ಶೇಣಿ ಸಂಮಾನ ಮುಂಗಾರು ಅಭಿಯಾನ ಮಂಗಳೂರು ಅಭಿಮಾನ’
Team Udayavani, Nov 18, 2018, 6:00 AM IST
1972ರ ಜೂನ್‌ನಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರದ ಐದು ವಿಭಾಗಗಳು ಕೊಣಾಜೆಗೆ ಸ್ಥಳಾಂತರವಾಗುವುದು ನಿರ್ಧಾರವಾಗಿತ್ತು. ಅಲ್ಲಿ ಮಳೆಗೆ ನೀರು ಸೋರುತ್ತಿದ್ದ ಎರಡು ಕಟ್ಟಡಗಳನ್ನು ದುರಸ್ತಿಮಾಡಿಕೊಡಲಾಗುವುದು ಎಂದು ಇಂಜಿನಿಯರ್‌ಗಳು ಭರವಸೆ ಕೊಟ್ಟಿದ್ದರು. ನೀರು ಸೋರದಂತೆ ಮಾಡಲು ಕಂಟ್ರಾಕ್ಟರ್ ಅನುಸರಿಸಿದ ವಿಧಾನ ಮಾತ್ರ ಹಾಸ್ಯಾಸ್ಪದವಾಗಿತ್ತು. ಸೋರುವುದನ್ನು ತಡೆಗಟ್ಟಲು ತಾರಸಿಯ ಮೇಲೆ ಹರಳುಕಲ್ಲುಗಳನ್ನು ಡಾಮರು ಜೊತೆಗೆ ಮಿಶ್ರಮಾಡಿ ದಪ್ಪನಾದ ಪದರಿನ ರೂಪದಲ್ಲಿ ಹರಡಲಾಗಿತ್ತು. ಡಾಮರು ಕರಗಿ ರಂಧ್ರಗಳನ್ನು ಮುಚ್ಚಿದರೆ ಸೋರುವುದು ನಿಲ್ಲುತ್ತದೆ ಎನ್ನುವುದು ಇಂಜಿನಿಯರ್‌ಗಳ ತರ್ಕವಾಗಿತ್ತು. ಆದರೆ, ಮೇ ತಿಂಗಳ ರಣಬಿಸಿಲಿಗೆ ಡಾಮರು ಪೂರ್ತಿ ಕರಗಿ ಹೊರಗೆ ಹರಿದುಹೋದ ಕಾರಣ “ಡಾಮರು ಮಳೆ’ಯ ಸೃಷ್ಟಿಯಾಯಿತೇ ಹೊರತು ಮಳೆನೀರಿನ ಸೋರುವಿಕೆ ನಿಲ್ಲಲಿಲ್ಲ. 1972ರ ಜೂನ್‌ನಲ್ಲೂ ನಮಗೆ “ಕೊಣಾಜೆ ಭಾಗ್ಯ’ ಸಿಗಲಿಲ್ಲ. ಮೈಸೂರು ವಿವಿ ಆಡಳಿತಕ್ಕೆ ತಡವಾಗಿ ಜ್ಞಾನೋದಯವಾಗಿ, ಎರಡು ಹೊಸ ಕಟ್ಟಡಗಳ ಮೇಲೆ ಇನ್ನೊಂದು ಅಂತಸ್ತನ್ನು ಕಟ್ಟುವುದು ಎಂದು ನಿರ್ಧಾರವಾಯಿತು. ಮಳೆಗಾಲ ಕಳೆದ ಬಳಿಕ ಮಧ್ಯಾವಧಿ ರಜೆಯ ವೇಳೆಗೆ ನವಂಬರದಲ್ಲಿ ವಿಭಾಗಗಳನ್ನು ಮಂಗಳೂರಿನಿಂದ ಕೊಣಾಜೆಗೆ ಸ್ಥಳಾಂತರಮಾಡಲು ಆದೇಶ ಬಂತು. ಮಂಗಳೂರಿನ ಋಣ ಅಷ್ಟು ಸುಲಭದಲ್ಲಿ ತೀರುತ್ತದೆಯೇ?
ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಮಂಗಳ ಗಂಗೋತ್ರಿಯ ಕನ್ನಡ ವಿಭಾಗದ ಮೂಲಕ ಯಕ್ಷಗಾನಕ್ಕೆ ಹೊಸ ದಿಕ್ಕುಗಳನ್ನು ತೋರಿಸಿದರು. ಹಿರಿಯ ಕಲಾವಿದರಿಂದ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ, ವಿದ್ಯಾರ್ಥಿಗಳ ಯಕ್ಷಗಾನ ಬಯಲಾಟ, ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಬಯಲಾಟ ಸ್ಪರ್ಧೆ- ಹೀಗೆ ಹತ್ತು-ಹಲವು ಗಟ್ಟಿ ಹೆಜ್ಜೆಗಳು. ವಿಭಾಗದಲ್ಲಿ ಕವಿಗಳಿಗೆ ಸಾಹಿತಿಗಳಿಗೆ ಸನ್ಮಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಸನ್ಮಾನಸಂಸ್ಕೃತಿಗೆ ಅವರು ನಾಂದಿ ಹಾಡಿದರು. ಅವರ ಇನ್ನೊಂದು ಮಹತ್ವದ ಉಪಕ್ರಮವೆಂದರೆ ಯಕ್ಷಗಾನ ಕಲಾವಿದರೊಬ್ಬರಿಗೆ ದೊಡ್ಡಮಟ್ಟದ ಸನ್ಮಾನ ಕಾರ್ಯಕ್ರಮ. ಅದು ಮೊದಲ ಬಾರಿ ಸಂಭವಿಸಿದ್ದು ಶೇಣಿ ಗೋಪಾಲಕೃಷ್ಣ ಭಟ್ಟರ ಸನ್ಮಾನದ ಮೂಲಕ 1972 ಸೆಪ್ಟಂಬರ 23ರಂದು ಮಂಗಳೂರು ಪುರಭವನದಲ್ಲಿ. ಕನ್ನಡ ಸಂಘ, ಮಂಗಳಗಂಗೋತ್ರಿಯ ಹೆಸರಿನಲ್ಲಿ ನಡೆದ ಈ ಶೇಣಿ ಸನ್ಮಾನದಲ್ಲಿ ಎಸ್‌ವಿಪಿ ಅವರೇ ಅಧ್ವರ್ಯು. ಶೇಣಿಯವರ ಯಕ್ಷಗಾನ ಕೃತಿ ಮಧ್ಯಮವ್ಯಾಯೋಗದ ಬಿಡುಗಡೆ. ಶೇಣಿಯವರನ್ನು ಅಭಿನಂದಿಸಿ ಮಾತಾಡಿದವರು: ಎಂ. ಪ್ರಭಾಕರ ಜೋಶಿ, ಕೆ. ಕಾಂತ ರೈ ಮತ್ತು ಕೇಶವ ಉಚ್ಚಿಲ…. ಸಭಾಕಾರ್ಯಕ್ರಮದ ಬಳಿಕ, ಮಧ್ಯಮವ್ಯಾಯೋಗ ಪ್ರಸಂಗದ ಆಟ ಪ್ರದರ್ಶನಗೊಂಡಿತು. ಭಾಗವತರು: ದಾಮೋದರ ಮಂಡೆಚ್ಚ ಮತ್ತು ಅಗರಿ ಶ್ರೀನಿವಾಸ ಭಾಗವತರು. ವೇಷಧಾರಿ ಕಲಾವಿದರು: ಶೇಣಿ ಗೋಪಾಲಕೃಷ್ಣ ಭಟ್ಟ, ಕುಂಬಳೆ ಸುಂದರ ರಾವ್, ಕದ್ರಿ ವಿಷ್ಣು, ಕೆ. ಗೋವಿಂದ ಭಟ್ಟ , ಪ್ರಭಾಕರ ಜೋಶಿ. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡುತ್ತ ಶೇಣಿಯವರು ತನ್ನ ಯಕ್ಷಗಾನದ ಅನುಭವಗಳನ್ನು ಯಕ್ಷಗಾನ ಮತ್ತು ನಾನು ಎನ್ನುವ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಬರೆಯುವುದಾಗಿ ಸಾರಿದರು. ಎಂಟು ವರ್ಷಗಳ ಬಳಿಕ ಆ ಗ್ರಂಥ ರಚನೆಯಾಗಿ ಪ್ರಕಟವಾಯಿತು (ಯಕ್ಷಗಾನ ಮತ್ತು ನಾನು : ಸಂತ ಫಿಲೋಮಿನಾ ಕಾಲೇಜು ಕನ್ನಡ ಸಂಘ, ಪುತ್ತೂರು, 1981).
