ಇಂದಿನಿಂದ ಕಲಾಪ ಆರಂಭ; ಫಲಪ್ರದವಾಗಲಿ ಅಧಿವೇಶನ
Team Udayavani, Dec 10, 2018, 6:00 AM IST
ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಎರಡನೇ ಅಧಿವೇಶನವಿದು. ಜುಲೈನಲ್ಲಿ ಬಜೆಟ್ ಅಧಿವೇಶನ ನಡೆಸಲಾಗಿತ್ತಾದರೂ ಅದರಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಷ್ಟೇ ಮುಖ್ಯವಾಗಿತ್ತು. ಹೀಗಾಗಿ ಬೆಳಗಾವಿ ಅಧಿವೇಶನ ಸಮ್ಮಿಶ್ರ ಸರಕಾರ ಅಧಿಕಾರಕ್ಕೇರಿದ ಬಳಿಕ ನಡೆಯುವ ಪೂರ್ಣ ಪ್ರಮಾಣದ ಅಧಿವೇಶನದ ಎನ್ನಬಹುದು.ಜನರಿಂದ ಆಯ್ಕೆಯಾದವರು ಒಂದೆಡೆ ಕುಳಿತು ನಾಡಿನ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು, ಕಾನೂನು ಮತ್ತು ನೀತಿ ರೂಪಣೆ ಮಾಡುವುದು ಅಧಿವೇಶನ ನಡೆಸುವ ಮುಖ್ಯ ಉದ್ದೇಶ. ವಿಪಕ್ಷಗಳು ಸರಕಾರದ ಲೋಪದೋಷಗಳನ್ನು ಪಟ್ಟಿ ಮಾಡಿ ಆಕ್ರಮಣ ಮಾಡುವುದು, ಸರಕಾರ ಸಾಧನೆಗಳು ಹೇಳುವುದು, ಮುಂದಿನ ಆಡಳಿತದ ಕುರಿತಾದ ಹೊಳಹುಗಳನ್ನು ನೀಡುವುದೆಲ್ಲ ಅಧಿವೇಶನದಲ್ಲಿ.
ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅಧಿವೇಶನ ಎನ್ನುವುದು ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ದೋಷಾರೋಪಣೆ ಮಾಡುವುದಕ್ಕೆ ಮತ್ತು ಕಿತ್ತಾಡಿಕೊಳ್ಳುವುದಕ್ಕೆ ವೇದಿಕೆಯಾಗುತ್ತಿರುವುದು ದುರದೃಷ್ಟಕರ ಬೆಳವಣಿಗೆ. ರಾಜಕೀಯ ನಾಯಕರ ಪಾಲಿಗೆ ಚುನಾವಣಾ ರ್ಯಾಲಿ ಮತ್ತು ಅಧಿವೇಶನದ ಭಾಷಣ ಒಂದೇ ರೀತಿಯಾಗಿ ಮಾರ್ಪಡಾಗಿರುವುದು ವಿಷಾದಿಸಬೇಕಾದ ಸಂಗತಿ. ಪದೇ ಪದೇ ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಪ್ರತಿಭಟಿಸುವುದು, ಭಾಷಣ ಮಾಡುವಾಗ ಗದ್ದಲ ಎಬ್ಬಿಸಿ ಅಡ್ಡಿಪಡಿಸುವುದು ಇವೆಲ್ಲ ಈಗ ಅಧಿವೇಶನದಲ್ಲಿ ಮಾಮೂಲಾಗಿ ಕಾಣಸಿಗುತ್ತಿರುವ ದೃಶ್ಯಗಳು. ಮುಂದೂ ಡಿಕೆ, ಸಭಾತ್ಯಾಗಗಳಿಲ್ಲದ ಅಧಿವೇಶನಗಳೇ ಇಲ್ಲ ಎನ್ನುವಂತಾಗಿದೆ. ಮುಕ್ತಾ ಯದ ಹಂತದಲ್ಲಿ ಅಧಿವೇಶನ ಎಷ್ಟು ಫಲಪ್ರದವಾಗಿದೆ ಎಂದು ಲೆಕ್ಕ ಹಾಕಿದಾಗ ನಿರಾಶೆಯೇ ಕಾದಿರುತ್ತದೆ. ಅಧಿವೇಶನ ನಡೆಯುವ ಪ್ರತಿಯೊಂದು ನಿಮಿಷಕ್ಕೂ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಇದು ಜನರ ತೆರಿಗೆಯ ಹಣ ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದೆ ಜನಪ್ರತಿನಿಧಿಗಳು ಅದನ್ನು ವ್ಯರ್ಥಗೊಳಿಸುವು ದನ್ನು ನೋಡುವಾಗ ಖೇದವಾಗುತ್ತದೆ.
