ಅನಂತಕುಮಾರ್‌ರನ್ನು ದೇಶ ಸದಾ ಸ್ಮರಿಸುತ್ತದೆ
Team Udayavani, Nov 30, 2018, 11:43 AM IST
ಬೆಂಗಳೂರು: ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಟ್ಟಿ ಬೆಳೆಸಿದ ಅನಂತ ಕುಮಾರ್ ಅವರನ್ನು ದೇಶ ಸದಾ ಸ್ಮರಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.
ನಗರದ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ದಿ.ಅನಂತಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರಿಗೆ ಬಂದಾಗ ಅನಂತ ಕುಮಾರ್ ಅವರೊಂದಿಗೆ ರಾತ್ರಿ ಊಟ ಮಾಡಿ ಮುಂಜಾನೆವರೆಗೂ ಚರ್ಚಿಸುತ್ತಿದ್ದೆವು. ಎಬಿವಿಪಿಯಲ್ಲಿ ಇದ್ದಾಗಲೇ ಸ್ನೇಹಿತರಾಗಿದ್ದ ಅನಂತ ಕುಮಾರ್ ಅವರು ಕಿರಿಯ ವಯಸ್ಸಿನಲ್ಲೇ ಎತ್ತರಕ್ಕೆ ಬೆಳೆದಿದ್ದನ್ನು ಕಂಡಿದ್ದೇನೆ ಎಂದು ಸ್ಮರಿಸಿದರು.
ನಾವು ಆತ್ಮೀಯರಾಗಿದ್ದ ಕಾರಣ ಅವರು ನನ್ನನ್ನು “ವಕೀಲ್ ಸಾಹೇಬ್’ ಎಂದೇ ಕರೆಯುತ್ತಿದ್ದರು. ಬಿಜೆಪಿ ಉತ್ತರ ಭಾರತಕ್ಕಷ್ಟೇ ಸೀಮಿತವಾಗಿತ್ತು. 1990ರ ಕಾಲಘಟ್ಟದಲ್ಲಿ ಪಕ್ಷವನ್ನು ದಕ್ಷಿಣ ಭಾರತಕ್ಕೆ ಅದರಲ್ಲೂ ಕರ್ನಾಟಕದಲ್ಲಿ ಅನಂತ ಕುಮಾರ್ ತಂಡ ಉತ್ತಮವಾಗಿ ಬೆಳೆಸಿತು. ಅಂತಹ ಅನಂತ ಕುಮಾರ್ ಅವರ ಅಕಾಲಿಕ ನಿಧನದಿಂದ ಇಡೀ ಕೇಂದ್ರ ಸರ್ಕಾಕ್ಕೆ ಆಘಾತವಾಗಿದೆ. ಕ್ಯಾನ್ಸರ್‌ಗೆ ತುತ್ತಾದ ಅವರಿಗೆ ಉತ್ತಮ ಚಿಕಿತ್ಸೆ ದೊರಕಿತ್ತು.
ಆದರೂ ಉಳಿಸಿಕೊಳ್ಳಲಾಗಲಿಲ್ಲ. ಅವರ ತಂಡವನ್ನು ರಾಷ್ಟ್ರ ಸದಾ ನೆನಪಿಸಿಕೊಳ್ಳುತ್ತದೆ ಎಂದು ಭಾವುಕರಾದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಅನಂತ ಕುಮಾರ್ ಅವರು ಕ್ರಿಯಾಶೀಲ, ಉತ್ಸಾಹಿ ವ್ಯಕ್ತಿತ್ವದವರಾಗಿದದರು. ಉತ್ತಮ ಮಾತುಗಾರರಷ್ಟೇ ಅಲ್ಲದೆ ಉತ್ತಮ ಆಲೋಚನೆ ಉಳ್ಳವರಾಗಿದ್ದರು. ಅಧಿಕಾರದಲ್ಲಿದ್ದಾಗ ಉತ್ತಮ ಸೇವೆ ಸಲ್ಲಿಸುವ ಜತೆಗೆ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಉತ್ತಮ ಸೇವಾ ಕಾರ್ಯ ಮಾಡಿದ್ದು, ಸ್ಮರಣೀಯ ಎನಿಸಿದೆ. ಬದುಕಿದರೆ ಹೀಗೇ ಬದುಕಬೇಕು ಎಂಬಂತೆ ಮಾದರಿಯಾಗಿ ಬದುಕಿದರು ಎಂದು ಶ್ಲಾ ಸಿದರು.