ಕನ್ನಡ ವಿಭಾಗದ ನಾವು ಮೂವರು ಅಧ್ಯಾಪಕರು-ಲಕ್ಕಪ್ಪ ಗೌಡರು, ಐತಾಳರು ಮತ್ತು ನಾನು-ಸಂಪಾದಕರಾಗಿ 1972ರಲ್ಲಿ ಮುಂಗಾರು ಎಂಬ ಸೃಜನಾತ್ಮಕ ವಿಚಾರಾತ್ಮಕ ಸಾಹಿತ್ಯಕ ತ್ತೈಮಾಸಿಕ ಪತ್ರಿಕೆಯನ್ನು ಆರಂಭಿಸಿದೆವು. ಮೂರು ಸಂಚಿಕೆಗಳನ್ನು ಹೊರತಂದೆವು. ಎಸ್‌ವಿಪಿ ಮತ್ತು ಏರ್ಯ ಲಕ್ಷ್ಮೀನಾರಾಯಣ ಆಳ್ವರು ಸಲಹೆಗಾರರಾಗಿದ್ದರು. ಏರ್ಯರು ವಿಜಯಾ ಬ್ಯಾಂಕಿನ ಜಾಹೀರಾತು ತೆಗೆಸಿಕೊಟ್ಟ ಕಾರಣ, ಮುದ್ರಣ ವೆಚ್ಚ ನಿಭಾಯಿಸಲು ಅನುಕೂಲ ಆಗುತ್ತಿತ್ತು. ಜೊತೆಗೆ ಬೇರೆ ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಮತ್ತು ನಮ್ಮ ಕೆಲವು ಹಳೆಯ ವಿದ್ಯಾರ್ಥಿಗಳು ವಾರ್ಷಿಕ ಚಂದಾ ಹಣ ಕೊಡುತ್ತಿದ್ದರು. ಮುಂಗಾರು ಮೊದಲ ಸಂಚಿಕೆಯಲ್ಲಿ (ಆಗಸ್ಟ್ 1972) ನಮ್ಮ ಮಾತು: “”ಚಿರಂತನ ಸತ್ವವುಳ್ಳ ಸಾಹಿತ್ಯಕ್ಕೆ ತಲೆಪಟ್ಟಿಗಳ ಅಗತ್ಯವಿಲ್ಲ. ಪೂರ್ವಗ್ರಹ ಪಕ್ಷಪಾತಗಳ ಶನಿದೊಗಲನ್ನು ಹರಿದೊಗೆದು ಶುದ್ಧ ಸಾಹಿತ್ಯ ವಿಚಾರಗಳ ವೇದಿಕೆಯಾಗುವ ಹಿರಿಯ ಹಂಬಲವನ್ನು ಹೊತ್ತು ಮುಂಗಾರು ಜನ್ಮತಾಳಿದೆ”. ನವೋದಯ-ನವ್ಯಗಳ ಸಂಘರ್ಷ ಪರಾಕಾಷ್ಠೆಯಲ್ಲಿ ಇದ್ದಾಗ ಬರೆದ ಮಾತುಗಳು ಇವು. ವ್ಯಕ್ತಿಗತ ದ್ವೇಷ-ಅಸೂಯೆಗಳು ತತ್ವಸಿದ್ಧಾಂತಗಳ ಮುಖವಾಡ ಹೊತ್ತಾಗ, ಸಾಹಿತ್ಯದಲ್ಲಿ ಗೊಂದಲ, ಸಾಹಿತಿಗಳಲ್ಲಿ ಕ್ಲೇಶ ಕಾಣಿಸಿಕೊಳ್ಳುತ್ತದೆ. ವಾದ-ಪ್ರತಿವಾದಗಳಲ್ಲಿ ಕಾಲ ಕರಗಿಹೋಗುತ್ತದೆ; ಅಸ್ವಸ್ಥಗೊಂಡ ಮನಸ್ಸು ಸಾಹಿತ್ಯದ ಓದಿನ ಪರಿಧಿಯನ್ನು ಕುಗ್ಗಿಸುತ್ತ ಬರುತ್ತದೆ. ಇದರ ಪರಿಣಾಮವಾಗಿ ಸಾಹಿತ್ಯ ಓದುವವರ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ. ಉತ್ತಮ ಸಾಹಿತ್ಯದ ಓದಿನಿಂದ ದೊರಕುವ ಬದುಕಿನ ಅಪಾರ ಸಾಧ್ಯತೆಗಳ ಕಾಮನಬಿಲ್ಲು ಕಣ್ಮರೆಯಾಗುತ್ತದೆ. ಮುಂಗಾರು ಸಂಚಿಕೆಗಳಲ್ಲಿ ಪ್ರಕಟವಾದ ನನ್ನ ಲೇಖನಗಳು: ಗಿರಿಯವರ ಗತಿಸ್ಥಿತಿ ಮತ್ತು ಎಜ್ರಾ ಪೌಂಡ್-ಒಂದು ಪರಿಚಯ. ನನಗೆ ನವ್ಯ ಕಥನಸಾಹಿತ್ಯದ ಭಾಷೆ, ಕಥನವನ್ನು ಕಟ್ಟುವ ಶೈಲಿ ಮತ್ತು ಸಮಕಾಲೀನ ಬದುಕಿಗೆ ಕೊಡುವ ಅರ್ಥ ವಿಶಿಷ್ಟವೆಂದು ಅನ್ನಿಸುತ್ತಿತ್ತು. ನವ್ಯಸಾಹಿತಿಗಳ ಗುಂಪುಗಾರಿಕೆಯಿಂದ ದೂರ ನಿಂತು ಅಧ್ಯಾಪಕನ ಆಸಕ್ತಿಯಿಂದ ಕೃತಿಗಳನ್ನು ಓದಿದ ಪರಿಣಾಮವಾಗಿ ನನ್ನ ಕನ್ನಡಭಾಷೆಯನ್ನು ಚೂಪುಗೊಳಿಸಲು ಸಾಧ್ಯವಾಯಿತು. ಭಾಷೆ ಹರಿತವಾಗುವಾಗ ಆಲೋಚನೆಗಳು ಸಂವೇದನಾಶೀಲವಾಗುತ್ತವೆ ಎಂದು ಕಂಡುಕೊಂಡೆ.
