ಹುಲಿ ಗಣತಿಗೆ ಪ್ರತ್ಯೇಕ “ಟೈಗರ್ ಸೆಲ್’
Team Udayavani, Nov 30, 2018, 6:00 AM IST
ಬೆಂಗಳೂರು: ರಾಜ್ಯದಲ್ಲಿರುವ ಹುಲಿಗಳ ನಿಖರ ಸಂಖ್ಯೆ ತಿಳಿಯಲು ಮುಂದಾಗಿರುವ ಅರಣ್ಯ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಗಣತಿ ನಡೆಸಲು ಮುಂದಾಗಿದೆ. ಅಲ್ಲದೆ, ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಪ್ರತ್ಯೇಕ “ಟೈಗರ್ ಸೆಲ್’ ಆರಂಭಿಸಲು ನಿರ್ಧರಿಸಿದೆ.
ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿಯನ್ನು ಕರ್ನಾಟಕ ಹೊಂದಿದೆ. ಭಾರತ ಸರ್ಕಾರ 2014ರಲ್ಲಿ ನಡೆಸಿದ ಹುಲಿಗಳ ಗಣತಿಯ ಪ್ರಕಾರ 406ಕ್ಕೂ ಹೆಚ್ಚು ಹುಲಿಗಳು ರಾಜ್ಯದಲ್ಲಿವೆ. ಹುಲಿಗಳ ಸಂಖ್ಯೆ ಹೆಚ್ಚಿಸಲು ಈಗಾಗಲೇ ಪ್ರಾಜೆಕ್ಟ್ ಟೈಗರ್ ಯೋಜನೆ ಜಾರಿಗೊಳಿಸಿರುವ ಅರಣ್ಯ ಇಲಾಖೆ, ಇದೀಗ ಹುಲಿಗಳಿಗಾಗಿಯೇ ಪ್ರತ್ಯೇಕ ಸೆಲ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.
2014ರ ನಂತರ ಸಾಕಷ್ಟು ಏರಿಳಿತಗಳಾಗಿದ್ದು, ಹುಲಿಗಳ ಸಂಖ್ಯೆ ಎಷ್ಟಿದೆ ಎಂಬ ನಿಖರ ಮಾಹಿತಿ ಲಭ್ಯವಿಲ್ಲ. ಆ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಗಣತಿ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ. ರಾಜ್ಯದ ಐದು ಹುಲಿ ಸಂರಕ್ಷಣಾ ವಲಯಗಳಲ್ಲಿ ಇಲಾಖೆಯಿಂದ ಅಳವಡಿಸಿರುವ ಕ್ಯಾಮೆರಾಗಳಲ್ಲಿ ಸೆರೆಯಾದ ಹುಲಿಗಳ ಫೋಟೋಗಳ ಆಧಾರದ ಮೇಲೆ ಗಣತಿ ನಡೆಸಲು ತೀರ್ಮಾನಿಸಲಾಗಿದೆ.
ಹುಲಿಗಳ ಮೈಮೇಲೆ ಇರುವಂತಹ ಗೆರೆಗಳ ಆಧಾರದ ಮೇಲೆ ಪ್ರತಿಯೊಂದು ಹುಲಿಗೆ ಪ್ರತ್ಯೇಕವಾದ ಹೆಸರು ನೀಡಲಾಗುತ್ತದೆ. ಹುಲಿಗಳ ಕಾಲು ಹಾಗೂ ಕತ್ತಿನ ಭಾಗದಲ್ಲಿರುವ ಗೆರೆಗಳು ಹುಲಿಯ ಗಣತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕ್ಯಾಮೆರಾದಲ್ಲಿ ಸೆರೆಯಾದ ಹುಲಿಯ ಫೋಟೋ ಹಾಗೂ ಇತರೆ ಭಾಗಗಳಲ್ಲಿ ಸಿಕ್ಕಿರುವ ಫೋಟೋಗಳನ್ನು ಕಂಪ್ಯೂಟರ್ ಆಧಾರಿತ ತಂತ್ರಾಂಶದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಇದರಿಂದಾಗಿ ಹುಲಿಗಳ ಗುರುತಿಸುವಿಕೆ ಸುಲಭವಾಗಲಿದೆ.
