ಕೊಕ್ಲಿಯರ್ ಇಂಪ್ಲಾಂಟ್;ಅದರ ಅಳವಡಿಕೆಯ ಬಳಿಕ ಪುನಶ್ಚೇತನ
Team Udayavani, Nov 25, 2018, 6:00 AM IST
ಪ್ರತೀ ಒಂದು ಸಾವಿರ ಮಕ್ಕಳಲ್ಲಿ ಒಂದರಿಂದ ಇಬ್ಬರು ಮಕ್ಕಳು ಶ್ರವಣದೋಷವುಳ್ಳವರಾಗಿ ಜನಿಸುತ್ತಾರೆ. ಜನ್ಮಜಾತ ಶ್ರವಣ ದೋಷವು ಮಗುವಿನ ಬದುಕಿನ ಮೇಲೆ ಬೀರುವ ಪ್ರಭಾವವು ಹತ್ತು ಹಲವು ಆಯಾಮಗಳದ್ದು. ಮೊತ್ತಮೊದಲನೆಯದಾಗಿ, ಶ್ರವಣದೋಷವು ಮಗುವಿನ ಭಾಷಿಕ ಮತ್ತು ಸಂಭಾಷಣೆಯ ಕೌಶಲಗಳ ಮೇಲೆ ಪ್ರಭಾವ ಬೀರುತ್ತದೆ. ಸಂವಹನದಲ್ಲಿ ತೊಡಕು, ಕಳಪೆ ಸಾಮಾಜಿಕ ಜೀವನ, ಏಕಾಕಿತನ ಮತ್ತು ಕುಗ್ಗಿದ ಆತ್ಮವಿಶ್ವಾಸಕ್ಕೆ ಕಾರಣವಾಗುತ್ತದೆ.
ಎರಡನೆಯದಾಗಿ, ಕಿವುಡುತನದಿಂದ ಮಗುವಿನ ಗ್ರಹಣಾತ್ಮಕ ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಮೂರನೆಯದಾಗಿ, ಶ್ರವಣ ಶಕ್ತಿ ಹೀನತೆಯು ಮಗುವಿನ ಕಲಿಯುವಿಕೆ, ಶೈಕ್ಷಣಿಕ ಸಾಧನೆಗಳಿಗೆ ಅಡ್ಡಿಯಾಗುತ್ತದೆ. ಕೊನೆಯದಾಗಿ, ಅದು ಔದ್ಯೋಗಿಕ ಅವಕಾಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವೆಲ್ಲವೂ ಒಟ್ಟಾಗಿ ಶ್ರವಣ ದೋಷ ಹೊಂದಿರುವ ವ್ಯಕ್ತಿಯು ಕಳಪೆ ಗುಣಮಟ್ಟದ ಜೀವನವನ್ನು ಸಾಗಿಸಬೇಕಾಗುತ್ತದೆ.
ಮಗು ಖಾಯಂ ಶ್ರವಣ ಶಕ್ತಿ ನಷ್ಟ ಹೊಂದಿರುವುದು ಪತ್ತೆಯಾದ ಕೂಡಲೇ ಪುನಶ್ಚೇತನವನ್ನು ಆರಂಭಿಸುವುದು ಬಹಳ ಮುಖ್ಯ. ಇಂತಹ ಮಕ್ಕಳ ಪುನಶ್ಚೇತನದ ಮೊದಲ ಹೆಜ್ಜೆ ಎಂದರೆ ಶ್ರವಣಸಾಧನ ಅಳವಡಿಸುವುದು. ಆದರೆ ಅನೇಕ ಮಕ್ಕಳಲ್ಲಿ ಶ್ರವಣದೋಷ ತೀವ್ರ ತರಹದ್ದಾಗಿದ್ದು, ಶ್ರವಣ ಸಾಧನಗಳಿಂದ ಸೀಮಿತ ಪ್ರಯೋಜನ ಲಭಿಸುತ್ತದೆ. ಇಂತಹ ಮಕ್ಕಳಿಗೆ ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಕೆ ಪ್ರಯೋಜನ ಒದಗಿಸಬಲ್ಲುದು. ಮಗು ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿಕೊಳ್ಳಲು ಅರ್ಹವೇ ಅಲ್ಲವೇ ಎಂಬುದನ್ನು ಶ್ರವಣಶಾಸ್ತ್ರಜ್ಞರು, ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್‌ಗಳು, ರೇಡಿಯೋಲಜಿಸ್ಟ್, ಇಎನ್‌ಟಿ ಶಸ್ತ್ರಚಿಕಿತ್ಸಾ ತಜ್ಞರು, ಮಕ್ಕಳ ವೈದ್ಯರು ಮತ್ತು ಮನಶಾಸ್ತ್ರಜ್ಞರನ್ನು ಒಳಗೊಂಡ ವೃತ್ತಿಪರ ಪರಿಣತರ ತಂಡ ನಿರ್ಧರಿಸುತ್ತದೆ.
ಒಳಗಿವಿಯಲ್ಲಿ ಹಾನಿಗೀಡಾದ ರೋಮಕೋಶಗಳಿಗೆ (ಕೊಕ್ಲಿಯಾ) ಪರ್ಯಾಯವಾಗಿ ನಿಂತು ಮಿದುಳಿಗೆ ಧ್ವನಿ ಸಂದೇಶಗಳನ್ನು ರವಾನಿಸುವ ಕೆಲಸ ಮಾಡುವ ಎಲೆಕ್ಟ್ರಾನಿಕ್ ಉಪಕರಣವೇ ಕೊಕ್ಲಿಯರ್ ಇಂಪ್ಲಾಂಟ್. ಇದರಲ್ಲಿ ಎರಡು ಭಾಗಗಳಿದ್ದು, ಒಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ಕಿವಿಯ ಒಳಭಾಗದಲ್ಲಿ ಅಳವಡಿಸಲಾಗುತ್ತದೆ, ಇನ್ನೊಂದನ್ನು ಕಿವಿಯ ಹೊರಭಾಗದಲ್ಲಿ ಧರಿಸಲಾಗುತ್ತದೆ. ಆಲಿಸುವುದು ಸುಲಭವಾಗುವುದು, ಹೆಚ್ಚು ಚೆನ್ನಾಗಿ ಮಾತನಾಡಲು ಕಲಿಯುವುದು, ಸ್ಪಷ್ಟವಾದ ಮಾತುಕತೆಯ ಸಾಮರ್ಥ್ಯ ಬೆಳೆಸಿಕೊಳ್ಳುವುದು ಹಾಗೂ ಸಾಮಾನ್ಯ ಮಕ್ಕಳಂತೆ ಕೆಲಸ ಕಾರ್ಯಗಳನ್ನು ನಡೆಸಲು ಶಕ್ತವಾಗುವುದರ ಸಹಿತ ಕೊಕ್ಲಿಯರ್ ಇಂಪ್ಲಾಂಟ್‌ನಿಂದ ಹಲವಾರು ಪ್ರಯೋಜನಗಳಿವೆ. ಹೀಗಾಗಿ ಕೊಕ್ಲಿಯರ್ ಇಂಪ್ಲಾಂಟ್ ಒದಗಿಸುವುದರಿಂದ ಮಗು ಚೆನ್ನಾಗಿ ಆಲಿಸಲು ಶಕ್ತವಾಗುತ್ತದೆ.
ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಕೆ ಮತ್ತು ಅದನ್ನು ಅಳವಡಿಸಿದ ಬಳಿಕ ಏನು ಮಾಡಬೇಕು ಎಂಬುದರ ಬಗ್ಗೆ ಹತ್ತು ಹಲವು ಸತ್ಯಾಂಶ ಮತ್ತು ಸುಳ್ಳುಗಳಿವೆ.
1.ಸುಳ್ಳು: ಶ್ರವಣ ಶಕ್ತಿ ನಷ್ಟವಾದರೆ ಕೊಕ್ಲಿಯರ್ ಇಂಪ್ಲಾಂಟ್ ಮಾತ್ರ ಪರ್ಯಾಯ, ಶ್ರವಣ ಸಾಧನಗಳಿಂದ ಉಪಯೋಗವಿಲ್ಲ.
