹವನ್ನು ಸುಟ್ಟು ಹಾಕಿದ್ದರು. ಸೆ.15 ವಾಯುವಿಹಾರಕ್ಕೆ ಬಂದ ಸ್ಥಳೀಯರು ಅರೆ ಬೆಂದ ಮೃತದೇಹ ನೋಡಿ ಪೊಲೀಸರಿಗೆ ತಿಳಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು.
ಕಾರ್ಪೋರೇಟರ್ ಪತಿ ಹತ್ಯೆ ಆರೋಪಿ ನವೀನ್!: ಆರೋಪಿ ನವೀನ್ ಕುಮಾರ್, ಬಿಬಿಎಂಪಿಯ ಮಾಜಿ ಸದಸ್ಯೆ ಮಂಜುಳಾದೇವಿ ಪತಿ ಸಿರ್‌ಪುರ ಶ್ರೀನಿವಾಸ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಆತನ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಮತ್ತೂಬ್ಬ ಆರೋಪಿ ಗಿರಿ, ಬನಶಂಕರಿ 3ನೇ ಹಂತದ ಬಡಾವಣೆ ವಾಸವಾಗಿದ್ದ ಉದ್ಯಮಿ ನವಮಣಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದಲ್ಲಿ ಮೂರು ವರ್ಷ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಳಿಕ ನವೀನ್ ಜತೆ ಸೇರಿಕೊಂಡು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.