ಕತೆ: ರೋಡ್ ಕ್ಲಿಯರ್
Team Udayavani, Dec 2, 2018, 6:00 AM IST
ರಘು ಲಗುಬಗೆಯಿಂದ ಬಸ್ಸೇರಿ, ಕಿಟಕಿ ಪಕ್ಕದ ಸೀಟು ಹಿಡಿದು, ಗ್ಲಾಸು ಸರಿಸಿ ಗಾಳಿ ಬರಮಾಡಿಕೊಂಡು ವಿಶ್ರಮಿಸತೊಡಗಿದ. ರಘುವಿಗೆ ಮಾರನೆಯ ದಿನ ಬೆಳಿಗ್ಗೆ ಬೆಂಗಳೂರಿನಲ್ಲಿ ಪ್ರಮೋಷನ್‌ಗಾಗಿ ಆ್ಯಪ್ಟಿಟ್ಯೂಡ್ ಟೆಸ್ಟ್ ನಡೆಯುವುದರಲ್ಲಿತ್ತು. ನೌಕರಿಯಲ್ಲಿ ಹತ್ತು ವರ್ಷದ ಸೇವೆ ಪೂರೈಸಿರುವ ರಘುವಿಗೆ ಪ್ರಮೋಷನ್ ಆ್ಯಪ್ಟಿಟ್ಯೂಡ್ ಟೆಸ್ಟ್ ಅಷ್ಟೇನೂ ಗಂಭೀರವಾದ ವಿಚಾರವಾಗಿಲ್ಲದಿದ್ದರೂ, ಅಭ್ಯಾಸ ಬಲದಂತೆ ಪರೀಕ್ಷೆಯೆಂದೊಡೆ ಅದೇನೋ ಭಯ, ಹಿಂಜರಿಕೆ, ಆತಂಕ. ಒಳಗೊಳಗೆ ದುಗುಡ. ಸಣ್ಣದೊಂದು ಚಡಪಡಿಕೆಯೊಂದಿಗೇನೇ ಕುಳಿತಿರುವಾಗ, ಪಕ್ಕದ ಸೀಟಿನಲ್ಲಿ ದಢೂತಿ ಅಸಾಮಿಯೊಬ್ಬರು ಆಸೀನರಾದರು. ರಘು ಸಹ ಪ್ರಯಾಣಿಕನತ್ತ ತಿರುಗಿ ನೋಡಿದ. “”ಓಹ್! ಸದಾನಂದ ಪದಕಿ, ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್, ಸ್ವಲ್ಪ ಬುದ್ಧಿವಾದ ಹೇಳುವುದು ಜಾಸ್ತಿಯಂತಲೇ ಆ ದಿನಗಳಲ್ಲಿ ಖ್ಯಾತರಾದವರು. ಈಗ ರಿಟೈರ್ ಆಗಿರಬೇಕು. ಕೂದಲು ಕೆನೆಬಣ್ಣಕ್ಕೆ ತಿರುಗಿದೆ. ಶರೀರದಲ್ಲಿ ಬೊಜ್ಜು ಧಾರಾಳವಾಗಿ ಶೇಖರಣೆಯಾಗಿದೆ. ರಘು ಯೋಚಿಸುತ್ತಲೇ ಮಾತಿಗಿಳಿದ.
“”ನಮಸ್ತೆ ಸಾರ್, ನೀವು ಪದಕಿಯವ್ರಲ್ವಾ? ನಾನು ರಘು… ನಿಮ್ಮ ಕಾಲೇಜಿನಲ್ಲಿ ಪಿಯುಸಿ ಓದಿ¤ದ್ದೆ. ನೆನಪಾಗಲಿಲ್ವಾ? ರಘುನಂದನ್”
ರಘು ತನ್ನನ್ನು ಪ್ರೊಫೆಸರ್‌ರಿಗೆ ಪರಿಚಯಿಸಿಕೊಂಡ.
“”ಪರಿಚಯ ಇಲ್ದೇ ಏನು, ನೋಡೋಕೆ ಹಾಗೇ ಇದೀಯಾ. ಹ್ಯಾಗಿದೀಯಪ್ಪಾ , ಏನ್ಮಾಡ್ಕೊಂಡಿದೀಯಾ, ಬೆಂಗಳೂರಿಗೆ ಹೊರಟ್ಯಾ?”
