ಭಾರತಕ್ಕೆ ಒಲಿದೀತು ಅಡಿಲೇಡ್ ಓವಲ್
Team Udayavani, Dec 10, 2018, 9:13 AM IST
ಅಡಿಲೇಡ್: ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಸೋಮವಾರ “ಅಡಿಲೇಡ್ ಓವಲ್’ನಲ್ಲಿ ಟೀಮ್ ಇಂಡಿಯಾದ ಟೆಸ್ಟ್ ಜಯಭೇರಿ ಮೊಳಗುವುದು ನಿಶ್ಚಿತ. ಗೆಲುವಿಗೆ 323 ರನ್ನುಗಳ ಗುರಿ ಪಡೆದಿರುವ ಆತಿಥೇಯ ಆಸ್ಟ್ರೇಲಿಯ, 4ನೇ ದಿನದಾಟದ ಅಂತ್ಯಕ್ಕೆ 104 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ.
ಗೆಲುವಿಗಾಗಿ ಅಂತಿಮ ದಿನದ ಪೂರ್ತಿ 90 ಓವರ್‌ಗಳ ಆಟದಲ್ಲಿ ಆಸ್ಟ್ರೇಲಿಯ ಉಳಿದ 6 ವಿಕೆಟ್‌ಗಳಿಂದ 219 ರನ್ ಗಳಿಸಬೇಕಿದೆ. ಆದರೆ ಅಡಿಲೇಡ್‌ನಲ್ಲಿ ಬ್ಯಾಟಿಂಗ್ ಕಠಿನ ವಾದ್ದರಿಂದ ಹಾಗೂ ಇಲ್ಲಿನ ಟ್ರ್ಯಾಕ್ ಬೌಲರ್‌ಗಳಿಗೆ ಭರಪೂರ ನೆರವು ನೀಡುತ್ತಿರುವುದರಿಂದ ಕೊಹ್ಲಿ ಪಡೆಗೆ ಗೆಲುವಿನ ಸಾಧ್ಯತೆ ಹೆಚ್ಚು ಎಂಬುದು ಬಹುತೇಕ ಮಂದಿಯ ಲೆಕ್ಕಾಚಾರ.
ಭಾರತದ ದ್ವಿತೀಯ ಇನ್ನಿಂಗ್ಸ್ ಕುಸಿತವೂ ಈ ಲೆಕ್ಕಾಚಾರವನ್ನು ಗಟ್ಟಿಗೊಳಿಸುತ್ತದೆ. ಪ್ರವಾಸಿಗರ ಅಂತಿಮ 6 ವಿಕೆಟ್ 73 ರನ್ ಅಂತರದಲ್ಲಿ ಉದುರಿ ಹೋಗಿತ್ತು; ಕೊನೆಯ 4 ವಿಕೆಟ್ ನಾಲ್ಕೇ ರನ್ ಅಂತರದಲ್ಲಿ ಉರುಳಿತ್ತು. ಹಾಗೆಯೇ ಪಂದ್ಯದ ಹಿಂದಿನ 3 ಇನ್ನಿಂಗ್ಸ್‌ಗಳ ಸ್ಕೋರ್‌ಗಿಂತ ಹೆಚ್ಚಿನ ರನ್ ಮಾಡಬೇಕಾದುದು ಸುಲಭವಲ್ಲ. ಈ ಅಂಶಗಳೆಲ್ಲ ಸಹಜವಾಗಿಯೇ ಆಸೀಸ್ ಪಾಳೆಯದಲ್ಲಿ ಆತಂಕ ಸೃಷ್ಟಿಸಿದೆ.
