ನಿರುಪಯುಕ್ತವಾದ ಹಾಸ್ಟೆಲ್ ಕಟ್ಟಡ
Team Udayavani, Dec 9, 2018, 11:30 AM IST
ಬಸವಕಲ್ಯಾಣ: ತಾಲೂಕಿನ ಮುಡಬಿ ಗ್ರಾಮದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಬಾಲಕಿಯರಿಗಾಗಿ ನಿರ್ಮಿಸಲಾದ ಕರ್ನಾಟಕ ಕಸ್ತೂರಿಬಾ ವಸತಿ ನಿಲಯ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿನಿಯರು ಪ್ರವೇಶ ಮಾಡುವ ಮೊದಲೇ ವಸತಿ ನಿಲಯ, ದನದ ಕೊಟ್ಟಿಗೆ ಮತ್ತು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್‌ಡಿಪಿ 2009-10ನೇ ಸಾಲಿನ ಯೋಜನೆಯಡಿ, ಅಂದಾಜು 69 ಲಕ್ಷ ರೂ. ಖರ್ಚುಮಾಡಿ ಎರಡು ಅಂತಸ್ಥಿನ, 15ರಿಂದ 20 ಕೋಣೆಗಳನ್ನು ಹೊಂದಿರುವ ಕಟ್ಟಡ ಇದಾಗಿದೆ. ಆದರೆ ವಸತಿ ನಿಲಕ್ಕೆ ಬೇಕಾಗುವ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ, ಹೋಗಲು ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಟ್ಟಡಕ್ಕೆ ಒದಗಿಸಿಲ್ಲ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾದ ಕಟ್ಟಡ ವಿದ್ಯಾರ್ಥಿನಿಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಹಾಗಾಗಿ 10 ವರ್ಷಗಳಿಂದ ವಿದ್ಯಾರ್ಥಿನಿಯರು ಇಲ್ಲಿಗೆ ಬರದೇ ಬಾಡಿಗೆ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ. ಆದರೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೇದಾರರು ಕಟ್ಟಡ ಸಂರಕ್ಷಣೆ ಮಾಡುವುದಾಗಲಿ ಅಥವಾ ಸಮರ್ಪಕ ಸೌಕರ್ಯಗಳನ್ನು ಕಲ್ಪಿಸುವುದಾಗಲಿ ಮಾಡಿಲ್ಲ.
ಇದು ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷಕ್ಕೆ ನಿದರ್ಶನವಾಗಿದೆ.
ಹಾಗಾಗಿ ಅಕ್ಷರ ಕಲಿಯುವ ವಸತಿ ನಿಲಯ ಕಟ್ಟಡ ರಾತ್ರಿ ಸಮಯದಲ್ಲಿ ಮದ್ಯದ ಕೂಟ ನಡೆಸಲು, ದಿನದಲ್ಲಿ ಜಾನುವಾರುಗಳು ಕಟ್ಟಲು ಮತ್ತು ಮೇವಿನ ಬಣವೆ ಹಾಕುವ ಸ್ಥಳವಾಗಿ ಮಾರ್ಪಟ್ಟಿದೆ. ಇದಕ್ಕೆ ಕೋಣೆಗಳಲ್ಲಿ ಕಟ್ಟಿಗೆ, ಮೇವು ಮತ್ತು ಜಾನುವಾರುಗಳ ಸಗಣೆಯೇ ನೈಜ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ ಸರ್ಕಾರ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ವಸತಿ ನಿಲಯ ನಿರ್ಮಿಸಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಉಪಯೋಗಕ್ಕೆ ಬರುವ ಮುನ್ನವೇ ಹಾಳಾಗಿರುವುದು ವಿದ್ಯಾರ್ಥಿನಿಯರ ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಅಧೋಗತಿಗೆ ತಲುಪಿದ ಕಟ್ಟಡ: ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತದೃಷ್ಟಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾದ ವಸತಿ ನಿಲಯ ಸ್ಥಿತಿ ಸಂರಕ್ಷಣೆ ಇಲ್ಲದೇ ಅಧೋಗತಿಗೆ ತಲುಪಿದೆ. ಆವರಣದ ತುಂಬಾ ಗಿಡ-ಗಂಟಿಗಳು ಬೆಳೆದು ನಿಂತಿವೆ. ಕಿಟಕಿ, ಬಾಗಿಲು ಮುರಿದು ಬಿದ್ದಿವೆ. ಶೌಚಾಲಯಕ್ಕೆ, ಅಡುಗೆ ಮಾಡಲು ನಿರ್ಮಿಸಲಾದ ಕಟ್ಟೆಗೆ ಅಳವಡಿಸಲಾದ ಬೆಲೆ ಬಾಳುವ ಟೈಲ್ಸ್‌ಗಳು ಸಂಪೂರ್ಣ ಪುಡಿಪುಡಿಯಾಗಿ ಬಿದ್ದಿವೆ.
ಮೇವು ಸಂಗ್ರಹದ ಸ್ಥಳ: ವಸತಿ ನಿಲಯದ ಕಟ್ಟಡ ಹೊಲದಲ್ಲಿ ಬೆಳೆದ ಮೇವು ಹಾಗೂ ಕಟ್ಟಿಗೆ ಸಂಗ್ರಹ ಮಾಡುವ ಸ್ಥಳವಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮಗೂ ಇದಕ್ಕೂ, ಯಾವುದೇ ಸಂಬಂಧವಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿರುವುದು ವಿಪಾರ್ಯಸವೇ ಸರಿ.
ಅವೈಜ್ಞಾನಿಕ ಕಟ್ಟಡ ನಿರ್ಮಾಣ: ಗ್ರಾಮ ಹೊರವಲಯದ ಗುಡ್ಡ ಪ್ರದೇಶದಲ್ಲಿ ಕೊಳವೆ ಬಾವಿ ಅಥವಾ ಬಾವಿ ಕೊರೆಯದೇ ಟ್ಯಾಂಕ್ ಮೂಲಕ ನೀರು ತಂದು, ತರಾತುರಿಯಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಿ, ಆವರಣ ಗೋಡೆ ಕಟ್ಟದೆ ಅರ್ಧಕ್ಕೆ ನಿಲ್ಲಿಸಿರುವುದು ಯಾಕೆಂದು ತಿಳಿಯದಂತಾಗಿದೆ. ಆದ್ದರಿಂದ ಸಂಬಂಧ ಪಟ್ಟವರು ಇತ್ತ ಗಮನ ಹರಿಸಿ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಎರಡು ದಿನಗಳೊಳಗೆ ವಸತಿ ನಿಲಯಕ್ಕೆ ಭೇಟಿನೀಡಿ ಅಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು. ಮತ್ತು ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ಬರುವಂತೆ ಮಾಡಲಾಗುವುದು.
ಜ್ಞಾನೇಂದ್ರಕುಮಾರ ಗಂಗವರ, ಸಹಾಯಕ ಆಯುಕ್ತರು
ವೀರಾರೆಡ್ಡಿ ಆರ್.ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.