ಭ್ರಷ್ಟತೆಯ ಸದ್ದಿಗೆ ಬುಲೆಟ್ ಮದ್ದು!
Team Udayavani, Nov 17, 2018, 12:08 PM IST
“ಒಂದು ಗನ್ನು, ಅದರೊಳಗಿನ 8 ಎಂಎಂ ಬುಲೆಟ್, ಬ್ಯಾಂಕ್ ದರೋಡೆ ಮತ್ತು ಆ ದರೋಡೆಕೋರರನ್ನು ಪತ್ತೆ ಹಚ್ಚುವ ಪೊಲೀಸರು…’ ಇವಿಷ್ಟೇ ಅಂಶಗಳನ್ನಿಟ್ಟುಕೊಂಡು ಮುಂದೇನಾಗುತ್ತೆ ಎಂಬ ಪ್ರಶ್ನೆ ಮತ್ತು ಕುತೂಹಲದೊಂದಿಗೆ ಸಾಗುವ ಈ ಕ್ರೈಮ್ ಥ್ರಿಲ್ಲರ್ ಚಿತ್ರ ಅಕ್ಷರಶಃ ನೋಡುಗರನ್ನು ತಕ್ಕಮಟ್ಟಿಗೆ ರಂಜಿಸುತ್ತೆ ಮತ್ತು ಗಂಭೀರತೆಗೂ ದೂಡುತ್ತೆ. ಅದಕ್ಕೆ ಕಾರಣ, ಚಿತ್ರದೊಳಗಿರುವ ಕಥೆ, ಚಿತ್ರಕಥೆ ಹಾಗು ತೆರೆ ಮೇಲೆ ಕಾಣುವ ಬೆರಳೆಣಿಕೆಯ ತರಹೇವಾರಿ ಪಾತ್ರಗಳು. ಸಿನಿಮಾ ರಂಜಿಸಬೇಕು ನಿಜ.
ಹಾಗಂತ, ಸಿನಿಮಾದ ಉದ್ದೇಶ ಕೇವಲ ಮನರಂಜನೆಯಾಗಿರಬೇಕೇ? ಅದರಾಚೆಗಿನ ಅಂಶಗಳ ಬಗ್ಗೆ ಯೋಚಿಸುವುದಾದರೆ, ಸಂದೇಶವೂ ಇರಬೇಕು, ವಾಸ್ತವತೆಯನ್ನು ಬಿಂಬಿಸುವಂತೆಯೂ ಇರಬೇಕು. ಆ ಅಂಶಗಳಿಲ್ಲಿ ಅಡಕವಾಗಿವೆ. ಇಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಪಾಯಕಾರಿ ವ್ಯಕ್ತಿಗಳಿದ್ದಾರೆ. ಅಂತಹವರ ವಿರುದ್ಧ ಸಿಡಿದೇಳುವ ಅಪರೂಪದ ವ್ಯಕ್ತಿತ್ವಗಳೂ ಕಾಣಸಿಗುತ್ತವೆ. ಇಂತಹ ಸೂಕ್ಷ್ಮವಿಷಯಗಳೇ “8 ಎಂಎಂ’ ಚಿತ್ರದ ಗಟ್ಟಿ ಅಡಿಪಾಯ ಅಂದರೆ ತಪ್ಪಿಲ್ಲ. ಇಲ್ಲಿ ಕಥೆ ಇದೆ.
ಅದಕ್ಕೆ ತಕ್ಕಂತಹ ನಿರೂಪಣೆಯೂ ಇದೆ. “8 ಎಂಎಂ’ ಬುಲೆಟ್ ಸ್ಪೀಡ್‌ನಷ್ಟೇ ಚಿತ್ರಕಥೆಯೂ ವೇಗ ಕಾಯ್ದುಕೊಂಡಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಒಂದು ಕ್ರೈಮ್ ಕಥೆ ಇಟ್ಟುಕೊಂಡು ಅಲ್ಲಲ್ಲಿ, ಭಾವನಾತ್ಮಕ ಅಂಶಗಳನ್ನು ತೋರಿಸುವ ಮೂಲಕ ನೋಡುಗರಲ್ಲಿ ಆಗಾಗ ಒಂದಷ್ಟು ಭಾವುಕತೆ ಹೆಚ್ಚಿಸುವ ತಾಕತ್ತು ಈ ಚಿತ್ರಕ್ಕಿದೆ. “8ಎಂಎಂ’ ಸುಮ್ಮನೆ ನೋಡಿಸಿಕೊಂಡು ಹೋಗುತ್ತಾದರೂ, ಕೆಲವೆಡೆ ಸಣ್ಣಪುಟ್ಟ ತಪ್ಪುಗಳನ್ನು ಹರಡಿದೆ. ಚಿತ್ರದ ಹಿನ್ನೆಲೆ ಸಂಗೀತ, ಕೆಲ ಪಾತ್ರಗಳ ಮಾತುಗಳು ಚಿತ್ರದ ಗಂಭೀರತೆಗೆ ಸಾಕ್ಷಿಯಾಗುವ ಮೂಲಕ ಸಣ್ಣಪುಟ್ಟ ತಪ್ಪುಗಳನ್ನು ಮರೆಮಾಚಿಸುತ್ತವೆ.