ಪ್ರೊಫೆಸರ್ ಪ್ರಶ್ನೆಗಳ ಮಳೆ ಸುರಿಸಿದರು.
“”ಹಾnಂ… ನಾ ಚೆನ್ನಾಗಿದೀನಿ. ಇದೇ ಊರ್ನಲ್ಲಿ ಆಶಿಯಾನಾ ಹೌಸಿಂಗ್ ಫೈನಾನ್ಸ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರಾಗಿದೀನಿ. ನಾಳೆ ಬೆಂಗಳೂರಿನಲ್ಲಿ ಪ್ರಮೋಷನ್ ಆ್ಯಪ್ಟಿಟ್ಯೂಡ್ ಟೆಸ್ಟ್ ಇದೆ…”
“”ಓಹ್, ಹೀಗೋ ಸಮಾಚಾರ, ಗುಡ್, ಆಲ್ದ ಬೆಸ್ಟ್ . ಹ್ಯಾಗಿದೆ ತಯಾರಿ?”
“”ತಯಾರಿ ಬಗ್ಗೆ ಯಾಕೆ ಕೇಳ್ತೀರಾ ಸಾರ್, ಕಾಲೇಜು ಬಿಟ್ಟ ಮೇಲೆ ಈ ಸ್ಟಡಿ, ಎಕ್ಸಾಮು ಇದಕ್ಕೆಲ್ಲಾ ಮನಸ್ಸಿನಲ್ಲಿ ಫ್ರಿಫರೆನ್ಸ್ ಇರಲ್ಲ. ಹಾಗಾಗಿ, ತಯಾರಿನೂ ಸಾಧಾರಣ. ಅಷ್ಟೇನೂ ಕಾನ್ಫಿಡೆನ್ಸಿಲ್ಲ…”
“”ಛೇ! ಪರೀಕ್ಷೆ ಬರೆಯೋಕೆ ಹೊರಟು, ತಯಾರಿ ಇಲ್ಲ, ಕಾನ್ಫಿಡೆನ್ಸಿಲ್ಲ , ಏನಾಗುತ್ತೋ ಆಗ್ಲಿ , ಹೀಗೆಲ್ಲಾ ಅಂದ್ರೆ ಹ್ಯಾಗೆ ರಘು? ಎಕ್ಸಾಮ್ ತಗೊಂಡ ಮೇಲೆ ಸಿನ್ಸಿಯರಾಗಿ ವರ್ಕ್ ಮಾಡ್ಬೇಕು. ಪರೀಕ್ಷೆನ ಪಾಸು ಮಾಡಬೇಕು, ಬಡ್ತೀನೂ ತಗೋಬೇಕು.”
ಪ್ರೊಫೆಸರರ ಪ್ಲೇಟು ಪ್ರಾರಂಭವಾಗುತ್ತಿರುವುದನ್ನು ಗಮನಿಸಿದ ರಘು, ವಿಷಯಾಂತರಿಸಲು ಪ್ರಯತ್ನಿಸಿದ.
“”ಸಾರ್, ಈಗ್ಗೆ ಕೆಲವು ದಿವಸದಿಂದ ವಿಪರೀತ ಮಳೆ ಆಗಿದೆಯಲ್ವಾ?” ವಿಷಯಾಂತರಿಸುವ ರಘುವಿನ ಯತ್ನ ವಿಫಲವಾದೆಂತೆನಿಸಿತು.
“”ಊಂ… ಅಂದ್ರೆ ಮಳೆ ಕಾರಣಕ್ಕೆ ನಿನಗೆ ಸ್ಟಡಿಯಲ್ಲಿ ಉದಾಸೀನ ಬಂತು ಅನ್ನು” ಪದಕಿಯವರ ಪ್ರಶ್ನೆ.
