ಮಾಣಿ-ಸಂಪಾಜೆ ರಸ್ತೆ ಕೊನೆಗೂ ರಾ.ಹೆ. 275ಕ್ಕೆ ಸೇರ್ಪಡೆ
Team Udayavani, Nov 19, 2018, 9:37 AM IST
ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸಂಪಾಜೆ-ಮಾಣಿ ತನಕದ ರಸ್ತೆ ಕೊನೆಗೂ ರಾಷ್ಟ್ರೀಯ ಹೆದ್ದಾರಿ-275ಕ್ಕೆ ಸೇರ್ಪಡೆಗೊಂಡಿದೆ.
ಹಲವು ತಿಂಗಳಿನಿಂದ ನನೆಗುದಿಯಲ್ಲಿದ್ದ ಸೇರ್ಪಡೆ ಪ್ರಕ್ರಿಯೆ ದಡ ಸೇರಿದೆ. ಕೆಆರ್‌ಡಿಸಿಎಲ್ ವ್ಯಾಪ್ತಿಯಲ್ಲಿದ್ದ ಈ ರಾಜ್ಯ ಹೆದ್ದಾರಿ ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತದೆ. ರಸ್ತೆ ನಿರ್ವಹಣೆ, ಅಭಿವೃದ್ಧಿ ಈ ಪ್ರಾಧಿಕಾರದ ಜವಾಬ್ದಾರಿ ಆಗಿದೆ.
ಹಸ್ತಾಂತರ ಹೊಯ್ದಾಟ
ಇಲಾಖೆ ಗಡುವಿನ ಪ್ರಕಾರ ಮಾರ್ಚ್ ಮೊದಲ ವಾರದಲ್ಲಿ ಮಾಣಿ-ಸಂಪಾಜೆ ರಾಜ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಗೊಳ್ಳಬೇಕಿತ್ತು. ಆದರೆ ಇದುವರೆಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸುಪರ್ದಿಯಲ್ಲಿದ್ದ ಈ ರಸ್ತೆ, ರಾ.ಹೆ. ಆಗಿ ಹಸ್ತಾಂತರಿಸುವ ಮೊದಲು ಅದರ ನಿರ್ವಹಣೆ ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸಿದ ಬಳಿಕವೇ ರಾ. ಹೆ. ಪ್ರಾಧಿಕಾರ ಇದನ್ನು ಸುಪರ್ದಿಗೆ ತೆಗೆದುಕೊಳ್ಳಬೇಕಿತ್ತು. ರಸ್ತೆ ನಿರ್ವಹಣೆ ಅಂತಿಮ ಹಂತಕ್ಕೆ ಬಂದಿರದ ಕಾರಣ ಹಸ್ತಾಂತರಕ್ಕೆ ತೊಡಕು ಉಂಟಾಗಿತ್ತು. ಈ ಬಗ್ಗೆ ರಾ.ಹೆ. ಪ್ರಾಧಿಕಾರ ಶೀಘ್ರ ದುರಸ್ತಿಗೆ ಕೆಆರ್‌ಡಿಸಿಎಲ್‌ಗೆ ಪತ್ರ ಬರೆದಿತ್ತು.
ಆರಂಭದ ವಿಳಂಬ ಸೂತ್ರ
ಮಾಣಿಯಿಂದ ಮೈಸೂರು ತನಕದ ರಾಜ್ಯ ಹೆದ್ದಾರಿ 88ರ ವಿಸ್ತರಣೆ, ಅಭಿವೃದ್ಧಿ ಕಾಮಗಾರಿಯನ್ನು ಮೂರು ಹಂತದಲ್ಲಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಿ ಅನುಷ್ಠಾನಿಸಲಾಗಿತ್ತು. ಮೈಸೂರು-ಕುಶಾಲನಗರ ನಡುವಿನ ಪ್ರಥಮ ಹಂತದ ಕಾಮಗಾರಿ 2009 ಎ.30 ಕ್ಕೆ ಪೂರ್ಣಗೊಂಡಿತ್ತು. ಎರಡನೇ ಹಂತದ ಕುಶಾಲನಗರ-ಸಂಪಾಜೆ ರಸ್ತೆ 2013 ಮಾ.31ಕ್ಕೆ ಮುಕ್ತಾಯವಾಗಿತ್ತು. ಮೂರನೇ ಹಂತದ ಸಂಪಾಜೆ-ಮಾಣಿ ನಡುವಿನ 71.9 ಕಿ.ಮೀ. ರಸ್ತೆಯಲ್ಲಿ 2009 ಡಿ.27ಕ್ಕೆ ಕಾಮಗಾರಿ ಆರಂಭಗೊಂಡು, 2012 ಜೂ.20ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ 3 ವರ್ಷ ತಡವಾಗಿ 2015ಕ್ಕೆ ಪೂರ್ಣಗೊಂಡಿತ್ತು.
