ತಿಂಗಳಿಗೆ 2 ಲಕ್ಷ ಎಣಿಸುವ ರೈತ ಮಹಿಳೆ
Team Udayavani, Nov 16, 2018, 11:39 AM IST
ಬೆಂಗಳೂರು: ಕನಸು ಕಂಡದ್ದು ಎಂಬಿಬಿಎಸ್ ಓದಿ ಡಾಕ್ಟರ್ ಆಗುವುದು. ಆದರೆ, ಆಗಿದ್ದು ರೈತ ಮಹಿಳೆ. ಈಗ ಡಾಕ್ಟರ್‌ಗಿಂತ ದುಪ್ಪಟ್ಟು ಗಳಿಕೆ ಕೃಷಿಯಲ್ಲಿ ಆಗುತ್ತಿದೆ! ಹಾಸನದ ಗೌರಿಪುರಂನ ಹೇಮಾ ಅನಂತ್ ವೈದ್ಯೆ ಆಗಬೇಕೆಂಬ ಕನಸು ಹೊತ್ತವರು. ಆದರೆ, ಪಿಯುಸಿಯಲ್ಲೇ ಮದುವೆಯ ಮೂಲಕ ಅದು ಮುರಿದುಬಿತ್ತು. ತಂದೆಯ ಆಶಯದಂತೆ ಕೃಷಿಯತ್ತ ಮುಖ ಮಾಡಿದರು. ಈಗ ಅದರಲ್ಲಿ ತಿಂಗಳಿಗೆ 2 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಜತೆಗೆ 12 ಜನ ವಿಧವೆ ಹಾಗೂ ವೃದ್ಧರಿಗೆ ಉದ್ಯೋಗವನ್ನೂ ಕಲ್ಪಿಸಿದ್ದಾರೆ.
ನಿತ್ಯ 10 ಸಾವಿರ ರೂ. ವಹಿವಾಟು: ಉಳಿದವರಿಗಿಂತ ಹೇಮಾ ಅನಂತ್ ಕೃಷಿ ಪದ್ಧತಿ ತುಸು ಭಿನ್ನ. 5 ಎಕರೆ ಖುಷ್ಕಿ ಸೇರಿದಂತೆ ಒಟ್ಟಾರೆ 25 ಎಕರೆ ಜಮೀನಿನಲ್ಲಿ 30-40 ಪ್ರಕಾರದ ಬೆಳೆಗಳನ್ನು ಬೆಳೆಯುತ್ತಿದ್ದು, ಅದನ್ನು ಮೌಲ್ಯವರ್ಧನೆ ಮಾಡಿ, ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಇದರ ಪರಿಣಾಮ ಅಧಿಕ ಲಾಭ ಗಳಿಸಲು ಸಾಧ್ಯವಾಗುತ್ತಿದೆ. ನಿತ್ಯ ಕನಿಷ್ಠ 10 ಸಾವಿರ ರೂ. ವ್ಯಾಪಾರ ಮಾಡುತ್ತಿದ್ದು, ಇದರಲ್ಲಿ 5ರಿಂದ 7 ಸಾವಿರ ರೂ. ನಿವ್ವಳ ಲಾಭ ಆಗುತ್ತಿದೆ. ತಿಂಗಳಿಗೆ ಒಂದೂವರೆಯಿಂದ 2 ಲಕ್ಷ ರೂ. ಗಳಿಸುತ್ತಿದ್ದೇನೆ. ಇದೆಲ್ಲವೂ ಸಾಧ್ಯವಾಗಿದ್ದು ಕೃಷಿಯಿಂದ ಎಂದು ಅವರು ಹೇಳುತ್ತಾರೆ.
ಪ್ರತಿ ಬೆಳೆಗೂ ಮೌಲ್ಯವರ್ಧನೆ: ಅವರ ಈ ಸಾಧನೆಗೆ ಬೆಂಗಳೂರಿನ ರಾಷ್ಟ್ರೀಯ ಕೃಷಿ ಮೇಳದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿ “ಉದಯವಾಣಿ’ಯೊಂದಿಗೆ ಖುಷಿ ಹಂಚಿಕೊಂಡ ಅವರು, “ಸಾಮಾನ್ಯವಾಗಿ ರೈತರು ತಾವು ಬೆಳೆದ ಬೆಳೆಯನ್ನು ಮಧ್ಯವರ್ತಿ ಮೂಲಕ ಮಾರಾಟ ಮಾಡುತ್ತಾರೆ. ಅವರು ಎಡವುದು ಇಲ್ಲಿಯೇ. ಅರಿಶಿನ ಹಾಗೇ ಮಾರಾಟ ಮಾಡಿದರೆ, ಕೆ.ಜಿ.ಗೆ 60-70 ರೂ. ಸಿಗುತ್ತದೆ.
