15 ದಿನದಲ್ಲಿ ಸಿಹಿ? ಅಧಿವೇಶನಕ್ಕೆ ಮುನ್ನ ಬಾಕಿ ಪಾವತಿಗೆ ಸಿಎಂ ಸೂಚನೆ
Team Udayavani, Nov 23, 2018, 6:00 AM IST
ಬೆಂಗಳೂರು: ರೈತರಿಗೆ ಕಳೆದ ವರ್ಷದ ಕಬ್ಬಿನ ಬಾಕಿ ನೀಡಬೇಕಾದ ವಿಚಾರದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರೊಂದಿಗೆ ಮಾಡಿಕೊಂಡ ಮೌಖೀಕ ಒಪ್ಪಂದದಂತೆ ಮುಂದಿನ ಹದಿನೈದು ದಿನಗಳೊಳಗೆ ಬಾಕಿ ಹಣ ಕೊಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಅವರು, ಬೆಳಗಾವಿ ಅಧಿವೇಶನ ಆರಂಭಕ್ಕೂ ಮುನ್ನವೇ ಎಲ್ಲ ಬಾಕಿ ಹಣ ಪಾವತಿಗೆ ಗಡುವು ನೀಡಿದರು. ಈ ಸೂಚನೆಗೆ ಬೆಳಗಾವಿ ಜಿಲ್ಲೆಯ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಕಾರ್ಖಾನೆ ಮಾಲೀಕರು ಸಂಪೂರ್ಣ ಸಹಮತ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.
ಸಭೆಗೆ ರಾಜಕಾರಣಿಗಳೂ ಆಗಿರುವ ಸಕ್ಕರೆ ಕಾರ್ಖಾನೆ ಮಾಲೀಕರಾದ ಉಮೇಶ್ ಕತ್ತಿ, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಮುರುಗೇಶ್ ನಿರಾಣಿ, ಎಸ್.ಆರ್. ಪಾಟೀಲ್, ಆನಂದ ನ್ಯಾಮಗೌಡ ಸೇರಿದಂತೆ 31 ಖಾಸಗಿ ಹಾಗೂ ಸಹಕಾರಿ ವಲಯದಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆ ಮಾಲೀಕರ ಒಕ್ಕೂಟದ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖವಾಗಿ 2017-18 ನೇ ಸಾಲಿನ ಕಬ್ಬು ಹಂಗಾಮಿನಲ್ಲಿ ಕಾರ್ಖಾನೆ ಮಾಲೀಕರು ಎಫ್ಆರ್‌ಪಿ (ನ್ಯಾಯ ಮತ್ತು ಗೌರವಯುತ ದರ) ಗಿಂತ ಕಡಿಮೆ ದರ ನೀಡಿದವರು ಒಂದು ವಾರದಲ್ಲಿ ಬಾಕಿ ಹಣ ನೀಡಬೇಕು. ರೈತರೊಂದಿಗೆ ಎಫ್ಆರ್‌ಪಿಗಿಂತ ಹೆಚ್ಚಿನ ಬೆಲೆ ನೀಡುವ ಒಪ್ಪಂದ ಮಾಡಿಕೊಂಡು ರೈತರಿಗೆ ನೀಡದೇ ಇರುವ ಬಾಕಿ ಹಣವನ್ನು ಹದಿನೈದು ದಿನದಲ್ಲಿ ರೈತರಿಗೆ ನೀಡಬೇಕು.
