ಸುರಂಗ ಸುರಕ್ಷತೆಗೆ ಪೊಲೀಸರಿಗೆ ಸಿಗುತ್ತಿಲ್ಲ ಸ್ಥಳೀಯ ಸಂಸ್ಥೆಗಳ ಸಹಕಾರ
Team Udayavani, Nov 19, 2018, 12:46 PM IST
ಬೆಂಗಳೂರು: ನಗರದ ಪಾದಚಾರಿ ಸುರಂಗ ಮಾರ್ಗಗಳು ಸೇರಿ ಇತರೆಡೆ ನಡೆಯುವ ಅನೈತಿಕ ಚಟುವಟಿಕೆಗಳ ತಡೆಗೆ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಂಡಿದೆ. ಆದರೆ, ಇದಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳು ಕೈ ಜೋಡಿಸದಿರುವುದು ಪೊಲೀಸರಲ್ಲಿ ದೊಡ್ಡ ತಲೆನೋವಾಗಿದೆ.
ಈ ನಡುವೆಯೂ ಪೊಲೀಸ್ ಇಲಾಖೆಯಿಂದ ಮೆಜೆಸ್ಟಿಕ್, ಪುರಭವನ, ಕೆ.ಆರ್.ಮಾರುಕಟ್ಟೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ ಸೇರಿದಂತೆ ಕೆಲ ಪ್ರಮುಖ ರಸ್ತೆಗಳಲ್ಲಿರುವ ಪಾದಚಾರಿ ಸುರಂಗ ಮಾರ್ಗ ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಪ್ರಮುಖವಾಗಿ ಮೆಜೆಸ್ಟಿಕ್ ಸುತ್ತ-ಮುತ್ತ ನಡೆಯುವ ಅನೈತಿಕ ಚಟುವಟಿಕೆ, ಮಹಿಳಾ ದೌರ್ಜನ್ಯ, ವೇಶ್ಯಾವಾಟಿಕೆ ದಂಧೆ, ಪೀಕ್ ಪಾಕೇಟ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣದಲ್ಲಿಡಲು ಪ್ರತ್ಯೇಕವಾಗಿ “ಓಬವ್ವ ಪಡೆ’ ರಚಿಸಲಾಗಿದೆ.
ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಸುರಂಗ ಮಾರ್ಗಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆ ತಡೆಯಲು ಸ್ಥಳೀಯ ಆಡಳಿತ ಸಂಸ್ಥೆಗಳು ನಿರ್ಲಕ್ಷ್ಯ ಮಾಡಿವೆ. ನಗರದ ಪಾದಚಾರಿ ಸುರಂಗ ಮಾರ್ಗಗಳಲ್ಲಿ ಸಂಚರಿಸುವ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬಿಬಿಎಂಪಿ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾಲ ಕಾಲಕ್ಕೆ ಸ್ವಚ್ಚಗೊಳಿಸಬೇಕು.
ಹಾಗೆಯೇ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಆದರೆ, ಇಂತಹ ಯಾವುದೇ ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿಲ್ಲ. ಈ ಸಂಬಂಧ ಸಾಕಷ್ಟು ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ, ಸಾರ್ವಜನಿಕರು ಬಳಕೆ ಮಾಡದ ಸುರಂಗ ಮಾರ್ಗಗಳನ್ನು ಪತ್ತೆ ಹಚ್ಚಿ ಮುಚ್ಚಿಸುವಂತೆ ಸೂಚಿಸಲಾಗಿದೆ. ಕೆಲವಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ, ಆರೋಪಿಗಳ ಪತ್ತೆಗೆ ಅನುಕೂಲವಾಗುತ್ತದೆ. ಕಾನೂನು ಸುವ್ಯವಸ್ಥೆಯ ಜತೆಗೆ ಸುರಂಗ ಮಾರ್ಗಗಳಲ್ಲಿಯೂ ಬೀಟ್ ವ್ಯವಸ್ಥೆ ಮಾಡಲಾಗಿದೆ. ಆದರೂ ಕೆಲವೊಮ್ಮೆ ದುರ್ಘಟನೆಗಳು ಸಂಭವಿಸುತ್ತವೆ. ಅಂತಹ ಸಂದರ್ಭದಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಅನುಕೂಲವಾಗುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಹೇಳಿದರು.
