ಕನ್ನಡ ಉಳಿಸಲು ಮಾತೃಭಾಷೆಗೆ ಆದ್ಯತೆ: ಡಾ| ಕಂಬಾರ
Team Udayavani, Nov 19, 2018, 4:25 AM IST
ಮೂಡಬಿದಿರೆ: ನಾಡು ನುಡಿ, ಸಂಸ್ಕೃತಿಯ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಬಗ್ಗೆ ಆಲೋಚನೆ-ನಿರ್ಧಾರಕ್ಕೆ ಇದು ಸಕಾಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಸಮಾರೋಪ ಭಾಷಣವನ್ನು ರವಿವಾರ ಅವರು ಮಾಡಿದರು.
ಮೆಕಾಲೆಯ ಆಂಗ್ಲ ಮಾಧ್ಯಮ ಶಿಕ್ಷಣ ಸ್ವಾತಂತ್ರ್ಯಾನಂತರವೂ ನಮಗೆ ಅಗತ್ಯ ಎಂಬ ಭಾವನೆ ವಿಪರ್ಯಾಸ. ಕನ್ನಡದ ಸಂದರ್ಭದಲ್ಲಿ ಇದು ತೀವ್ರ ಅಪಾಯಕಾರಿ. ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳುವಳಿಕೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು. ಸಾಹಿತ್ಯವು ರಸಗ್ರಹಣಕ್ಕೆ ಪೂರಕವಾಗಬೇಕು. ಎಳೆಯರಲ್ಲಿ ಸೃಜನಶೀಲತೆ ಬೆಳೆಯಬೇಕು. ಚರಿತ್ರೆಯ ಅರಿವು ಪರಿಪೂರ್ಣವಾಗಿರಬೇಕು. ಆದ್ದರಿಂದ ದೇಶದಲ್ಲಿ ಮಾತೃಭಾಷೆಯು ಆದ್ಯತೆಯಾಗಲೆಂದು ಕಂಬಾರ ಹಾರೈಸಿದರು.
ಕನ್ನಡದ ಬಹುರೂಪಿ ಆಯಾಮಗಳಿಗೆ ಪರಿಪೂರ್ಣ ದಶಕವನ್ನು ಈ ನುಡಿಸಿರಿಯು ರೂಪಿಸಿದೆ; ಜ್ಞಾನದ ಚಿಂತನ-ಮಂಥನ ಬೌದ್ಧಿಕ ಮಟ್ಟದಲ್ಲಿ ನಡೆದಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ| ಮಲ್ಲಿಕಾ ಎಸ್. ಘಂಟಿ ಅವರು ಸರ್ವಾಧ್ಯಕ್ಷರ ನುಡಿಯಲ್ಲಿ ಅಭಿಪ್ರಾಯಪಟ್ಟರು. ಕಾರ್ಯಕ್ರಮ ರಾಜ್ಯಕ್ಕೆ ಅನುಕರಣೀಯ ಎಂದು ಶ್ಲಾಘಿಸಿದರು. ಇಲ್ಲಿ ಪೊಲೀಸರು ಇರಲಿಲ್ಲ; ರಾಜಕಾರಣಿಗಳ ಭಾಷಣಗಳಿರಲಿಲ್ಲ. ಪ್ರೇಕ್ಷಕವರ್ಗ ಹೇಗಿರಬೇಕು ಎಂಬುದನ್ನು ನುಡಿಸಿರಿಯ ಮೂಲಕ ಸಾಧಿಸಿಕೊಟ್ಟ ಡಾ| ಆಳ್ವರನ್ನು ವಿಶೇಷವಾಗಿ ಅಭಿನಂದಿಸುವುದಾಗಿ ಹೇಳಿದರು. ನ. 16ರಂದು ಉದ್ಘಾಟಿಸಿದ ಡಾ| ಷ. ಶೆಟ್ಟರ್, ಶಾಸಕರಾದ ಉಮಾನಾಥ ಕೋಟ್ಯಾನ್ ಮತ್ತು ಎಸ್. ಎಲ್. ಭೋಜೇಗೌಡ, ಮಾಜಿ ಶಾಸಕ ಕ್ಯಾ| ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿದ್ದರು.
