“ತ್ರಿ’ ರಾಜ್ಯ ಯಾತ್ರಿಗಳ ಯಾನಕ್ಕೆ ಕೇರಳದ “ಕಣ್ಣೂರು’ ಬೆಸುಗೆ
Team Udayavani, Dec 4, 2018, 11:18 AM IST
ಮಂಗಳೂರು ನಗರದಿಂದ ಸುಮಾರು 170 ಕಿ.ಮೀ. ದೂರದಲ್ಲಿ ನೆರೆಯ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದು ಲೋಕಾರ್ಪಣೆಗೆ ಸಿದ್ಧವಾಗಿದೆ. ಕೇರಳದಲ್ಲಿ ಇದು 4ನೇ ವಿಮಾನ ನಿಲ್ದಾಣ. ಕೇವಲ 120 ಕಿ.ಮೀ. ದೂರದ ಕಲ್ಲಿಕೋಟೆಯಲ್ಲಿ ಹಾಗೂ ಅದಕ್ಕಿಂತ ಸ್ವಲ್ಪ ದೂರದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹೊಸ ನಿಲ್ದಾಣ ಪ್ರತಿಸ್ಪರ್ಧಿಯಾಗುವುದೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ “ಉದಯವಾಣಿ’ ತಂಡದ್ದು. ಈ ಹಿನ್ನೆಲೆಯಲ್ಲಿ ತಂಡವು ಡಿ.9ರಂದು ಉದ್ಘಾಟನೆಗೊಳ್ಳುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಮಾಡಿರುವ ವಾಸ್ತವಿಕ ವರದಿ ಇಲ್ಲಿದೆ.
ಕಣ್ಣೂರು: ದೇಶದ 4ನೇ ಹಾಗೂ ದಕ್ಷಿಣ ಭಾರತದ ಅತಿದೊಡ್ಡ ರನ್‌ವೇಯೊಂದಿಗೆ ಕೇರಳದ ಉತ್ತರ ಭಾಗದಲ್ಲಿ ನಿರ್ಮಾಣಗೊಂಡಿ ರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಡಿ. 9ರಿಂದ ಕಾರ್ಯಾರಂಭಗೊಳ್ಳುತ್ತದೆ.
ನಗರದಿಂದ ಸುಮಾರು 27 ಕಿ.ಮೀ. ದೂರದಲ್ಲಿ ಮಟ್ಟನ್ನೂರು ಎಂಬ ಪಟ್ಟಣವಿದ್ದು, ಅಲ್ಲಿಂದ 2 ಕಿ.ಮೀ. ಅಂತರದಲ್ಲಿ ಏರ್‌ಪೋರ್ಟ್ ತಲೆಯೆತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಶೂನ್ಯದಿಂದ ಪ್ರಾರಂಭಿಸಿ ನಿರ್ಮಾಣಗೊಂಡ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಇದರದ್ದು. ಈ ವಿಮಾನ ನಿಲ್ದಾಣ ತಲುಪಲು, ಕಣ್ಣೂರು ನಗರದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಡಕ್ಕೆ ತಿರುಗಿ ಮುಂಡಿಯಾಡಿ ಮಾರ್ಗವಾಗಿ ಸುಮಾರು 45-50 ನಿಮಿಷ ಪ್ರಯಾಣಿಸಬೇಕು. ಸುಮಾರು ಐದಾರು ದೊಡ್ಡ ಗುಡ್ಡಗಳನ್ನು ಕಡಿದು ಸಮತಟ್ಟುಗೊಳಿಸಿ ನಿರ್ಮಿಸಿದ್ದು ಈ ನಿಲ್ದಾಣದ ವಿಶೇಷತೆ. ಅತಿ ಉದ್ದದ ರನ್ ವೇ ಹೊಂದಿದ್ದು, ಏರ್‌ಬಸ್ ಮಾದರಿಯ ದೊಡ್ಡ ಗಾತ್ರದ ವಿಮಾನಗಳೂ ಹಾರಾಟ ನಡೆಸಬಹುದು.