ನಿಜ: ಅನೇಕ ಮಕ್ಕಳು ಶ್ರವಣ ಸಾಧನಗಳಿಂದಲೇ ಚೆನ್ನಾಗಿ ಕೇಳಿಸಿಕೊಳ್ಳಲು ಶಕ್ತರಾಗುತ್ತಾರೆ. ಶ್ರವಣ ಸಾಧನಗಳಿಂದ ಪ್ರಯೋಜನವಾಗುತ್ತದೆ ಎಂದಾದರೆ ಕೊಕ್ಲಿಯರ್ ಇಂಪ್ಲಾಂಟ್‌ಗಳನ್ನು ಶಿಫಾರಸು ಮಾಡುವುದಿಲ್ಲ. ಮಗು ಶ್ರವಣ ಸಾಧನಗಳಿಂದ ಕೇಳಿಸಿಕೊಳ್ಳುತ್ತದೆ ಎಂದಾದರೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ.
2.ಸುಳ್ಳು: ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿದ ಬಳಿಕ ಮಗು ತಾನು ಕೇಳಿಸಿಕೊಂಡ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ.
ನಿಜ: ಆಲಿಸುವುದು ಮತ್ತು ಅರ್ಥ ಮಾಡಿಕೊಳ್ಳುವುದು ಸಂಪೂರ್ಣ ಭಿನ್ನವಾದವು. ಮಗು ಸಂಭಾಷಣೆಯ ಸಹಿತ ಎಲ್ಲವನ್ನೂ ಕೇಳಿಸಿಕೊಳ್ಳುವಂತೆ ಕೊಕ್ಲಿಯರ್ ಇಂಪ್ಲಾಂಟ್ ಸಹಾಯ ಮಾಡುತ್ತದೆ, ಆದರೆ ಮಾತುಕತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆಲಿಸುವುದು ಮಾತ್ರ ಅಲ್ಲ; ಅದಕ್ಕಿಂತ ಹೆಚ್ಚಿನದು ಅಗತ್ಯವಾಗಿದೆ. ಸಾಮಾನ್ಯ ಮಗುವೊಂದು ಜನಿಸಿದ ತತ್‌ಕ್ಷಣದಿಂದಲೇ ಎಲ್ಲವನ್ನೂ ಕೇಳಿಸಿಕೊಳ್ಳಲಾರಂಭಿಸುತ್ತದೆ ಹಾಗೂ ಈ ಆಲಿಸುವಿಕೆಯನ್ನು ಭಾಷೆ ಮತ್ತು ಸಂಭಾಷಣೆಯ ಕೌಶಲವನ್ನು ಬೆಳೆಸಿಕೊಳ್ಳಲು ಉಪಯೋಗಿಸುತ್ತದೆ. ಈಗಷ್ಟೇ ಕೊಕ್ಲಿಯರ್ ಇಂಪ್ಲಾಂಟ್ ಪಡೆದುಕೊಂಡ ಮಗು ಹೊರಜಗತ್ತಿನ ಜತೆಗೆ ಸಂವಹನ ಸಾಧಿಸಲು ಇನ್ನಷ್ಟೇ ಭಾಷೆ ಮತ್ತು ಸಂಭಾಷಣೆಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾ ಗುತ್ತದೆ. ಭಾಷೆ, ಸಂಭಾಷಣೆ ಮತ್ತು ಆಲಿಸುವಿಕೆಯ ಚಿಕಿತ್ಸೆಗಳು ಕೇಳಿಸಿಕೊಂಡ ಶಬ್ದದ ಜತೆಗೆ ಅರ್ಥವನ್ನು ಸ್ಥಾಪಿಸಿಕೊಳ್ಳಲು ಮಗುವಿಗೆ ಸಹಾಯ ಮಾಡುತ್ತವೆ.
3.ಸುಳ್ಳು: ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿದ ಬಳಿಕ ಮಗು ಮಾತನಾಡಲು ಮತ್ತು ಆಲಿಸಲು ಶಕ್ತವಾಗುತ್ತದೆ.