ಕಾರ್ಖಾನೆ ಮಾಲೀಕರಿಗೆ ವ್ಯವಹಾರದಲ್ಲಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಆದರೆ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದಿದ್ದರೆ, ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ರೈತರ ಹಿತ ರಕ್ಷಣೆ ಸರ್ಕಾರದ ಕರ್ತವ್ಯವಾಗಿರುವುದರಿಂದ ರೈತರೊಂದಿಗೆ ಆಗಿರುವ ಮಾತುಕತೆಯಂತೆ ಹಣ ಪಾವತಿಸಿ ಎಂದು ಸೂಚನೆ ನೀಡಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಎಲ್ಲ ಕಾರ್ಖಾನೆಗಳು ಒಂದೇ ರೀತಿಯ ದರ ನೀಡಲು ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಪ್ರತಿ ಟನ್‌ಗೆ 2,900 ರೂಪಾಯಿ ಕೊಡಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಸಕ್ಕರೆ ಬೆಲೆ ಕಡಿಮೆಯಾಗಿರುವುದರಿಂದ ಸಾರಿಗೆ ಮತ್ತು ಕಟಾವು ವೆಚ್ಚ ಕಡಿತಗೊಳಿಸಿ 2,250 ರೂಪಾಯಿ ನೀಡುವುದಾಗಿ ಒಪ್ಪಿಕೊಂಡಿದ್ದು, ಸಕ್ಕರೆ ದರ ಕಡಿಮೆಯಾಗಿರುವುದರಿಂದ ತಕ್ಷಣಕ್ಕೆ ಬಾಕಿ ಹಣ ನೀಡಲು ಕಷ್ಟವಾಗುತ್ತದೆ ಎಂದು ಬಾಗಲಕೋಟೆ ಜಿಲ್ಲೆ ಸಕ್ಕರೆ ಕಾರ್ಖಾನೆ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಬೆಳಗಾವಿ ಜಿಲ್ಲೆಯ ಕಾರ್ಖಾನೆ ಮಾಲೀಕರು ಒಂದೊಂದು ಕಾರ್ಖಾನೆಗೂ ಒಂದೊಂದು ರೀತಿಯ ಒಪ್ಪಂದ ಮಾಡಿಕೊಂಡಿದ್ದು, ಎಫ್ಆರ್‌ಪಿಗಿಂತ ಹೆಚ್ಚಿನ ದರ ನೀಡಿದ್ದು, ರೈತರಿಗೆ ಭರವಸೆ ನೀಡಿದಷ್ಟು ಹಣ ನೀಡದಿರುವುದರಿಂದ ಉಳಿದ ಬಾಕಿ ಹಣವನ್ನು ರೈತರೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಬಾಗಲಕೋಟೆಯದ್ದೇ ಸಮಸ್ಯೆ
ಮೂಲಗಳ ಪ್ರಕಾರ ಬೆಳಗಾವಿ ಜಿಲ್ಲೆಗಿಂತ ಬಾಗಲಕೋಟೆ ಸಕ್ಕರೆ ಕಾರ್ಖಾನೆ ಮಾಲೀಕರದ್ದೆ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ಕಾರ್ಖಾನೆ ಮಾಲೀಕರು ಎಫ್ಆರ್‌ಪಿಗಿಂತ ಹೆಚ್ಚಿನ ಹಣ ನೀಡಿದ್ದು, ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಗಳು ಎಫ್ಆರ್‌ಪಿಗಿಂತಲೂ 250 ಕಡಿಮೆ ಹಣ ನೀಡಿವೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರು ಮೊದಲು ಎಫ್ಆರ್‌ಪಿ ಹಣವನ್ನಾದರೂ ಒಂದು ವಾರದಲ್ಲಿ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ . ಆದರೆ, ಇದಕ್ಕೆ ಬಾಗಲಕೋಟೆ ಜಿಲ್ಲೆಯ ಕಾರ್ಖಾನೆ ಮಾಲೀಕರು ಸಂಪೂರ್ಣ ಸಹಮತ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.
