ಫ್ಯಾಷನ್ ಜಗತ್ತಿನಲ್ಲಿ ಹೆಡ್ ರ್ಯಾಪ್
Team Udayavani, Dec 7, 2018, 1:13 PM IST
ಫ್ಯಾಷನ್ ಪ್ರಪಂಚವೆಂದರೆ ಹಾಗೇನೇ. ಅಲ್ಲಿ ಕ್ಷಣಕ್ಕೊಂದು, ದಿನಕ್ಕೊಂದು ಹೊಸತನವಿರುತ್ತದೆ. ಫ್ಯಾಷನ್ಪ್ರಿಯರ ಮನಸ್ಸಿಗೆ ಕನ್ನ ಹಾಕಲು ಅದೆಷ್ಟೋ ಫ್ಯಾಷನೆಬಲ್ ಧಿರಿಸುಗಳು ಫ್ಯಾಷನ್ ಪ್ರಪಂಚದಲ್ಲಿ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ. ನಾಳೆ ಹಳೆಯದಾಗುವ ಇಂದಿನ ಹೊಸ ಫ್ಯಾಷನ್ ಜಗತ್ತಿನೊಳಗೆ ಇಂದೇ ನೋಟ ಹರಿಸಿದರೆ ಸಿಗುವ ಹೊಸ ಮಾದರಿಯವು ಅಸಂಖ್ಯಾತ.
ಹುಡುಗಿಯರ ಫ್ಯಾಷನ್ ಲೋಕದಲ್ಲಿ ದಿನಕ್ಕೊಂದು ಹೊಸತು. ಬಟ್ಟೆಯಿಂದ ಹಿಡಿದು, ಮೇಕಪ್ ಸೆಟ್, ಕೂದಲಿನ ಶೃಂಗಾರ ಎಲ್ಲದಕ್ಕೂ ಹೊಸ ಮಾದರಿಯದ್ದೇ ಕಾರುಬಾರು. ಫ್ಯಾನ್ಸಿ ಅಂಗಡಿಯೊಳಗೋ, ಬಟ್ಟೆ ಅಂಗಡಿಯೊಳಗೋ ಒಂದು ಸುತ್ತು ಹಾಕಿದರೆ ಎಲ್ಲವನ್ನು ತೆಗೆದುಕೊಂಡು ಬಿಡುವ ಎಂಬಷ್ಟು ಹೊಸ ವೆರೈಟಿಯ ಫ್ಯಾಷನೆಬಲ್ ಐಟಂಗಳು ಅಲ್ಲಿ ಸಿದ್ಧವಾಗಿಯೇ ಇರುತ್ತವೆ. ಕಾಡುವ ಆರ್ಥಿಕ ಅಡಚಣೆಯೋ ಇನ್ನೇನೋ ಕಾರಣಗಳಿಂದ ಎಲ್ಲವನ್ನು ಖರೀದಿಸಬೇಕೆಂಬ ಮನಸ್ಸಾದರೂ, ಒಲ್ಲದ ಮನಸ್ಸಿನಿಂದ ಒಂದೆರಡು ವಸ್ತು ಖರೀದಿಸಿ ಹಾಗೇ ಬಿಟ್ಟು ಬರಬೇಕಾದ ಸನ್ನಿವೇಶ. ಆದರೂ ಮತ್ತು ವಾರ ಬಿಟ್ಟು ಹೋದರೆ ಅದೇ ಜಾಗಕ್ಕೆ ಇನ್ನೊಂದಷ್ಟು ಹೊಸ ಫ್ಯಾಷನ್ಗಳ ಎಂಟ್ರಿ.
ಹೆಡ್ ರ್ಯಾಪ್
ಈಗ ಟೋಪಿ ಟ್ರೆಂಡ್. ಟೋಪಿ ಹಾಕುವುದು ಹುಡುಗರಿಗೆ ಮಾತ್ರವೆಂದೇಕೆ ಪರಿಗಣಿಸುತ್ತಿರುವಿರಿ; ನಮಗೂ ಟೋಪಿ ಹಾಕಿ ಶೈನ್ ಆಗುವುದು ಗೊತ್ತೆಂಬಂತೆ ಹೊರಟಿದ್ದಾರೆ ಹುಡುಗಿಯರು. ಹುಡುಗರು ಟೋಪಿ ಹಾಕಿದರೆ, ಹುಡುಗಿಯರೂ ತಾವೇನ್ ಕಮ್ಮಿ ಇಲ್ಲ ಎಂಬಂತೆ ತಲೆಗೊಂದು ಬಟ್ಟೆಯ ಟೋಪಿಯನ್ನಿಡಲು ಶುರು ಮಾಡಿದ್ದಾರೆ. ಆದರೆ ಇದು ಕೇವಲ ಟೋಪಿಯಲ್ಲ. ಫ್ಯಾಷನ್ ಹೆಸರಿನಲ್ಲಿ ಹುಡುಗಿಯರ ಮನಸ್ಸಿಗೆ ಲಗ್ಗೆ ಇಟ್ಟ ಹೆಡ್ ರ್ಯಾಪ್. ಅಗ್ಗದ ದರದಲ್ಲಿ ಸಿಗುವ ಈ ಹೆಡ್ ರ್ಯಾಪ್ಗಳು ನೋಡಲೂ ಆಕರ್ಷಕ.