ನಿಜ: ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸುವುದರಿಂದಷ್ಟೇ ಮಗು ಸಹಜ ಮಾತು ಮತ್ತು ಭಾಷಿಕ ಕೌಶಲಗಳನ್ನು ಪಡೆದುಕೊಳ್ಳುವುದು ಅಸಾಧ್ಯ. ಮಗು ಸ್ವಯಂಚಾಲಿತವಾಗಿ ಮಾತನ್ನು ಅರ್ಥ ಮಾಡಿಕೊಳ್ಳದು ಅಥವಾ ಮ್ಯಾಜಿಕ್‌ನಂತೆ ಶೈಕ್ಷಣಿಕ ಸಾಧನೆಗಳನ್ನು ಮಾಡಲಾಗದು. ಆಲಿಸುವುದು ಮತ್ತು ಸಂಭಾಷಣೆ ನಡೆಸಲು ತೀವ್ರವಾದ ವ್ಯಕ್ತಿಗತ ಭಾಷೆ, ಸಂಭಾಷಣೆ, ಶ್ರವಣ ತರಬೇತಿಗಳನ್ನು ಪರಿಣತ ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಬಳಿ ಪಡೆಯುವುದು ಅಗತ್ಯವಾಗಿದೆ.
4.ಸುಳ್ಳು: ಶ್ರವಣ ಸಾಧನಗಳಿಗೆ ಹೋಲಿಸಿದರೆ ಕೊಕ್ಲಿಯರ್ ಇಂಪ್ಲಾಂಟ್ ಮೂಲಕ ಮಗುವಿನ ಮಾತು ಮತ್ತು ಭಾಷಿಕ ಕೌಶಲಗಳು ಉತ್ತಮಗೊಂಡಿರುವುದರಿಂದ ಸಂಭಾಷಣೆ, ಭಾಷೆ ಮತ್ತು ಶ್ರವಣ ಚಿಕಿತ್ಸೆಗಳ ಅಗತ್ಯವಿಲ್ಲ.
ನಿಜ: ಅನೇಕ ಹೆತ್ತವರು ಇಲ್ಲೇ ತಪ್ಪು ಮಾಡುತ್ತಾರೆ. ಮಗು ಶ್ರವಣ ಸಾಧನಕ್ಕಿಂತ ಹೆಚ್ಚು ಚೆನ್ನಾಗಿ ಕೊಕ್ಲಿಯರ್ ಇಂಪ್ಲಾಂಟ್ ಮೂಲಕ ಆಲಿಸುವುದನ್ನು ಗಮನಿಸುತ್ತಾರೆ ಮಾತ್ರವಲ್ಲದೆ, ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿದ್ದರಿಂದ ತತ್‌ಕ್ಷಣಕ್ಕೆ ಮಗುವಿನ ಮಾತುಕತೆ ಮತ್ತು ಭಾಷಿಕ ಸಾಮರ್ಥ್ಯಗಳು ಕೊಂಚ ಉತ್ತಮಗೊಂಡಿರುವುದನ್ನು ಗಮನಿಸುತ್ತಾರೆ. ತಮ್ಮ ಮಗುವಿನ ಸ್ಥಿತಿ ಉತ್ತಮವಾಗಿದೆ ಎಂದು ಭಾವಿಸಿ ನಿಯಮಿತ ಚಿಕಿತ್ಸೆಗೆ ಹಾಜರಾಗುವ ಅಗತ್ಯವಿಲ್ಲ ಎಂದುಕೊಳ್ಳುತ್ತಾರೆ. ನಿಜ ವಿಚಾರವೆಂದರೆ, ಮಗು ಹಿಂದಿಗಿಂತ ಚೆನ್ನಾಗಿದೆ ಎಂದ ಮಾತ್ರಕ್ಕೆ ಮಗು ತನ್ನ ಪರಿಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದರ್ಥವಲ್ಲ. ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಕೆಯ ಸಂಪೂರ್ಣ ಪ್ರಯೋಜನ ಪಡೆಯಬೇಕಾದರೆ ಭಾಷೆ, ಸಂಭಾಷಣೆ ಮತ್ತು ಶ್ರವಣ ತರಬೇತಿಗಳು ಅತ್ಯಗತ್ಯವಾಗಿವೆ.
– ಡಾ| ಉಷಾ ಶಾಸಿŒ ,
ಅಸಿಸ್ಟೆಂಟ್ ಪ್ರೊಫೆಸರ್ – ಹಿರಿಯ ಶ್ರೇಣಿ
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.