ಅಶ್ವಿನ್, ಶಮಿ ಬೆದರಿಕೆ
ಆರ್. ಅಶ್ವಿನ್ (44ಕ್ಕೆ 2) ಮತ್ತು ಮೊಹಮ್ಮದ್ ಶಮಿ (15ಕ್ಕೆ 2) ಈಗಾಗಲೇ ಆಸ್ಟ್ರೇಲಿಯದ ಮೇಲೆ ಅಪಾಯದ ಬಾವುಟ ಹಾರಿಸಿದ್ದಾರೆ. ಅಂತಿಮ ಅವಧಿ ಯಲ್ಲಿ ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದ ಇವರು ಮಾರ್ಕಸ್ ಹ್ಯಾರಿಸ್ (26), ಉಸ್ಮಾನ್ ಖ್ವಾಜಾ (8) ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ (14) ವಿಕೆಟ್ ಉಡಾಯಿಸಿ ಭಾರತದ ಹಾದಿಯನ್ನು ಸುಗಮಗೊಳಿಸಿದ್ದಾರೆ. ಔಟಾದ ಮತ್ತೂಬ್ಬ ಆಟಗಾರ ಆರನ್ ಫಿಂಚ್ (11). ಇವರಲ್ಲಿ ಖ್ವಾಜಾ ವಿಕೆಟ್ ಭಾರತಕ್ಕೆ ಬಳುವಳಿ ರೂಪದಲ್ಲಿ ಬಂತು. ಅಶ್ವಿನ್ ಎಸೆತವನ್ನು ಮಿಡ್-ಆಫ್ ಮೂಲಕ ಸಿಕ್ಸರ್‌ಗೆ ಅಟ್ಟುವ ಪ್ರಯತ್ನಕ್ಕೆ ಮುಂದಾದಾಗ ಆಗಸಕ್ಕೆ ನೆಗೆದ ಚೆಂಡು ಸುರಕ್ಷಿತವಾಗಿ ರೋಹಿತ್ ಶರ್ಮ ಕೈಗಳಲ್ಲಿ ಬಂಧಿಯಾಯಿತು.
ಆರನ್ ಫಿಂಚ್ ಮೊದಲ ಓವರಿನಲ್ಲೇ “ನೋಬಾಲ್ ಲೈಫ್’ ಪಡೆದರೂ 11ರ ಗಡಿ ದಾಟಲಿಲ್ಲ (35 ಎಸೆತ, 1 ಬೌಂಡರಿ). ಚೊಚ್ಚಲ ಟೆಸ್ಟ್ ಆಡುತ್ತಿರುವ ಮಾರ್ಕಸ್ ಹ್ಯಾರಿಸ್ ಸಣ್ಣದೊಂದು ಭರವಸೆ ಮೂಡಿಸಿದ ಬಳಿಕ ಶಮಿ ಎಸೆತವನ್ನು ಕೀಪರ್ ಪಂತ್‌ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. 44 ರನ್ನಿಗೆ 2 ವಿಕೆಟ್ ಬಿತ್ತು. ಸ್ಕೋರ್ 60ಕ್ಕೆ ಏರಿದಾಗ ಖ್ವಾಜಾ ವಾಪಸಾದರು (42 ಎಸೆತ, 8 ರನ್). ಹ್ಯಾಂಡ್ಸ್‌ಕಾಂಬ್ 40 ಎಸೆತ ಎದುರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಮಾರ್ಷ್-ಹೆಡ್ ಕೊನೆಯ ಅವಧಿಯ 12 ಓವರ್‌ಗಳನ್ನು ಬಹಳ ಎಚ್ಚರಿಕೆ ಹಾಗೂ ಆತಂಕದೊಂದಿಗೆ ನಿಭಾಯಿಸಿದ್ದಾರೆ.
ಪೂಜಾರ-ರಹಾನೆ “70’ರ ಆಟ
3ಕ್ಕೆ 151 ರನ್ ಮಾಡಿದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಪೂಜಾರ-ರಹಾನೆ ತಂಡದ ಮೊತ್ತವನ್ನು 234ರ ತನಕ ಏರಿಸಿ ದರು. ಭಾರತದ ಸ್ಕೋರ್ 350ರ ಗಡಿ ದಾಟುವ ದಟ್ಟ ನಿರೀಕ್ಷೆ ಇತ್ತು. ಆದರೆ ಇಲ್ಲಿಂದ ಮುಂದೆ ಸ್ಪಿನ್ನರ್ ನಥನ್ ಲಿಯೋನ್ ಸ್ಪಿನ್ ದಾಳಿಗೆ ತತ್ತರಿಸಿದ ಪ್ರವಾಸಿ ತಂಡ ಪಟಪಟನೆ ವಿಕೆಟ್ ಕಳೆದುಕೊಳ್ಳುತ್ತ ಹೋಯಿತು. ಲಿಯೋನ್ 122 ರನ್ ನೀಡಿ 6 ವಿಕೆಟ್ ಉರುಳಿಸಿದರು. ಮೊದಲ ಸರದಿಯ ಶತಕವೀರ ಪೂಜಾರ ಮತ್ತೆ ಆಪತಾºಂಧವನಾಗಿ ಮೂಡಿಬಂದು ಸರ್ವಾಧಿಕ 71 ರನ್ ಬಾರಿಸಿದರು. 