“ಶೀಘ್ರದಲ್ಲಿ ಸೆಂಟ್ರಲ್ ರೈಲು ನಿಲ್ದಾಣ ವಿಶ್ವದರ್ಜೆಗೆ’
Team Udayavani, Nov 29, 2018, 9:21 AM IST
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಮೊದಲ ಹಂತವಾಗಿ 4 ಕೋ.ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ದ.ಕ. ಜಿ.ಪಂ.ನಲ್ಲಿ ಬುಧವಾರ ನಡೆದ ರೈಲ್ವೇ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಎರಡನೇ ಪ್ರವೇಶ ದ್ವಾರ ಸಹಿತ ವಿವಿಧ ಅಭಿವೃದ್ಧಿ ಚಟುವಟಿಕೆಗಳು ಜಾರಿಯಾಗಲಿವೆ ಎಂದರು.
ರೈಲ್ವೇ ಅಭಿವೃದ್ಧಿ ಸಮಿತಿಯ ಹನುಮಂತ ಕಾಮತ್ ಮಾತನಾಡಿ, ಸೆಂಟ್ರಲ್‌ನಲ್ಲಿ 4ನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆಂದು 7.5 ಕೋ.ರೂ. ಬಂದಿದೆ. ಆದರೆ ರೈಲ್ವೇ ಅಧಿಕಾರಿಗಳು ಪಿಟ್‌ಲೆçನ್ ಸ್ಥಳಾಂತರಿಸದೆ 4
ಹಾಗೂ 5ನೇ ಪ್ಲಾಟ್‌ಫಾರಂ ನಿರ್ಮಿಸಲು ಸಾಧ್ಯವಾಗಿಲ್ಲ. ಸುದೀರ್ಘ ಕಾಲದಿಂದ ಬಾಕಿಯಾಗಿರುವ ಈ ಯೋಜನೆ ಮತ್ತೆ ಪಿಟ್‌ಲೆçನ್ ಅನುದಾನದ ನಿರೀಕ್ಷೆಯಿಂದ ಇನ್ನೆಷ್ಟು ವರ್ಷ ಕಾಯಬೇಕು ಎಂದು ಪ್ರಶ್ನಿಸಿದರು. ಈ ಬಗ್ಗೆ ರೈಲ್ವೇ ಅಧಿಕಾರಿಗಳು ಸಾಧ್ಯತಾ ವರದಿ ಸಿದ್ಧಪಡಿಸಿ ನೀಡುವಂತೆ ನಳಿನ್ ಸೂಚಿಸಿದರು.
ಕೇರಳ ರೈಲಿಗೆ ಆದ್ಯತೆ – ಆಕ್ಷೇಪ
ಈ ಹಿಂದೆ ನಂ. 16575/76 ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ನಿರ್ಧರಿಸುವಾಗ ಮಂಗಳೂರು ಸೆಂಟ್ರಲ್ ಎಂದು ನಿಗದಿ ಮಾಡಲಾಗಿತ್ತು. ಆದರೆ ಅದಕ್ಕೆ ಕೆಲವು ರೈಲ್ವೇ ಅಧಿಕಾರಿಗಳು ಅಡ್ಡಗಾಲು ಹಾಕಿ ಕೇರಳಕ್ಕೆ ಹೋಗುವ ರೈಲುಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಪಾಲಕ್ಕಾಡ್ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಪಿ.ಎಸ್. ಶಮಿ ಮಾತನಾಡಿ, ಈ ರೈಲನ್ನು ಮಂಗಳೂರು ಸೆಂಟ್ರಲ್‌ನಿಂದಲೇ ಬಿಡುವುದಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜೆಪ್ಪು ಮಹಾಕಾಳಿಪಡುವಿನಲ್ಲಿ ರೈಲ್ವೇ ಕೆಳಸೇತುವೆಗೆ ಅನುಮೋದನೆ ಸಿಕ್ಕಿದ್ದು, ಮಂಗಳೂರು ಸ್ಮಾರ್ಟ್‌ಸಿಟಿ ಅನುದಾನದಿಂದ 40 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮನಪಾ ಆಯುಕ್ತ ಮುಹಮ್ಮದ್ ನಜೀರ್ ತಿಳಿಸಿದರು. ಈ ಮೊತ್ತವನ್ನು ರೈಲ್ವೇಗೆ ಠೇವಣಿ ಇರಿಸಿದ ಒಂದು ವರ್ಷದಲ್ಲಿ ರೈಲ್ವೇ ಇಲಾಖೆ ಕೆಳಸೇತುವೆ ನಿರ್ಮಿಸಿ ಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೇಡಿಕೆ: ಅತ್ತಾವರದ ರೈಲ್ವೇ ಬ್ರಿಜ್ ಕೆಳಭಾಗದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಸಮಸ್ಯೆ, ಮಹಾಲಕ್ಷ್ಮೀ ರೈಲನ್ನು ಪುನರಾರಂಭಿಸಬೇಕು, ಜಪ್ಪು ಕುಡುಪಾಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ರೈಲ್ವೇ ಅನುಮತಿ ನೀಡಬೇಕು ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು. ಗ್ರಾ.ಪಂ. ಅಧ್ಯಕ್ಷ ಗಣೇಶ್ ಅರ್ಬಿ ಮಾತನಾಡಿ, ಮಳವೂರಿನಲ್ಲಿ ರೈಲ್ವೇಯ ಎರಡನೇ ಹಳಿ ನಿರ್ಮಾಣದಿಂದ ಸುಮಾರು 50 ಮನೆಗಳಿಗೆ ಸಂಪರ್ಕ ರಸ್ತೆ ಕಡಿತ ಗೊಂಡಿದೆ ಎಂದು ಆರೋಪಿಸಿದರು. ರೈಲ್ವೇ ಅಧಿಕಾರಿಗಳು ಉತ್ತರಿಸಿ, ಈ ಬಗ್ಗೆ ಪ್ರಸ್ತಾವನೆ ಬಂದಿಲ್ಲ ಎಂದರು. ಗ್ರಾ.ಪಂ.ನಿಂದ ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ ಬಳಿಕ ರೈಲ್ವೇ ಇಲಾಖೆಗೆ ನೀಡುವಂತೆ ನಳಿನ್ ಸೂಚಿಸಿದರು.