ನಮ್ಮ ಕನ್ನಡ ವಿಭಾಗದಲ್ಲಿ ಎಸ್ವಿಪಿ ಅವರು ತಮ್ಮ ಅನೇಕ ಪುಸ್ತಕಗಳನ್ನು ಮಂಗಳೂರಿನಲ್ಲಿ ಮುದ್ರಿಸಿದರು. ನಮ್ಮ ವಿಭಾಗದ ಪ್ರಕಟಣೆಗಳು- “ಕನ್ನಡ ಸಂಘ, ಮಂಗಳಗಂಗೋತ್ರಿ’, ಪಲಚಂವಿ ಪ್ರಕಾಶನ ಮತ್ತು ವೈಯಕ್ತಿಕ ನೆಲೆಯವುಗಳು-ಮಂಗಳೂರಿನಲ್ಲಿ ಮುದ್ರಣಗೊಂಡುವು. ಎಸ್‌ವಿಪಿ ಅವರ ಹೆಚ್ಚಿನ ಪುಸ್ತಕಗಳು ಪ್ರಕಟವಾದದ್ದು ಶಾರದಾ ಪ್ರಸ್‌ನಲ್ಲಿ. ಮಂಗಳೂರಿನ ರಥಬೀದಿಯಲ್ಲಿ ಇದ್ದ (ಈಗಲೂ ಇರುವ) ಶಾರದಾ ಪ್ರಸ್ ಮಂಗಳೂರಿನಲ್ಲಿ ಸುಂದರ ಮುದ್ರಣಕ್ಕೆ ಹೆಸರುವಾಸಿ ಆಗಿತ್ತು. ಆಗ ಅದರ ಒಡೆಯರು ದೇವದಾಸ ಕಾಮತ್‌ರು ಬಹಳ ಮುತುವರ್ಜಿಯಿಂದ ಮುದ್ರಣದ ಗುಣಮಟ್ಟವನ್ನು ನೋಡಿಕೊಳ್ಳುತ್ತಿದ್ದರು. ಇನ್ನೊಂದು ಪ್ರಸ್ ನಾರಾಯಣರಾಯರ “ಉದಯ ಪ್ರಿಂಟರಿ’ ಕೊಡಿಯಾಲ…ಬೈಲ… ಪಿವಿಎಸ್ ವೃತ್ತದ ಬಳಿ ಇತ್ತು (ಈಗಲೂ ಇದೆ). ನಾರಾಯಣ ರಾಯರು ಶಿಸ್ತು ಮತ್ತು ಕಾಳಜಿಯಿಂದ ಮುದ್ರಣದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. 91ರ ಹರೆಯದಲ್ಲಿ ಈಗಲೂ ಅವರು ಪ್ರಸ್ಸಿಗೆ ಬಂದು ಹೋಗುತ್ತಾರೆ. ಒಮ್ಮೊಮ್ಮೆ ನಾನು ಸಿಕ್ಕಿದಾಗ ಸಂಭ್ರಮಪಡುತ್ತಾರೆ, ಹಿಂದಿನ ನೆನಪುಗಳನ್ನು ಉತ್ಸಾಹದಿಂದ ಹಂಚಿಕೊಳ್ಳುತ್ತಾರೆ. ನಮ್ಮ ಕೆಲವು ಪುಸ್ತಕಗಳು ಕೊಡಿಯಾಲ…ಬೈಲ… ಪ್ರಸ್ ಮತ್ತು ಸೈಂಟ್ ಅಲೋಸಿಯಸ್ ಕಾಲೇಜ… ಪ್ರಸ್‌ನಲ್ಲೂ ಅಚ್ಚು ಆಗಿವೆ. ನನ್ನ ತುಳು ಗಾದೆಗಳು ಮುದ್ರಣವಾದದ್ದು ಸುಜೀರ್ ಮಂಜುನಾಥ ನಾಯಕ್ ಅವರ ಯುನಿವರ್ಸಲ… ಪ್ರಿಂಟರ್ಸ್‌ನಲ್ಲಿ. ಮಾಡರ್ನ್ ಪ್ರಿಂಟಿಂಗ್ ಪ್ರಸ್ ಮತ್ತು ಚೇತನ ಪ್ರಿಂಟರಿ (ಮಠದಕಣಿ)ಯಲ್ಲಿಯೂ ಕೆಲವು ಪುಸ್ತಕಗಳು ಮುದ್ರಣಗೊಂಡಿವೆ. ಕೆ. ಎಸ್. ಉಪಾಧ್ಯಾಯರ ಸಿದ್ಧಾರ್ಥ ಪ್ರಸ್ (ಶರವು ಗಣಪತಿ ದೇವಸ್ಥಾನ ರಸ್ತೆ)ನಲ್ಲಿ ನನ್ನ ಒಂದು ಪುಸ್ತಕ ಅಚ್ಚಾಗಿದೆ. ವಿಭಾಗದ ಮತ್ತು ನನ್ನ ಪುಸ್ತಕಗಳ ಮುದ್ರಣದ ಸಂದರ್ಭದಲ್ಲಿ ಮುದ್ರಣಾಲಯಗಳಲ್ಲಿ ನಾನು ಕಲಿತ ವಿದ್ಯೆ-ಅಕ್ಷರಗಳ ತಪ್ಪು$ತಿದ್ದುವುದು (ಪ್ರೂಫ್ ರೀಡಿಂಗ್) ಮತ್ತು ಪುಟವಿನ್ಯಾಸ ಮಾಡುವುದು. ಮೊಳೆಗಳ ಮೂಲಕ ಅಕ್ಷರಗಳನ್ನು ಜೋಡಿಸುತ್ತಿದ್ದ ಆ ಕಾಲದಲ್ಲಿ ಅದೊಂದು ಕ್ಲಿಷ್ಟ ಕೆಲಸವಾಗಿತ್ತು. ಒಂದು ಬಾರಿ ಮೊಳೆ ಜೋಡಿಸಿ ಪುಟವನ್ನು ಕಟ್ಟಿದ ಬಳಿಕ ಮತ್ತೆ ಅಕ್ಷರ ತಪ್ಪನ್ನು ತಿದ್ದಬೇಕಾದರೆ, ಕೆಲವೊಮ್ಮೆ ಕಟ್ಟಿದ್ದನ್ನು ಬಿಚ್ಚಬೇಕಾಗಿತ್ತು. ಪ್ರಸ್‌ಗೆ ಪ್ರೂಫ್ ರೀಡಿಂಗ್‌ಗೆ ಹೋಗಿಬರುವಾಗ, ಬಟ್ಟೆಯಲ್ಲಿ ಮಸಿ ಮೆತ್ತಿಕೊಂಡ ಅನುಭವ ಸಾಮಾನ್ಯವಾಗಿತ್ತು. ಆದರೆ, ಒಂದೂ ತಪ್ಪಿಲ್ಲದಂತೆ ಅಕ್ಷರ ತಿದ್ದುವ ವಿದ್ಯೆಯನ್ನು ಮಂಗಳೂರಿನ ಅನೇಕ ಪ್ರಸ್‌ಗಳಲ್ಲಿ ಕಲಿತೆ. ಮುದ್ರಣದಲ್ಲಿ “ಅಚ್ಚುಕಟ್ಟು’ ಎನ್ನುವ ಕಲ್ಪನೆ ನನಗೆ ಮುಂದೆ ಅನೇಕ ಕ್ಷೇತ್ರಗಳಲ್ಲಿ “ಪರಿಪೂರ್ಣತೆ’ಯನ್ನು ಸಾಧಿಸಬೇಕು ಎನ್ನುವ ಪಾಠವನ್ನು ಕಲಿಸಿತು. ನಾನು ಕುಲಪತಿ ಆಗಿ¨ªಾಗಲೂ ಘಟಿಕೋತ್ಸವದ ಆಮಂತ್ರಣಪತ್ರಿಕೆಗಳ ಪ್ರೂಫ್ ರೀಡಿಂಗ್ ಮಾಡುವುದಕ್ಕೆ ಪ್ರಸ್‌ಗಳ ಒಳಗೆ ಹೋಗಿ ಡಿಟಿಪಿ ಮಾಡುವವರ ಬಳಿ ಕುಳಿತುಕೊಂಡು ನನಗೆ ತೃಪ್ತಿ ಆಗುವವರೆಗೆ ಏಳೆಂಟು ಬಾರಿ ಪ್ರತಿ ತೆಗೆಸುತ್ತಿದ್ದೆ. ಈಗಲೂ ನನ್ನ ಬರವಣಿಗೆ, ಪುಸ್ತಕಗಳ ಪ್ರೂಫ್-ವಿನ್ಯಾಸ ನಾನು ನೋಡುವುದು ಮುದ್ರಣಾಲಯದಲ್ಲೇ ಡಿಟಿಪಿ ಆಪರೇಟರ್‌ಗಳ ಬಳಿ ಕುಳಿತುಕೊಂಡು, ಅವರಿಗೆ ವಿನ್ಯಾಸದ ಬಗ್ಗೆ ಹೇಳಿಕೊಡುತ್ತ !
ಆ ಕಾಲದಲ್ಲಿ ನಮ್ಮ ಕನ್ನಡವಿಭಾಗಕ್ಕೆ ಸಂಪರ್ಕ ಇದ್ದ ಎರಡು ಫೊಟೊ ಸ್ಟುಡಿಯೋಗಳು: ಎಸ್. ಆರ್. ಬಾಲಗೋಪಾಲ… ಅವರ ಬಾಲ್ಕೊ ಸ್ಟುಡಿಯೊ ಮತ್ತು ಜೆ. ಸಿ. ಸಮರ್ಥರ ಉಷಾ ಸ್ಟುಡಿಯೊ. ನಮ್ಮ ವಿಭಾಗದ ಕಾರ್ಯಕ್ರಮಗಳ ಫೊಟೊ ತೆಗೆಯುತ್ತಿದ್ದವರು ಬಾಲಗೋಪಾಲ…. ಸದಾ ಬಿಳಿ ಪೈಜಾಮ, ಅರ್ಧ ತೋಳಿನ ಬಿಳಿ ಅಂಗಿ ಧರಿಸುತ್ತಿದ್ದ ಬಾಲಗೋಪಾಲ… ಕೆಮರಾವನ್ನು ಕುತ್ತಿಗೆಯ ಮೂಲಕ ಎದೆಯ ಮೇಲೆ ನೇತುಹಾಕಿಕೊಂಡು ಬರುತ್ತಿದ್ದರು. ಹಂಪನಕಟ್ಟೆಯ ಹಳೆಯ ಬಸ್‌ಸ್ಟಾಂಡಿನ ಬದಿಯ ಕಟ್ಟಡದಲ್ಲಿ ಇದ್ದ ಬಾಲ್ಕೊ ಸ್ಟುಡಿಯೋದ ಮಾಳಿಗೆಯ ಮೆಟ್ಟಿಲುಗಳನ್ನು ಎಷ್ಟು ಬಾರಿ ಹತ್ತಿ ಇಳಿದಿದ್ದೇನೆ ಎಂದು ಲೆಕ್ಕ ಇಟ್ಟಿಲ್ಲ. (ನನ್ನ ಮದುವೆಯ ಫೊಟೊದ ಆಲ್ಬಮ…ನಲ್ಲಿ ಬಾಲ್ಕೋದ ಗುರುತಿದೆ.) ಬಾಲಗೋಪಾಲ…ರಲ್ಲಿ ನಾಟಕ ಅಭಿನಯದ ಕಲೆಗಾರಿಕೆ ಇತ್ತು. ಮಂಗಳೂರಿನ ಯಾವುದೇ ಕಾರ್ಯಕ್ರಮಗಳಲ್ಲಿ ನಡುವೆ ಬಿಡುವು ಇದೆ ಎಂದಾದರೆ ಸ್ಟೇಜ್‌ನಲ್ಲಿ ಬಾಲಗೋಪಾಲ… ಹಾಜರು. ಅವರದ್ದು ಹಾಸ್ಯಪ್ರಸಂಗಗಳ ನಿರೂಪಣೆ. ಬಾಲಗೋಪಾಲ… ಹೇಳುತ್ತಿದ್ದ ಒಂದು ಹಾಸ್ಯ ಪ್ರಸಂಗ: ಹಂಪನಕಟ್ಟೆ ಬಸ್‌ಸ್ಟಾಂಡ್‌ನಲ್ಲಿ ಬಸ್ಸಿಗೆ ಪ್ರಯಾಣಿಕರನ್ನು ಕೂಗಿ ಕರೆಯುವ ಏಜಂಟ್ ಒಬ್ಬನಿಗೆ “ರ’ ಉಚ್ಚಾರಣೆ ಬರುತ್ತಿರಲಿಲ್ಲ. ಅವನು “ರ’ವನ್ನು “ಯ’ ಎಂದು ಉಚ್ಚರಿಸುತ್ತಿದ್ದನಂತೆ. ಅವನು ಕೂಗಿ ಹೇಳುತ್ತಿದ್ದದ್ದು: “”ಯಾಯು, ಕಾವೂಯು, ಮಯವೂಯು, ಮಯವೂಯಿಗೆ ಹೋಗುವವಯು, ಬಸ್ಸಿಗೆ ಬನ್ನಿ” ನಮ್ಮ ವಿಭಾಗದಲ್ಲಿ ಕವಿಗಳ ಸಾಹಿತಿಗಳ ಕಲಾವಿದರ ಭಾವಚಿತ್ರಗಳನ್ನು ದೊಡ್ಡ ಗಾತ್ರದಲ್ಲಿ ಕಲಾತ್ಮಕವಾಗಿ ಮಾಡಿಕೊಡುತ್ತಿದ್ದುದು ಸಮರ್ಥರ “ಉಷಾ ಸ್ಟುಡಿಯೊ’. ಮೂಲ ಭಾವಚಿತ್ರ ಎಷ್ಟೇ ಹಳತಾಗಿರಲಿ, ಮಸುಕಾಗಿರಲಿ ಅದನ್ನು ಮೂಲ ಆಕಾರಕ್ಕೆ ಕುಂದು ಬಾರದಂತೆ ದೊಡ್ಡದು ಮಾಡಿ ಅಚ್ಚುಕಟ್ಟಾಗಿ ನಿರ್ಮಿಸಿ ಚೌಕಟ್ಟು ಹಾಕಿಕೊಡುತ್ತಿದ್ದ ಉಷಾ ಸ್ಟುಡಿಯೋದ ಸಮರ್ಥರದು ಅನ್ವರ್ಥನಾಮವಾಗಿತ್ತು. ಬಾಲ್ಕೊ ಮತ್ತು ಉಷಾ ಸ್ಟುಡಿಯೊ ಮಂಗಳೂರಿನಲ್ಲಿ ಈಗಲೂ ಇವೆ, ಅವರ ಮಕ್ಕಳ/ಕುಟುಂಬಿಕರ ಪೋಷಣೆಯಲ್ಲಿ ಎನ್ನುವುದು ಸಂತೋಷದ ಸಂಗತಿ.
