ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ ನಾಡಿನ ಸಮಸ್ತ ಐಸಿರಿಯ ಅನಾವರಣ
Team Udayavani, Nov 17, 2018, 4:40 AM IST
ಮೂಡಬಿದಿರೆ: ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕೃಷಿ, ಚಿತ್ರ, ಜಾನಪದ, ವಿದ್ಯಾರ್ಥಿ, ವಿಜ್ಞಾನ-ಹೀಗೆ ಕನ್ನಡ ನಾಡಿನ ಸಮಸ್ತ ಐಸಿರಿಗಳ ಅನಾವರಣಕ್ಕೆ ಆಳ್ವಾಸ್ ನುಡಿಸಿರಿ ಸಾಕ್ಷಿಯಾಯಿತು. ಸುಮಾರು 70,000ಕ್ಕೂ ಅಧಿಕ ಮಂದಿ ಶುಕ್ರವಾರ ಸಾಹಿತ್ಯ, ಸಾಂಸ್ಕೃತಿಕ ಜಾತ್ರೆಯನ್ನು ವೀಕ್ಷಿಸಿ, ಆಲಿಸಿ ಆನಂದಿಸಿದರು.
ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರ ವೇದಿಕೆಯಲ್ಲಿ ನುಡಿಸಿರಿ ಮುಖ್ಯ ಸಮಾವೇಶ ಹಾಗೂ ವಿಚಾರಗೋಷ್ಠಿಗಳು ನಡೆಯುತ್ತಿದ್ದು, ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಕು.ಶಿ. ಹರಿದಾಸ್ ಭಟ್ ವೇದಿಕೆ, ಕಮಲಾ ಚಟ್ಟೋಪಾಧ್ಯಾಯ ವೇದಿಕೆ, ಆನಂದ್ ಬೋಳಾರ್, ಡಾ| ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಸಂಗೀತ, ನೃತ್ಯ, ಹರಿಕಥಾಕೀರ್ತನ, ದಾಸವಾಣಿ, ನೃತ್ಯರೂಪಕ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಸಿರಿ ಪುಳಕಿತಗೊಳಿಸುತ್ತಿವೆ.
ಕೃಷಿ ಸಿರಿಯ ಖುಷಿ
ಕೆ.ಎಸ್. ಪಟ್ಟಣ್ಣಯ್ಯ ಕೃಷಿ ಆವರಣದ 3 ಎಕ್ರೆ ಪ್ರದೇಶದಲ್ಲಿ ಹಚ್ಚ ಹಸಿರಿನೊಂದಿಗೆ ಮೈದಳೆದಿರುವ ಸುಧಾರಿತ ಹಾಗೂ ಸಾಂಪ್ರದಾಯಿಕ ನೈಜ ಕೃಷಿಯ ದರ್ಶನ ಕೃಷಿ ಸಿರಿ ಜನಾಕರ್ಷಣೆಯ ತಾಣವಾಗಿದೆ. ಸುಮಾರು 95 ಬಗೆಯ ತರಕಾರಿ, ವಿವಿಧ ಜಾತಿಯ ಹೂವುಗಳನ್ನು ಇಲ್ಲಿ ಮೂರು ತಿಂಗಳು ಶ್ರಮವಹಿಸಿ ಬೆಳೆಸಲಾಗಿದೆ.
ರುಚಿ ಶುಚಿಯಾದ ಭೋಜನ
ಸಾಹಿತ್ಯ ಜಾತ್ರೆಗೆ ಬರುವ ಜನರಿಗೆ ರುಚಿ, ಶುಚಿಯಾದ ಊಟ ಉಪಾಹಾರದ ಆತಿಥ್ಯ ನೀಡಲು ವಿದ್ಯಾಗಿರಿಯ ಆವರಣದಲ್ಲಿ ಎರಡು ಕಡೆ ಬೃಹತ್ ಪಾಕಶಾಲೆಗಳಿದ್ದು, ಸುಮಾರು 200 ಬಾಣಸಿಗರು ಕಾರ್ಯನಿರತರಾಗಿದ್ದಾರೆ. 125ಕ್ಕೂ ಅಧಿಕ ಮಂದಿ ಸ್ವಚ್ಛತಾ ಸಿಬಂದಿ ನಿಯೋಜನೆಗೊಂಡಿದ್ದಾರೆ. ದಿನಂಪ್ರತಿ 60,000 ಮಂದಿಗೆ ಭೋಜನ ಹಾಗೂ 20,000 ಮಂದಿಗೆ ಬೆಳಗ್ಗಿನ ಉಪಾಹಾರ ಸಿದ್ಧಪಡಿಸಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿ 50,000ಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದ್ದಾರೆ.
ದಾಖಲೆ ಬರೆದ ನುಡಿಸಿರಿ
36,000ಕ್ಕೂ ಅಧಿಕ ಮಂದಿ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳುವ ಮೂಲಕ ಈ ಬಾರಿಯ ಆಳ್ವಾಸ್ ನುಡಿಸಿರಿ ಸರ್ವಾಧಿಕ ದಾಖಲೆ ಸೃಷ್ಟಿಸಿದೆ. ಬಾಗಲಕೋಟೆಯಿಂದ ಯಾದಗಿರಿಯವರೆಗೆ ರಾಜ್ಯದ 21 ಜಿಲ್ಲೆಗಳಿಂದ ಹಾಗೂ ಇತರ ರಾಜ್ಯಗಳಿಂದ ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಆರಂಭದ ವರ್ಷದಲ್ಲಿ 2 ಸಾವಿರ ಪ್ರತಿನಿಧಿಗಳಿಂದ ಆರಂಭಗೊಂಡ ಆಳ್ವಾಸ್ ನುಡಿಸಿರಿ ತನ್ನ 15 ವರ್ಷಗಳ ಪಯಣದಲ್ಲಿ ಪ್ರತಿನಿಧಿಗಳ ಸಂಖ್ಯೆಯನ್ನು 15 ಪಟ್ಟು ಹೆಚ್ಚಿಸಿ ಸಾಗಿಬಂದಿರುವುದು ಅದರ ಹಿರಿಮೆಗೊಂದು ಗರಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.