ನಂಬಿಕೆ, ಸನ್ನಿಧಾನ ಮತ್ತು ಸಂವಿಧಾನ
Team Udayavani, Dec 7, 2018, 6:00 AM IST
ಒಂದು ಮಂಡಲ ಕಾಲ ಅಂದರೆ 48 ದಿನಗಳ ಕಾಲ (41 ದಿನ ಎಂಬ ವ್ಯಾಖ್ಯಾನವೂ ಇದೆ.) ಕಠಿಣ ವ್ರತಾಚರಣೆ ಕೈಗೊಂಡು ಮನೆಯ ಸುಖ ಭೋಗಗಳನ್ನು ತ್ಯಜಿಸಿ ಕರಿಯ ಏಕವಸ್ತ್ರಧಾರಿಯಾಗಿ ಬ್ರಹ್ಮಚರ್ಯ ಪಾಲಿಸುತ್ತಾ ಮಿತಾಹಾರಿಯಾಗಿ ಬರಿಗಾಲಿನ ವೈರಾಗ್ಯ ಮೂರ್ತಿಯಾಗಿ ನಡೆದಾಡಿ ಅಯ್ಯಪ್ಪ ಭಜನೆಯಲ್ಲಿ ಕಳೆಯುವುದು ಸುಲಭದ ಮಾತಲ್ಲ. ಆದರೆ ಇರುಮುಡಿ ಎಂಬ ಪವಿತ್ರವಾದ ಕಟ್ಟನ್ನು ಕಟ್ಟಿ ಯಾತ್ರೆಯ ಅವಿಭಾಜ್ಯ ಅಂಗವೆನಿಸಿದ ವಿಧಿಯನ್ನು ಪೂರೈಸಲು ವ್ರತಾಚರಣೆ ಮಾಡಲೇಬೇಕು.
ದಾರಿ ದುರ್ಗಮ. ಯಾವುದೇ ಕ್ಷಣದಲ್ಲೂ ವಿಷಮಗೊಳ್ಳಬಹುದಾದ ಹವಾಮಾನ. ಬರಿಗಾಲ ನಡಿಗೆಯಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ. ಕಾಡು ಪ್ರಾಣಿಗಳ ಆಕ್ರಮಣದ ಭಯ ಇದ್ದದ್ದೇ. ದೇವರ ಮೇಲಿನ ಭಯ ಭಕ್ತಿಯೇ ಶ್ರೀರಕ್ಷೆಯ ಸಾಧನ. ಕೈಗೊಂಡ ವ್ರತ ನಿಯಮಗಳೇ ಸವಾಲುಗಳನ್ನೆದುರಿಸಲು ಆತ್ಮವಿಶ್ವಾಸ ತುಂಬುವ ಇಂಧನ. ಜಗತ್ತಿನಲ್ಲಿ ಭಕ್ತಿಯ ತೀವ್ರತೆಯನ್ನೇ ಪರೀಕ್ಷೆಗೊಡ್ಡಿ ದೇವರ ದರ್ಶನ ಪಡೆಯುವ ಕ್ಷೇತ್ರವೊಂದಿದ್ದರೆ ಅದು ಶಬರಿಮಲೆಯಲ್ಲಿರುವ ಅಯ್ಯಪ್ಪ ಸನ್ನಿಧಾನ.