204 ಎಸೆತಗಳ ಈ ಸೊಗಸಾದ ಆಟದಲ್ಲಿ 9 ಬೌಂಡರಿ ಒಳಗೊಂಡಿತ್ತು. ರಹಾನೆ 147 ಎಸೆತ ನಿಭಾಯಿಸಿ 70 ರನ್ ಹೊಡೆದರು (7 ಬೌಂಡರಿ). ಇವರಿಬ್ಬರ 4ನೇ ವಿಕೆಟ್ ಜತೆಯಾಟದಲ್ಲಿ 87 ರನ್ ಒಟ್ಟುಗೂಡಿತು. ರೋಹಿತ್ ಶರ್ಮ ಮೇಲಿರಿಸಿದ ನಿರೀಕ್ಷೆ ಹುಸಿಯಾಯಿತು (1 ರನ್). ಮುನ್ನುಗ್ಗಿ ಹೋದ ಪಂತ್ 16 ಎಸೆತಗಳಿಂದ 28 ರನ್ ಸಿಡಿಸಿದರು (4 ಬೌಂಡರಿ, 1 ಸಿಕ್ಸರ್). ತಂಡದ 4 ಮಂದಿ ಸ್ಪೆಷಲಿಸ್ಟ್ ಬೌಲರ್‌ಗಳಿಂದ ಸಂದಾಯವಾದದ್ದು ಐದೇ ರನ್. ಇದು ಅಶ್ವಿನ್ ಬ್ಯಾಟಿನಿಂದ ಬಂದಿತ್ತು.
ಮೊದಲ ಅವಧಿ ನಿರ್ಣಾಯಕ
ಎರಡೂ ತಂಡಗಳಿಗೆ ಸೋಮವಾರದ ಮೊದಲ ಅವಧಿಯ ಆಟ ನಿರ್ಣಾಯಕ. ಶಾನ್ ಮಾರ್ಷ್ (92 ಎಸೆತಗಳಿಂದ 31 ರನ್) ಮತ್ತು ಟ್ರ್ಯಾವಿಸ್ ಹೆಡ್ (37 ಎಸೆತಗಳಿಂದ 11) ಪೂಜಾರ ಅವರಂತೆ ಕ್ರೀಸ್ ಆಕ್ರಮಿಸಿಕೊಳ್ಳುವುದನ್ನು ಆಸೀಸ್ ಎದುರು ನೋಡುತ್ತಿದೆ. ನಾಯಕ ಪೇನ್, ಸ್ಟಾರ್ಕ್, ಲಿಯೋನ್ ಬ್ಯಾಟಿನಿಂದ ರನ್ ಹರಿದು ಬರುವುದನ್ನೂ ನಿರೀಕ್ಷಿಸುತ್ತಿದೆ. ತೇವಾಂಶದ ಲಾಭವೆತ್ತಿ, ಮಾರ್ಷ್-ಹೆಡ್ ಜೋಡಿಯನ್ನು ಬೇಗನೇ ಬೇರ್ಪಡಿಸಿ, ಇನ್ನೂ ಕೆಲವು ವಿಕೆಟ್ ಉಡಾಯಿಸುವುದು ಭಾರತದ ಮುಂಜಾನೆಯ ಯೋಜನೆ.
ಕಪ್ಪುಪಟ್ಟಿ ಧರಿಸಿ ಆಡಿದ ಆಸೀಸ್ ಕ್ರಿಕೆಟಿಗರು
ಅಡಿಲೇಡ್ ಟೆಸ್ಟ್ ಪಂದ್ಯದ 4ನೇ ದಿನವಾದ ರವಿವಾರ ಆಸ್ಟ್ರೇಲಿಯ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿ ಆಡಲಿಳಿದಿದ್ದರು. ಆಸ್ಟ್ರೇಲಿಯದ ಮಾಜಿ ಟೆಸ್ಟ್ ಕ್ರಿಕೆಟಿಗ ಕಾಲಿನ್ ಗೆಸ್ಟ್ ನಿಧನರಾದ ಕಾರಣ ಶೋಕಸೂಚಕವಾಗಿ ಕಪ್ಪುಪಟ್ಟಿ ಕಟ್ಟಿಕೊಂಡಿದ್ದರು. 81 ವರ್ಷ ವಯಸ್ಸಿನ ಕಾಲಿನ್ ಗೆಸ್ಟ್ ಶನಿವಾರ ನಿಧನ ಹೊಂದಿದರು. ಅವರು ಆಸ್ಟ್ರೇಲಿಯ ಪರ ಏಕೈಕ ಟೆಸ್ಟ್ ಆಡಿದ್ದರು. 1962-63ರ ಆ್ಯಶಸ್ ಸರಣಿಯ ಸಿಡ್ನಿ ಟೆಸ್ಟ್ ಅವರ ಮೊದಲ ಹಾಗೂ ಕೊನೆಯ ಪಂದ್ಯವೆನಿಸಿತು. ವೇಗದ ಬೌಲರ್ ಆಗಿದ್ದ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದರು.
