ಪರಿಶ್ರಮದಿಂದ ಯಶಸ್ಸು
Team Udayavani, Nov 19, 2018, 12:54 PM IST
ಇರುವ ಸಂಪತ್ತು, ಬುದ್ಧಿವಂತಿಕೆ, ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಕೌಶಲವನ್ನು ರೂಢಿಸಿಕೊಳ್ಳಬೇಕು. ನಮ್ಮ ಯಶಸ್ಸಿನ ಗುಟ್ಟು ಪರಿಶ್ರಮದಲ್ಲಿ ಅಡಗಿದೆ. ನಮ್ಮ ಬದುಕಿನ ಶಿಲ್ಪಿ ನಾವೇ ಆಗಬೇಕು. ಆ ಮೂಲಕ ಸುಂದರವಾಗಿ ಬದುಕನ್ನು ವಿನ್ಯಾಸಗೊಳಿಸಿ ಸ್ವಾವಲಂಬಿಗಳಾಗಬಹುದು.
ಯಾರನ್ನೋ ಅನುಕರಿಸಿ ಜೀವನದಲ್ಲಿ ನಾವೇನೋ ಆಗಲು ಸಾಧ್ಯವಿಲ್ಲ. ನಮ್ಮ ಜೀವನದ ಯಶಸ್ಸಿಗೆ ನಾವೇ ಏನಾದರೂ ಮಾಡಬೇಕಿರುವುದು ಅನಿವಾರ್ಯ. ಗುರಿ ಸಾಧನೆಗೆ ನಮ್ಮದೇ ದಾರಿ ಕಂಡುಕೊಳ್ಳಬೇಕು. ಆದರೂ ಸಾಧಕರ ಯಶೋಗಾಥೆಗಳಿಂದ ಪ್ರೇರಣೆ ದೊರಕುತ್ತದೆ, ಮನೋಬಲ ಹೆಚ್ಚುತ್ತದೆ. ಸಮಸ್ಯೆ, ಸಂಕಷ್ಟಗಳನ್ನು ಎದುರಿಸಿದ ಬಗೆ, ಪ್ರವಾಹದ ವಿರುದ್ಧ ಈಜುವ ಛಾತಿ, ಆತ್ಮಸ್ಥೈರ್ಯದ ಕಥೆಗಳು ನಮಗೆ ಜೀವ ತುಂಬಿ ಜೀವನದ ಯಶಸ್ಸಿಗೆ ಸ್ಫೂರ್ತಿಯಾಗುತ್ತವೆ.
ಪಲಾಯನ ಮಾಡದಿರಿ
ಕೆಲವೊಮ್ಮೆ ಸದಾ ವೈಫಲ್ಯಗಳೇ ಎದುರಾಗಬಹುದು. ಅದರರ್ಥ ನೀವು ಯಶಸ್ಸು ಪಡೆಯುವುದಿಲ್ಲವೆಂದಲ್ಲ. ಬಹುತೇಕ ಜನರು ಯಶಸ್ಸಿನ ಬಾಗಿಲಿನವರೆಗೆ ಬಂದು ತಮ್ಮ ಪ್ರಯತ್ನ ಬಿಡುತ್ತಾರೆ. ಯಶಸ್ಸಿಗೆ ಕೊಂಚ ದೂರದಲ್ಲಿರುವಾಗ ವೈಫಲ್ಯಕ್ಕೆ ಹೆದರಿ ಪಲಾಯನ ಮಾಡಬೇಡಿ. ಯಶಸ್ಸಿಗೆ ಸೋಲಿನ ಕಥೆಯೂ ಮುನ್ನುಡಿಯಾಗಿರಬಹುದು. ಆದ್ದರಿಂದ ಸೋಲಿನ ಪ್ರಮಾಣವನ್ನು ದ್ವಿಗುಣಗೊಳಿಸಿದಷ್ಟು ಯಶಸ್ಸಿಗೆ ಹತ್ತಿರವಾಗುತ್ತೇವೆ. ಹಾಗಂತ ಪ್ರಯತ್ನ ಪಡದೆ ಸೋಲಿನತ್ತ ಸಾಗಬೇಡಿ. ಅವಿರತ ಪ್ರಯತ್ನ ನಿಮ್ಮಲ್ಲಿರಲಿ.