ಸರ್ವರ ನುಡಿಸಿರಿ: ಡಾ| ಆಳ್ವ
ಡಾ| ಎಂ. ಮೋಹನ ಆಳ್ವ ಸ್ವಾಗತಿಸಿದರು. ಈ ಬಾರಿಯ ನುಡಿಸಿರಿ ಜನಸಾಗರವಾಗಿದೆ. ಸರ್ವರ ನುಡಿಸಿರಿಯಾಗಿದೆ. ತನ್ನ ಹೃದಯ ತುಂಬಿ ಬಂದಿದೆ. ಎಲ್ಲರಿಗೂ ಕೃತಜ್ಞ. ನುಡಿಸಿರಿ ನಿರಾತಂಕವಾಗಿ ಮುಂದುವರಿಯಲಿದೆ ಎಂದರು. ವೇಣುಗೋಪಾಲ್ ಕೆ. ನಿರೂಪಿಸಿ, ಅಂಡಾರು ಗುಣಪಾಲ ಹೆಗ್ಡೆ ವಂದಿಸಿದರು. ಡಾ| ಯೋಗೀಶ್ ಕೈರೋಡಿ, ಮಲ್ಲಿಕಾ, ಸುಧಾರಾಣಿ, ಡಾ| ಪದ್ಮನಾಭ ಶೆಣೈ, ಗುರುಪ್ರಸಾದ್ ಭಟ್, ರಜನೀಶ್, ಡಾ| ಡಿ. ವಿ. ಪ್ರಕಾಶ್, ಚಂದ್ರಶೇಖರ್ ಗೌಡ, ಶ್ರೀನಿಧಿ, ಡಾ| ಪ್ರವೀಣ್‌ಚಂದ್ರ, ವಿಜಯ್‌ಕುಮಾರ್, ಡಾ| ಕೃಷ್ಣರಾಜ ಕರಬ ಅವರು ಸಭಿಕರನ್ನು ಪರಿಚಯಿಸಿದರು.
ಕಂಬಾರ, ಘಂಟಿಗೆ ಸಮ್ಮಾನ
ಹಿರಿಯ ಸಾಹಿತಿ ಡಾ| ಚಂದ್ರಶೇಖರ ಕಂಬಾರ, ಸಮ್ಮೇಳನದ ಸರ್ವಾಧ್ಯಕ್ಷೆ ಡಾ| ಮಲ್ಲಿಕಾ ಎಸ್. ಘಂಟಿ ಅವರನ್ನು ಆಳ್ವಾಸ್ ಅಧ್ಯಕ್ಷ ಡಾ| ಆಳ್ವ ಸಮ್ಮಾನಿಸಿದರು.
ವಿಜ್ಞಾನ ಸಿರಿ ಪದಕ ಪ್ರದಾನ
ಡಾ| ಅಬ್ದುಲ್ ಕಲಾಂ ಸಭಾಂಗಣ, ವಿದ್ಯಾಗಿರಿಯಲ್ಲಿ ನಡೆದ ‘ಆಳ್ವಾಸ್ “ಜ್ಞಾನ ಸಿರಿ-2018’ರ ಹಿರಿಯ ಹಾಗೂ ಕಿರಿಯ ವಿಭಾಗದಲ್ಲಿ ಹಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆ- ಪ್ರದರ್ಶನ ಹಮ್ಮಿಕೊಳ್ಳ ಲಾಗಿತ್ತು. ಡಾ| ಎಂ. ಮೋಹನ ಆಳ್ವ ವಿಜೇತ ವಿದ್ಯಾರ್ಥಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು.
ಆಳ್ವಾಸ್ ಪ್ರಶಸ್ತಿ ಪುರಸ್ಕಾರ
ಡಾ| ಜಿ.ಡಿ. ಜೋಷಿ, ಡಾ| ಎ.ಡಿ. ನರಸಿಂಹ ಮೂರ್ತಿು, ಡಾ| ಭಾರತಿ ವಿಷ್ಣುವರ್ಧನ್, ಡಾ| ಅರುಂಧತಿ ನಾಗ್, ಎಲ್. ಬಂದೇನವಾಜ ಖಲೀಫ್ ಆಲ್ದಾಳ, ಡಾ| ಕೆ. ರಮಾನಂದ ಬನಾರಿ, ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ| ಎ.ವಿ. ನಾವಡ, ಫಾ| ಪ್ರಶಾಂತ್ ಮಾಡ್ತ, ಗರ್ತಿಗೆರೆ ರಾಘಣ್ಣ, ಅರುವ ಕೊರಗಪ್ಪ ಶೆಟ್ಟಿ, ವೈ. ಮೈಸೂರು ನಟರಾಜ ವಾಷಿಂಗ್ಟನ್ ಅವರಿಗೆ ಸ್ಮರಣಿಕೆ, ಪ್ರಮಾಣಪತ್ರ ಮತ್ತು 25 ಸಾವಿರ ರೂ. ನಗದು ಸಹಿತ ನುಡಿಸಿರಿ ಪ್ರಶಸ್ತಿ ನೀಡಲಾಯಿತು.
