ಸಾಂಸ್ಕೃತಿಕ ಉತ್ಸವದಲ್ಲಿ ರಂಜಿಸಿದ ನೃತ್ಯ ವೈಭವ
Team Udayavani, Dec 7, 2018, 6:00 AM IST
ಶ್ರೀ ಚಕ್ರ ನೃತ್ಯ ಸಾಂಸ್ಕೃತಿಕ ಆಕಾಡೆಮಿ (ರಿ.) ಎರ್ಮಾಳ್ ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ(ರಿ.) ಬೆಂಗಳೂರು ಇವರ ಜಂಟಿ ಆಯೋಜನೆಯಲ್ಲಿ ಸಾಂಸ್ಕೃತಿಕ ಉತ್ಸವ ಇತ್ತೀಚೆಗೆ ಎರ್ಮಾಳಿನ ಶ್ರೀ ರಾಜರಾಜೇಶ್ವರಿ ಸಭಾಭವನದಲ್ಲಿ ಜರಗಿತು. ಭರತ ನಾಟ್ಯ, ವಿವಿಧ ಶಾಸ್ತ್ರೀಯ ನೃತ್ಯ ವೈವಿದ್ಯಗಳು ನಡೆದವು. ವಿ| ಶುಭಾ ಶೇಷಾದ್ರಿ ನೀರುಮಾರ್ಗ ಅವರ ಶಿಷ್ಯ ತಂಡದ ಪುಟಾಣಿ ಹಾಗೂ ಯುವ ಕಲಾವಿದೆಯರಿಂದ ಕೂಡುವಿಕೆಯಿಂದ ನಡೆದ ನೃತ್ಯ ಪ್ರದರ್ಶನಗಳು ಕಲಾ ಆಸ್ವಾದಕರನ್ನು ತಲೆದೂಗುವಂತೆ ಮಾಡಿದವು.
ಬಾಲ ಪ್ರತಿಭೆ ಕು| ತನ್ವಿ ಅಭಿನಯಿಸಿದ, ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ..!
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ..!
ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ರಚನೆಯ ಹಾಡಿನ ನೃತ್ಯವು ನೋಡುಗರ ಮನಸೊರೆಗೊಂಡಿತು. ಹಾಗೆಯೇ ಇನ್ನೋರ್ವ ಪುಟಾಣಿ ನರ್ತಿಸಿದ, ಭಾಗ್ಯದ ಲಕ್ಷ್ಮೀ ಬಾರಮ್ಮ ನೃತ್ಯವು ಮೆಚ್ಚುಗೆಗೆ ಪಾತ್ರವಾಯಿತು. ನಂತರ ನಾಟಕುರಂಜಿ ರಾಗದ, ರೂಪಕ ತಾಳದಲ್ಲಿರುವ ಕನಕದಾಸರ ರಚನೆಯ ಕಿರ್ತನೆ,
ಬಾರೋ ಕೃಷ್ಣಯ್ಯ…ಕೃಷ್ಣಯ್ಯ,
ನಿನ್ನ ಭಕ್ತರ ಮನೆಗೀಗ..
ಬಾರೋ..ನಿನ್ನ ಮುಖ ತೋರೋ…
ನಿನ್ನ ಸರಿಯಾರೋ ಜಗಧಾರ ಶೀಲನೆ…!
ಸೊಗಸಾದ ಹಾಡಿಗೆ, ತಂಡದ ಕಲಾವಿದರ ನೃತ್ಯವು ವಿಕ್ಷಕರನ್ನು ಹಿಡಿದಿಟ್ಟುಕೊಂಡಿತು. ಸರಣಿ ನೃತ್ಯಗಳಲ್ಲಿ ಎಲ್ಲಾ ನೃತ್ಯಗಳು ಶಾಸ್ತ್ರೀಯವಾಗಿ ಮೂಡಿ ಬಂದವು. ನೃತ್ಯ ಪಟುಗಳ ಹೆಜ್ಜೆಗಾರಿಕೆ, ಮುಖವರ್ಣಿಕೆ, ಹಾವಭಾವ ಅಭಿವ್ಯಕ್ತಿಗಳು, ರೂಪಕಗಳಿಗೆ ನೈಜತೆ ನೀಡಿದವು.
ತಾರಾನಾಥ್ ಮೇಸ್ತ ಶಿರೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.