ಕನಸು ಯೋಚನೆಗಳನ್ನು ಯೋಜನೆಗಳಾಗುವತ್ತ ದಾರಿ ತೋರುತ್ತದೆ. ಕನಸೆನ್ನುವುದು ನಿದ್ರಿಸಿದಾಗ ಕಾಣುವುದಲ್ಲ, ಬದಲಾಗಿ ನಿದ್ರಿಸದಿರುವಾಗ ಕಾಣುವುದು ಎಂದು ಹೇಳಿದ ಕಲಾಂ ಅವರ ಮಾತು ಸದಾ ನಮ್ಮ ಪಾಲಿಗೆ ಪ್ರೇರಣಾ ಶಕ್ತಿ ಇದ್ದಂತೆ.
ನಯ, ವಿನಯ ಇರಲಿ
ವಹಿಸಿರುವ ಕಾರ್ಯವನ್ನು ನಿಷ್ಠೆಯಿಂದಗೈದು, ಇತರರು ನೀವು ಕೈಗೊಳ್ಳುವ ಕೆಲಸಗಳಿಂದ ಉತ್ತೇಜಿತರಾಗುವಂತೆ ಮಾಡಬೇಕು. ಮಾತುಗಳು ಇತರರಿಗೆ ನೋವುಂಟು ಮಾಡದಿರಲು ನಯ, ವಿನಯ ಗುಣ ಅಳವಡಿಸಿಕೊಳ್ಳಬೇಕು.
ಸರಳತೆ ಇರಲಿ
ಪ್ರೀತಿಯಿಂದ ಇತರರ ಮನಸ್ಸನ್ನು ಗೆಲ್ಲಿ. ಬೇರೆಯವರ ಭಾವನೆಯೊಂದಿಗೆ ಚೆಲ್ಲಾಟ ಆಡದಿರಿ. ಯಾಂತ್ರಿಕತೆ, ಆಡಂಬರ ದೂರವಿರಲಿ. ಸಹಜತೆ, ಸರಳತೆಗೆ ಆದ್ಯತೆ ನೀಡಿ. ಹೊಸ- ಹೊಸ ಪ್ರಯೋಗಗಳಿಗೆ ತಮ್ಮನ್ನು ಅರ್ಪಿಸಿಕೊಂಡು ಯಶಸ್ಸು ಗಳಿಸಲು ಪ್ರಯತ್ನಿಸಿ. ಎಷ್ಟು ಲವಲವಿಕೆಯಿಂದಿರುತ್ತೇವೆಯೋ, ಅಷ್ಟು ಸಾಧನೆಗೈಯಬಹುದು.
ಹರಿಯುವ ನೀರಿನಂತಾಗಿ
ನೀರು ಹರಿಯುವಾಗ ಎಲ್ಲಿಯೂ ಅಂಟಿಕೊಳ್ಳದೆ ಗುರಿಯತ್ತ ಸಾಗುತ್ತದೆ. ಹಾಗೆಯೇ ಜೀವನದಲ್ಲಿ ಬದಲಾವಣೆಯನ್ನು ಒಪ್ಪಿಕೊಂಡು ಮುಂದುವರಿಯಬೇಕು. ಹರಿಯುವ ನೀರು ನಿಂತ ನೀರಿಗಿಂತ ಶುದ್ಧ. ಹಾಗೆ ನಾವು ಸತತ ಚಟುವಟಿಕೆಯಿಂದ ಕೂಡಿದ್ದು, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಶುದ್ಧ ಹಾಗೂ ಚುರುಕಾದ ಮನಸ್ಸು ಖುಷಿ ನೀಡುತ್ತದೆ.
ಗಣೇಶ ಕುಳಮರ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.