ಇಬ್ಬರು ರೌಡಿಗಳ ಮರ್ಡರ್: ಬಿಟಿಎಸ್ ಮಂಜ ಅಂದರ್
Team Udayavani, Nov 23, 2018, 11:30 AM IST
ಬೆಂಗಳೂರು: ಹಳೆ ವೈಷಮ್ಯಕ್ಕೆ ಇಬ್ಬರು ರೌಡಿಗಳನ್ನು ಬುಧವಾರ ರಾತ್ರಿ ಕೊಲೆಗೈದಿದ್ದ ರೌಡಿಶೀಟರ್ ಬಿಟಿಎಸ್ ಮಂಜನಿಗೆ ಗುಂಡೇಟಿನ ಮೂಲಕ ಉತ್ತರ ನೀಡಿರುವ ದಕ್ಷಿಣ ವಿಭಾಗದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬುಧವಾರ ರಾತ್ರಿ 10.30ರ ಸುಮಾರಿಗೆ ಹಳೆಯ ರೌಡಿಗಳಾದ ಮುರುಗನ್ ಹಾಗೂ ಪಳನಿಯನ್ನು ವೀವರ್ ಕಾಲೋನಿಯ ಮುಖ್ಯರಸ್ತೆಯಲ್ಲಿ ಅಡ್ಡಗಟ್ಟಿದ್ದ ಮಂಜ ಹಾಗೂ ಆತನ ಸಹಚರರು, ಮನಸೋಯಿಚ್ಛೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಇಬ್ಬರ ಕೊಲೆಯಲ್ಲೂ ಮಂಜ ಹಾಗೂ ಆತನ ಸಹಚರರ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಟಿ.ಮಹದೇವ್ ನೇತೃತ್ವದ ತಂಡ, ಗುರುವಾರ ಸಂಜೆ 5.20ರ ವೇಳೆಗೆ ತಲಘಟ್ಟಪುರ ಸಮೀಪದ ನೈಸ್ ರಸ್ತೆ ಬಳಿ ಮಂಜ ಹಾಗೂ ಆತನ ಸಹಚರರು ಇರುವ ಬಗ್ಗೆ ಮಾಹಿತಿ ಪಡೆದು, ಸ್ಥಳಕ್ಕೆ ತೆರಳಿತ್ತು.
ಪೊಲೀಸರನ್ನು ಕಂಡ ಕೂಡಲೇ ಮಂಜ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಜತೆಗೆ ಖಾರದ ಪುಡಿ ಎರಚಿ ಕುಮಾರಸ್ವಾಮಿ ಲೇಔಟ್ ಪಿಎಸ್‌ಐ ಸುಬ್ರಹ್ಮಣಿ ಅವರ ಕೈಗೆ ಚಾಕುವಿನಿಂದ ಇರಿದು, ಹೊಟ್ಟೆಗೂ ಇರಿಯಲು ಮುಂದಾಗಿದ್ದಾನೆ. ಈ ವೇಳೆ ಎಸಿಪಿ ಮಹದೇವ್, ಪ್ರಾಣರಕ್ಷಣೆ ಉದ್ದೇಶದಿಂದ ತಮ್ಮ ಸರ್ವೀಸ್ ರಿವಾಲ್ವರ್‌ನಿಂದ ಮಂಜನ ಎರಡೂ ಕಾಲುಗಳಿಗೆ ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಕೆಳಗೆ ಕುಸಿದು ಬಿದ್ದ ಮಂಜನನ್ನು ಸಿಬ್ಬಂದಿ ಬಂಧಿಸಿದ್ದಾರೆ.
ಮತ್ತೂಂದು ತನಿಖಾ ತಂಡ ಮಂಜನ ಸಹಚರರರಾದ ಅಭಿಷೇಕ್, ಕಾರ್ತಿಕ್, ರವಿ ಅಲಿಯಾಸ್ ಕರಿಯನನ್ನು ಬಂಧಿಸಿದೆ. ಚಾಕು ಇರಿತಕ್ಕೊಳಗಾದ ಪಿಎಸ್‌ಐ ಸುಬ್ರಹ್ಮಣಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಗುಂಡೇಟು ತಿಂದಿರುವ ಮಂಜನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ತಿಂಗಳ ಹಿಂದೆ ಏರಿಯಾಗೆ ಬಂದ ಮುರುಗನ್ ಕೊಲೆ: ಕೆಲ ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದ ಮುರುಗನ್ ತಮಿಳುನಾಡು ಸೇರಿಕೊಂಡಿದ್ದ. ಒಂದು ತಿಂಗಳ ಹಿಂದಷ್ಟೇ ನಗರಕ್ಕೆ ಹಿಂದಿರುಗಿ ಲವ್ ಬರ್ಡ್ ಮಾರಾಟ ಮಾಡುವ ಅಂಗಡಿ ನಡೆಸಿಕೊಂಡು ವೀವರ್ ಕಾಲೋನಿಯಲ್ಲಿ ನೆಲೆಸಿದ್ದ. ಈ ಮಾಹಿತಿ ಅರಿತಿದ್ದ ಮಂಜ, ಪುನಃ ಏರಿಯಾಗೆ ಬಂದು ತನ್ನ ಚಟುವಟಿಕೆಗಳಿಗೆ ಅಡ್ಡಗಾಲು ಹಾಕುತ್ತಾನೆ ಎಂದು ಕೋಪಗೊಂಡಿದ್ದ.
