ಹಗ್ಗ ಬಳಸದೆ, ಗಂಟು ಬಿಗಿಯದೆ ರಥ ನಿರ್ಮಾಣ!
Team Udayavani, Dec 6, 2018, 10:33 AM IST
ಸುಬ್ರಹ್ಮಣ್ಯ: ಹೂವಿನಂತೆ ಬೆತ್ತ ಸುರಿದು, ಯಾವುದೇ ಗಂಟುಗಳಿಲ್ಲದೆ, ಹಗ್ಗ ಬಳಸದೆ ಬೆತ್ತದಿಂದ ರಥ ರಚಿಸುವುದನ್ನು ನೋಡುವುದೇ ಒಂದು ಆನಂದ. ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ವೇಳೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ನಿವಾಸಿಗಳ ಕೈಚಳಕದಲ್ಲಿ ಬೆತ್ತದ ತೇರು ಸುಂದರ ಕಲಾಕೃತಿಯಂತೆ ನಿರ್ಮಾಣಗೊಳ್ಳುತ್ತಿದೆ.
ನಾಗರಾಧನೆಗೆ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಚಾಲನೆ ದೊರಕಿದೆ. ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರಿಂದ ಬೆತ್ತದ ರಥ ನಿರ್ಮಾಣ ನಡೆಯುತ್ತಿದೆ. ಲಕ್ಷದೀಪೋತ್ಸವದಂದು ಕಾಶಿಕಟ್ಟೆ ದೇಗುಲದ ಮುಂದೆ ಜನಪದೀಯ ಶೈಲಿಯಲ್ಲಿ ರಚಿಸುವ ಚಲಿಸಲಾಗದ ಗುರ್ಜಿ ರಥದಿಂದ ಹಿಡಿದು ಪಂಚಮಿ, ಬ್ರಹ್ಮರಥಗಳು ಮನಸೂರೆಗೊಳಿಸುತ್ತವೆ.
ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಶುಭಮುಹೂರ್ತದಲ್ಲಿ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡುತ್ತಾರೆ. ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತ ಸಂಗ್ರಹಿಸಿ, ಬ್ರಹ್ಮರಥವನ್ನು ಕಟ್ಟಲು ಆರಂಭಿಸುತ್ತಾರೆ. ನಾಡಿನ ಇತರೆ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಬಳಸಿ ಕೌಶಲಭರಿತವಾಗಿ ನಿರ್ಮಿಸುವುದು ವಿಶೇಷ.
ಭಾರೀ ಗಾತ್ರದ ಬೆತ್ತವನ್ನು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ರಚಿಸುತ್ತಾರೆ. ಇಲ್ಲಿ ಯಾವುದೇ ಗಂಟುಗಳನ್ನು ಹಾಕುವುದಿಲ್ಲ. ಬೆತ್ತವನ್ನು ಹೂವಿನಂತೆ ಪೋಣಿಸಿ ರಥವನ್ನು ಗಟ್ಟಿ ಮಾಡಲಾಗುತ್ತದೆ. ತೇರನ್ನೇರುವ ವೇಳೆ ರಥದ ಸುತ್ತ ಪತಾಕೆಗಳಿಂದ ಅಲಂಕರಿಸುತ್ತಾರೆ. ರಥ ನಿಮಾಣ ಕಾರ್ಯದಲ್ಲಿ ಯುವಕರು, ವೃದ್ಧರು ಉತ್ಸಾಹದಿಂದ ಭಾಗವಹಿಸುತ್ತಾರೆ. 20 ಯುವಕರು, 30 ಹಿರಿಯರ ಸಹಿತ 50 ಜನ ಬೆತ್ತದ ರಥ ನಿರ್ಮಿಸುತ್ತಿದ್ದಾರೆ.
ರೋಮಾಂಚನವಾಗುತ್ತಿದೆ
ಇಲ್ಲಿ ಅತ್ಯದ್ಭುತವಾಗಿ ರಥ ನಿರ್ಮಾಣ ಆಗುತ್ತಿದೆ. ಕೆಲಸ ನೋಡುವಾಗ ರೋಮಾಂಚನವಾಗುತ್ತಿದೆ. ಇಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯ ಬಂಧುಗಳು ಕರಗತ ಮಾಡಿಕೊಂಡು ಬಂದ ರಥ ನಿರ್ಮಾಣ ಕಲೆ ಅತ್ಯದ್ಭುತ ಎನ್ನುತ್ತಾರೆ ಕ್ಷೇತ್ರದ ಭಕ್ತ ಶ್ಯಾಮಬಸವಪ್ಪ ಬೀದರ್.
ಹಿರಿಯರಿಂದ ಬಂದಿದೆ
ಹಿಂದಿನಿಂದಲೂ ರಥ ನಿರ್ಮಾಣ ಕಾರ್ಯವನ್ನು ಮಾಡುತ್ತಿದ್ದೇವೆ. ಹಿರಿಯರು ಅನುಸರಿಸಿದ ಸಂಪ್ರದಾಯದಂತೆ ಕೌಶಲ ಬಳಸಿ ರಚಿಸುತ್ತಿದ್ದೇವೆ. ಸುಮಾರು 50 ಮಂದಿ ಹಿರಿಯ-ಕಿರಿಯರು ಸೇರಿ ನಿಗದಿತ ಸಮಯಕ್ಕೆ ರಥ ನಿರ್ಮಿಸಿಕೊಡುತ್ತೇವೆ.
-ಭಾಸ್ಕರ ಮಲೆಕುಡಿಯ,
ದೇಗುಲದ ನೌಕರ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.