ಒಂದು ಮಂಡಲ ಕಾಲ ಅಂದರೆ 48 ದಿನಗಳ ಕಾಲ (41 ದಿನ ಎಂಬ ವ್ಯಾಖ್ಯಾನವೂ ಇದೆ.) ಕಠಿಣ ವ್ರತಾಚರಣೆ ಕೈಗೊಂಡು ಮನೆಯ ಸುಖ ಭೋಗಗಳನ್ನು ತ್ಯಜಿಸಿ ಕರಿಯ ಏಕವಸ್ತ್ರಧಾರಿಯಾಗಿ ಬ್ರಹ್ಮಚರ್ಯ ಪಾಲಿಸುತ್ತಾ ಮಿತಾಹಾರಿಯಾಗಿ ಬರಿಗಾಲಿನ ವೈರಾಗ್ಯ ಮೂರ್ತಿಯಾಗಿ ನಡೆದಾಡಿ ಅಯ್ಯಪ್ಪ ಭಜನೆಯಲ್ಲಿ ಕಳೆಯುವುದು ಸುಲಭದ ಮಾತಲ್ಲ. ಆದರೆ ಇರುಮುಡಿ ಎಂಬ ಪವಿತ್ರವಾದ ಕಟ್ಟನ್ನು ಕಟ್ಟಿ ಯಾತ್ರೆಯ ಅವಿಭಾಜ್ಯ ಅಂಗವೆನಿಸಿದ ವಿಧಿಯನ್ನು ಪೂರೈಸಲು ವ್ರತಾಚರಣೆ ಮಾಡಲೇ ಬೇಕು. ಹೀಗೆ ಕಟ್ಟಿದ ಇರುಮುಡಿಯನ್ನು ಶಿರದಲ್ಲಿ ಧರಿಸಿಕೊಂಡು ಭಕ್ತಿಯನ್ನೇ ಊರುಗೋಲಾಗಿಸಿಕೊಂಡು ಹದಿನೆಂಟು ಬೆಟ್ಟಗಳ ಸಂಕೇತವೆನಿಸಿದ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯುವುದರಲ್ಲಿ ಭಕ್ತನಿಗೆ ಕಾಣುವ ಜೀವನ ಸಾರ್ಥಕತೆ ಇನ್ಯಾವುದೇ ವೈಜ್ಞಾನಿಕ ನೆಲೆಗಟ್ಟಿನಿಂದ ಕಾಣದು. ಅಯ್ಯಪ್ಪ ವ್ರತಧಾರಿಗಳಾದಾಗ ಶ್ರೀಮಂತ-ಬಡವ, ಅಜ್ಞಾನಿ-ಸುಜ್ಞಾನಿ, ಮೇಲ್ಜಾತಿ-ಕೀಳಾjತಿ ಎಂಬ ಭೇದಭಾವ ಪರಿತ್ಯಕ್ತರಾಗಿ ಎಲ್ಲಾ ಮನುಷ್ಯರೂ ಸಮಾನರಾಗುತ್ತಾರೆ. ಈ ಸಮಾನತೆ ನಂಬಿಕೆ ಮತ್ತು ಭಕ್ತಿಯಿಂದ ಹುಟ್ಟಿಕೊಂಡದ್ದಾಗಿದ್ದು ಇದನ್ನು ಹುಟ್ಟುಹಾಕಲು ಯಾವುದೇ ಆಧುನಿಕ ತಂತ್ರಜ್ಞಾನದಿಂದ ಇದುವರೆಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಶಬರಿಮಲೆ ಸನ್ನಿಧಾನವು ಲೋಕ ಪ್ರಸಿದ್ಧವಾಗಿ ದೇಶ ವಿದೇಶಗಳಲ್ಲಿ ತನ್ನ ಭಕ್ತಗಡಣವನ್ನು ಹೊಂದಿದೆ. ಸರಕಾರಕ್ಕೆ ಕೋಟಿಗಟ್ಟಲೆ ಆದಾಯ ತರುವ ಮೂಲವಾಗಿಯೂ ಗುರುತಿಸಲ್ಪಟ್ಟಿದೆ.
ಸಮುದ್ರ ಮಟ್ಟದಿಂದ ಸುಮಾರು 480 ಮೀಟರ್ ಎತ್ತರದಲ್ಲಿರುವ ಶಬರಿಮಲೆಯು ಹದಿನೆಂಟು ಬೆಟ್ಟಗಳಿಂದಾವೃತ ವಾಗಿದೆ ಎಂದು ಹೇಳಲಾಗುತ್ತಿದೆ. 10ರಿಂದ 50 ವಯಸ್ಸಿನ ಮಹಿಳೆಯರ ಹೊರತು ಸುಮಾರು ಹತ್ತರಿಂದ ಮೂವತ್ತು ಮಿಲಿಯನ್ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇವರೆಲ್ಲರೂ ನಂಬಿಕೆ ಮತ್ತು ಆರಾಧನೆಯನ್ನು ಧ್ಯೇಯವಾಗಿರಿಸಿ ಕೊಂಡು ಬರುತ್ತಾರೆಯೇ ಹೊರತು ಪ್ರವಾಸ ಮನೋಭಾವದಿಂದ ಅಲ್ಲ.
