ಪಕ್ಷಕ್ಕೆ ಬರ್ತೇವೆ ಅಂದ್ರೆ ಬೇಡ ಅನ್ನೋಕೆ ನಾವೇನು ಸನ್ಯಾಸಿಗಳಾ?
Team Udayavani, Nov 27, 2018, 6:30 AM IST
ಚಿತ್ರದುರ್ಗ: “ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಬಹಳಷ್ಟು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಬಿಜೆಪಿ ಸೇರುತ್ತೇವೆ ಎಂದು ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ತೆರೆಮರೆಯ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್-ಜೆಡಿಎಸ್ ಸಹವಾಸ ಬೇಡ ಎಂದು ಬಂದರೆ ಬೇಡ ಎನ್ನಲು ನಾವೇನು ಸನ್ಯಾಸಿಗಳಾ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆವರೆಗೆ ಏಕೆ ಕಾಯಬೇಕು, ಅಗತ್ಯ ಇರುವವರು ನಾಳೆಯೇ ಪಕ್ಷಕ್ಕೆ ಬರಬಹುದು. ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣೆವರೆಗೆ ಇರುತ್ತದೆಯೋ ಅಥವಾ ನಾಳೆಯೇ ಬೀಳುತ್ತದೆಯೋ ಎಂದು ಕಾದು ನೋಡೋಣ. ಮೊದಲು ಸರ್ಕಾರ ಬೀಳಲಿ, ನಂತರ ಮುಖ್ಯಮಂತ್ರಿ ಯಾರು ಅನ್ನೋದನ್ನ ತೀರ್ಮಾನಿಸೋಣ ಎಂದು ಯಡಿಯೂರಪ್ಪನವರು ಹೇಳಿದ್ದಾರೆ ಎಂದರು.
ಬಿಜೆಪಿ ಸೇರೋದಾಗಿ ರಮೇಶ್ ಹೇಳಿಲ್ಲ: ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವುದಾಗಿ ಇವತ್ತಿಗೂ ಹೇಳಿಲ್ಲ. ಅವರು ಬಿಜೆಪಿಯ ಪ್ರಮುಖ ನಾಯಕರ ಜೊತೆ ಸ್ನೇಹ ಹೊಂದಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸುವುದು ಬೇಡ ಎಂದ ಈಶ್ವರಪ್ಪ, ಈ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಮತ್ತೂಂದೆಡೆ ನಾನು ಎಷ್ಟು ದಿನ ಮುಖ್ಯಮಂತ್ರಿ ಆಗಿರುತ್ತೇನೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹೀಗಾಗಿ ಯಾರನ್ನು ನಂಬುವುದು ಎಂದು ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.