ಹುಲಿಯಿರುವ ಸ್ಥಳ ಪತ್ತೆ:
ಇಲಾಖೆಯಿಂದ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಹುಲಿಯನ್ನು ರಿಮೋಟ್ ಸೆನ್ಸಿಂಗ್ ಮೂಲಕ ಯಾವ ದಿಕ್ಕಿಗೆ ಹೋಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಜತೆಗೆ ಫೋಟೋ ಸೆರೆಯಾದ ಕ್ಯಾಮೆರಾ ಮೂಲಕ ಹುಲಿ ಇರುವ ಸ್ಥಳವನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಇದರಿಂದಾಗಿ ಅಂತಹ ಸ್ಥಳಗಳಲ್ಲಿ ಜನರು ಸಂಚರಿಸದಂತೆ ಎಚ್ಚರ ವಹಿಸಬಹುದು ಎಂಬುದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ಅಂಬೋಣ.
ಹುಲಿಗಳ ಲಿಂಗಾನುಪಾತ:
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಹುಲಿಗಳ ಸ್ಪಷ್ಟವಾದ ಫೋಟೋಗಳು ಇಲಾಖೆಗೆ ಲಭ್ಯವಾಗುತ್ತವೆ. ಈ ವೇಳೆ ಹುಲಿಯ ಅಂಗಾಂಶ ಹಾಗೂ ಗೆರೆಗಳನ್ನು ಆಧಾರಿಸಿ ಹುಲಿಗಳ ಲಿಂಗವನ್ನೂ ಪತ್ತೆ ಮಾಡಬಹುದಾಗಿದೆ. ಗಣತಿಯಿಂದಾಗಿ ರಾಜ್ಯದಲ್ಲಿರುವ ಹುಲಿಗಳ ಒಟ್ಟು ಸಂಖ್ಯೆಯೊಂದಿಗೆ, ಗಂಡು -ಹೆಣ್ಣು ಹುಲಿಗಳ ನಡುವಿನ ಲಿಂಗಾನುಪಾತ ತಿಳಿಯಲಿದೆ. ಇದರಿಂದಾಗಿ ಕಡಿಮೆ ಇರುವ ಹುಲಿಗಳ ಸಂತತಿ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದು ಇಲಾಖೆ ಉದ್ದೇಶವಾಗಿದೆ.
ಉಪಯೋಗವೇನು?
ಹುಲಿ ಗಣತಿ ವನ್ಯಜೀವಿಗಳ ನಿರ್ವಹಣೆಗೆ ಹೆಚ್ಚು ಅನುಕೂಲವಾಗಲಿದ್ದು, ವನ್ಯಜೀವಿ ಅಪರಾಧಗಳು, ಪ್ರಾಣಿ-ಮನುಷ್ಯನ ನಡುವಿನ ಸಂಘರ್ಷ ತಪ್ಪಿಸಬಹುದಾಗಿದೆ. ಕಾಡಿಗೆ ಸಮೀಪ ಇರುವ ಹಳ್ಳಿಗಳಲ್ಲಿ ಹುಲಿ ದಾಳಿ ನಡೆಸಿದ ಪ್ರಕರಣ ವರದಿಯಾದಾಗ ಯಾವ ಹುಲಿ ದಾಳಿ ನಡೆಸಿದೆ ಎಂಬುದನ್ನು ಅಂದಾಜಿಸಬಹುದು. ಅಥವಾ ಹೊಸ ಹುಲಿಯಿದ್ದರೂ ಆ ಬಗ್ಗೆ ಮಾಹಿತಿ ಪಡೆಯಲು ಇದು ಸಹಕಾರಿ. ಜತೆಗೆ ಹುಲಿಗಳು ಹೆಚ್ಚು ವಾಸವಿರುವ ಸ್ಥಳಗಳ ನಿಖರ ಮಾಹಿತಿ ದೊರೆಯಲಿದೆ.
ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳು
– ಬಂಡಿಪುರ
– ಭದ್ರಾ
– ನಾಗರಹೊಳೆ
– ಕಾಳಿ
– ಬಿಳಿಗಿರಿ ರಂಗನ ಬೆಟ್ಟ
– ವೆಂ. ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.