ಹಲವು ಬಣ್ಣಗಳಲ್ಲಿ
ಮಕ್ಕಳು, ದೊಡ್ಡವರೆನ್ನದೆ ಎಲ್ಲರಿಗೂ ಸೂಕ್ತವಾಗಿ ಒಪ್ಪುವ ಹೆಡ್ ರ್ಯಾಪ್ ನಾನಾ ವೆರೈಟಿ ಮತ್ತು ಹಲವು ಬಣ್ಣಗಳಲ್ಲಿ ಲಭ್ಯವಿದೆ. ಮಕ್ಕಳಿಗೆ ಮತ್ತು ಹುಡುಗಿಯರಿಗೆ ಕೆಂಪು, ಪಿಂಕ್, ತಿಳಿ ಪಿಂಕ್ ಬಣ್ಣದ ಹೆಡ್ ರ್ಯಾಪ್ ಗಳು ಆಕರ್ಷಕವಾಗಿ ಕಾಣುತ್ತವೆ. ಬೆಲೆಯೂ ಸುಮಾರು 30 ರೂ.ಗಳಿಂದ 60 ರೂ. ಗಳ ತನಕ ಇರುವುದರಿಂದ ಕೊಂಡು ಅಂದ ನೋಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ.
ವುಲ್ಲನ್ನಲ್ಲಿಯೂ…
ಈ ಹೆಡ್ ರ್ಯಾಪ್ ಕೇವಲ ಬಟ್ಟೆಯಲ್ಲಿ ಮಾತ್ರ ತಯಾರಾಗಿರುವುದಲ್ಲ. ಮಕ್ಕಳಿಗೆಂದೇ ವುಲ್ಲನ್ನಲ್ಲಿ ತಯಾರಾಗಿದೆ. ನೋಡಲೂ ಚೆನ್ನಾಗಿರುವ ಇವನ್ನು ಕೊಂಡು, ಮಕ್ಕಳಿಗೆ ತೊಡಿಸದೇ ಇರಲು ಮನಸ್ಸಾಗದು. ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲೂ ಇದು ಬಳಕೆಯಾಗಬಲ್ಲದು. ಏನಕ್ಕೂ ನೀವು ಫ್ಯಾಷನ್ ಪ್ರಿಯರಾದರೆ, ಒಮ್ಮೆ ಈ ಹೆಡ್ ರ್ಯಾಪ್ ತೊಟ್ಟು ನೋಡಿದರೆ ಇನ್ನಷ್ಟು ಚೆನ್ನ
ಮಾಡರ್ನ್ ಲುಕ್
ವಿಶೇಷವೆಂದರೆ ಈ ಹೆಡ್ ರ್ಯಾಪ್ ಅಥವಾ ಟೋಪಿಯನ್ನು ಧರಿಸಿದರೆ ಆಕರ್ಷಕವಾಗಿ ಕಾಣುವುದಲ್ಲದೆ, ಮಾಡರ್ನ್ ಲುಕ್ ಕೂಡ ನೀಡುತ್ತದೆ. ಹೆಚ್ಚಾಗಿ ಜೀನ್ಸ್ ಪ್ಯಾಂಟ್ -ಟೀ ಶರ್ಟ್ ಧರಿಸಿ ತಲೆಯ ಮೇಲೊಂದು ಹೆಡ್ ರ್ಯಾಪ್ನ್ನು ಹಾಕಿಕೊಂಡರೆ ಹೊಸದೇ ಸೌಂದರ್ಯವನ್ನು ನಿಮ್ಮದಾಗಿಸುವುದರಲ್ಲಿ ಸಂಶಯವಿಲ್ಲ. ಹಣೆಯ ಮೇಲ್ಭಾಗದಲ್ಲಿ, ತಲೆಯಲ್ಲಿ ಧರಿಸುವುದು ಹೆಚ್ಚು ಸೂಕ್ತ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.