“”ಛೇ… ಛೇ… ಮಳೆಯ ಕಾರಣವಲ್ಲ ಸಾರ್, ನನ್ನ ಹೆಂಡತಿಯ ಅಪ್ಪ ಊರಿಂದ ನಮ್ಮನೆಗೆ ಬಂದಿದ್ದರು. ಮಳೆಯ ಕಾರಣದಿಂದ ಅವರಿಗೆ ಅಸ್ತಮಾ ಪ್ರಾರಂಭವಾಯ್ತು. ಕಳೆದ ತಿಂಗಳೆಲ್ಲ ಮಾವನ್ನ ಆಸ್ಪತ್ರೆಗೆ ಸೇರಿಸ್ಕೊಂಡು ಅಲೆದಾಡೊದೇ ಆಯ್ತು. ಅದಕ್ಕೆ ಮೊದುÉ ನನ್ನ ಎರಡೂ ಮಕ್ಕಳಿಗೆ ಆ್ಯನ್ಯೂವಲ್ ಎಕ್ಸಾಂ. ಅವರನ್ನ ಪರೀಕ್ಷೆಗೆ ತಯಾರು ಮಾಡೋದ್ರಲ್ಲೇ ಸಮಯ ಕಳೀತು. ಇದೀಗ ನನ್ಹೆಂಡ್ತಿ ಅಪ್ಪನನ್ನು ಜೊತೆಯಲ್ಲಿ ಕರೆದುಕೊಂಡು ಊರಿಗೆ ಹೋಗಿದ್ದಾಳೆ. ಹೆಂಡತಿ ಊರ್ನಲ್ಲಿ ಇಲ್ಲದಿರುವಾಗ ಮನೆ ಜವಾಬ್ದಾರಿ ಜಾಸ್ತೀನೇ ತಾನೇ? ಈ ಜಂಜಾಟದಲ್ಲಿ ನನ್ನ ಪ್ರಮೋಷನ್ ಟೆಸ್ಟ್‌ಗೆ ಹ್ಯಾಗೆ ಪುರುಸೊತ್ತು ಮಾಡ್ಕೊಳಿÉ ಸಾರ್?”
ರಘು ಮನೆಯ ಪರಿಸ್ಥಿತಿಯ ವರದಿ ಒಪ್ಪಿಸಿದ.
“”ಈ ಕುಂಟು ನೆಪಗಳೆಲ್ಲ ನಿನಗೆ ಸರಿಹೊಂದೋಲ್ಲ ರಘು. ಕಾಲೇಜು ಕಲಿಯುವಾಗ ಪರಿಸರದಲ್ಲಿ ಓದಲು, ಅಧ್ಯಯನ ಮಾಡಲು ಒತ್ತಡವಿರುತ್ತದೆ. ಓದುತ್ತೀರಾ. ನೌಕರಿ ಸೇರಿದ ನಂತರ ಈ ಒತ್ತಡವಿರುವುದಿಲ್ಲ. ಅಲ್ಲಿಗೆ ಓದುವ ಹಠ, ಆಸಕ್ತಿ ನಿಂತುಹೋಗುತ್ತದೆ. ಅಂದರೆ, ನೀನು ಹೊರಗಿನ ವಾತಾವರಣ ನಂಬಿಕೊಂಡೇ ಬದುಕುವವನು ಎಂದರ್ಥವಾಯಿತು. ಇನ್ನೂ ಕೆಲವರಿರುತ್ತಾರೆ, ಹೊರಗಿನ ಪರಿಸ್ಥಿತಿ ಹೇಗೆಯೇ ಇದ್ದರೂ, ತಾವು ಬಯಸಿದ್ದನ್ನು ಸಾಧಿಸುತ್ತ ಸಾಗುವವರು, ಅಂದ ಹಾಗೆ, ನಿನ್ನ ಆಫೀಸಿನಲ್ಲೂ ಈ ಪ್ರಮೋಷನ್ ಟೆಸ್ಟ್ ಪಾಸು ಮಾಡಿದವರು ಇರಬೇಕಲ್ಲವೇ?”
