ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಿ ಹೋರಾಟಕ್ಕೆ ಸಿದ್ಧತೆ
Team Udayavani, Dec 4, 2018, 1:55 AM IST
ವಿಶೇಷ ವರದಿ : ಕುಂದಾಪುರ: ಕರ್ನಾಟಕದ ಮೀನಿಗೆ ಗೋವಾ ಸರಕಾರ ಹೇರಿರುವ ನಿಷೇಧವನ್ನು ತೆರವು ಮಾಡುವ ಸಂಬಂಧ ರಾಜ್ಯ ಸರಕಾರ ಗಂಭೀರ ಪ್ರಯತ್ನ ಮಾಡದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಮೀನುಗಾರರು ಮೀನುಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಕರಾವಳಿ ಭಾಗದ ಶಾಸಕರು, ಸಂಸದರ ನಿಯೋಗ ಗೋವಾಕ್ಕೆ ತೆರಳಿ ಮಾತುಕತೆ ನಡೆಸಿ ಬಂದರೂ ಮೀನಿನ ಆಮದಿಗೆ ಹೇರಿದ ನಿಷೇಧವನ್ನು ತೆರವು ಮಾಡಿಲ್ಲ. ಅದಲ್ಲದೆ ಮೀನಿನ ಸಾಗಾಟ ವಾಹನಗಳಿಗೆ ವಿಧಿಸಿರುವ ಎಫ್ಡಿಎ ನಿಯಮವನ್ನು ಸಡಿಲಗೊಳಿಸಿಲ್ಲ. ಇನ್ನು ರಾಜ್ಯ ಸರಕಾರ ಮಾತಕತೆಗೆ ಮುಂದಾಗುವ ಬದಲು ಕೇವಲ ಒಂದು ಪತ್ರ ಬರೆದು ಕೈ ಕಟ್ಟಿ ಕುಳಿತಿದೆ. ಈ ಹಿನ್ನೆಲೆ ಈಗ ಸರಕಾರವನ್ನು ಎಚ್ಚರಿಸುವ ಸಲುವಾಗಿ ಮೀನುಗಾರರು ಸಂಘಟಿತ ಹೋರಾಟಕ್ಕೆ ಮುಂದಾಗಿದ್ದಾರೆ. ಉತ್ತರ ಕನ್ನಡದ ಕಾರವಾರದಿಂದ ಈ ಹೋರಾಟದ ಕಿಡಿ ಆರಂಭವಾಗಿದ್ದು, ಇದಕ್ಕೆ ಮಂಗಳೂರು, ಮಲ್ಪೆ, ಹೆಜಮಾಡಿ, ಗಂಗೊಳ್ಳಿ, ಬೈಂದೂರು ಸಹಿತ ರಾಜ್ಯದ ಎಲ್ಲ ಕಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.
ರಾಸ್ತಾ ರೋಕೋ
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಬಂದರುಗಳಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ, ತಮ್ಮ ಬೇಡಿಕೆ ಈಡೇರಿಸುವ ಸಲುವಾಗಿ ಮೀನುಗಾರರು ಹೆದ್ದಾರಿ ರೋಕೋ ಮಾಡಲು ಮುಂದಾಗಿದ್ದಾರೆ.
ಮೀನುಗಾರಿಕೆ ಸ್ಥಗಿತಗೊಂಡರೆ ಕೋಟ್ಯಂತರ ರೂ. ನಷ್ಟ
ಒಂದು ವೇಳೆ ರಾಜ್ಯಾದ್ಯಂತ ಕನಿಷ್ಟ ಒಂದು ದಿನ ಮೀನುಗಾರಿಕೆ ಸ್ಥಗಿತಗೊಂಡರೂ ಇದು ಸೀಸನ್ ಆಗಿರುವುದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಪ್ರಮುಖ ಬಂದರುಗಳಾದ ಮಲ್ಪೆ, ಮಂಗಳೂರು, ಕಾರವಾರಗಳಲ್ಲಿ ದಿನವೊಂದಕ್ಕೆ ಕೋಟ್ಯಂತರ ರೂ. ವಹಿವಾಟು ನಡೆಯುತ್ತವೆೆ. ಇದರಿಂದ ರಾಜ್ಯದ ಬೊಕ್ಕಸಕ್ಕೂ ಆದಾಯ ಬರುತ್ತಿದೆ.
ಸಂಪೂರ್ಣ ಸಹಕಾರ
ಅಲ್ಲಿನ ಉನ್ನತ ಅಧಿಕಾರಿಗಳು, ಪ್ರಮುಖ ಸಚಿವರ ಜತೆ ನಾವು ಮಾತಕತೆ ಮಾಡಿ ಬಂದ ಬಳಿಕವೂ ನಿಷೇಧ ತೆರವು ಆಗಿಲ್ಲ. ಈ ಹಿನ್ನೆಲೆಯಲ್ಲಿ ಉ. ಕನ್ನಡ ಮೀನುಗಾರರು ಮೀನುಗಾರಿಕೆ ಸ್ಥಗಿತಗೊಳಿಸಿ, ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕರಾವಳಿ ಮೀನುಗಾರರ ಬೆಂಬಲ ಹಾಗೂ ಸಂಪೂರ್ಣ ಸಹಕಾರವಿದೆ.
– ಸತೀಶ್ ಕುಂದರ್, ಅಧ್ಯಕ್ಷರು, ಮಲ್ಪೆ ಪರ್ಸೀನ್ ಮೀನುಗಾರರ ಸಂಘ
ಮಾತಕತೆ ನಡೆಸಲಾಗಿದೆ
ಮೀನುಗಾರಿಕೆ ಸ್ಥಗಿತಗೊಳಿಸಿ, ಹೋರಾಟ ಮಾಡುವ ಸಂಬಂಧ ಎಲ್ಲ ಮೀನುಗಾರರನ್ನು ಕರೆದು ಮಾತುಕತೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅಂತಿಮ ಚಿತ್ರಣ ಸಿಗಲಿದೆ. ಸರಕಾರಕ್ಕೆ ಕಠಿನ ಸಂದೇಶ ರವಾನಿಸುವ ಸಲುವಾಗಿ ಈ ಹೋರಾಟ ನಡೆಯಲಿದ್ದು, ಕರಾವಳಿಯ ಮೀನುಗಾರರ ಸಹಕಾರವನ್ನು ಕೂಡ ಕೇಳಿದ್ದು, ಅಲ್ಲಿಂದಲೂ ಬೆಂಬಲ ವ್ಯಕ್ತವಾಗಿದೆ.
– ಪುರುಷೋತ್ತಮ್ನಾಯಕ್, ಅಧ್ಯಕ್ಷರು, ಉ.ಕ.ಮೀನು ವ್ಯಾಪಾರಸ್ಥರ ಅಭಿವೃದ್ಧಿ ಸಂಘ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.