ಇಡೀ ಚಿತ್ರದ ಕೇಂದ್ರ ಬಿಂದು ಜಗ್ಗೇಶ್ ಮತ್ತು 8 ಎಂಎಂ ಬುಲೆಟ್ ಹೊಂದಿದ ಗನ್ನು. ಒಂದು ಕ್ರೈಮ್ ಥ್ರಿಲ್ಲರ್‌ಗೆ ಏನೆಲ್ಲಾ ಇರಬೇಕು, ಇರಬಾರದು ಎಂಬ ಸ್ಪಷ್ಟ ಕಲ್ಪನೆ ನಿರ್ದೇಶಕರಿಗಿದೆ. ಹಾಗಾಗಿ ಇಲ್ಲಿ, ಅನಗತ್ಯ ವಿಷಯಗಳು ಇಣುಕುವುದಿಲ್ಲ. ಇದು ತಮಿಳಿನ “8 ತೊಟ್ಟಕ್ಕಲ್’ ಚಿತ್ರದ ರೀಮೇಕ್. ಆ ಚಿತ್ರ ನೋಡಿದವರಿಗೆ ಇದು ಅಷ್ಟಾಗಿ ರುಚಿಸುತ್ತಾ? ಗೊತ್ತಿಲ್ಲ. ಆದರೆ, ಅದನ್ನು ಕನ್ನಡೀಕರಿಸಿರುವ ಜಾಣ್ಮೆ ಮೆಚ್ಚಬೇಕು.
ಇಲ್ಲಿ ಯಾವುದನ್ನೂ ವೈಭವೀಕರಿಸಿಲ್ಲ. ಎಲ್ಲವನ್ನೂ ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಿಸಿರುವುದು, ಪಾತ್ರಗಳ ಆಯ್ಕೆಯಲ್ಲಿ ಜಾಣತನ ಪ್ರದರ್ಶಿಸಿರುವುದು ಪ್ಲಸ್ ಎನ್ನಬಹುದು. ಇನ್ನು, ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ತನಿಖೆ ನಡೆಸುವುದು ಸೇರಿದಂತೆ ಇನ್ನೂ ಕೆಲ ವಿನಾಕಾರಣ ಅಂಶಗಳು ನೋಡುಗರಿಗೆ ಪ್ರಶ್ನೆಯಾಗುತ್ತವೆ. ಜೊತೆಗೆ ಇಂತಹ ಚಿತ್ರಗಳಿಗೆ ಎಷ್ಟರಮಟ್ಟಿಗೆ ಲವ್‌ಟ್ರ್ಯಾಕ್ ಅಗತ್ಯವಾಗುತ್ತವೋ ಗೊತ್ತಿಲ್ಲ.
ಎಲ್ಲೋ ಒಂದು ಕಡೆ, ಗಂಭೀರವಾಗಿ ಸಾಗುವ ಚಿತ್ರದ ಮಧ್ಯೆ, ಲವ್‌ಟ್ರ್ಯಾಕ್ ಇಣುಕಿ, ಕೊಂಚ ತಾಳ್ಮೆ ಕೆಡಿಸುತ್ತದೆ ಎಂಬುದನ್ನು ಬಿಟ್ಟರೆ, ಕೆಲ ಅಂಶಗಳು ಆಪ್ತವಾಗಿಸಿ ನೋಡಿಸಿಕೊಂಡು ಹೋಗುತ್ತದೆ. ಈ ಚಿತ್ರ ನೋಡಿದರೆ, ಜಗ್ಗೇಶ್ ಸಂಪೂರ್ಣ ಬದಲಾಗಿರುವುದು ಗೊತ್ತಾಗುತ್ತೆ. ಅಂದರೆ, ಅವರನ್ನು ಇಲ್ಲಿಯ ತನಕ ಹಾಸ್ಯದ ಝಲಕ್‌ನಲ್ಲಿ ನೋಡಿದವರಿಗೆ ಇಲ್ಲೊಂದು ದೊಡ್ಡ ಬದಲಾವಣೆ ಕಂಡರೆ ಅಚ್ಚರಿಯಿಲ್ಲ. ಅವರ ಈ ಬದಲಾವಣೆಗೆ ಕಾರಣ ಕಥೆ ಮತ್ತು ಪಾತ್ರ.