ಇಂತಿರುವ ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಇದೀಗ ಧಾರ್ಮಿಕ ಕಿಚ್ಚು ಉರಿಯಲಾರಂಭಿಸಿದೆ. ನೀರವದಲ್ಲಿ ಏಳುತ್ತಿದ್ದ ಸ್ವಾಮಿಯೇ ಶರಣಮಯ್ಯಪ್ಪ ಎಂಬ ಭಯಭಕ್ತಿಯ ಉದ್ಘೋಷದ ಅಲೆಯನ್ನು ಕದಡುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಮೇಲಾಟ, ಕಾನೂನಿನ ನೆಪದಲ್ಲಿ ಬಲಪ್ರಯೋಗ, ದ್ವೇಷ ಸಾಧನೆ ಈ ಎಲ್ಲಾ ಕೃತ್ಯಗಳಿಗೆ ಸನ್ನಿಧಾನವು ಸಾಕ್ಷಿಯಾಗುತ್ತಿದೆ. ಸೆ. 28ರಂದು ಸುಪ್ರೀಂ ಕೋರ್ಟ್ ನೀಡಿದ ಎಲ್ಲರಿಗೂ ದೇವಾಲಯ ಪ್ರವೇಶಿಸಲು ಅವಕಾಶವಿದೆ ಎಂಬ ಐತಿಹಾಸಿಕ ತೀರ್ಪು ಭಕ್ತ ಮಾನಸವನ್ನು ಗೊಂದಲದಲ್ಲಿ ಕೆಡವಿದೆ. ದೇಗುಲದ ಸಾಂಪ್ರದಾಯಿಕ ದಿನಚರಿಯಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ.
ಭಕ್ತಿ ಮತ್ತು ನಂಬಿಕೆಗಳ ಮೇಲೆ ನೆಲೆ ನಿಂತ ದೇಶ ಭಾರತ. ಇಲ್ಲಿ ಕೋಟ್ಯಂತರ ಗುಡಿ ಗೋಪುರ ದೇಗುಲ ಸಮುತ್ಛಯಗಳಿವೆ. ಒಂದೊಂದು ದೇಗುಲಕ್ಕೂ ಅದರದ್ದೇ ಆದ ರೀತಿ ರಿವಾಜು, ನೀತಿ ಸಂಹಿತೆಗಳಿವೆ. ಆ ಪ್ರಕಾರವೇ ಅಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಇದು ಕ್ಷೇತ್ರದ ಇತಿಹಾಸದುದ್ದಕ್ಕೂ ನಡೆದು ಬಂದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ರೀತಿ ನೀತಿ ಮೇಲ್ಜಾತಿಯವರ ಸೃಷ್ಟಿ , ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿಬಿಂಬ ಎಂದೆಲ್ಲ ವ್ಯಾಖ್ಯಾನಗೊಳಗಾಗುತ್ತಿದೆ. ಈ ಪರಿವರ್ತನೆ ಪ್ರಗತಿಯ ಸಂಕೇತವೋ ಅಥವಾ ಧರ್ಮದ ಮೇಲಾಗುತ್ತಿರುವ ಪ್ರಹಾರವೋ ಎಂಬ ಗೊಂದಲ ಆಸ್ತಿಕ ವಿಚಾರವಂತರದ್ದು. ಶಬರಿಮಲೆಯ ನೀತಿ ಸಂಹಿತೆಗೆ ವಿರುದ್ಧವಾಗಿ ಸುಪ್ರೀಂ ನೀಡಿದ ತೀಪೇì ಇದಕ್ಕೆ ಪಕ್ಕಾ ಉದಾಹರಣೆ.
