ಹನಿಟ್ರ್ಯಾಪ್‌ನಿಂದ ವಂಚಿಸಿದವರ ಸೆರೆ
Team Udayavani, Dec 5, 2018, 11:52 AM IST
ಬೆಂಗಳೂರು: ಅಡುಗೆ ಗುತ್ತಿಗೆ (ಕೇಟರಿಂಗ್) ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದ ತಾಯಿ, ಮಗಳು, ಅಳಿಯ ಸೇರಿ ಒಂದೇ ಕುಟುಂಬದ ನಾಲ್ವರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರದ ಬೇಬಿರಾಣಿ (39), ಈಕೆಯ ಪುತ್ರಿ ಶೀಬಾ ನಿವೇದಿತಾ ಅಲಿಯಾಸ್ ಪ್ರೀತಿ (23), ಅಳಿಯ ಮಣಿಕಂದನ್ (27) ಹಾಗೂ ಈತನ ಸಹೋದರ ಪ್ರಸಾದ್ (26) ಬಂಧಿತರು. ಆರೋಪಿಗಳು ಮತ್ತಿಕೆರೆ ನಿವಾಸಿ ಕೃಷ್ಣದಾಸ್ ಎಂಬುವರಿಂದ ಇದುವರೆಗೂ 73.55 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಕೃಷ್ಣದಾಸ್ ಅವರನ್ನು ಬೆದರಿಸಿ ನಕಲಿ ಎಫ್ಐಆರ್ ಸಹ ಸೃಷ್ಟಿಸಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣಗಳು, 11.70 ಲಕ್ಷ ರೂ. ನಗದು, ಮೂರು ಮೊಬೈಲ್‌ಗಳು, ಎರಡು ಕಾರು ಮತ್ತು ನಕಲಿ ಎಫ್ಐಆರ್‌ಗಳು ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹನಿಟ್ರ್ಯಾಪ್: ಪೀಣ್ಯದಲ್ಲಿ ಕೇಟರಿಂಗ್ ವ್ಯವಹಾರ ನಡೆಸುತ್ತಿರುವ ಕೃಷ್ಣದಾಸ್ ಮತ್ತಿಕೆರೆಯಲ್ಲಿ ಸ್ವಂತ ಮನೆ ಹೊಂದಿದ್ದು, ಕೆಲವು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಆಗಾಗ್ಗೆ ಬಾಡಿಗೆದಾರರೊಬ್ಬರ ಮನೆಗೆ ಬರುತ್ತಿದ್ದ ಆರೋಪಿ ಬೇಬಿರಾಣಿ, ಕೃಷ್ಣದಾಸ್ ಅವರನ್ನು ಪರಿಚಯಿಸಿಕೊಂಡಿದ್ದಾರೆ.
ಬಳಿಕ ಪುತ್ರನ ವಿದ್ಯಾಭ್ಯಾಸಕ್ಕೆಂದು 30 ಸಾವಿರ ರೂ. ಪತಿಯ ಚಿಕಿತ್ಸೆಗೆಂದು 2.75 ಲಕ್ಷ ರೂ. ಬ್ಯೂಟಿ ಪಾರ್ಲರ್ ತೆರೆಯಲು 3 ಲಕ್ಷ ರೂ. ಪಡೆದುಕೊಂಡಿದ್ದಾರೆ. ಎರಡು ತಿಂಗಳ ಬಳಿಕ ಮನೆ ಭೋಗ್ಯಕ್ಕೆ ಹಾಕಿಕೊಳ್ಳಲು ಮತ್ತೆ 3 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಕೃಷ್ಣದಾಸ್ ನಿರಾಕರಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಬೇಬಿರಾಣಿ, ಕೃಷ್ಣದಾಸ್ ಜತೆ ಇರುವ ಫೋಟೋ ಸೃಷ್ಟಿಸಿಕೊಂಡು ಫೋಟೋ ನಿಮ್ಮ ಪರಿವಾರಕ್ಕೆ ತೊರಿಸುವುದಾಗಿ ಬ್ಲಾಕ್‌ಮೇಲ್ ಮಾಡಿ 3 ಲಕ್ಷ ರೂ. ಸುಲಿಗೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.