ದಿನೇಶ್ ಕುಂಪಲ ಮಾತನಾಡಿ, ರೈಲು ನಿಲ್ದಾಣದಲ್ಲಿ ಟೂರಿಸ್ಟ್ ಟ್ಯಾಕ್ಸಿಗಿಂತ ಕಡಿಮೆ ದರದಲ್ಲಿ ಆನ್‌ಲೈನ್
ಟ್ಯಾಕ್ಸಿಗಳು ಕಾರ್ಯಾಚರಿಸುತ್ತಿರುವುದರಿಂದ ತೊಂದರೆಯಾಗಿದೆ. ಎಲ್ಲರಿಗೂ ಒಂದೇ ದರ ನಿಗದಿಪಡಿಸಬೇಕು ಎಂದರು. ನಳಿನ್ ಮಾತನಾಡಿ, ಆನ್‌ಲೈನ್ ಟ್ಯಾಕ್ಸಿ ಜನರ ಬೇಡಿಕೆ. ಅದನ್ನು ವಿರೋಧಿಸುವುದು ಸಾಧ್ಯವಿಲ್ಲ. ಎರಡೂ ಕಡೆಯವರಿಗೂ ತೊಂದರೆಯಾಗದಂತೆ ಪರಿಶೀಲಿಸಿ ಇತ್ಯರ್ಥಪಡಿಸಲಾಗುವುದು ಎಂದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.
ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಕೆಲಸ ರದ್ದಾಗಿಲ್ಲ !
ಸಂಸದ ನಳಿನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾ.ಹೆ. ಕಾಮಗಾರಿ ಕುರಿತ ಸಭೆಯಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ಮಾತನಾಡಿ, ಬಿ.ಸಿ. ರೋಡ್-ಅಡ್ಡಹೊಳೆ ಹೆದ್ದಾರಿ ಕಾಂಕ್ರೀಟ್ ಕಾಮಗಾರಿ ಕೆಲಸ ತಾಂತ್ರಿಕ ಅಡಚಣೆಗಳಿಂದಾಗಿ ವಿಳಂಬವಾಗಿದೆ. ಆದರೆ ಸ್ಥಗಿತಗೊಳ್ಳುವುದಿಲ್ಲ. ಯೋಜಿತ ಕೆಲಸದ 21 ಕಿ.ಮೀ. ಭಾಗ ರಕ್ಷಿತಾರಣ್ಯ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ವನ್ಯಜೀವಿ ಕಾರಿಡಾರ್, ನಾಲ್ಕು ಮೇಲ್ಸೇತುವೆ ಸಹಿತ 221 ಕೋಟಿ ರೂ. ಹೆಚ್ಚುವರಿ ಪ್ರಸ್ತಾವನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಇನ್ನೂ ಒಪ್ಪಿಗೆ ನೀಡದ ಕಾರಣ ಸಮಸ್ಯೆಯಾಗಿದೆ. ಈ ಮಳೆಗಾಲದಲ್ಲಿ ಭೂಕುಸಿತವಾದ್ದರಿಂದ ಹೆಚ್ಚುವರಿ ಭೂಸ್ವಾಧೀನ ಕೈಗೊಳ್ಳಬೇಕಿದೆ. 47 ಹೆಕ್ಟೇರ್ ಭೂಸ್ವಾಧೀನಕ್ಕೆ 4 ತಿಂಗಳು ತಗಲಲಿದೆ. ಈ ಕೆಲಸಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.