ಖಾಕಿ ಪಡೆಯ ಭದ್ರ ಕೋಟೆ
Team Udayavani, Nov 27, 2018, 11:39 AM IST
ಬೆಂಗಳೂರು: ರಾಜಕೀಯ ಕ್ಷೇತ್ರದ ಗಣ್ಯಾತೀಗಣ್ಯರು, ಚಿತ್ರರಂಗದ ಖ್ಯಾತನಾಮರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಕ್ಷಿಯಾದ ಹಿರಿಯ ನಟ ಅಂಬರೀಶ್ ಅವರ ಅಂತಿಮ ಯಾತ್ರೆಗೆ ನಗರ ಪೊಲೀಸರು ಖಾಕಿ “ಭದ್ರಕೋಟೆ’ ನಿರ್ಮಿಸಿದ್ದರು.
ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗಿನ ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಭದ್ರತೆಯ ದೃಷ್ಟಿಯಿಂದ ಕೇಂದ್ರೀಯ ಭದ್ರತಾ ಪಡೆಗಳು ಸೇರಿದಂತೆ ಸುಮಾರು 18 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, 14 ಮಂದಿ ಡಿಸಿಪಿಗಳು ಭದ್ರತೆಯ ಹೊಣೆ ಹೊತ್ತಿದ್ದರು. ಪೊಲೀಸ್ ಸರ್ಪಗಾವಲಿನಲ್ಲಿ ಎಲ್ಲ ಪ್ರಕ್ರಿಯೆ ಶಾಂತಿಯುತವಾಗಿ ನೆರವೇರಿತು. ಕಂಠೀರವ ಕ್ರೀಡಾಂಗಣದಿಂದ ಮಧ್ಯಾಹ್ನ 12.30ರ ಸುಮಾರಿಗೆ ಅಂತಿಮ ಯಾತ್ರೆ ಆರಂಭವಾಗುತ್ತಿದ್ದಂತೆ ಹಡ್ಸನ್ ವೃತ್ತ ಮತ್ತು ಪುರಭವನ ವೃತ್ತ ಬಳಿ ಸಂಚಾರ ನಿರ್ಬಂಧಿಸಲಾಯಿತು.
ಬಳಿಕ ಹಡ್ಸನ್ ವೃತ್ತ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ, ಬಸವೇಶ್ವರ ವೃತ್ತ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಾರಮ್ಮ ವೃತ್ತ, ಯಶವಂತಪುರ ಮೇಲುಸೇತುವೆ, ಗೊರಗುಂಟೆಪಾಳ್ಯ ಮೂಲಕ ಸಾಗಿದ ಅಂತಿಮ ಯಾತ್ರೆ ಸಂಜೆ 4 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋ ತಲುಪಿತು. ಯಾತ್ರೆ ಸಾಗಿ ಬಂದ ಮಾರ್ಗದ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಪರ್ಯಾಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ದಟ್ಟಣೆ ತೀವ್ರವಾಗಿತ್ತು.
ಹೀಗಿತ್ತು ಭದ್ರತೆ: ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದ ವಾಹನಕ್ಕೆ ಎರಡು ಹಂತದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಆರ್‌ಎಎಫ್ ಸೇರಿದಂತೆ 300 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪಾರ್ಥಿವ ಶರೀರ ಹೊತ್ತ ವಾಹನದ ಸುತ್ತ ಮೊದಲ ಹಂತದಲ್ಲಿ ಆರ್‌ಎಎಫ್ನ 20 ಸಿಬ್ಬಂದಿ ಹಗ್ಗ ಹಿಡಿದು ಸುತ್ತುವರಿದಿದ್ದರು.
ಮತ್ತೂಂದು ಹಂತದಲ್ಲಿ ಸ್ಥಳೀಯ ಪೊಲೀಸರು ಸಹ ಹಗ್ಗ ಕಟ್ಟಿಕೊಂಡು ಭದ್ರತೆ ಕೈಗೊಂಡಿದ್ದರು. ಈ ಸಿಬ್ಬಂದಿಯ ಸುತ್ತಲೂ 1 ಆರ್‌ಎಎಫ್ನ ತುಕಡಿ, 2 ಕೆಎಸ್‌ಆರ್‌ಪಿ ತುಕಡಿ, 1 ಸಿಎಆರ್ ತುಕಡಿ ನಿಯೋಜಿಸಲಾಗಿತ್ತು. ಜತೆಗೆ ಒಬ್ಬ ಹೆಚುrವರಿ ಪೊಲೀಸ್ ಆಯುಕ್ತರು, ಇಬ್ಬರು ಡಿಸಿಪಿಗಳು ವಾಹನದ ಬಳಿಯೇ ಸಾಗಿದರು.
ಡಿಸಿಪಿಗಳಿಗೆ ಹೊಣೆ: ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗಿನ ಅಂತಿಮ ಯಾತ್ರೆ ಶಾಂತಿಯುತವಾಗಿ ನಡೆಯಲು ಸಿಎಆರ್ ಸೇರಿದಂತೆ ಎಲ್ಲ 15 ಮಂದಿ ಡಿಸಿಪಿಗಳಿಗೆ ಜವಾಬ್ದಾರಿ ವಹಿಸಲಾಗಿತ್ತು. ಮೆರವಣಿಗೆ ಮುಂಭಾಗದಲ್ಲಿ ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ, ಕೇಂದ್ರ ವಲಯ, ಆಗ್ನೇಯ ವಲಯ ಡಿಸಿಪಿ, ಪಶ್ಚಿಮ ವಲಯ ಡಿಸಿಪಿಗಳು ಕ್ರೀಡಾಂಗಣದಿಂದ ಗೊರಗುಂಟೆ ಪಾಳ್ಯವರೆಗಿನ ಭದ್ರತೆ ಹೊಣೆ ಹೊತ್ತಿದ್ದರು.
ಉತ್ತರ ವಲಯ ಡಿಸಿಪಿ, ವೈಟ್‌ಫೀಲ್ಡ್ ವಲಯ, ಈಶಾನ್ಯ ವಲಯ ಡಿಸಿಪಿ ಕಂಠೀರವ ಸ್ಟುಡಿಯೋವರೆಗಿನ ಮೆರವಣಿಗೆ ಹೊಣೆ ಹೊತ್ತಿದ್ದರು. ಅಲ್ಲದೆ ಜಂಕ್ಷನ್ ಹಾಗೂ ವೃತ್ತಗಳಲ್ಲಿಯೂ ಆಯ ಉಪ ವಿಭಾಗದ ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳು ಭದ್ರತೆ ನಿರ್ವಹಿಸಿದರು.
ಒಂದು ಕಿ.ಮೀ. ಉದ್ದದ ಸಾಲು: ಪಾರ್ಥಿವ ಶರೀರ ಹೊತ್ತ ವಾಹನದ ಮುಂಭಾಗದಲ್ಲಿ 1 ಡಿ-ಸ್ವಾಟ್ ವಾಹನ, 1 ವಜ್ರ ವಾಹನ, ಬಳಿಕ ಪಾರ್ಥಿವ ಶರೀರ ಹೊತ್ತ ವಾಹನ, ಸಿನಿಮಾ ಕಲಾದವಿದರಿದ್ದ ವಾಹನ, ಭದ್ರತಾ ಪಡೆ ವಾಹನಗಳು, ಅಶ್ರುವಾಯು ವಾಹನಗಳು, ಹೆಚ್ಚುವರಿ ಪೊಲೀಸ್ ಆಯುಕ್ತರ ವಾಹನಗಳು, ಡಿಸಿಪಿಗಳ ವಾಹನ ಹಿಂಬಾಲಿಸಿದವು. ಹೀಗಾಗಿ ಸುಮಾರು ಒಂದು ಕಿ.ಮೀ ರಸ್ತೆ ಭದ್ರತಾ ವಾಹನಗಳಿಂದ ತುಂಬಿತ್ತು.
ತಮಿಳುನಾಡು ತಂಡದಿಂದ ಸಲಹೆ: ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭದ್ರತೆ ಹೊಣೆ ಹೊತ್ತಿದ್ದ ಆರ್‌ಎಎಫ್ ಕಮಾಂಡೊ ವಿ.ಜೆ.ಸುಂದರಂ ನೇತೃತ್ವದ ತಂಡ ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಂತಿಮ ಯಾತ್ರೆಯ ಜವಾಬ್ದಾರಿ ನಿರ್ವಹಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಹೀಗಾಗಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಭಾನುವಾರವೇ ಕಮಾಂಡೊ ವಿ.ಜಿ.ಸುಂದರಂ ಅವರೊಂದಿಗೆ ಚರ್ಚಿಸಿ, ಪಾರ್ಥಿವ ಶರೀರ ವಾಹನ ಸುತ್ತ ಕೇಂದ್ರ ಮತ್ತು ಸ್ಥಳೀಯ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು ಎಂದು ವಿವರಿಸಿದರು.