ಬುಧವಾರ ರಾತ್ರಿ ಮುರುಗನ್ ಹಾಗೂ ಪಳನಿ ಇಬ್ಬರೂ ಸಮೀಪದ ಬಾರ್ ಒಂದಕ್ಕೆ ತೆರಳಿ ಮದ್ಯಪಾನ ಮಾಡಿ ರಾತ್ರಿ 10.30ರ ಸುಮಾರಿಗೆ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅವರನ್ನು ಹಿಂಬಾಲಿಸಿಕೊಂಡು ಆಟೋದಲ್ಲಿ ಬಂದ ಮಂಜ ಹಾಗೂ ಆತನ ಸಹಚರರು, ಇಬ್ಬರ ಮೇಲೂ ಮಾರಾಕಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು.
ಜೈಲಲ್ಲಿ ಇಬ್ಬರ ನಡುವೆ ಫೈಟ್: ಮುರುಗನ್ ಹಾಗೂ ಪಳನಿ ಈ ಹಿಂದೆ ಹುಳಿಮಾವು, ಬನ್ನೇರುಘಟ್ಟ, ಆನೇಕಲ್, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದರು. ಬಿಟಿಎಸ್ ಮಂಜ ಕೂಡ ಇದೇ ತಂಡದಲ್ಲಿದ್ದ. 2013ರಲ್ಲಿ ಇಸ್ಪೀಟ್ ಆಡುವಾಗ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಮುರುಗನ್ ತಂಡ ಹಾಗೂ ಮಂಜನ ನಡುವೆ ಆಟದ ಸಂದರ್ಭದಲ್ಲಿ ಜಗಳವಾಗಿ ಮಂಜನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು.
ಈ ಪ್ರಕರಣದಲ್ಲಿ ಮಂಜ ಜೈಲು ಸೇರಿದ್ದ, ಜಾಮೀನಿನ ಆಧಾರದಲ್ಲಿ ಹೊರಗಡೆ ಬಂದ ಮೇಲೂ ಇಬ್ಬರೂ ಹೊಡೆದಾಡಿಕೊಂಡಿದ್ದರು. 2016ರಲ್ಲಿ ಸೂರ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಮುರುಗನ್ ಹಾಗೂ ಆತನ ಸಹಚರರು ಜೈಲು ಸೇರಿದ್ದರು. ಮತ್ತೂಂದು ಕೇಸ್‌ನಲ್ಲಿ ಮಂಜ ಕೂಡ ಜೈಲಿಗೆ ಹೋಗಿದ್ದ. ಈ ಸಂಧರ್ಭದಲ್ಲಿ ಜೈಲಿನಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿದ್ದರು. ಇದಾದ ಬಳಿಕ ಜಾಮೀನಿನ ಆಧಾರದಲ್ಲಿ ಇಬ್ಬರೂ ಬಿಡುಗಡೆಗೊಂಡಿದ್ದರು. ಮುರುಗನ್ ತಮಿಳುನಾಡು ಸೇರಿಕೊಂಡಿದ್ದ ಎಂದು ಅಧಿಕಾರಿ ಹೇಳಿದರು.
25 ಸಾವಿರ ರೂ. ನಗದು ಬಹುಮಾನ: ರೌಡಿಶೀಟರ್ ಮುರುಗನ್ ಹಾಗೂ ಪಳನಿಯನ್ನು ಕೊಲೆಗೈದ ರೌಡಿಶೀಟರ್ ಮಂಜನ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿದ ಎಸಿಪಿ ಮಹದೇವ್ ಹಾಗೂ ತಂಡಕ್ಕೆ ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ 25 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಮುರುಗನ್ ಹಾಗೂ ಪಳನಿ ಕೊಲೆ ಹಿನ್ನೆಲೆಯಲ್ಲಿ ಬಿಟಿಎಸ್ ಮಂಜನನ್ನು ಬಂಧಿಸಲು ಸಿಬ್ಬಂದಿ ತೆರಳಿದಾಗ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಹೀಗಾಗಿ ಎಸಿಪಿ ಮಹದೇವ, ಮಂಜನ ಎರಡೂ ಕಾಲಿಗೆ ಗುಂಡು ಹೊಡೆದಿದ್ದಾರೆ. ಪ್ರಕರಣ ಸಂಬಂಧ ಮಂಜ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
-ಅಣ್ಣಾಮಲೈ, ದಕ್ಷಿಣ ವಿಭಾಗದ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.