“”ಓ… ಯಾಕಿಲ್ಲ, ಅಂತಹ ಪುಣ್ಯವಂತರೂ ಸಾಕಷ್ಟಿದ್ದಾರೆ”
“”ರಘು, ಪುಣ್ಯ, ಅದೃಷ್ಟ, ಹಣೆಬರಹ ಇವೆಲ್ಲಾ ಕೈಲಾಗದವರ ಮಾತು. ನೀನು ಅವುಗಳನ್ನು ನಂಬಬೇಡ. ಹೊರಗಿನ ಪ್ರೇರಣೆಗೆ ಕಾಯಬೇಡ. ಇದನ್ನು ಸೈಕಾಲಜಿಯಲ್ಲಿ ಲೋಕಸ್ ಆಫ್ ಕಂಟ್ರೋಲ್ ಅಂತ ಗುರುತಿಸಿದ್ದಾರೆ. ಹೊರಗಿನ ವಾತಾವರಣಕ್ಕೆ ವಶವಾಗಿರುವುದನ್ನು ಎಕ್ಸಟರ್ನಲ್ ಲೋಕಸ್ ಆಫ್ ಕಂಟ್ರೋಲಂತಲೂ, ನಮ್ಮದೇ ಸಾಮರ್ಥ್ಯ, ಇಚ್ಛಾಶಕ್ತಿ, ಮನೋದಾಡ್ಯì, ಸ್ಥೈರ್ಯದ ನಿಯಂತ್ರಣದಲ್ಲಿರುವುದನ್ನು ಇಂಟರ್ನಲ್ ಲೋಕಸ್ ಆಫ್ ಕಂಟ್ರೋಲ್ ಅಂತಲೂ ಅಂತಾರೆ. ಸಾಧಕರೂ ಸದಾ ತಮ್ಮದೇ ಸಾಮರ್ಥ್ಯ-ಪರಿಶ್ರಮ ನಂಬಿ ಕೆಲಸ ಮಾಡುತ್ತಾರೆ. ಹೊರಗಿನ ಪರಿಸ್ಥಿತಿಯನ್ನು ಅವಲಂಬಿಸುವವನು ಮೂರ್ಖನೇ ಸರಿ”
ಬಸ್ಸು ಚಲಿಸುತ್ತಲಿತ್ತು. ನಿಧಾನವಾಗಿ ಕತ್ತಲಾವರಿಸತೊಡಗಿತ್ತು.
ಯಥಾಪ್ರಕಾರ ಪ್ರೊಫೆಸರರ ಉಪನ್ಯಾಸ ಮುಂದುವರಿಯಿತು.
“”ರಘೂ, ಪರಿಶ್ರಮ ಬೇಕು, ಛಲಬೇಕು ಹಠಬೇಕು…”
“”ಸಾರ್, ಹಾಗಂತ ನನ್ನ ಮಾವನವರನ್ನು ನೋಡ್ಕೊಳೆªàನೇ ಇರೋದಕ್ಕೆ ಸಾಧ್ಯವಿತ್ತಾ? ಆಸ್ಪತ್ರೆಗೆ ಹೋಗೆªàನೇ ಇರ್ಬೇಕಾಗಿತ್ತಾ? ಅದಕ್ಕೆಲ್ಲಾ ಸಮಯವಂತೂ ಅಗತ್ಯವಿತ್ತಲ್ವಾ?”
“”ಓಹ್, ನೀನು ಮತ್ತೆ ಹೇಡಿಯಂತೆ ಮಾತಾಡ್ತಾ ಇದೀಯಾ. ಯಾವಾಗಲೂ ನಿನ್ನ ದೌರ್ಬಲ್ಯವನ್ನೇ ಸಮರ್ಥನೆ ಮಾಡ್ಕೊಂಡ್ರೆ, ಸಕ್ಸಸ್ ಸಿಗುತ್ತಾ? ಹೊರಗಿನ ವಾತಾವರಣ ಯಾವಾಗಲೂ, ನಾವು ಒಂದು ಹೆಜ್ಜೆ ಮುಂದಿಟ್ರೆ, ಎರಡು ಹೆಜ್ಜೆ ಹಿಂದೆಳೆಯುವಂತೆಯೇ ಇರುತ್ತದೆ. ಸಂಕಲ್ಪ ದೃಢವಾಗಿರುವವನು ಅದನ್ನ ಮೆಟ್ಟಿ ನಿಲ್ಲುತ್ತಾನೆ ಎಂಬುದನ್ನು ನಾ ನಿನಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತಿದ್ದೇನೆ…”
ಬಸ್ಸು ತಿರುವುಗಳಲ್ಲಿ ಮೇಲೇರತೊಡಗಿತು. ಪ್ರೊಫೆಸರ್ ಹೊಸದೊಂದು ಉಪಖ್ಯಾನ ಪ್ರಾರಂಭಿಸಿದರು.