ರಾ.ಹೆ. 275 ಆಗಿ ಮೇಲ್ದರ್ಜೆಗೆ
ರಾ. ಹೆ. 88 ಕೆಆರ್‌ಡಿಸಿಎಲ್ ವ್ಯಾಪ್ತಿಯೊಳಗಿದ್ದ ರಸ್ತೆಯನ್ನು 2013ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಮೈಸೂರು -ಕುಶಾಲನಗರ, ಕುಶಾಲನಗರ- ಸಂಪಾಜೆ ತನಕದ ರಸ್ತೆ ರಾ.ಹೆ. ಪ್ರಾಧಿಕಾರಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿತ್ತು. ಸಂಪಾಜೆ-ಮಾಣಿ ನಡುವಿನ ಕಾಮಗಾರಿ ವಿಳಂಬ ಹಾಗೂ ನಿರ್ವಹಣೆ ಅವಧಿ ಪೂರ್ಣಗೊಳ್ಳದೆ ರಾ.ಹೆ. ಪ್ರಾಧಿಕಾರ ಈ ರಸ್ತೆಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬರೋಬ್ಬರಿ ಮೂರು ವರ್ಷ ವ್ಯಯಿಸಿತ್ತು. ಅಂದರೆ ಕಾಮಗಾರಿ ಮತ್ತು ಹಸ್ತಾಂತರ ವಿಳಂಬ ಸೇರಿ ಒಟ್ಟು 6 ವರ್ಷ ಸಮಯ ತಗಲಿತ್ತು.
ನಿರ್ವಹಣೆಯ ಕೊರತೆ
ರಾಜ್ಯ ಹೆದ್ದಾರಿ ಅಭಿವೃದ್ಧಿಗೊಂಡರೂ ಚರಂಡಿ, ಫುಟ್‌ಪಾತ್, ಬಸ್‌ಬೇ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಡಿ.ಎಂ. ಶಾರಿಕ್ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಅದಾದ ಬಳಿಕ ಮಾಣಿಯಿಂದ ಮೈಸೂರು ತನಕದ ರಸ್ತೆಯಲ್ಲಿ ಸ್ಲಾಬ್ ಸಮರ್ಪಕ ಜೋಡಣೆಗೆ ಗುತ್ತಿಗೆದಾರ ಸಂಸ್ಥೆ ಚಾಲನೆ ನೀಡಿತ್ತು. ಅದು ವ್ಯವಸ್ಥಿತವಾಗಿ ಪೂರ್ಣಗೊಂಡಿಲ್ಲ. ಮುಂದಿನ ದುರಸ್ತಿ ಕ್ರಮ ಕೈಗೊಳ್ಳಲು ರಾ.ಹೆ. ಪ್ರಾಧಿಕಾರ ಸಿದ್ಧತೆ ನಡೆಸಿದೆ.
ಬೈಪಾಸ್, ಚತುಷ್ಪಥ
ರಾಜ್ಯ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಆಗುವ ಪ್ರಕ್ರಿಯೆ ಪೂರ್ಣಗೊಂಡಿರುವ ಕಾರಣ, ಭವಿಷ್ಯದಲ್ಲಿ ಚತುಷ್ಪಥ ರಸ್ತೆಯಾಗಿ ವಿಸ್ತರಣೆಗೊಳ್ಳಲಿದೆ. ರಸ್ತೆ ಸುಳ್ಯ ನಗರದ ಮಧ್ಯಭಾಗದಲ್ಲಿಯೇ ಹಾದು ಹೋಗಿದ್ದು, ಚತುಷ್ಪಥ ಕಾಮಗಾರಿ ಕೈಗೆತ್ತಿಕೊಂಡರೆ ಭೂ ಸ್ವಾಧೀನ ಅನಿವಾರ್ಯ. ಆಗ ಅಂಗಡಿ, ವಾಣಿಜ್ಯ ಮಳಿಗೆಗಳ ಅಸ್ತಿತ್ವಕ್ಕೆ ಸಮಸ್ಯೆ ಉಂಟಾಗಬಹುದು ಎಂಬ ಆತಂಕ ನಗರದಲ್ಲಿದೆ. ಆದರೆ ಬೈಪಾಸ್ ನಿರ್ಮಿಸಿ ನಗರದೊಳಗಿನ ರಸ್ತೆ ವಿಸ್ತರಣೆ ಕೈ ಬಿಡುವ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆಯಲಾದ ವರದಿಯ ಅನ್ವಯ, ಬೈಪಾಸ್ ನಿರ್ಮಿಸುವ ಕುರಿತು ಸಮಾಲೋಚಕರನ್ನು ನೇಮಿಸಿದ್ದು, ಅವರು ನೀಡುವ ವರದಿ ಅನ್ವಯ ಬೈಪಾಸ್‌ನ ಅಗತ್ಯದ ಬಗ್ಗೆ ನಿರ್ಧಾರವಾಗಲಿದೆ.
ಸೇರ್ಪಡೆಗೊಂಡಿದೆ
ಮಾಣಿ-ಮೈಸೂರು ರಾ.ಹೆ.ಯ ಮಾಣಿ-ಸಂಪಾಜೆ ತನಕ ರಸ್ತೆ ರಾ.ಹೆ. ಪ್ರಾಧಿಕಾರಕ್ಕೆ ಕೆಲವು ದಿನಗಳ ಹಿಂದೆ ಸೇರ್ಪಡೆಗೊಂಡಿದೆ. ರಸ್ತೆಗೆ ಸಂಬಂಧಿಸಿ ಮುಂದಿನ ಎಲ್ಲ ಪ್ರಕ್ರಿಯೆಗಳು ರಾ.ಹೆ. ಪ್ರಾಧಿಕಾರದ ಮೂಲಕ ನಡೆಯಲಿವೆ.
ಗಣೇಶ್, ಚೀಫ್ ಎಂಜಿನಿಯರ್
ರಾ.ಹೆ. ಪ್ರಾಧಿಕಾರ, ಬೆಂಗಳೂರು