ಎಲ್ಲದ್ದಕ್ಕೂ ಹೆಚ್ಚಾಗಿ, ಕೊನೆಯ ಇಪ್ಪತ್ತು ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲರಲ್ಲೂ ಭಾವುಕತೆ ಹೆಚ್ಚಿಸುವ ನಟನೆ. ಇಲ್ಲಿ ಜಗ್ಗೇಶ್ ಅವರಿಗೆ ವಯಸ್ಸಾಯ್ತಾ ಅಂತ ಅಂದುಕೊಂಡರೂ, ವಯಸ್ಸು ಮುಖ್ಯವಲ್ಲ, ಚಿಂತನೆಯಷ್ಟೇ ಮುಖ್ಯ ಎಂಬುದನ್ನು ಆ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಇಷ್ಟು ದಿನ ನೋಡಿದ ಜಗ್ಗೇಶ್, ಇಲ್ಲಿ ಅವರ ವಯಸ್ಸಿಗೆ ತಕ್ಕಂತಹ ಪಾತ್ರ ನಿರ್ವಹಿಸುವ ಮೂಲಕ ಒಬ್ಬ ಅಸಹಾಯಕ ವ್ಯಕ್ತಿಯಾಗಿ, ಭಾವನೆಗಳನ್ನು ಕೆದಕಿ ಎಲ್ಲರ ಎದೆಭಾರವಾಗಿಸಿ, ಹತ್ತಿರವಾಗುತ್ತಾರೆ.
ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬನ “8ಎಂಎಂ’ ಬುಲೆಟ್ ಇರುವ ಗನ್ ಕಳುವಾಗುತ್ತೆ. ಆ ಕಳುವಾದ ಗನ್ ಬಳಸಿ, ದರೋಡೆಯಾಗುತ್ತೆ, ಶೂಟೌಟ್ ಮಾಡಲಾಗುತ್ತೆ. ಆ ಗನ್ ಕದ್ದವರ್ಯಾರು, ಕೊಲೆ ಮಾಡಿದವರ್ಯಾರು, ಆ ಗನ್ ಕದ್ದವನು ಸಿಗುತ್ತಾನಾ, ಅವನು ಯಾತಕ್ಕಾಗಿ ದರೋಡೆ ಮಾಡ್ತಾನೆ, ಕೊಲೆಗೈಯುತ್ತಾನೆ ಎಂಬುದೇ ಕಥೆ. ಕುತೂಹಲವಿದ್ದರೆ, “8ಎಂಎಂ’ ನೋಡಲು ಯಾವ ತಕರಾರಿಲ್ಲ.
ಇಷ್ಟು ದಿನ ವಿಲನ್ ಆಗಿ ನೋಡುತ್ತಿದ್ದ ವಸಿಷ್ಠ ಸಿಂಹ ಅವರನ್ನಿಲ್ಲಿ ಒಬ್ಬ ಮುಗ್ಧ ಪೊಲೀಸ್ ಅಧಿಕಾರಿಯನ್ನಾಗಿ ಕಾಣಬಹುದು. ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ದಕ್ಷ ಅಧಿಕಾರಿಯಾಗಿ ರಾಕ್‌ಲೈನ್ ವೆಂಕಟೇಶ್ ಇರುವಷ್ಟು ಕಾಲ ಇಷ್ಟವಾದರೆ, ಶೋಭರಾಜ್ ಭ್ರಷ್ಟ ಅಧಿಕಾರಿಯಾಗಿ ಗೇಮ್‌ಗೊಂದು ಮಜ ಕೊಡುತ್ತಾರೆ. ಮಯೂರಿ ಗ್ಲಾಮರ್‌ಗಷ್ಟೇ ಸೀಮಿತ. ಆದಿಲೋಕೇಶ್ ಸೇರಿದಂತೆ ಇತರೆ ಪಾತ್ರಗಳು ಕಥೆಯ ವೇಗಕ್ಕೆ ಹೆಗಲು ಕೊಟ್ಟಿವೆ. ಜೂಡಾ ಸ್ಯಾಂಡಿ ಸಂಗೀತ ಪರವಾಗಿಲ್ಲ. ಎ.ಆರ್.ವಿನ್ಸೆಂಟ್ ಛಾಯಾಗ್ರಹಣ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.
ಚಿತ್ರ: 8 ಎಂಎಂ
ನಿರ್ಮಾಣ: ನಾರಾಯಣ ಬಾಬು, ಪ್ರದೀಪ್, ಸಲೀಂ ಶಾ
ನಿರ್ದೇಶನ: ಹರಿಕೃಷ್ಣ ಎಸ್.
ತಾರಾಗಣ: ಜಗ್ಗೇಶ್, ವಸಿಷ್ಠ ಸಿಂಹ, ಮಯೂರಿ, ರಾಕ್‌ಲೈನ್ ವೆಂಕಟೇಶ್, ಶೋಭರಾಜ್, ಆದಿಲೋಕೇಶ್ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.