“”ರಘೂ, ನನ್ನ ಬದುಕಿನಲ್ಲಿ ನಾನ್ಯಾವತ್ತೂ ಹೊರಗಿನ ಬೆಂಬಲಕ್ಕಾಗಿ, ಸಹಕಾರಕ್ಕಾಗಲೀ ಕಾದಿಲ್ಲ. ಪರಿಸರದ ಅನಾನುಕೂಲಕ್ಕೆ ಅಂಜಿದವನಲ್ಲ. ವಿಧಿಯಾಟವೆಂದು ಅಲವತ್ತುಕೊಂಡವನಲ್ಲ. ನಮ್ಮ ತಾಯಿ ಮುಸುರೆ ತಿಕ್ಕಿದವಳು. ನನ್ನಪ್ಪ ಹೊಟೇಲಿನಲ್ಲಿ ಟೇಬಲ್ಲು ಒರೆಸಿದವ. ಅವರ ಮಗ ನಾನು ಪ್ರೊಫೆಸರಾದ ಕಥೆ ನಿನಗೆ ತಿಳಿದಿದೆಯಾ? ಸಾಹಸಿಗನ ಮಾರ್ಗದಲ್ಲಿ ಕಲ್ಲುಬಂಡೆಗಳೇ ಪಕ್ಕಕ್ಕೆ ಸರಿಯುವುದೆಂದು ನಿನಗೆ ಗೊತ್ತಿದೆಯೇ?”
ಕರ್ರರ್ರ… ಕರ್ರರ್… ಕರ್ರರ್- ಏನೋ ಸದ್ದು ಕೇಳಿಸಿತು.
“”ಓಹ್… ಡ್ರೈವರ್ ಬಸ್ಸು ನಿಲ್ಲಿಸಿದ” ಪ್ರಯಾಣಿಕನೊಬ್ಬನೆನ್ನುತ್ತಿದ್ದ.
“”ಮುಂದೆ ದಾರಿ ಇಲ್ಲವಂತೆ. ದಾರಿಯಲ್ಲಿ ಭೂಕುಸಿತವಂತೆ” ಮಗದೊಬ್ಬ.
“”ಅಯ್ಯೋ ದೇವ್ರೆ, ಈ ಘಾಟಿಯಲ್ಲಿ ಮಧ್ಯರಾತ್ರಿ ಹೀಗಾದ್ರೆ?” ಹೆಂಗಸೊಬ್ಬಳು ಆತಂಕ ವ್ಯಕ್ತಪಡಿಸುತ್ತಿದ್ದಳು.
“”ಮಳೆ ಸುರೀತಾ ಇರೋದ್ರಿಂದ, ರಾತ್ರಿ ರೋಡ್ ಕ್ಲಿಯರ್ ಆಗೋಲ್ವಂತೆ. ಕೆಲ್ಸ ಶುರುವಾಗೋದು ಬೆಳಿಗ್ಗೇನೆ ಅಂತೆ” ಇನ್ನೊಬ್ಬನ ಉದ್ಗಾರ.
“”ಸಾರ್, ನಾವು ಖಂಡಿತ ನಾಳೆ ಬೆಳಿಗ್ಗೆ ಹೊತ್ತಿಗೆ ಬೆಂಗಳೂರು ತಲಪಲ್ಲ. ಮತ್ತೆ ನನ್ನ ಪ್ರಮೋಷನ್ ಟೆಸ್ಟೂನೂ ಈ ಬಾರಿ ಅಟೆಂಡ್ ಮಾಡಲ್ಲ”
“”ಊಂ” ಪ್ರೊಫೆಸರ್ ತಲೆತಗ್ಗಿಸಿ ಹೂಗುಟ್ಟಿದರು.
“”ಈಗ ಹೇಳಿ ಸರ್, ಸಕ್ಸಸ್‌ನಲ್ಲಿ ಅದೃಷ್ಟದ ಪಾತ್ರವೂ ಇದೆ ಅಲ್ವಾ?” ರಘು ಪ್ರಶ್ನಿಸಿದ.
ಪ್ರೊಫೆಸರ್ ಮೌನಿಯಾಗಿ ಕುಳಿತಿದ್ದರು.
ಕೇವೀಟಿ ಮೇಗೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.