ಲಿಖೀತ ಒಪ್ಪಂದಕ್ಕೆ ಸೂಚನೆ
ಪ್ರತಿ ವರ್ಷ ಕಬ್ಬಿನ ಹಂಗಾಮಿನಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವಿನ ಗೊಂದಲದಿಂದ ಸರ್ಕಾರ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಕಾರ್ಖಾನೆ ಮಾಲೀಕರು ಇನ್ನು ಮುಂದೆ ಎಫ್ಆರ್‌ಪಿ ಪ್ರಕಾರ ಕಡ್ಡಾಯವಾಗಿ ದರ ನೀಡಬೇಕು. ಅಲ್ಲದೇ ಎಫ್ಆರ್‌ಪಿಗಿಂತ ಹೆಚ್ಚಿನ ಹಣ ನೀಡುವ ಭರವಸೆ ನೀಡಿದರೆ ರೈತರೊಂದಿಗೆ ಕಡ್ಡಾಯವಾಗಿ ಲಿಖೀತ ಒಪ್ಪಂದ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದರು.
ಒಂದು ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು ಎಫ್ಆರ್‌ಪಿ ದರ ಮಾತ್ರ ನೀಡಿದರೆ, ಕಬ್ಬಿನ ಹಂಗಾಮು ಮುಗಿದ ಮೇಲೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸರ್ಕಾರ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನಿಂದ ಉತ್ಪತ್ತಿಯಾಗುವ ಸಕ್ಕರೆ ಮತ್ತು ಉಪ ಉತ್ಪನ್ನಗಳಿಂದ ಬರುವ ಆದಾಯದ ಲೆಕ್ಕವನ್ನು ಪಡೆದು ರೈತರು ಮತ್ತು ಕಾರ್ಖಾನೆ ಮಾಲೀಕರಿಗೆ ಆದಾಯ ಹಂಚಿಕೆ ಮಾಡಿಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಸರ್ಕಾರದ ಸೂಚನೆಗೆ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಕಿ ಹಣ ಉಳಿಸಿಕೊಂಡಿರುವವರು ಹದಿನೈದು ದಿನದಲ್ಲಿ ಪಾವತಿ ಮಾಡಿ, ಸಮಸ್ಯೆ ನಿಮ್ಮಿಂದ ಸೃಷ್ಠಿ ಆಗಿದೆ. ನೀವೇ ಬಗೆ ಹರಿಸಿ, ಸರ್ಕಾರ ಮಧ್ಯ ಪ್ರವೇಶಿಸಿದರೆ, ಕಾನೂನಾತ್ಮಕ ವಿಚಾರ ಬರುತ್ತದೆ. ರೈತರು ನಿಮ್ಮ ನಡುವೆ ಆಗಿರುವ ಒಪ್ಪಂದದಂತೆ ನಡೆದುಕೊಳ್ಳಿ, ಸರ್ಕಾರ ಮಧ್ಯಪ್ರವೇಶಕ್ಕೆ ಅವಕಾಶ ಕೊಡಬೇಡಿ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ನಾವು ನಮ್ಮ ಕಾರ್ಖಾನೆಗಳ ಬಾಕಿಯನ್ನು ಒಂದು ವಾರದಲ್ಲಿ ತೀರಿಸುತ್ತೇವೆ. ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳು ಹೆಚ್ಚಿನ ದರ ನೀಡಿವೆ. ಬಾಗಲಕೋಟೆ ಜಿಲ್ಲೆಯದ್ದು ಹೆಚ್ಚಿನ ಸಮಸ್ಯೆ ಇದೆ. ಅದನ್ನು ಮುಖ್ಯಮಂತ್ರಿ ಬೆಳಗಾವಿ ಅಧಿವೇಶನದೊಳಗೆ ಬಗೆಹರಿಸಿದರೆ, ಅಧಿವೇಶನ ಸುಗಮವಾಗಿ ನಡೆಯಲಿದೆ. ವಿಳಂಬವಾದರೆ, ಕಬ್ಬಿನ ಕಟಾವಿಗೂ ಸಮಸ್ಯೆಯಾಗಲಿದ್ದು, ರೈತರಿಗೂ ನಷ್ಟವಾಗುತ್ತದೆ.
– ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.