ಕೆಂಪು, ಕುಮ್ಟೆ ಮೆಣಸು ಗಿಡಗಳಿಗೆ ಹೆಚ್ಚಿದ ಬೇಡಿಕೆ
Team Udayavani, Nov 29, 2018, 10:19 AM IST
ಪುತ್ತೂರು: ರೈತರ ಪಾಲಿನ ಉಪಬೆಳೆ ಮೆಣಸಿನ ಗಿಡಗಳಿಗೆ ಈಗ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. 30 ಗಿಡಗಳ ಒಂದು ಕಟ್ಟು 40 ರೂ.ನಿಂದ 50 ರೂ.ವರೆಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ. ವಿಟ್ಲ, ಅನಂತಾಡಿ ಭಾಗಗಳಿಂದ ಪುತ್ತೂರು ಸಂತೆ, ಮಾರುಕಟ್ಟೆಗೆ ಮೆಣಸಿನ ಗಿಡಗಳನ್ನು ತಂದು ಮಾರಾಟ ಮಾಡುತ್ತಿದ್ದು, ಉತ್ತಮ ಧಾರಣೆಯೂ ಸಿಗುವಂತಾಗಿದೆ. ಶ್ರಮಕ್ಕೆ ತಕ್ಕ ಪರಿಹಾರ ಪಡೆದ ಸಂತಸ ರೈತರ ಮುಖಗಳಲ್ಲಿದ್ದರೆ, ಗಿಡಗಳನ್ನು ಖರೀದಿ ಮಾಡುವ ಮಂದಿಯೂ ತಮಗೆ ಉತ್ತಮ ಗಿಡಗಳು ದೊರೆತಿವೆ ಎನ್ನುವ ಖುಷಿಯಲ್ಲಿದ್ದಾರೆ.
ಹಳ್ಳಿಯಲ್ಲಿ ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ರೈತರು ಮೆಣಸಿನ ಗಿಡಗಳನ್ನು ನೆಟ್ಟು ತಮ್ಮ ಮನೆಗೆ ಬೇಕಾದಷ್ಟು ಮೆಣಸು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಕೆಂಪು ಮೆಣಸು (ಊರಿನ ಮೆಣಸು) ಹಾಗೂ ಕುಮ್ಟೆ ಮೆಣಸಿನ ಗಿಡಗಳಿಗೆ ಈಗ ಉತ್ತಮ ಬೇಡಿಕೆ ಕೇಳಿಬರುತ್ತಿದೆ. ಇದನ್ನು ಅರಿತುಕೊಂಡ ಕೆಲವು ರೈತರು ಮೆಣಸಿನ ಗಿಡಗಳನ್ನು ಮಾರಾಟ ಮಾಡುತ್ತಾರೆ.
ಅಕ್ಟೋಬರ್ ತಿಂಗಳಲ್ಲಿ ಪಾತಿ ತಯಾರು ಮಾಡಿ ಮೆಣಸಿನ ಬೀಜಗಳನ್ನು ಬಿತ್ತಲಾಗುತ್ತದೆ. ವಾರದೊಳಗೆ ಗಿಡಗಳು ಮೊಳೆತು ಗಿಡಗಳಾಗುತ್ತವೆ. 25ರಿಂದ 30 ದಿನಗಳೊಳಗಾಗಿ ಈ ಗಿಡಗಳು ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ. ಅನಂತರ ಈ ಮೆಣಸಿನ ಗಿಡಗಳನ್ನು ಪುತ್ತೂರು, ಉಪ್ಪಿನಂಗಡಿ, ಮಾಣಿ, ವಿಟ್ಲ ಮುಂತಾದ ಕಡೆಗಳಲ್ಲಿ ನಡೆಯುವ ವಾರದ ಸಂತೆಗಳಿಗೆ ಕೊಂಡು ಹೋಗಿ ತಾವೇ ಮಾರಾಟ ಮಾಡುತ್ತಾರೆ. ಕೆಲವು ರೈತರು ಗಿಡಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುವುದೂ ಇದೆ. ಆದರೆ ಗಿಡಗಳನ್ನು ತಯಾರು ಮಾಡುವವರೇ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ.