ಆಶ್ಚರ್ಯ, ಮೂಕವಿಸ್ಮಿತ
‘ಮೂಕವಿಸ್ಮಿತಳಾಗಿದ್ದೇನೆ. ಇಷ್ಟು ವ್ಯವಸ್ಥಿತ ವಾಗಿ ನಿರ್ದಿಷ್ಟ ಆಶಯ ದೊಂದಿಗೆ ವೃತ್ತಿಪರವಾಗಿ ಕನ್ನಡ ಕುರಿತ ಸಮ್ಮೇಳನ ನಡೆಸುವ ಡಾ| ಆಳ್ವರು ಮತ್ತು ಒಡನಾಡಿಗಳ ಶ್ರದ್ಧೆಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ.’
– ಡಾ| ಅರುಂಧತಿ ನಾಗ್, (2018ರ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತೆ)
ನಾಡು-ನುಡಿ-ಸಂಸ್ಕೃತಿಯ ಪರಿಚಾರಕರಿಗೆ ಸಾರ್ಥಕ್ಯ ಭಾವ
ಮೂಡಬಿದಿರೆ: ಆಳ್ವಾಸ್ ನುಡಿಸಿರಿ-2018 ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ರವಿವಾರ ಸಮಾಪನಗೊಂಡಿತು. ಹಂಪಿ ಕನ್ನಡ ವಿ.ವಿ. ಕುಲಪತಿ ಡಾ| ಮಲ್ಲಿಕಾ ಎಸ್. ಘಂಟಿ ಸರ್ವಾಧ್ಯಕ್ಷತೆಯಲ್ಲಿ ನುಡಿಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ವಿದ್ಯಾರ್ಥಿ ಸಿರಿ, ‘ವಿಜ್ಞಾನ ಸಿರಿ’, “ಕೃಷಿ ಸಿರಿ’, ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರದರ್ಶನ, ರಾಷ್ಟ್ರ ಮಟ್ಟದ ಛಾಯಾಚಿತ್ರಸಿರಿ, ರಾಜ್ಯ ಮಟ್ಟದ ಚಿತ್ರ ಸಿರಿ, ವ್ಯಂಗ್ಯ ಚಿತ್ರಸಿರಿ ಪ್ರವೇಶಿಕೆಗಳು ಮತ್ತು ಬಹುಮಾನಿತ ಚಿತ್ರಗಳ ಪ್ರದರ್ಶನ… ಎಲ್ಲವೂ ನಾಡಿನ ಬಹುತ್ವದ ಪರಿಚಯ, ಸಾರ್ಥಕ ಪ್ರಸ್ತುತಿಯಾಗಿ ಮೆರೆದವು.
ನುಡಿಸಿರಿಯ ಆರಂಭ ಮತ್ತು ಕೊನೆಯಲ್ಲಿ ನಡೆದ ಸಾಂಸ್ಕೃತಿಕ ಮೆರವಣಿಗೆ ಯಿಂದ ತೊಡಗಿ, ಮುಖ್ಯ ವೇದಿಕೆಯಲ್ಲದೆ ಏಳು ವೇದಿಕೆಗಳಲ್ಲಿ ನಡೆದ ಸಾಂಸ್ಕೃತಿಕ ಕಲಾಪಗಳು ಸಂಭ್ರಮವನ್ನು ಹೆಚ್ಚಿಸಿದವು. 33 ಸಾವಿರಕ್ಕೂ ಅಧಿಕ ಮಂದಿ ಪ್ರತಿನಿಧಿಗಳಾಗಿ ಪಾಲ್ಗೊಂಡದ್ದು ನಾಡಿನ ಯಾವುದೇ ಸಾಹಿತ್ಯ, ಸಾಂಸ್ಕೃತಿಕ ಸಂದರ್ಭಗಳಲ್ಲಿ ಕಾಣದ ಸಂಗತಿ. ಲಕ್ಷಕ್ಕೂ ಅಧಿಕ ಮಂದಿ ಸಮ್ಮೇಳನದಲ್ಲಿ ಪಾಲ್ಗೊಂಡದ್ದು ವಿಶೇಷ.