ಪ್ರಸಕ್ತ ಅಧಿವೇಶನಕ್ಕೂ ಈ ಗತಿಯಾಗದಿರಲಿ ಎನ್ನುವ ಆಶಯ ನಾಡಿನದ್ದು. ಆದರೆ ವಿಪಕ್ಷ ಮತ್ತು ಸರಕಾರ ಅಧಿವೇಶನಕ್ಕೆ ಮಾಡಿ ಕೊಂಡಿ ರುವ ತಯಾರಿಯನ್ನು ನೋಡುವಾಗ ಈ ಅಧಿವೇಶನವೂ ಗದ್ದಲದ ಗೂಡಾಗುವ ಲಕ್ಷಣಗಳು ಕಾಣಿಸುತ್ತಿವೆ. ಕಬ್ಬು ಬೆಳೆಗಾರರ ಸಮಸ್ಯೆ, ಬರ ಮತ್ತು ಅತಿ ವೃಷ್ಟಿಯ ಪರಿಹಾರ, ಬರ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ ಗಳು, ರೈತರ ಸಮಸ್ಯೆ, ಮೇಕೆದಾಟು ಅಣೆಕಟ್ಟೆ… ಹೀಗೆ ಈ ಸಲವೂ ಚರ್ಚಿಸಲು ಸಾಕಷ್ಟು ವಿಚಾರಗಳಿವೆ. ಜತೆಗೆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗಿರುವ 35,000 ಕೋಟಿ ರೂ. ಖರ್ಚಿನ ಲೆಕ್ಕ ಸಿಗುತ್ತಿಲ್ಲ ಎಂಬ ಸಿಎಜಿ ವರದಿಯನ್ನು ವಿಪಕ್ಷ ಹೊಸ ಅಸ್ತ್ರವಾಗಿ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.
ಅಧಿವೇಶನವೆಂದರೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು. ಇದರಲ್ಲಿ ಸರಕಾರ ಮತ್ತು ವಿಪಕ್ಷ ಸಮಾನವಾಗಿ ಸಹಭಾಗಿಗಳಾಗಬೇಕು.ವಿವಾದ ಗಳನ್ನೆತ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದೊಂದೇ ವಿಪಕ್ಷದ ಗುರಿ ಯಾಗಬಾರದು. ಅಂತೆಯೇ ಸರಕಾರವೂ ವಿಪಕ್ಷದ ಆರೋಪಗಳಿಗೆ ಮತ್ತು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ನೀಡಬೇಕೆ ಹೊರತು ಪ್ರಶ್ನೆ ಕೇಳಿ ದ ವರನ್ನು ಹಣಿಯುವುದು ಅಥವಾ ಬಾಯಿ ಮುಚ್ಚಿಸುವುದಷ್ಟೇ ತನ್ನ ಕೆಲಸ ಎಂದು ಭಾವಿಸಬಾರದು. ಆಗ ಮಾತ್ರ ಅಧಿವೇಶನ ಫಲಪ್ರದ ಎಂದಾಗುತ್ತದೆ.
ಚುನಾಯಿತ ಪ್ರತಿನಿಧಿಗಳಿಗೆ ಸಭ್ಯವಾಗಿ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದಾದರೆ ಅವರನ್ನು ಕಾನೂನಿನ ಮೂಲಕ ನಿಯಂತ್ರಿಸುವುದು ಅನಿವಾರ್ಯವಾಗುತ್ತದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂಸತ್ತಿನ ಅಧಿವೇಶನದಲ್ಲಿ ಎಚ್ಚರಿಸಿದ್ದರು. ಈ ಮಾತನ್ನು ರಾಜ್ಯಗಳ ಅಧಿವೇಶನಗಳಿಗೂ ಅನ್ವಯಿಸಬಹುದು. ಗಲಾಟೆ ಮಾಡುವ ಜನಪ್ರತಿನಿಧಿಗಳನ್ನು ಲಗಾಮಿನಲ್ಲಿಡಲು ಅಗತ್ಯಬಿದ್ದರೆ ಸಭಾಪತಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ಅದೇ ರೀತಿ ಅಧಿವೇಶನದ ಸಂದರ್ಭದಲ್ಲಿ ಚರ್ಚೆಗೊಳಗಾಗುವ ಇನ್ನೊಂದು ವಿಚಾರ ಸಚಿವರ ಮತ್ತು ಶಾಸಕರ ಹಾಜರಾತಿಯದ್ದು. ಆರಂಭದ ಒಂದೆರಡು ದಿನ ಬಿಟ್ಟರೆ ಉಳಿದಂತೆ ಹೆಚ್ಚಿನ ಜನಪ್ರತಿನಿಧಿಗಳಿಗೆ ಅಧಿವೇಶನದಲ್ಲಿ ಭಾಗವಹಿಸುವ ಆಸಕ್ತಿಯಿರುವುದಿಲ್ಲ. ಹಾಜರಿ ಹಾಕಲು ಮಾತ್ರ ಬರುವ ಶಾಸಕರೂ ಇದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಚಿವರೇ ಇಲ್ಲದೆ ಸಭಾಪತಿಯವರಿಂದ ಛೀಮಾರಿಗೊಳಗಾಗುವ ಸನ್ನಿವೇಶಗಳು ಆಗಾಗ ಸೃಷ್ಟಿಯಾಗುತ್ತಿರುವುದು ಭೂಷಣವಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.