ತರಕಾರಿ ಬೆಳೆಗೆ ಸೂಕ್ತ
ಏಣೆಲು ಕೊಯಿಲು ಮುಗಿಸಿದ ರೈತರಿಗೆ ಇದೀಗ ತಮ್ಮ ಗದ್ದೆಗಳಲ್ಲಿ ತರಕಾರಿ ಬೆಳೆಯಲು ಸೂಕ್ತ ಕಾಲ. ಹಳ್ಳಿಯಲ್ಲಿ ಗದ್ದೆಗಳನ್ನು ಉಳಿಸಿಕೊಂಡ ಹಾಗೂ ಸ್ವಲ್ಪ ಸ್ಥಳ ಇರುವ ರೈತರು ತರಕಾರಿ ಬೆಳೆಸುವಲ್ಲಿ ಹಿಂದೇಟು ಹಾಕುವುದಿಲ್ಲ.
ವಾರದ ಸಂತೆಗಳಿಂದ ಮೆಣಸಿನ ಗಿಡಗಳನ್ನು ಖರೀದಿಸಿ ತಮ್ಮ ಗದ್ದೆಗಳಲ್ಲಿ ಸಾಲು ತೆಗೆದು ಈ ಗಿಡಗಳನ್ನು ನಾಟಿ ಮಾಡುತ್ತಾರೆ. ಅನಂತರ ಅದಕ್ಕೆ ಗೊಬ್ಬರ ನೀಡಿ ಬೆಳೆಸುತ್ತಾರೆ. ಸುಮಾರು 2 ತಿಂಗಳ ಬಳಿಕ ಮೆಣಸು ರೈತರ ಕೈಗೆ ಬರುತ್ತದೆ. ಕುಟುಂಬಕ್ಕೆ ಬೇಕಾದಷ್ಟು ಮೆಣಸು ಬೆಳೆದುಕೊಳ್ಳುವ ರೈತ ಆ ಮೂಲಕ ಸ್ವಾವಲಂಬಿಯಾಗುತ್ತಾನೆ.
ಕೆಲವು ರೈತರು ತಮ್ಮ ಮನೆಗಳಲ್ಲಿಯೇ ಮೆಣಸಿನ ಗಿಡಗಳನ್ನು ಪಾತಿ ಮಾಡಿ ತಯಾರು ಮಾಡಿಕೊಳ್ಳುವುದೂ ಇದೆ. ಆದರೆ ಮೆಣಸಿನ ಬೀಜ ಹಾಕಿ ಗಿಡ ಗಳನ್ನು ತಯಾರು ಮಾಡುವುದು ಸ್ವಲ್ಪ ಕಷ್ಟದಾಯಕ ಕೆಲಸ. ಇದಕ್ಕೆ ಇರುವೆ ಕಾಟ ಕಾಡುವುದರಿಂದ ಬಹುತೇಕ ರೈತರು ಮೆಣಸಿನ ಗಿಡಗಳಿಗಾಗಿ ಸಂತೆಗಳನ್ನೇ ಅವಲಂಬಿಸುತ್ತಾರೆ.
ನವೆಂಬರ್ ತಿಂಗಳು ಪೂರ್ತಿ ಈ ಮೆಣಸಿನ ಗಿಡಗಳಿಗೆ ಬೇಡಿಕೆ ಇರುತ್ತದೆ. ಒಬ್ಬೊಬ್ಬರು ಕನಿಷ್ಠ 10ರಿಂದ 15 ಸಾವಿರ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಇದರಿಂದ ಆರ್ಥಿಕ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಅಡಿಕೆ, ಭತ್ತದ ಬೆಳೆಗಳ ನಡುವೆ ಇದೊಂದು ತಾತ್ಕಾಲಿಕ ಉಪ ಬೆಳೆಯಾಗಿ ರೈತರ ಪಾಲಿಗೆ ಹಣ ತರುವ ದಾರಿಯಾಗಿದೆ.
ಬಿಸಿಲು ಬೇಕು
ಬಳ್ಳಾರಿ ಕಡೆಯಿಂದ ಹಸಿ ಮೆಣಸು ಮಾರುಕಟ್ಟೆಗೆ ಬರುವುದು ತಡ ಆಗುವುದರಿಂದ ಮೆಣಸಿನ ಗಿಡಗಳಿಗೆ ಬೇಡಿಕೆ ಇದೆ. ಮಳೆಗಾಲದ ಅನಂತರ ಮೆಣಸಿನ ಗಿಡಗಳನ್ನು ನೆಡಲು ಉತ್ತಮ ವಾತಾವರಣ ಇರುತ್ತದೆ. ಇದಕ್ಕೆ ಬಿಸಿಲು ಬೇಕು, ನೆರಳು ಇರಬಾರದು.
–ಎಚ್.ಆರ್. ನಾಯಕ್,
ಉಪ ನಿರ್ದೇಶಕರು,ತೋಟಗಾರಿಕಾ ಇಲಾಖೆ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.