‘ಜ್ಞಾನದ ಜತೆ ಪ್ರಕೃತಿ ಸೇರಿದಾಗ ಸಂಭ್ರಮ ಇಮ್ಮಡಿಗೊಳ್ಳುತ್ತದೆ’
Team Udayavani, Dec 8, 2018, 3:10 AM IST
ಉಡುಪಿ: ವಿಜ್ಞಾನದ ಜತೆ ಪ್ರಕೃತಿ ಸೇರಿದಾಗ, ಸಂಭ್ರಮವೆನ್ನುವುದು ಇಮ್ಮಡಿಯಾಗುತ್ತದೆ. ನಾನು ಹಿಮಾಲಯದ ಬಿಳಿ ಹಿಮದ ಮೇಲೆ ಸೂರ್ಯರಶ್ಮಿ ಬಿದ್ದಾಗ ಹಳದಿಯಾಗುವುದನ್ನು ಕಂಡಾಗ ನನ್ನ ಸಂಭ್ರಮ ಇಮ್ಮಡಿಯಾಯಿತು. ಇದಕ್ಕೆ ಕಾರಣ ನನ್ನಲ್ಲಿದ್ದ ವಿಜ್ಞಾನದ ಜ್ಞಾನ ಎಂದು ಖಗೋಳ ಶಾಸ್ತ್ರಜ್ಞ ಪ್ರೊ| ಎ. ಪಿ. ಭಟ್ ಹೇಳಿದರು.
ಅವರು ಶುಕ್ರವಾರ ಅಲೆವೂರು ಗ್ರೂಪ್ ಫಾರ್ ಎಜುಕೇಶನ್ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಮತ್ತು ಶಾಂತಿನಿಕೇತನ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಲೆವೂರು ಗ್ರೂಪ್ ಅವಾರ್ಡ್ ಸ್ವೀಕರಿಸಿ ಮಾತನಾಡಿ, ಮಕ್ಕಳಿಗೆ ಪ್ರಕೃತಿಯನ್ನು ನೋಡುವ ಅಭ್ಯಾಸ ಮಾಡಿಸಿ, ಏಕೆಂದರೆ ಪ್ರಕೃತಿಯನ್ನು ನೋಡಿ ಕಲಿಯುವುದು ಸಾಕಷ್ಟು ಇದೆ. ಗ್ರಹಣದ ಸಂದರ್ಭ ಮಕ್ಕಳನ್ನು ಮನೆಯಿಂದ ಹೊರಕ್ಕೆ ಕಳುಹಿಸುವುದಿಲ್ಲ. ಶಾಲೆಗಳು ಕೂಡ ಗ್ರಹಣದ ದಿನ ರಜೆ ನೀಡಿ ಮನೆಯಲ್ಲಿ ಕೂರಿಸಿ ಬಿಡುತ್ತದೆ. ಆದರೆ ಗ್ರಹಣದ ಕೌತುಕವನ್ನು ಮಕ್ಕಳಿಗೆ ನೋಡಲು ಬಿಡಿ. ಶಾಲೆಗಳಲ್ಲಿ ಗ್ರಹಣವೆಂಬ ಪ್ರಕೃತಿಯ ಕೌತುಕವನ್ನು ನೋಡಲು ಅವಕಾಶ ನೀಡಿ ಎಂದವರು ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ಮಾತನಾಡಿ, ಎ.ಪಿ. ಭಟ್ ಅವರು ಪ್ರಕೃತಿ ನೋಡಿರುವುದು, ಅದನ್ನು ಕಂಡು ಸಂಭ್ರಮಿಸಿರುವುದನ್ನು ಕಂಡಾಗ ನಾವು ಪ್ರಕೃತಿಯನ್ನು ಕಾಣುವ ದೃಷ್ಟಿಕೋನ ಬದಲಾಗಬೇಕಾಗಿದೆ ಎನ್ನುವುದು ಅರ್ಥ ವಾಗಿದೆ. ನಾವು ಪ್ರಕೃತಿಗೆ ಹೆಚ್ಚಿನ ಒತ್ತನ್ನು ನೀಡದೇ ನಿರ್ಲಕ್ಷಿಸಿದ ಪರಿಣಾಮ ಪ್ರಕೃತಿ ನಮ್ಮನ್ನು ನಿರ್ಲಕ್ಷಿಸಿದೆ. ಇದಕ್ಕೆ ಉದಾಹರಣೆ ಈಗ ನಾವು ನೋಡುತ್ತಿರುವ ಪ್ರಾಕೃತಿಕ ವಿಕೋಪಗಳು. ಮಕ್ಕಳಿಗೆ ಪ್ರಕೃತಿಯನ್ನು ಪ್ರೀತಿಸುವ ಬಗೆಯನ್ನು ಹೇಳಿ ಕೊಡಬೇಕಾಗಿದೆ ಎಂದರು.
ಜಿಲ್ಲಾ ವಿದ್ಯಾಂಗ ನಿರ್ದೇಶಕ ಶೇಷಶಯನ ಕಾರಿಂಜ, ಗ್ರೂಪ್‌ನ ಅಧ್ಯಕ್ಷ ಗಣಪತಿ ಕಿಣಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್ ಕಿಣಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಲೆಯ ಪ್ರಾಂಶುಪಾಲೆ ರೂಪಾ. ಡಿ. ಕಿಣಿ ವಾರ್ಷಿಕ ವರದಿ ವಾಚಿಸಿದರು. ಹರೀಶ್ ಕಿಣಿ ಪ್ರಶಸ್ತಿ ಪುರಸ್ಕೃತರ ಪರಿಚಯಿಸಿ, ಶ್ರೀನಿವಾಸ ಉಪಾಧ್ಯ ಮತ್ತು ಗಾಯತ್ರಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.