ಕೆಲ ದಿನಗಳ ಬಳಿಕ ಕೃಷ್ಣದಾಸ್‌ಗೆ ಕರೆ ಮಾಡಿದ ಬೇಬಿರಾಣಿ ಹಣ ವಾಪಸ್ ಕೊಡುತ್ತೇನೆ. ನನ್ನ ಮನೆಗೆ ಬನ್ನಿ ಎಂದು ಕರೆಸಿಕೊಂಡಿದ್ದಾರೆ. ಈ ವೇಳೆ ಬೇಬಿರಾಣಿಯ ಪುತ್ರಿ ಶೀಬಾ ನಿವೇದಿತಾ ಇದ್ದರು. ಆ ವೇಳೆ ಮನೆಗೆ ಬಂದ ಪ್ರಸಾದ್ ಮತ್ತು ಮೂರ್ತಿ ಎಂಬುವರು ನಾವು ಮಫ್ತಿಯಲ್ಲಿರುವ ಪೊಲೀಸರು ಅಕ್ರಮ ಚಟುವಟಿಕೆ ನಡೆಸುತ್ತಿದ್ದೀರಾ ಎಂಬ ಮಾಹಿತಿ ಮೇಲೆ ದಾಳಿ ನಡೆಸಲಾಗಿದೆ. ಪ್ರಕರಣ ಮುಚ್ಚಿಹಾಕಲು ಹಣ ಕೊಡಬೇಕು ಎಂದು 2.50 ಲಕ್ಷ ರೂ. ವಸೂಲಿ ಮಾಡಿದ್ದಾರೆ.
ಪೊಲೀಸರ ಸೋಗಿನಲ್ಲಿ ಸುಲಿಗೆ: ಕೆಲ ದಿನಗಳ ಬಳಿಕ ಮತ್ತೂಮ್ಮೆ ಕೃಷ್ಣದಾಸ್‌ಗೆ ಕರೆ ಮಾಡಿದ ಬೇಬಿರಾಣಿ, ಮಗಳಿಗೆ ಮದುವೆ ಮಾಡಲು ಯುವಕನನ್ನು ಹುಡುಕುತ್ತಿದ್ದು ಮಾತನಾಡಲು ಮನೆಗೆ ಬರುವಂತೆ ಕರೆಸಿಕೊಂಡಿದ್ದಾರೆ. ಈ ವೇಳೆ ಅಳಿಯ ಮಣಿಕಂದನ್ ಅಲಿಯಾಸ್ ಪಟೇಲ್ ಬಾಬು ಹಾಗೂ ವೆಂಕಟೇಶ್ ಎಂಬುವರು ಮನೆಗೆ ನುಗ್ಗಿ ನಾವು ಕೊಡಿಗೇಹಳ್ಳಿ ಠಾಣೆಯ ಅಪರಾಧ ವಿಭಾಗದ ಪೊಲೀಸರು,
ಅಕ್ರಮ ಚಟುವಟಿಕೆ ನಡೆಸುತ್ತಿದ್ದೀರಾ ಎಂಬ ಮಾಹಿತಿ ಮೇಲೆ ದಾಳಿ ನಡೆಸಲಾಗಿದೆ. ಈ ವಿಚಾರವನ್ನು ಬಹಿರಂಗ ಪಡಿಸದಿರಲು 5 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಮಣಿಕಂದನ್ ಅಲಿಯಾಸ್ ಪಟೇಲ್‌ಬಾಬು, ಕೃಷ್ಣದಾಸ್‌ಗೆ ಕರೆ ಮಾಡಿ ಬೇಬಿರಾಣಿ ಮೃತಪಟ್ಟಿದ್ದು ಈ ಸಂಬಂಧ ಆಕೆ ಸಂಬಂಧಿಕರು ಕೊಡಿಗೇಹಳ್ಳಿ ಠಾಣೆ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದ್ದಾರೆ.