ಸಂಜೆಯಾಗುತ್ತಿದ್ದಂತೆ ಪ್ರತಿನಿಧಿಗಳು, ಸಾಹಿತ್ಯಾಸಕ್ತರು ಸಮ್ಮೇಳನ ಮುಗಿಸಿ ಹೊರಡುವ ವೇಳೆಗೆ ವರುಣರಾಯನ ಆಗಮನ. ಸುಮಾರು 10ರಿಂದ 15 ನಿಮಿಷ ಕಾಲ ಸುರಿದ ಮಳೆಯು ಇಳೆಯನ್ನು ತಂಪಾಗಿಸುವ ಜತೆಗೆ ನುಡಿಸಿರಿಗೆ ಅಮೃತ ಸಿಂಚನ ಆಗಿದ್ದು ವಿಶೇಷ.
ಬಹುತ್ವದ, ಬಹುರೂಪದ ಅಭಿವ್ಯಕ್ತಿ
15ನೇ ನುಡಿಸಿರಿ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ನಡೆದ ಸಾರ್ಥಕ್ಯ ಭಾವ ನಮಗಿದೆ. ವಿದ್ಯಾರ್ಥಿ ಸಿರಿ, ವಿಜ್ಞಾನ ಸಿರಿ, ಕೃಷಿ ಸಿರಿ, ಚಿತ್ರ ಸಿರಿಗಳು, ಸಿನಿ ಸಿರಿ, ಸಾಂಸ್ಕೃತಿಕ ಕಲಾಪಗಳೆಲ್ಲವೂ ವ್ಯವಸ್ಥಿತವಾಗಿ ನಡೆದಿವೆ. ಜನರೂ ಗೊಂದಲವಿಲ್ಲದೆ ಭಾಗವಹಿಸಿದ್ದಾರೆ. 33.000ದಷ್ಟು ಮಂದಿ ಪ್ರತಿನಿಧಿಗಳಾಗಿ ನೋಂದಣಿ ನಡೆಸಿರುವ ಉದಾಹರಣೆ ಎಲ್ಲಾದರೂ ಉಂಟೇ? ಸ್ವಯಂಸ್ಫೂರ್ತಿ ಯಿಂದ ಹೀಗೆ ಭಾಗವಹಿಸಿದವರೆಲ್ಲ ಇದು ನಮ್ಮದು, ನಮ್ಮೆಲ್ಲರ ಸಮ್ಮೇಳನ ಎಂದೇ ಪರಿಭಾವಿಸಿದ್ದಾರೆ. ನಾಡಿನ ಬಹುತ್ವದ, ಬಹುರೂಪದ ಅಭಿವ್ಯಕ್ತಿಯಾಗಿ ಸಮ್ಮೇಳನ ನಡೆದಿದೆ. ಈಗಾಗಲೇ ಹಲವಾರು ಮಂದಿ ಘೋಷಿಸಿರುವಂತೆ ಸಮ್ಮೇಳನಾಧ್ಯಕ್ಷೆ ಡಾ| ಘಂಟಿಯವರೂ ತಮ್ಮ ಆಯುಷ್ಯದ ಒಂದು ದಿನವನ್ನು ನನಗೆ ಕೊಡುವುದಾಗಿ ಬಹಿರಂಗವಾಗಿ ಪ್ರಕಟಿಸಿದ್ದಾರಲ್ಲ, ಇದಕ್ಕಿಂತ ಹೆಚ್ಚೇನು ಬೇಕು ನಮಗೆ?
– ಡಾ| ಎಂ. ಮೋಹನ ಆಳ್ವ , ಸ್ವಾಗತ ಸಮಿತಿ ಅಧ್ಯಕ್ಷರು
— ಮನೋಹರ ಪ್ರಸಾದ್