ಪುರ್ ಸೋತ್ ರಾಮ ಬಿಝಿಯಾಗ್ಬಿಟ್ಟ
Team Udayavani, Nov 23, 2018, 6:00 AM IST
ಕೆಲಸ ಕಾರ್ಯಗಳಿಲ್ಲದೆ ಕೂತು ಕಾಲಕಳೆಯುವ ಅಸಾಮಿಗಳನ್ನು “ಪುರ್‌ಸೊತ್ ರಾಮ’ ಎಂದು ಅಣಿಕಿಸುವುದನ್ನು ನೀವು ಕೇಳಿರುತ್ತೀರಿ. ಈಗ ಇದೇ “ಪುರ್ ಸೊತ್ ರಾಮ’ ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಹೆಸರೇ ಹೇಳುವಂತೆ ಇದೊಂದು ಕೆಲಸ-ಕಾರ್ಯಗಳಿಲ್ಲದೆ, ಕಾಲಕಳೆಯುವ ಮೂವರ ಕಥೆ. ರವಿಶಂಕರ್ ಗೌಡ, ಶಿವರಾಜ್ ಕೆ.ಆರ್ ಪೇಟೆ ಮತ್ತು ನವನಟ ಹೃತಿಕ್ ಈ ಚಿತ್ರದ ಮೂರು “ಪುರ್ ಸೊತ್’ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಅಂದಹಾಗೆ, “ಪುರ್ ಸೊತ್ ರಾಮ’ ಸಂಪೂರ್ಣ ಹಾಸ್ಯಭರಿತ ಚಿತ್ರವಾದರೂ, ಇದರರಲ್ಲಿ ಒಂದು ಗಂಭೀರ ಸಂದೇಶ ಕೂಡ ಇರಲಿದೆಯಂತೆ. ಕಳೆದ ಒಂದೂವರೆ ವರ್ಷಗಳಿಂದ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಇದೀಗ ತನ್ನೆಲ್ಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಚಿತ್ರೀಕರಣಕ್ಕೆ ಅಣಿಯಾಗಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭವನ್ನು ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ ಒಂದರಲ್ಲಿ ಅದ್ದೂರಿಯಾಗಿ ನೆರವೇರಿಸಿದ ಚಿತ್ರತಂಡ, ಚಿತ್ರೀಕರಣಕ್ಕೆ ಚಾಲನೆ ನೀಡಿತು.
ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ ಸಾಂಗ್ಲಿಯಾನ, ನಿರ್ದೇಶಕ ದಿನಕರ್ ತೂಗುದೀಪ್ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿ “ಪುರ್‌ಸೊತ್ ರಾಮ’ ಚಿತ್ರತಂಡಕ್ಕೆ ಶುಭಕೋರಿದರು. ದಿನಕರ್ ತೂಗುದೀಪ್, ಸುರೇಶ್ ರಾಜ್ ಮೊದಲಾದ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅನುಭವವಿರುವ ಪ್ರಸನ್ನ ಮೊದಲ ಬಾರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಪ್ರಸನ್ನ, “ಒಂದು ಏರಿಯಾದಲ್ಲಿ ಪುರ್ ಸೊತ್ತಾಗಿರುವ ಮೂವರು ಸ್ನೇಹಿತರ ಕಥೆಯನ್ನು ಹಾಸ್ಯದ ಮೂಲಕ ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಮನರಂಜನೆಯ ಜೊತೆಗೆ ಒಳ್ಳೆ ಮೆಸೇಜ್ ಚಿತ್ರದಲ್ಲಿದೆ. ಬೆಂಗಳೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರದ ಮಾತಿನ ಭಾಗದ ದೃಶ್ಯಗಳನ್ನು, ಮತ್ತು ಬೆಂಗಳೂರಿನಿಂದ ಹೊರಗಿನ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗುವುದು. ಮುಂದಿನ ವರ್ಷದ ಏಪ್ರಿಲ್ ವೇಳೆಗೆ “ಪುರ್ ಸೊತ್ ರಾಮ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಇದೆ ಎಂದರು. ಇನ್ನು “ಪುರ್ ಸೊತ್ ರಾಮ’ ಚಿತ್ರದಲ್ಲಿ ರವಿಶಂಕರ್ ಗೌಡ, ಶಿವರಾಜ್ ಕೆ.ಆರ್ ಪೇಟೆ, ಹೃತಿಕ್ ಅವರಿಗೆ ನಾಯಕಿಯರಾಗಿ ರಕ್ಷಾ, ಅನೂಷಾ, ಮಾನಸ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಕುರಿ ಪ್ರತಾಪ್, ಸಾಧುಕೋಕಿಲ ಮತ್ತಿತರರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುಧ್ದೋ ರಾಯ್ ಸಂಗೀತ ಸಂಯೋಜಿಸುತ್ತಿದ್ದಾರೆ. ಕಿರಣ್ ಕುಮಾರ್.ಎಂ ಛಾಯಾಗ್ರಹಣ, ಚಂದನ್ ಸಂಕಲನ ಕಾರ್ಯ ಚಿತ್ರದಲ್ಲಿದೆ. “ಮಾನಸ ದೇವಿ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಶ್ರೀಮತಿ ಮಾನಸ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ “ಪುರ್ ಸೊತ್ ರಾಮ’ ಹೇಗಿರಬಹುದು ಎಂಬ ಪ್ರಶ್ನೆಗಳಿಗೆ ಮುಂದಿನ ಬೇಸಿಗೆ ವೇಳೆಗೆ ಉತ್ತರ ಸಿಗಬಹುದು.
ಜಿ. ಎಸ್. ಕಾರ್ತಿಕ್ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.