ಓಬವ್ವ ಪಡೆ: ಮೆಜೆಸ್ಟಿಕ್ ಸುತ್ತಮುತ್ತ ಮಹಿಳಾ ದೌರ್ಜನ್ಯ, ವೇಶ್ಯಾವಾಟಿಕೆಗೆ ಪ್ರಚೋದನೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಲು ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಓಬವ್ವ ಪಡೆ ರಚಿಸಿದ್ದಾರೆ. ಈ ಪಡೆ ಕಪ್ಪು ಟೀ ಶರ್ಟ್, ಸೇನೆ ಮಾದರಿಯ ಪ್ಯಾಂಟ್, ಟೋಪಿ ಹಾಗೂ ಕೈಯಲ್ಲಿ ಲಾಠಿ ಹಿಡಿದು ಎಲ್ಲೆಡೆ ಸಂಚರಿಸುತ್ತದೆ.
ಒಂದು ವೇಳೆ ವೇಶ್ಯಾವಾಟಿಕೆ, ಲೈಂಗಿಕ ಅಲ್ಪಸಂಖ್ಯಾತರಿಂದ ದೌರ್ಜನ್ಯಗಳು ಹೆಚ್ಚಾದಲ್ಲಿ ಕೂಡಲೇ ಕ್ರಮಕೈಗೊಳ್ಳಲಿದ್ದಾರೆ. ಇತ್ತೀಚೆಗೆ ಈ ಪಡೆ ಲೈಂಗಿಕ ಅಲ್ಪಸಂಖ್ಯಾತರು ಹೆಚ್ಚು ಚಟುವಟಿಕೆಗಳನ್ನು ನಡೆಸುವ ಪಾದಚಾರಿ ಸುರಂಗ ಮಾರ್ಗಗಳಲ್ಲಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಈ ಸ್ಥಳಗಳಲ್ಲೇ ಸಿಬ್ಬಂದಿ ನಿಯೋಜಿಸಲಾಗಿದೆ.
ಕಳೆದ 8 ತಿಂಗಳಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಸುಮಾರು 250ಕ್ಕೂ ಹೆಚ್ಚು ಮಂದಿಯನ್ನು ಓಬವ್ವ ಪಡೆ ಬಂಧಿಸಿದೆ. ಮತ್ತೂಂದೆಡೆ ಡಿಸಿಪಿ ರವಿ ಡಿ. ಚೆನ್ನಣ್ಣನವರ್, ಮೆಜೆಸ್ಟಿಕ್ ಸುತ್ತಲ ಪ್ರದೇಶಗಳಲ್ಲಿ ಭದ್ರತೆ ಕುರಿತು ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸುತ್ತಿದ್ದಾರೆ.
ಬಸ್ ನಿಲ್ದಾಣದಲ್ಲೇ ಪೊಲೀಸ್ ಹೊರ ಠಾಣೆ: ಬಸ್ ನಿಲ್ದಾಣಗಳಿಗೆ ಬರುವ ಲಕ್ಷಾಂತರ ಮಂದಿ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಬಸ್ ನಿಲ್ದಾಣದಲ್ಲೇ ಉಪ್ಪಾರಪೇಟೆ ಪೊಲೀಸ್ ಹೊರ ಠಾಣೆ ತೆರೆಯಲಾಗಿದೆ. ಈ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ, ದರೋಡೆ, ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುವ ಕೆಲ ಕಿಡಿಗೇಡಿಗಳ ವಿರುದ್ಧ ಸ್ಥಳದಲ್ಲೇ ಕ್ರಮಕೈಗೊಳ್ಳಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೇ ಒಂದು ಪೊಲೀಸ್ ಹೊರ ಠಾಣೆ ತೆರೆಯಲಾಗಿದೆ.
ಪ್ರಯಾಣಿಕರು ತಮ್ಮ ಮೇಲೆ ದೌರ್ಜನ್ಯವೆಸಗಿದ ವ್ಯಕ್ತಿಯ ವಿರುದ್ಧ ಇಲ್ಲಿಯೇ ಪ್ರಕರಣ ದಾಖಲಿಸಬಹುದು. ಅಲ್ಲದೆ, ಲೈಂಗಿಕ ಕಾರ್ಯಕರ್ತರನ್ನು ಕರೆದುಕೊಂಡು ಬರುವ ಆಟೋ ಚಾಲಕರು ಹಾಗೂ ಮಧ್ಯವರ್ತಿಗಳ ವಿರುದ್ಧ ವಿಶೇಷ ನಿಗಾ ವಹಿಸಲಾಗಿದೆ. ಇದರೊಂದಿಗೆ ನಕಲಿ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಸಹ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಪ್ರಾತ್ಯಕ್ಷಿಕೆ ದೂರು ದಾಖಲಿಸಲು ಬರುವ ಸಾರ್ವಜನಿಕರಿಗೆ ಬಸ್ ನಿಲ್ದಾಣದಲ್ಲಿರುವ ಪೊಲೀಸ್ ಹೊರ ಠಾಣೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಈ ಭಾಗದ ಆರೋಪಿಗಳ ಭಾವಚಿತ್ರವನ್ನು ತೋರಿಸಿ ಪತ್ತೆ ಹಚ್ಚಲಾಗುತ್ತದೆ. ಜತೆಗೆ ಕಿರುಹೊತ್ತಿಗೆಯೊಂದು ಬಿಡುಗಡೆ ಮಾಡಿದ್ದು, ಬಸ್ ನಿಲ್ದಾಣಗಳಲ್ಲಿ ಇಡಲಾಗಿದೆ.