ಕೆಲವು ವರ್ಷಗಳ ಹಿಂದೆ ಶಬರಿಮಲೆ ಇನ್ನೊಂದು ವಿವಾದದಲ್ಲಿ ಸಿಲುಕಿಕೊಂಡಿತ್ತು. ಮಕರ ಜ್ಯೋತಿ ದೈವದತ್ತವಲ್ಲ, ಮಾನವ ನಿರ್ಮಿತ ಎಂಬ ಸತ್ಯವನ್ನು ಲೋಕದೆದುರು ಒಪ್ಪಿಕೊಳ್ಳುವ ಸಂದಿಗ್ಧತೆ ದೇವಸ್ವ ಮಂಡಳಿಗೆ ಎದುರಾದ ಸನ್ನಿವೇಶವದು. ಆ ಸಂದರ್ಭದಲ್ಲಿ ವಾರ್ತಾ ವಾಹಿನಿಯೊಂದರಲ್ಲಿ ಮಾನವ ನಿರ್ಮಿತ ಎಂದು ಒಪ್ಪಿಕೊಂಡ ಮೇಲೆ ಮಕರ ಜ್ಯೋತಿಗೆ ಭಕ್ತಿ ಭಾವ ತೋರಿಸಬೇಕೇ ಎಂಬ ವಿಚಾರ ಚರ್ಚೆಯಾಗುತ್ತಿತ್ತು. ಆಗ ಅಲ್ಲಿ ಭಾಗವಹಿಸಿದ ಆಸ್ತಿಕ ವಿದ್ವಾಂಸರೊಬ್ಬರು ಮಂಗಳಾರತಿಯನ್ನು ಅರ್ಚಕರು ಬೆಳಗುತ್ತಾರೆ. ಅದಕ್ಕೆ ನಾವು ಭಕ್ತಿಯಿಂದ ನಮಿಸುವುದಿಲ್ಲವೇ? ಹಾಗೆಯೇ ಮಕರ ಜ್ಯೋತಿಗೆ ನಮಿಸಿದರೆ ತಪ್ಪೇನು ಎಂದು ಪ್ರಬುದ್ಧ ಪ್ರಶ್ನೆಯೆತ್ತಿದ್ದರು. ಹೀಗೆ ಹಿಂದೂ ಧರ್ಮದ ಬಗ್ಗೆ ಚಿಂತಿಸುವುದಿದ್ದರೆ ಇಲ್ಲಿರುವ ಹೆಚ್ಚಿನ ಧಾರ್ಮಿಕ ನಂಬಿಕೆಗಳು ವಿಮರ್ಶೆಗೊಳಪಟ್ಟು ಮೂಢನಂಬಿಕೆಗಳೆಂದು ತುಚ್ಛಿಕರಿಸಲ್ಪಡುತ್ತಿವೆ. (ರಾಮಾಯಣ, ಮಹಾಭಾರತ, ಭಗವದ್ಗೀತೆ, ರಾಮಸೇತು..ಇತ್ಯಾದಿ) ಶಬರಿಮಲೆ ಪ್ರಕರಣದಲ್ಲಂತೂ ಪ್ರಗತಿಪರ ಚಿಂತಕರು ನ್ಯಾಯಾಲಯದ ತೀರ್ಪನ್ನು ಟ್ವೀಟ್‌ಗಳ ಮೂಲಕ ಸಮರ್ಥಿಸಿಕೊಳ್ಳುತ್ತಾ ಸನ್ನಿಧಾನದ ನಂಬಿಕೆಯ ಮೇಲೆ ಬಲವಾದ ಪ್ರಹಾರ ನೀಡಿದ್ದಾರೆ. ಮಲಯಾಳಂನ ಖ್ಯಾತ ಲೇಖಕ ಎನ್. ಎಸ್. ಮಾಧವನ್ ಶಬರಿಮಲೆಗೆ ಮಹಿಳಾ ನಿಷೇಧವು 1972ರಿಂದ ಮೊದಲ್ಗೊಂಡಿತೆಂದೂ 1986ರಲ್ಲಿ ತಮಿಳು ಸಿನಿಮಾ ಚಿತ್ರೀಕರಣದ ವೇಳೆ ನಟಿಯೊಬ್ಬರು ಹದಿನೆಂಟು ಮೆಟ್ಟಿಲುಗಳ ಮೇಲೆ ನರ್ತಿಸಿರುವರೆಂದೂ ತನ್ನ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಬ್ರಿಟಿಷ್ ಆಡಳಿತಕ್ಕೂ ಮೊದಲೇ ಅಯ್ಯಪ್ಪ ದೇಗುಲಕ್ಕೆ 10 ರಿಂದ 50ರ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧ ಇತ್ತೆಂದು “ಮೆಮೊಯಿರ್ ಆಫ್ ದ ಸರ್ವೇ ತಿರುವಾಂಕೂರ್ ಆಂಡ್ ಕೊಚಿನ್ ಸ್ಟೇಟ್ಸ್’ ಎಂಬ ಅಧ್ಯಯನ ವರದಿಯನ್ನು ಉಲ್ಲೇಖೀಸಿ ಪಿ.ಟಿ.ಐ. ಸುದ್ದಿ ಸಂಸ್ಥೆ ಇತ್ತೀಚೆಗೆ ವರದಿ ಮಾಡಿದೆ.
ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನದತ್ತವಾಗಿದ್ದು ಸ್ತ್ರೀ ಪುರುಷರೆನ್ನದೆ ಎಲ್ಲರಿಗೂ ಅದು ಸಮಾನವಾಗಿದೆ. ಈ ಅಂಶವನ್ನೇ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಸೆ. 28 ರಂದು ಸನ್ನಿಧಾನದ ಕುರಿತಾಗಿ ತೀರ್ಪನ್ನು ನೀಡಿತು. ಆದರೆ ಕಮ್ಯುನಿಸ್ಟ್ ಆಡಳಿತವಿರುವ ಕೇರಳದಲ್ಲಿ ಸರಕಾರ ಕೋರ್ಟ್ ಆದೇಶವನ್ನು ಯಥಾವತ್ ಪಾಲಿಸಲು ತರಾತುರಿಯ ನಿರ್ಧಾರಗಳನ್ನು ಕೈಗೊಂಡಿದೆ. ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯ ಬಗೆಗೆ ಉತ್ಛರಿಸುವ ಸಂವಿಧಾನದ 26(ಬಿ) ಉಪವಿಧಿಯನ್ನು ಆಧರಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಶ್ರಮವನ್ನು ಸರಕಾರ ವಹಿಸಲಿಲ್ಲ. ಈ ಕ್ರಮವನ್ನು ಭಕ್ತ ಜನ ಪ್ರತಿಭಟಿಸಿದಾಗ ಅವರ ಮೇಲೆ ಪೋಲಿಸ್ ಶಕ್ತಿ ಪ್ರಯೋಗಿಸಿದೆ, ಕೇಸ್ ದಾಖಲಿಸಿದೆ. ಪ್ರತಿವರ್ಷ ಸನ್ನಿಧಾನದ ಹೆಸರಲ್ಲಿ ಕೋಟಿ ಕೋಟಿ ಹಣ ಬಾಚುವ ಸರಕಾರ ಮಹಾಮಳೆಯ ತರುವಾಯ ಕ್ಷೇತ್ರದ ಆಸುಪಾಸಿನ ಪಂಪಾ ಮುಂತಾದ ಕಡೆಗಳಲ್ಲಿ ಮೂಲಸೌಕರ್ಯ ವ್ಯವಸ್ಥೆಗಳೇ ಅಡಿಮೇಲಾಗಿರುವಾಗ ಇದನ್ನು ಸರಿಪಡಿಸುವ ಬಗ್ಗೆ ಕಾಳಜಿ ವಹಿಸಲಿಲ್ಲ. ಈ ಕುರಿತಾಗಿ ಕೇರಳ ಮಾನವ ಹಕ್ಕುಗಳ ಆಯೋಗ ಸರಕಾರಕ್ಕೆ ನೊಟೀಸನ್ನೂ ನೀಡಿದೆ. ಹೀಗಿದ್ದೂ ಮಹಿಳಾ ಪ್ರವೇಶವನ್ನೇ ತನ್ನ ಹಠ ಸಾಧನೆಗೆ ಬಳಸಿಕೊಂಡ ಸರಕಾರ ಭಕ್ತರ ಮನಸ್ಸನ್ನು ಘಾಸಿಗೊಳಿಸುತ್ತಲೇ ಇದೆ.