ಅದನ್ನೇ ಮೌಲ್ಯವರ್ಧನೆ ಮಾಡಿ ನೇರವಾಗಿ ಗ್ರಾಹಕರ ಕೈಗಿಟ್ಟರೆ 300 ರೂ. ಬರುತ್ತದೆ. ನಾನು ಮಾಡುತ್ತಿರುವುದು ಇದನ್ನೇ. ಪ್ರತಿ ಬೆಳೆಯನ್ನೂ ಮೌಲ್ಯವರ್ಧನೆ ಮಾಡುತ್ತೇನೆ. ಮನೆ ಮುಂದೆಯೇ ಅಂಗಡಿ ತೆರೆದಿದ್ದೇನೆ. ಅಲ್ಲಿ ಉತ್ಪನ್ನಗಳು ಮತ್ತು ದರಪಟ್ಟಿ ಇರುತ್ತದೆ. ಸ್ವತಃ ಗ್ರಾಹಕರು ಹಣ ಹಾಕಿ, ತಮಗೆ ಬೇಕಾದ ಉತ್ಪನ್ನ ತೆಗೆದುಕೊಂಡು ಹೋಗುತ್ತಾರೆ. ನನಗೆ ಮಧ್ಯವರ್ತಿಗಿಂತ ಹೆಚ್ಚಾಗಿ ಗ್ರಾಹಕರ ಮೇಲೆಯೇ ನಂಬಿಕೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
15 ಮಂದಿಗೆ ಉದ್ಯೋಗ: ಈ ಮೌಲ್ಯವರ್ಧನೆ ಕೆಲಸವನ್ನು ಅತ್ಯಂತ ಅನಿವಾರ್ಯ ಇರುವ ವಿಧವೆಯರು ಹಾಗೂ ಮಕ್ಕಳು ನಗರ ಸೇರಿಕೊಂಡ ನಂತರ ಅತಂತ್ರರಾದ ಪೋಷಕರಿಗೆ ವಹಿಸಿದ್ದೇನೆ. ಇಂತಹ 10-15 ಜನ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ನಿತ್ಯ ಅವರಿಗೆ 300 ರೂ. ಕೂಲಿ ಜತೆಗೆ ಊಟ, ವಸತಿ ಕಲ್ಪಿಸಲಾಗಿದೆ. ಬೆಳೆಗಳ ಜತೆಗೆ ನಾಟಿ ಹಸು, ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡುತ್ತೇನೆ. ಕಾಂಪೋಸ್ಟ್, ಎರೆಹುಳು, ಗೋಬರ್ ಅನಿಲ ಉತ್ಪಾದನೆ ಮಾಡುತ್ತಿದ್ದೇನೆ. ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಯು ಜವಾಬ್ದಾರಿ ಹೆಚ್ಚಿಸಿದೆ ಎಂದರು.
200 ಪ್ರಭೇದ, 800 ಜಾತಿ ಗಿಡ: ಅದೇ ರೀತಿ, ಯಲ್ಲಾಪುರ ತಾಲೂಕಿನ ಕನ್ನೂರು ಹೆಗ್ಗರಣೆ ಗ್ರಾಮದ ಪ್ರಸಾದ ರಾಮ ಹೆಗಡೆಗೆ ಡಾ.ಎಂ.ಎಚ್.ಮರಿಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಲಭಿಸಿದೆ. ಕಾನೂನು ಪದವಿ ಪೂರೈಸಿದ ಅವರು, ತಮ್ಮ 5 ಎಕರೆ ಜಮೀನಿನಲ್ಲಿ 200 ಪ್ರಭೇದಗಳ 800ಕ್ಕೂ ಅಧಿಕ ಜಾತಿಯ ಗಿಡ ಬೆಳೆದಿದ್ದಾರೆ. ಸಾಂಬಾರ ಬೆಳೆ, ಅಡಕೆ, ತೆಂಗು, ಎರೆಹುಳು ಗೊಬ್ಬರ, ಜೇನು ಕೃಷಿ, ಕಾಡುಹಣ್ಣು, ವಿದೇಶಿ ಹಣ್ಣುಗಳು, ಔಷಧೀಯ ಸಸ್ಯಗಳಿಂದ ತಿಂಗಳಿಗೆ ಹೆಚ್ಚು ಕಡಿಮೆ ಲಕ್ಷ ರೂ. ಗಳಿಸುತ್ತಿದ್ದಾರೆ.
ಬೆಳೆ ನಿರ್ವಹಣೆ ಆದಾಯದ ಗುಟ್ಟು. ಹಾಗೂ ವೆನಿಲ್ಲಾ, ಕಾಳು ಮೆಣಸಿನಂತಹ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದ್ದು, ಸಹಜವಾಗಿ ಹೆಚ್ಚು ಆದಾಯ ಬರುತ್ತದೆ. ರಾಗಿ, ಭತ್ತದಂತಹ ಬೆಳೆಗಳನ್ನು 10-15 ಕ್ವಿಂಟಲ್ ಬೆಳೆದರೂ ಲಾಭವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಕೋಲಾರದ ಮದನಹಳ್ಳಿಯ ಎಂ.ಎನ್. ರವಿಶಂಕರ್ ಅವರಿಗೆ ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.