ಅದಮ್ಯ ಚೇತನ ಸಂಸ್ಥೆಯ ಮೂಲಕ ಶೈಕ್ಷಣಿಕ ಸೇವೆ ಸಲ್ಲಿಸಿದ್ದು, ಸಾಕಷ್ಟು ಮಕ್ಕಳಿಗೆ ಅನುಕೂಲವಾಗಿದೆ. ಇಂದಿನ ಯುವಜನತೆ ಅನಂತ ಕುಮಾರ್ ಅವರನ್ನು ಆದರ್ಶವಾಗಿ ಪರಿಗಣಿಸಬೇಕು. ಅವರಿಂದ ಸ್ಫೂರ್ತಿ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು. ಆದಿಚುಂಚನಗಿರಿಮಠದ ನಿರ್ಮಲಾನಂದನಾಥ ಸ್ವಾಮೀಜಿ, “ಮಠದ ವತಿಯಿಂದ ಆರಂಭಿಸಲಾಗಿದ್ದ ಆಯುರ್ವೇದ ಕಾಲೇಜು ಮುಚ್ಚುವ ಸ್ಥಿತಿಯಲ್ಲಿತ್ತು.
ಆಗ ಅನಂತ ಕುಮಾರ್ ಅವರೇ ಕಾಲೇಜು ಉಳಿಸಿದರು. ಇಂದು ಎರಡನೇ ಆಯುರ್ವೇದ ಕಾಲೇಜು ಶುರುವಾಗಲೂ ಅವರೇ ಕಾರಣ ಎಂದು ಸ್ಮರಿಸಿದರು. ಆರ್‌ಎಸ್‌ಎಸ್ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಅನಂತ ಕುಮಾರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದಾಗ ಪರೀಕ್ಷೆಯಲ್ಲಿ ಫೇಲಾಗದ, ಚುನಾವಣೆಯಲ್ಲೂ ಎಂದೂ ಸೋಲದ ನೀವು ಕ್ಯಾನ್ಸರ್ ವಿಚಾರದಲ್ಲಿ ಸೋಲಬಾರದು ಎಂದು ಹೇಳಿದ್ದೆ.
ಅವರು ಹೆಬ್ಬೆರಳಿನಿಂದ ವಿಜಯದ ಸಂಕೇತ ತೋರಿದ್ದರು. ಆ ಹೊತ್ತಿಗೆ ಇದೇ ಅಂತಿಮ ಹೋರಾಟ ಎಂಬುದು ಅವರಿಗೆ ತಿಳಿದಿತ್ತು ಎಂದು ಹನಿಗಣ್ಣಾದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅನಂತ ಕುಮಾರ್ ಅವರು ನನ್ನೊಂದಿಗೆ ರಾಜಕೀಯ ಜೀವನದಲ್ಲಿ ಹೆಜ್ಜೆ ಹಾಕಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಪರ್ಕ ಕೊಂಡಿಯಾಗಿದ್ದ ಅವರ ಕೆಲಸಗಳನ್ನು ಮುಂದುವರಿಸಿದರೆ ಅದೇ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.
ರಾಜ್ಯಪಾಲ ವಜುಭಾಯಿ ವಾಲಾ, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಜೆಡಿಎಸ್‌ನ ರಮೇಶ್ ಬಾಬು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದರಾದ ಪಿ.ಸಿ.ಮೋಹನ್, ರಾಜೀವ್ ಚಂದ್ರಶೇಖರ್, ಶಾಸಕರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಶಾಸಕರು, ಮುಖಂಡರು ಉಪಸ್ಥಿತರಿದ್ದರು.