ಇದರಲ್ಲಿ ಪೊಲೀಸ್ ಸಹಾಯವಾಣಿ ನಮ್ಮ-100, ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 1091 ಹಾಗೂ ಸ್ಥಳೀಯ ಠಾಣೆಗಳ ನಂಬರ್‌ಗಳನ್ನು ಮುದ್ರಿಸಲಾಗಿದೆ. ಈ ಪ್ರಯೋಗವನ್ನು ನಗರದ ಇತರೆ ಭಾಗಗಳಲ್ಲಿಯೂ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು.
ಹೊಯ್ಸಳ ಗಸ್ತು ನಗರದಲ್ಲಿ ಗಸ್ತು ತಿರುಗುವ ಹೊಯ್ಸಳ ಹಾಗೂ ಪಿಂಕ್ ಹೊಯ್ಸಳ ಸಿಬ್ಬಂದಿಗೇ ಪ್ರತಿನಿತ್ಯ ಪಾದಚಾರಿ ಸುರಂಗ ಮಾರ್ಗಗಳಲ್ಲಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಪ್ರಮುಖವಾಗಿ ರಾತ್ರಿ 10 ಗಂಟೆ ನಂತರ 3-4 ಬಾರಿ ಪರಿಶೀಲಿಸಬೇಕು. ಒಂದು ವೇಳೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದರೆ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪೊಲೀಸರಿಗೆ ಹೇಳಿದರೂ ಪ್ರಯೋಜನವಿಲ್ಲ: ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಸುರಂಗ ಮಾರ್ಗಗಳಲ್ಲಿ ಓಬವ್ವ ಪಡೆ ಕಾರ್ಯಾಚರಣೆ ನಡೆಸುತ್ತದೆ. ಆದರೆ, 10 ಗಂಟೆ ನಂತರ ಯಾವುದೇ ಪೊಲೀಸ್ ಸಿಬ್ಬಂದಿ ಸುರಂಗ ಮಾರ್ಗದಲ್ಲಿ ಸಂಚಾರ ಮಾಡುವುದಿಲ್ಲ. ಈ ವೇಳೆ ಲೈಂಗಿಕ ಅಲ್ಪಸಂಖ್ಯಾತರಿಂದ ಅನೈತಿಕ ಚಟುವಟಿಕೆಗಳ ನಡೆಯುತ್ತವೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಟೋ ಚಾಲಕ ಯೋಗೇಶ್ ಹೇಳಿದರು.
ಮೆಜೆಸ್ಟಿಕ್ ಹಾಗೂ ಸುತ್ತ-ಮುತ್ತಲ ಸುರಂಗ ಮಾರ್ಗ ಹಾಗೂ ಇತರೆಡೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಓಬವ್ವ ಪಡೆ ರಚಿಸಲಾಗಿದೆ. ಇದರೊಂದಿಗೆ ಹೊಯ್ಸಳ ಮತ್ತು ಪಿಂಕ್ ಹೊಯ್ಸಳ ಸಿಬ್ಬಂದಿ ಎಲ್ಲೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
-ಚೇತನ್ ಸಿಂಗ್ ರಾಥೋಡ್, ಉತ್ತರ ವಲಯ ಡಿಸಿಪಿ
ಸಾರ್ವಜನಿಕರು ಬಳಸುತ್ತಿಲ್ಲ ಎಂಬ ಕಾರಣದಿಂದ ಸುರಂಗ ಮಾರ್ಗಗಳ ಬದಲು ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಕೆಲವು ಸುರಂಗ ಮಾರ್ಗ ಮುಚ್ಚಲಾಗಿದೆ. ಪ್ರಸ್ತುತ ಸಾರ್ವಜನಿಕರು ಬಳಸುತ್ತಿರುವ ಸುರಂಗ ಮಾರ್ಗಗಳ ಸ್ಥಿತಿಗತಿಯನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ ಅಥವಾ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವುದು.
-ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.