ನೀವು ಇಂತಿಷ್ಟು ಹಣ ನೀಡಿದರೆ ನಾವು ಅವರಿಗೆ ದೂರು ನೀಡದಂತೆ ಸೂಚಿಸುತ್ತೇವೆ ಎಂದು 17 ಲಕ್ಷ ರೂ. ಪಡೆದುಕೊಂಡಿದ್ದಾರೆ. ಬಳಿಕ ಇದೇ ವಿಚಾರವಾಗಿ ಪದೆ ಪದೇ ಕರೆ ಮಾಡಿ 20 ಲಕ್ಷ ರೂ.ವಸೂಲಿ ಮಾಡಿದ್ದಾನೆ. ಅಲ್ಲದೆ, ಪುತ್ರಿ ಶೀಬಾ ನಿವೇದಿತಾ ಕೂಡ ಕೃಷ್ಣದಾಸ್‌ಗೆ ಕರೆ ಮಾಡಿ ನಮ್ಮ ತಾಯಿ ಸಾವಿಗೆ ನೀವೇ ಕಾರಣ. ನಾನು ಈ ಕೂಡಲೇ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಹೆದರಿಸಿ 20 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಹೀಗೆ ನಾಲ್ವರು ಒಟ್ಟು 73.55 ಲಕ್ಷ ರೂ. ದೋಚಿದ್ದಾರೆಂದು ಪೊಲೀಸರು ತಿಳಿಸಿದರು.
ಪೊಲೀಸರು, ಜಡ್ಜ್ ಹೆಸರಿನಲ್ಲಿ ವಸೂಲಿ: ನ.16ರಂದು ಆರೋಪಿ ಮಣಿಕಂದನ್ ಕೃಷ್ಣದಾಸ್‌ಗೆ ಕರೆ ಮಾಡಿ ಬೇಬಿರಾಣಿ ಅವರ ಪ್ರಕರಣ ಮುಚ್ಚಿಹಾಕಲು 65 ಲಕ್ಷ ರೂ. ಕೊಡಬೇಕು. ಈ ಪೈಕಿ 25 ಲಕ್ಷ ರೂ. ಹಣವನ್ನು ನ್ಯಾಯಾಧೀಶರು, 40 ಲಕ್ಷ ರೂ. ಪೊಲೀಸರಿಗೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.
ಇದರಿಂದ ಆತಂಕಗೊಂಡ ಕೃಷ್ಣದಾಸ್ ಅಷ್ಟೊಂದು ಹಣ ನನ್ನ ಬಳಿ ಇಲ್ಲ. ಕಾಲವಕಾಶಕೊಡಿ ಎಂದು ಕೇಳಿದ್ದಾನೆ. ಬಳಿಕ ಆರೋಪಿಗಳ ನಿರಂತರ ಬ್ಲಾಕ್‌ಮೇಲ್‌ನಿಂದ ಅನುಮಾನಗೊಂಡ ಕೃಷ್ಣದಾಸ್ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿ: ಪೊಲೀಸರ ಸೋಗಿನಲ್ಲಿ ಲಕ್ಷಾಂತರ ರೂ. ವಸೂಲಿ ಮಾಡಿದ್ದ ಆರೋಪಿಗಳು, ಕೊಡಿಗೇಹಳ್ಳಿ ಠಾಣೆ ಹೆಸರಿನಲ್ಲಿ ನಕಲಿ ಎಫ್ಐಆರ್‌ಗಳನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಕೃಷ್ಣದಾಸ್ ಭಯಗೊಂಡು ಆರೋಪಿಗಳು ಬೇಡಿಕೆಯಂತೆ ಲಕ್ಷಾಂತರ ರೂ. ಹಣ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಲಕ್ಷಾಂತರ ರೂ. ಆಸ್ತಿ ಸಂಪಾದನೆ: ಆರೋಪಿಗಳು ಕೃಷ್ಣದಾಸ್ ಬಳಿ ಕೋಟ್ಯಂತರ ರೂ. ಆಸ್ತಿ ಇರುವುದನ್ನು ಗಮನಿಸಿಯೇ ಹಣ ವಸೂಲಿಗೆ ಸಿದ್ಧತೆ ನಡೆಸಿದ್ದರು. ಹೀಗಾಗಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆ. ಕೃಷ್ಣದಾಸ್‌ರಿಂದ ಪಡೆದ ಹಣದಿಂದ ಆರೋಪಿಗಳು ಕಾರುಗಳು ಹಾಗೂ ವಿದ್ಯಾರಣ್ಯಪುರ ಮತ್ತು ಯಲಹಂಕದಲ್ಲಿ ಎರಡು ಐಷಾರಾಮಿ ಮನೆಗಳನ್ನು ಕಟ್ಟಲು ಮುಂದಾಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.