ಇಂಟಿಗ್ರೇಟೆಡ್ ಟರ್ಮಿನಲ್
ಈ ವಿಮಾನ ನಿಲ್ದಾಣದಲ್ಲಿ ಕೆಲವು ಅತ್ಯಾಧುನಿಕ ಸೇವೆಗಳಿವೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಮಾಡುವವರು ಒಂದೇ ಕಡೆ ಪ್ರವೇಶ ಪಡೆದು ಪ್ರಯಾಣಿಸಲು ಅತ್ಯಾಧುನಿಕ “ಇಂಟಿಗ್ರೇಟೆಡ್ ಟರ್ಮಿನಲ್’ ನಿರ್ಮಿಸಲಾಗಿದೆ. ಟರ್ಮಿನಲ್ ಕೆಳಭಾಗದಿಂದ “ಆಗಮನ’ ಹಾಗೂ ಮೇಲ್ಭಾಗದಿಂದ “ನಿರ್ಗಮನ’ದ ವ್ಯವಸ್ಥೆ ಇದೆ. ಗಂಟೆಗೆ 2 ಸಾವಿರ ಪ್ರಯಾಣಿಕರು ಬಂದು- ಹೋಗಲು ಮೂಲ ಸೌಕರ್ಯ ಕಲ್ಪಿಸಲಾಗಿದೆ. ಸೆಲ್ಫ್ ಬ್ಯಾಗೇಜ್ ಸೌಲಭ್ಯವಿದ್ದು, ಲಗೇಜ್ ತಪಾಸಣೆ ಸೇರಿದಂತೆ, ಹಲವು ಸೆಕ್ಯೂರಿಟಿ ಚೆಕ್ ಇನ್ ವ್ಯವಸ್ಥೆ ಆಟೊಮ್ಯಾಟಿಕ್ ಆಗಿ ನಡೆಯುತ್ತದೆ. ಸುಮಾರು 700ಕ್ಕೂ ಅಧಿಕ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿದೆ. ಜತೆಗೆ 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ದೊಡ್ಡ ಮಟ್ಟದ ಕಾರ್ಗೊ ಸೌಲಭ್ಯ ಸಿದ್ಧಗೊಳ್ಳುತ್ತಿದೆ.
22 ವರ್ಷಗಳ ಸತತ ಪರಿಶ್ರಮ
ಈ ನಿಲ್ದಾಣ ಅಂತಿಮ ಸ್ವರೂಪ ಪಡೆಯಲು ತೆಗೆದುಕೊಂಡ ಅವಧಿ ಬರೋಬ್ಬರಿ ಎರಡೂವರೆ ದಶಕ. ಯೋಜನೆಗೆ ಪ್ರಸ್ತಾವನೆ ಮಾಡಿದ್ದು 1996ರಲ್ಲಿ. ಆಗ ಕೇರಳದಲ್ಲಿ ಇ.ಕೆ. ನಾಯನಾರ್ ಮುಖ್ಯಮಂತ್ರಿ. 2010ರಲ್ಲಿ ಕಾಮಗಾರಿಗೆ ಶಿಲಾನ್ಯಾಸವಾಗಿತ್ತು. ಆದರೆ ರೈತರ ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ಸ್ಥಳೀಯ ಜನರು ಸಹಕರಿಸಿದ್ದಾರೆ. ಭವಿಷ್ಯದಲ್ಲಿ ಮೇಲ್ದರ್ಜೆಗೇರಿಸಲು ಅಥವಾ ರನ್‌ವೇ ವಿಸ್ತರಣೆಗೆ ಬೇಕಾದ ಭೂಮಿಯನ್ನು ಈಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಗಲ್ಫ್ ಗೆ ಹೆಚ್ಚು ಸೇವೆ
ಕಣ್ಣೂರು ಜಿಲ್ಲೆಯಲ್ಲಿ ಏರ್‌ಪೋರ್ಟ್ ಆಗಬೇಕೆನ್ನುವುದು ಕುವೈಟ್, ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಮಲಬಾರ್ ಭಾಗದ ಮಲಯಾಳಿಗರ ಬಹು ವರ್ಷಗಳ ಬೇಡಿಕೆ. ಏಕೆಂದರೆ ಆ ಭಾಗದಲ್ಲಿ ನೆಲೆಸಿರುವ 2ನೇ ಅತಿಹೆಚ್ಚು ಮಲಯಾಳಿಗರು ಉತ್ತರ ಮಲಬಾರ್ ಭಾಗದವರು. ಆ ಕಾರಣಕ್ಕಾಗಿಯೇ ಡಿ. 9ರಂದು ಕಣ್ಣೂರಿನಿಂದ ಮೊದಲ ವಿಮಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಅಬುಧಾಬಿಗೆ ಹಾರಾಟ ನಡೆಸಲಿದೆ. ಇಲ್ಲಿಂದ ದೋಹಾ, ಬಹ್ರೈನ್, ರಿಯಾದ್ ಸೇರಿದಂತೆ ಬಹುತೇಕ ಎಲ್ಲ ಕೊಲ್ಲಿ ದೇಶ ಸಂಪರ್ಕಿಸಲು ಏರ್ ಇಂಡಿಯಾ ಹಾಗೂ ಬೇರೆ ಏರ್‌ಲೈನ್ಸ್ ಸೇವೆ ಆರಂಭಿಸಲಿವೆ. ದೇಶೀಯ ಮಟ್ಟದಲ್ಲಿ ತಿರುವನಂತಪುರ, ದಿಲ್ಲಿ, ಬೆಂಗಳೂರು, ಮುಂಬಯಿ, ಹುಬ್ಬಳ್ಳಿ ನಗರಕ್ಕೆ ವಿಮಾನ ಸೇವೆ ಆರಂಭವಾಗಲಿದೆ. ಆದರೆ, ಅಂತಾರಾಷ್ಟ್ರೀಯ ವಿಮಾನಯಾನ ಕಂಪೆನಿಗಳ ವಿಮಾನಯಾನಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಅದಕ್ಕೆ ಅನುಮತಿ ಲಭಿಸಿದ ಕೂಡಲೇ ವಿದೇಶೀ ವಿಮಾನಗಳೂ ಹಾರಾಡಲಿವೆ.