ಧಾರ್ಮಿಕತೆಗೂ ನಂಬಿಕೆಗೂ ಅವಿನಾಭಾವ ಸಂಬಂಧವಿದೆ. ಶಬರಿಮಲೆಗೆ ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧವಿರುವಂತೆ ನಾಸಿಕ್‌ನ ಶಿವ ದೇವಾಲಯ, ಅಸ್ಸಾಂನ ಕಾಮಾಕ್ಯ ದೇವಿ ಮಂದಿರ, ಕನ್ಯಾಕುಮಾರಿಯ ಕನ್ಯಾ ಮಾ ಭಗವತಿ ದುರ್ಗಾ ದೇವಿ ಮಂದಿರ, ರಾಜಸ್ಥಾನ ಪುಷ್ಕರದ ಬ್ರಹ್ಮ ದೇಗುಲ, ತಿರುವನಂತಪುರದ ಪಾರ್ವತಿ ಮಂದಿರ ಇತ್ಯಾದಿ ಕ್ಷೇತ್ರಗಳಲ್ಲಿ ಪುರುಷರಿಗೆ ನಿಷೇಧವಿದೆ. ಇದು ಆ ಕ್ಷೇತ್ರಗಳ ನಂಬಿಕೆಯನ್ನಾಧರಿಸಿದ ಧಾರ್ಮಿಕ ಶಿಸ್ತು. ಧರ್ಮಸ್ಥಳದ ಅಣ್ಣಪ್ಪ ಬೆಟ್ಟಕ್ಕೆ ಸ್ತ್ರೀ ಪ್ರವೇಶ ನಿಷೇಧವಿದೆ. ಕರಾವಳಿಯಲ್ಲಿ ನಂಬುವ ಉಳ್ಳಾಲ್ತಿ ದೈವದ ನೇಮದ ವೀಕ್ಷಣೆ ಕೆಲವು ಕ್ಷೇತ್ರಗಳಲ್ಲಿ ಹೆಂಗಸರಿಗೆ ನಿಷೇಧಿಸಲ್ಪಟ್ಟಿದೆ. ಈ ಬಗ್ಗೆ ಕೋರ್ಟುಗಳಲ್ಲಿ ದಾವೆ ಹೂಡಿ ನಿಷೇಧ ತೆರವಿನ ತೀರ್ಪು ಪಡೆದುಕೊಂಡು ಬಂದರೆ ಆ ಕ್ಷೇತ್ರಗಳು ಧಾರ್ಮಿಕ ನಂಬಿಕೆಯ ಕ್ಷೇತ್ರಗಳಾಗಿ ಉಳಿಯಲು ಸಾಧ್ಯವಿಲ್ಲ. ಬರಿಯ ಪ್ರವಾಸಿ ತಾಣಗಳಾದಾವು ಅಷ್ಟೆ. ಆದುದರಿಂದ ಸಂವಿಧಾನಾತ್ಮಕವಾಗಿ ತರ್ಕಿಸುವುದನ್ನು ಬಿಟ್ಟು ಸಾರ್ವಜನಿಕ ಸ್ವಾಸ್ಥ್ಯದ ದೃಷ್ಟಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಬೇರುಬಿಟ್ಟ ನಂಬಿಕೆಯಾಧರಿತ ಶಿಸ್ತನ್ನು ಎಲ್ಲರೂ ತಪ್ಪದೆ ಕಾಯ್ದುಕೊಳ್ಳಬೇಕು. “ಧರ್ಮೋ ರಕ್ಷತಿ ರಕ್ಷಿತಃ’ ಎಂಬುದನ್ನು ಭಾರತೀಯರಾಗಿದ್ದುಕೊಂಡು ನಾವು ಮರೆಯಬಾರದು.
ಭಾಸ್ಕರ ಕೆ . ಕುಂಟಪದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.