ಅನರ್ಘ್ಯ ರತ್ನದ ಮೌಲ್ಯ ಅಳೆಯಲಾಗಲಿಲ್ಲ: ಮದುವೆಗೆ ಮೊದಲು ಜಗನ್ನಾಥ ರಾಜ ಜೋಶಿಯವರ ಆಶೀರ್ವಾದ ಪಡೆದಿದ್ದೆವು. ಆಗ ಅವರು “ಈ ರತ್ನವನ್ನು ಎಲ್ಲಿಂದ ತಂದೆ?’ ಎಂದು ಕೇಳಿದ್ದರು. ಆ ಅನರ್ಘ್ಯ ರತ್ನದ ಮೌಲ್ಯ ಇಂದಿಗೂ ಅಳೆಯಲು ನನಗೆ ಸಾಧ್ಯವಾಗಿಲ್ಲ ಎನ್ನುತ್ತಿದ್ದಂತೆ ತೇಜಸ್ವಿನಿ ಅನಂತಕುಮಾರ್ ಹನಿಗಣ್ಣಾದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಮ್ಮು ಹೆಚ್ಚಾಗಿದ್ದರಿಂದ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಕ್ಯಾನ್ಸರ್ ಕಾಣಿಸಿಕೊಂಡಿರುವುದು ಗೊತ್ತಾಯಿತು. ಆಗ ಸ್ವಲ್ಪವೂ ವಿಚಲಿತರಾಗದ ಅವರು ನನಗೆ ಇನ್ನೆಷ್ಟು ಸಮಯ ಇದೆ? ನಾನು ಯಾವೆಲ್ಲಾ ಕೆಲಸ ಮಾಡಬಹುದು ಎಂದು ವೈದ್ಯರನ್ನು ಪ್ರಶ್ನಿಸಿದರು. ಕೊನೆಯ ನಾಲ್ಕು ದಿನಗಳನ್ನು ಹೊರತುಪಡಿಸಿದರೆ ಉಳಿದಂತೆ ಅವರ ಜೀವನ ತೆರೆದ ಪುಸ್ತಕದಂತೆ.
ಎಂದಿಗೂ ಸುಳ್ಳು ಹೇಳದ ಅವರು ನಮಗೂ ಸುಳ್ಳು ಹೇಳಲು ಬಿಡುತ್ತಿರಲಿಲ್ಲ. ಕೊನೆಯ ದಿನಗಳಲ್ಲಿ ಎಲ್ಲರಿಗೂ “ಹುಷಾರಾಗಿದ್ದೇನೆ’ ಎಂಬುದಾಗಿ ಅನಿವಾರ್ಯವಾಗಿ ಸುಳ್ಳು ಹೇಳಿದ್ದರು. ಆಸ್ಪತ್ರೆಗೆ ಸೇರಿದಾಗ ನನ್ನನ್ನು ಕೆಲಸ ಮಾಡುವ ಸ್ಥಿತಿಯಲ್ಲಿ ನೋಡಬೇಕೆ ಹೊರತು ಅನಾರೋಗ್ಯಕ್ಕೆ ಒಳಗಾಗಿರುವ ಸ್ಥಿತಿಯಲ್ಲಿ ಯಾರೂ ನನ್ನನ್ನು ನೋಡುವುದು ಬೇಡ ಎಂದಿದ್ದರು ಎಂದು ಕಣ್ಣೀರು ಹಾಕುತ್ತಲೇ ಸ್ಮರಿಸಿದರು.
ಅನಂತ ಚಿತ್ರ ನಮನ: ಅನಂತ ಕುಮಾರ್ ಅವರ ಬಾಲ್ಯದಿಂದ ಕೇಂದ್ರ ಸಚಿವರಾಗಿ ನೀಡಿರುವ ಅತ್ಯುನ್ನತ ಕೊಡುಗೆವರೆಗಿನ ಎಲ್ಲ ಪ್ರಮುಖ ಘಟನಾವಳಿಗಳು, ಅಪರೂಪದ ಸಂದರ್ಭ, ಕ್ಷಣಗಳ ಛಾಯಾಚಿತ್ರ ಪ್ರದರ್ಶನ ಕೂಡ ಆಯೋಜನೆಯಾಗಿತ್ತು. ಸುಮಾರು 500ಕ್ಕೂ ಹೆಚ್ಚು ಚಿತ್ರ ಸಂಗ್ರಹದಲ್ಲಿ ಸಾಕಷ್ಟು ಚಿತ್ರಗಳು ಅಪರೂಪವೆನಿಸಿದ್ದವು. ಸಾರ್ವಜನಿಕರ ಬಳಿಯೂ ಅಪರೂಪದ ಚಿತ್ರಗಳಿದ್ದರೆ 89046 23967 ಮೊಬೈಲ್ ಸಂಖ್ಯೆಯ ವಾಟ್ಸ್‌ಆ್ಯಪ್‌ಗೆ ಕಳುಹಿಸಬಹುದು ಎಂದು ಅದಮ್ಯ ಚೇತನ ಸಂಸ್ಥೆ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ
Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.