ಕರ್ನಾಟಕದೊಂದಿಗಿನ ನಂಟು
ಈ ವಿಮಾನ ನಿಲ್ದಾಣ ಕೇರಳದಲ್ಲಿದ್ದರೂ ಕರ್ನಾಟಕದೊಂದಿಗೆ ಹತ್ತಿರದ ಸಂಬಂಧ ಹೊಂದಿದೆ. ಈ ನಿಲ್ದಾಣವನ್ನು ಮೊದಲು ಪ್ರಸ್ತಾವಿಸಿ ಯೋಜನೆಯನ್ನು ಅನುಮೋದನೆಗಾಗಿ ಕೇರಳ ರಾಜ್ಯ ಹಾಗೂ ಅಂದಿನ ಜನತಾದಳ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದವರು ಆಗಿನ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ, ಕರ್ನಾಟಕದವರೇ ಆದ ಸಿ.ಎಂ. ಇಬ್ರಾಹಿಂ. ಆಗ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರೂ ಒಪ್ಪಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಪ್ರಧಾನಿಯಾದ ಐ.ಕೆ. ಗುಜ್ರಾಲ್ ಅವರಿಂದ ಯೋಜನೆಗೆ ಪೂರಕ ಒಪ್ಪಿಗೆ ಪಡೆಯಲು ಇಬ್ರಾಹಿಂ ಅವರು ಪ.ಬಂಗಾಲದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಮೂಲಕ ಒತ್ತಡ ಹಾಕಿಸಿದ್ದರು. ಅಲ್ಲದೆ ಈ ನಿಲ್ದಾಣವು ಕೊಡಗಿನ ಮಡಿಕೇರಿ, ವಿರಾಜಪೇಟೆ, ಕುಶಾಲನಗರ ಮುಂತಾದ ಭಾಗದವರಿಗೆ ಹತ್ತಿರದಲ್ಲಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಜತೆಗೆ, ಇಲ್ಲಿನ ಕಾಫಿ, ಕಾಳು ಮೆಣಸು ರಫ್ತಿಗೂ ಅನುಕೂಲವಾಗುವ ಸಂಭವವಿದೆ.
ಯಾವ ಭಾಗದವರಿಗೆ ಅನುಕೂಲ?
ಪ್ರಮುಖವಾಗಿ ಕೇರಳದ ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲ. ಅದೇ ರೀತಿ, ಕರ್ನಾಟಕದ ಕೊಡಗು, ಮೈಸೂರು ಜಿಲ್ಲೆಯವರಿಗೂ ಹತ್ತಿರದಲ್ಲಿದೆ. ಕಣ್ಣೂರಿನಿಂದ ಕೊಡಗಿಗೆ 80 ಕಿ.ಮೀ. ಹಾಗೂ ಮೈಸೂರಿಗೆ 160 ಕಿ.ಮೀ. ದೂರವಿದೆ. ತಮಿಳುನಾಡಿನ ಸೇಲಂ ಮತ್ತು ನೀಲಗಿರೀಸ್ ಜಿಲ್ಲೆ ಪ್ರಯಾಣಿಕರಿಗೂ ಈ ನಿಲ್ದಾಣ ಹತ್ತಿರ. ಒಟ್ಟು 3 ರಾಜ್ಯಗಳ ಗಡಿ ಜಿಲ್ಲೆಗಳ ಜನರಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಈ ನಿಲ್ದಾಣವಿದೆ.
*2300 ಕೋಟಿ ರೂ. ಒಟ್ಟು ವೆಚ್ಚ
*2000 ಎಕರೆ ಭೂಮಿ ಸ್ವಾಧೀನ
*3050 ಪ್ರಸ್ತುತ ರನ್ ವೇ ಉದ್ದ
*4000 ಮೀಟರ್ ಗೆ ಶೀಘ್ರದಲ್ಲೇ ವಿಸ್ತರಣೆ
*ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ
*20 ವಿಮಾನಗಳ ನಿಲುಗಡೆಗೆ ಅವಕಾಶ
*24 ಚೆಕ್ ಇನ್ ಕೌಂಟರ್‌ಗಳ ನಿರ್ಮಾಣ
*16 ಇಮಿಗ್ರೇಷನ್ ಕೌಂಟರ್
*08 ಕಸ್ಟಮ್ಸ್ ಕೌಂಟರ್
*06 ಏರೋ ಬ್ರಿಜ್ (ಪ್ರಯಾಣಿಕರ ಆಗಮನ- ನಿರ್ಗಮನಕ್ಕೆ)
ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.