1968-74ರ ಅವಧಿಯಲ್ಲಿ ನಮ್ಮ ಅಗತ್ಯಗಳಿಗೆ ಬೇಕಾದ ಕನ್ನಡ ಪುಸ್ತಕಗಳನ್ನು ಕೊಳ್ಳುವ ಪುಸ್ತಕದ ಅಂಗಡಿ ಮಂಗಳೂರಿನಲ್ಲಿ ಇರಲಿಲ್ಲ. ಸ್ವಲ್ಪ ಮಟ್ಟಿಗೆ ಸಾಹಿತ್ಯ ಪುಸ್ತಕಗಳು ದೊರೆಯುತ್ತಿದ್ದ ಅಂಗಡಿ ಕಾರ್ನಾಡ್ ಸದಾಶಿವರಾವ್ ರಸ್ತೆಯಲ್ಲಿ ಇದ್ದ ಪ್ರಭಾತ್ ಬುಕ್‌ಹೌಸ್ (ಅಲ್ಲಿ ಈಗ ನವಕರ್ನಾಟಕ ಪುಸ್ತಕ ಅಂಗಡಿ ಇದೆ). ಅದೇ ರಸ್ತೆಯಲ್ಲಿ ಇದ್ದ ಇಂಡಿಯನ್ ಇಂಡಸ್ಟ್ರಿಯಲ್ಸ… ಮತ್ತು ಏಜೆನ್ಸಿಸ್ ಅಂಗಡಿಯಲ್ಲಿ ಕೆಲವು ಹಳೆಯ ಪುಸ್ತಕಗಳು ಸಿಗುತ್ತಿದ್ದವು. ಆದರೆ, ನಮ್ಮ ಎಂಎ ಅಧ್ಯಯನ ಮತ್ತು ಸಾಹಿತ್ಯ ಆಸಕ್ತಿಗಾಗಿ ನಾವು ಅವಲಂಬಿಸುತ್ತಿದ್ದದ್ದು ಮೈಸೂರಿನ ಗೀತಾ ಬುಕ್‌ಹೌಸ್‌ನ್ನು. ನಾನು ಅಲ್ಲಿಗೆ ಪತ್ರ ಬರೆದು ವಿಪಿಪಿ ಮೂಲಕ ಅಥವಾ ಮೈಸೂರಿಗೆ ಹೋದಾಗ ಗೀತಾ ಬುಕ್‌ಹೌಸ್‌ನಿಂದ ಬೇಕಾದ ಪುಸ್ತಕ ಪಡೆಯುತ್ತಿದ್ದೆ. ಅಲ್ಲಿಗೆ ಹೋದಾಗ ಸಾಮಾನ್ಯವಾಗಿ ಮೈಸೂರಿನ ಸಾಹಿತಿಗಳು ಅಧ್ಯಾಪಕರು ಅಂಗಡಿಯಲ್ಲಿ ಸಿಗುತ್ತಿದ್ದರು. ಮಂಗಳೂರಿನಲ್ಲಿ ನಮ್ಮ ಪುಸ್ತಕಹಸಿವನ್ನು ಪೂರ್ಣಪ್ರಮಾಣದಲ್ಲಿ ನಿವಾರಿಸಿದ್ದು 1975ರಲ್ಲಿ ಬಲ್ಮಠದಲ್ಲಿ ಆರಂಭವಾದ ಅತ್ರಿ ಬುಕ್ ಸೆಂಟರ್. ನಾನು ಮಂಗಳೂರಲ್ಲಿ ಇದ್ದಷ್ಟು ಕಾಲ ಯಾವುದೇ ಪುಸ್ತಕ ಬೇಕಾದರೂ ಒಂದು ದಿನದೊಳಗೆ ಅತ್ರಿ ಬುಕ್ ಸೆಂಟರ್‌ನ ಜಿ. ಎನ್. ಅಶೋಕವರ್ಧನ ತರಿಸಿಕೊಡುತ್ತಿದ್ದರು. ಜೊತೆಗೆ ಸಾಹಿತ್ಯಾಸಕ್ತರ ಭೇಟಿಗೆ ಮತ್ತು ಮಾಹಿತಿ ವಿನಿಮಯಕ್ಕೆ ಅದೊಂದು ವಿಶ್ವಾಸದ ಕೇಂದ್ರವಾಗಿತ್ತು.
ನಮ್ಮ ಕನ್ನಡ ವಿಭಾಗಕ್ಕೆ ಆ ಕಾಲದಲ್ಲಿ ಮಂಗಳೂರಿನಲ್ಲಿ ಆಪ್ತವಾಗಿದ್ದವು ಎರಡು ಹೊಟೇಲ…ಗಳು: ವುಡ್‌ಲ್ಯಾಂಡ್ ಮತ್ತು ಮೋಹಿನಿವಿಲಾಸ. ವ್ಯಕ್ತಿಗತವಾಗಿ ನಾನು ಬೇರೆ ಹೊಟೇಲ…ಗಳಿಗೆ ಕೂಡ ಹೋಗುತ್ತಿದ್ದೆ. ತಾಜಮಹಲ…ನ “ತುಪ್ಪದೋಸೆ’, ಬಲ್ಮಠದ ಇಂದ್ರಭವನದ “ಅವಲಕ್ಕಿ ಸಜ್ಜಿಗೆ’ ನನ್ನ ನಾಸ್ಟಾಲ್ಜಿಯಾದ ಭಾಗವಾಗಿವೆ. ಕರಂಗಲಪಾಡಿಯಲ್ಲಿದ್ದ ನಮ್ಮ ಕನ್ನಡವಿಭಾಗಕ್ಕೆ ಕಾಲ್ನಡಿಗೆಯಲ್ಲಿ ಸಮೀಪದಲ್ಲಿದ್ದ ವುಡ್‌ಲ್ಯಾಂಡ್ ನಲ್ಲಿ ಕೊಠಡಿಗಳಿದ್ದುದರಿಂದ ನಮ್ಮ ಅತಿಥಿಗಳಿಗೆ ವಸತಿ ವ್ಯವಸ್ಥೆಗೆ ಅನುಕೂಲ ಆಗುತ್ತಿತ್ತು. ಊಟ-ಕಾಫಿತಿಂಡಿ ಅಲ್ಲೇ ಸಿಗುತ್ತಿತ್ತು. ಸಣ್ಣ ಸಭೆಗಳನ್ನು ನಡೆಸಲು ಒಳಗಡೆ ಚಿಕ್ಕ ಕೋಣೆಗಳ ಅನುಕೂಲ ಇತ್ತು. ಹೊರಗಿನ ಸ್ಟೇಜ್ ಮತ್ತು ಅದರ ಮುಂದಿನ ವಿಶಾಲ ಜಾಗದಲ್ಲಿ ನಾವು ಕೆಲವು ಕಾರ್ಯಕ್ರಮಗಳನ್ನು ಕೂಡ ನಡೆಸಿದ್ದೇವೆ. ಪ್ರೊಫೆಸರ್ ಮತ್ತು ಅತಿಥಿಗಳ ಜೊತೆಗೆ ಅಲ್ಲಿಗೆ ಕಾಫಿತಿಂಡಿಗೆ ಹೋಗುವುದು ನಮಗೆ ಹವ್ಯಾಸವಾಗಿತ್ತು. ಅಲ್ಲಿನ ತಿಂಡಿಗಳಲ್ಲಿ “ಗೋಳಿಬಜೆ’ಗೆ ರಾಜತ್ವವನ್ನು ಕೆಲವರು ಆರೋಪಿಸಿದರೂ ಉಳಿದ ತಿಂಡಿಗಳನ್ನು ಸಾಮಂತರು ಎಂದೂ ಯಾರೂ ಕರೆಯುತ್ತಿರಲಿಲ್ಲ. ಗಣಪತಿ ಹೈಸ್ಕೂಲು ರಸ್ತೆಯಲ್ಲಿ ಇದ್ದ “ಮೋಹಿನಿವಿಲಾಸ’ವು ಕಾಫಿತಿಂಡಿಯ ಹೊಟೇಲ… ಆದರೂ ಅದರ ಮಾಳಿಗೆಯ ಒಳಕೋಣೆಯಲ್ಲಿ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ನಡೆಸುವ ಸೌಲಭ್ಯ ಇತ್ತು. ನಮ್ಮ ವಿಭಾಗದ ಅನೇಕ ಪುಸ್ತಕ ಬಿಡುಗಡೆಯ ಮತ್ತು ಅಭಿನಂದನೆಯ ಕಾರ್ಯಕ್ರಮಗಳನ್ನು ಅಲ್ಲಿ ನಡೆಸಿದ್ದೇವೆ. ಅಲ್ಲಿ ಮದುವೆಯ ನಿಶ್ಚಿತಾರ್ಥದ ಕಾರ್ಯಕ್ರಮಗಳೂ ನಡೆಯುತ್ತಿದ್ದುವು. “ಗುಲಾಬ್ ಜಾಮೂನು-ಮಸಾಲೆದೋಸೆ’ ಜೋಡಿಯಿಂದ ತೊಡಗಿ ರುಚಿಕರ ತಿಂಡಿಗಳಿಗೆ ಎಳಸುವ ಜಿಹೆÌಗಳನ್ನು ಸೆಳೆಯುವ ಮೋಹಿನಿಯಾಗಿತ್ತು ಆ “ಮೋಹಿನಿವಿಲಾಸ’! ಈಗ ಆ ಸ್ಥಳದಲ್ಲಿ ದೊಡ್ಡ ವಸತಿಗೃಹವೊಂದು ಎದ್ದು ನಿಂತಿದೆ.
ಐವತ್ತು ವರ್ಷಗಳ ಹಿಂದಿನ ಆ ಮಂಗಳೂರು ಒಂದು ಪಟ್ಟಣವೆಂದು ನಮಗೆ ಅನ್ನಿಸುತ್ತಲೇ ಇರಲಿಲ್ಲ. ನಮ್ಮ ವಿಭಾಗದ ಬಹುಮುಖೀ ಚಟುವಟಿಕೆಗಳಿಂದ ನಮ್ಮ ಪಾಲಿಗೆ ಸಹೃದಯ ಕೂಡುಕುಟುಂಬವೊಂದು ಅಲ್ಲಿ ನಿರ್ಮಾಣವಾಗಿತ್ತು. ಸಹಜ, ಸರಳ ಆವರಣದಲ್ಲಿ ಅಸಂಭಾವ್ಯವಾದುದನ್ನು ಸಾಧಿಸುವ ಆತ್ಮವಿಶ್ವಾಸ ಗಟ್ಟಿಯಾಗಿತ್ತು. ಕಾಲ ಮತ್ತು ಸ್ಥಳ ಬದಲಾದರೂ ಅಂತರಂಗದ ಛಲ ಬದಲಾಗಬಾರದು ತಾನೇ?
ಬಿ. ಎ. ವಿವೇಕ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandigarh: ಕೋಟೆ ಕಟ್ಟಿದ ಗುತ್ತಿಗೆದಾರನಿಗೆ ರೋಲೆಕ್ಸ್ ವಾಚ್ ಉಡುಗೊರೆ
Pune: 300ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿ ಟೆಸ್ಲಾದಲ್ಲಿ ಉದ್ಯೋಗ ಪಡೆದ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.