ಭಾರೀ ಸಂಚಾರ ದಟ್ಟಣೆ: ಅಂತಿಮ ಯಾತ್ರೆಯ ಮೆರವಣಿಗೆ ವೇಳೆ ನಗರದ್ಯಾಂತ ವಿವಿಧ ಮಾರ್ಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರಮುಖವಾಗಿ ತುಮಕೂರು ಕಡೆಯಿಂದ ಬರುವ ವಾಹನಗಳನ್ನು ಬಿಸ್ಕೆಟ್ ಫ್ಯಾಕ್ಟರಿ (ಪೀಣ್ಯ ಮೆಟ್ರೋ ನಿಲ್ದಾಣ) ಬಳಿಯ ಟೋಲ್‌ಗೇಟ್‌ನಲ್ಲಿ ತಡೆದು, ಮೇಲುಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ಅಂತಿಮಯಾತ್ರೆ ವಾಹನ ಕಂಠೀರವ ಸ್ಟುಡಿಯೋ ಕಡೆ ತೆರಳುತ್ತಿದ್ದಂತೆ ವಾಹನ ಸಂಚಾರಕ್ಕೆ ಅವಕಾಶ ಕೊಡಲಾಗಿತ್ತು. ಹೀಗಾಗಿ ಈ ಭಾಗದಲ್ಲಿ ನೆಲಮಂಗಲ ಟೋಲ್‌ಗೇಟ್‌ವರೆಗೂ 3 ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಮೈಸೂರು ರಸ್ತೆ ಕಡೆಯಿಂದ ಗೊರಗುಂಟೆ ಪಾಳ್ಯ ಕಡೆ ಬರುವ ವಾಹನಗಳನ್ನು ಸುಮನಹಳ್ಳಿ ಜಂಕ್ಷನ್‌ನಲ್ಲಿಯೇ ತಡೆದು, ಕಾಮಾಕ್ಷಿಪಾಳ್ಯ ಮಾರ್ಗವಾಗಿ ನಗರ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ನಗರ ಪ್ರಮುಖ ರಸ್ತೆಗಳಲ್ಲಿಯೂ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು¤.
ಏಕಾಏಕಿ ಹೆಚ್ಚಿದ ಜನಸ್ತೋಮ: ಅಂತಿಮ ಯಾತ್ರೆ ವೇಳೆ ಕಾವೇರಿ ಜಂಕ್ಷನ್‌ನಲ್ಲಿ ಏಕಾಏಕಿ ಹೆಚ್ಚಾದ ಅಭಿಮಾನಿಗಳನ್ನು ಕಂಡ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದರು. ಪಾರ್ಥಿವ ಶರೀರವಿದ್ದ ವಾಹನಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಯಶವಂತಪುರ, ಆರ್‌ಎಂಸಿ ಯಾರ್ಡ್‌ನ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಏಕಾಏಕಿ ರಸ್ತೆಗಳಿದು ಜೈಕಾರ ಕೂಗುತ್ತಿದ್ದಂತೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರಸ್ತೆಯ ಎರಡು ಕಡೆಗಳಲ್ಲಿ ನಿಂತು ಅಭಿಮಾನಿಗಳನ್ನು ತಡೆದು ಯಾತ್ರೆಗೆ ಅನುವು ಮಾಡಿಕೊಟ್ಟರು.
ಗಾರ್ಮೆಂಟ್ಸ್ ಬಂದ್: ಅಂಬರೀಶ್ ಅವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗೊರಗುಂಟೆ ಪಾಳ್ಯ, ಪೀಣ್ಯ ವ್ಯಾಪ್ತಿಯ ಪ್ರತಿಷ್ಠಿತ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಮುಚ್ಚಲಾಗಿತ್ತು.
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.