ಬಡ ಮಕ್ಕಳ ಕೈ ತಪ್ಪಿದ ವಿದ್ಯಾರ್ಥಿ ವೇತನ
Team Udayavani, Nov 17, 2018, 12:43 PM IST
ಬೆಂಗಳೂರು: ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭವಾಗಿಸುವ ಉದ್ದೇಶದಿಂದ ಪರಿಚಯಿಸಿರುವ ಸ್ಕಾಲರ್‌ಶಿಪ್ ಪೋರ್ಟಲ್ (ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ) ವಿದ್ಯಾರ್ಥಿ, ಪೋಷಕರಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಶೇ.61ರಷ್ಟು ಫಲಾನುಭವಿ ಮಕ್ಕಳು ಈ ಬಾರಿ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ.
ಪೋರ್ಟಲ್ ಮೂಲಕ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ನ.15 ಕೊನೆಯ ದಿನವಾಗಿತ್ತು. ಆದರೆ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೂ ಶೇ.39ರಷ್ಟು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ ಮಾಡಿರುವುದೂ ಸೇರಿ ಹಲವು ತಾಂತ್ರಿಕ ತೊಡಕುಗಳಿಂದಾಗಿ ಬಡ ವಿದ್ಯಾರ್ಥಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ.
ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗದಿರಲಿ ಎಂಬ ಉದ್ದೇಶದೊಂದಿಗೆ ರಾಜ್ಯ ಸರ್ಕಾರ, “ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್’ ಯೋಜನೆ ಜಾರಿಗೆ ತಂದಿತ್ತು. ಇದರ ಯಶಸ್ಸಿಗಾಗಿ ಬೆಂಗಳೂರು ನಗರ ಜಿ.ಪಂ ಕ್ರಿಯಾ ಯೋಜನೆ ರೂಪಿಸಿತ್ತು.
ನಗರ ಜಿಲ್ಲೆ ವ್ಯಾಪ್ತಿಯ 1.32 ಲಕ್ಷ ವಿದ್ಯಾರ್ಥಿಗಳು ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಇವರಲ್ಲಿ ಇಲ್ಲಿಯವರೆಗೂ 42,580 ಮಕ್ಕಳು ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಬೆಂಗಳೂರು ಜಿಲ್ಲಾಡಳಿತ ಯೋಜನೆಯನ್ನು ಶೇ.100ರಷ್ಟು ಅನುಷ್ಠಾನಗೊಳಿಸುವಲ್ಲಿ ಸಫಲವಾಗಿತ್ತು.
ವಸಿಗರ ಬಳಿ ದಾಖಲೆ ಇಲ್ಲ: ನಗರ ಜಿ.ಪಂ ವ್ಯಾಪ್ತಿಯಲ್ಲಿ ಬೇರೆ ನಗರ, ಪಟ್ಟಣ ಮತ್ತು ಹೊರ ರಾಜ್ಯಗಳಿಂದ ಉದ್ಯೋಗ ಅರಸಿ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ಕುಟುಂಬಗಳ ಬಹುತೇಕ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಕರೇ ಮುಂದೆ ನಿಂತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೆರವಾಗುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳ ಪೋಷಕರ ಬಳಿ ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ ಇಲ್ಲ. ಇದು ಯೋಜನೆ ಜಾರಿಗೆ ತೊಡಕಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಜೆ ಮಾಡದೇ ಕೆಲಸ ಮಾಡಿದ ಶಿಕ್ಷಕರು: ಪೋಷಕರು ಮತ್ತು ಮಕ್ಕಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣ ಸಂಯೋಜನಾಧಿಕಾರಿಗಳು ದಸರಾ ಸೇರಿದಂತೆ ಇನ್ನಿತರ ರಜೆ ದಿನಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ ಸರ್ವರ್‌ಗಳಲ್ಲಿ ಕಂಡು ಬರುತ್ತಿದ್ದ ತಾಂತ್ರಿಕ ದೋಶಗಳಿಂದಾಗಿ ಶಿಕ್ಷಕರ ಶ್ರಮ ವ್ಯರ್ಥವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಹಿಂದೆ ಕೂಡ ಹೀಗೇ ಆಗಿತ್ತು: ಈ ಹಿಂದೆ “ರಾಷ್ಟ್ರೀಯ ಸ್ಕಾಲರ್‌ಶಿಪ್ ಪೋರ್ಟಲ್’ ಯೋಜನೆ ಜಾರಿಗೆ ಮುಂದಾದಗಲೂ ಇದೇ ಸಮಸ್ಯೆ ಎದುರಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆಯಲು ನಗರ ಜಿ.ಪಂ ಕಚೇರಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಈಗ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಯೋಜನೆಗೂ ಅದೇ ಸಮಸ್ಯೆ ಕಾಡುತ್ತಿದೆ. ಇದು ಸಾವಿರಾರು ಮಕ್ಕಳ ವಿದ್ಯಾರ್ಥಿವೇತನದ ಕನಸಿಗೆ ತಣ್ಣೀರೆರಚಿದೆ.
ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ ಯೋಜನೆ ಯಶಸ್ವಿ ಜಾರಿ ಸಂಬಂಧ ನಗರ ಜಿ.ಪಂ ಕ್ರಿಯಾ ಯೋಜನೆ ಸಿದ್ಧಪಡಿಸಿತ್ತು. ಆದರೆ ಬಹುತೇಕ ಪೋಷಕರ ಬಳಿ ಅಗತ್ಯ ದಾಖಲೆಗಳೇ ಇಲ್ಲದಿರುವುದು ಯೋಜನೆ ಜಾರಿ ಹಿನ್ನಡೆಗೆ ಕಾರಣ.
-ಸಯ್ಯದ್ ಸಾಜಿದ್, ನಗರ ದಕ್ಷಿಣ ಶಿಕ್ಷಣ ಸಂಯೋಜನಾಧಿಕಾರಿ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.