ಅಂಪಾಯರ್ ತೀರ್ಪು ಪಾಂಟಿಂಗ್ ಆಕ್ರೋಶ
ಭಾರತ-ಆಸ್ಟ್ರೇಲಿಯ ನಡುವಿನ ಅಡಿಲೇಡ್ ಟೆಸ್ಟ್ ಪಂದ್ಯದ ತೀರ್ಪುಗಾರರ ಗುಣಮಟ್ಟದ ಬಗ್ಗೆ ರಿಕಿ ಪಾಂಟಿಂಗ್ ಕಿಡಿಕಾರಿದ್ದಾರೆ. ಇಶಾಂತ್ ಶರ್ಮ ಎಸೆತದಲ್ಲಿ ಆರನ್ ಫಿಂಚ್ ಲೆಗ್ ಬಿಫೋರ್ ಆಗಿದ್ದರು. ಅಂಪಾಯರ್ ಔಟ್ ಕೂಡ ನೀಡಿದ್ದರು. ಆದರೆ ತೀರ್ಪು ಮರು ಪರಿಶೀಲನೆಯಲ್ಲಿ ಇಶಾಂತ್ ಎಸೆತ ನೋಬಾಲ್ ಎಂದು ತಿಳಿದುಬಂತು. ಅನಂತರ ಅಂಪಾಯರ್ ಕುಮಾರ ಧರ್ಮಸೇನ ನಾಟೌಟ್ ತೀರ್ಪು ಪ್ರಕಟಿಸಿದರು. ಇದು ಪಾಂಟಿಂಗ್ ಅವರನ್ನು ಕೆರಳಿಸಿದೆ. ಅಂಪಾಯರ್‌ಗಳು ಯಾರಾದರೂ ಔಟಾದಾಗ ಮಾತ್ರ ನೋಬಾಲ್ ಹೌದೋ ಅಲ್ಲವೋ ಎಂದು ಪರಿಶೀಲಿಸುವ ಮಟ್ಟಕ್ಕೆ ತಲುಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಂಟಿಂಗ್ ಟೀಕೆಯ ವಿರುದ್ಧ ಹಲವರು ಪ್ರತಿಕ್ರಿಯಿಸಿದ್ದಾರೆ. ತಮ್ಮ ತಂಡದ ಆಟಗಾರನ ವಿರುದ್ಧ ತಪ್ಪು ತೀರ್ಪು ಬಂದಾಗ ಮಾತ್ರ ಅವರು ಟೀಕಿಸುತ್ತಾರೆ ಎಂದಿದ್ದಾರೆ.
ಎಕ್ಸ್‌ಟ್ರಾ ಇನ್ನಿಂಗ್ಸ್
*ಚೇತೇಶ್ವರ್ ಪೂಜಾರ ವಿದೇಶದ ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್ ಗಳಲ್ಲಿ ಇನ್ನೂರಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ಉಳಿದವರೆಂದರೆ ವಿಜಯ್ ಹಜಾರೆ (ಆಸ್ಟ್ರೇಲಿಯ ವಿರುದ್ಧದ ಅಡಿಲೇಡ್ ಟೆಸ್ಟ್, 1948), ಮನ್ಸೂರ್ ಅಲಿ ಖಾನ್ ಪಟೌಡಿ (ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್, 1967) ಮತ್ತು ರಾಹುಲ್ ದ್ರಾವಿಡ್ (ನ್ಯೂಜಿಲ್ಯಾಂಡ್ ವಿರುದ್ಧದ ನೇಪಿಯರ್ ಟೆಸ್ಟ್, 2009).
*ಪೂಜಾರ ಕಳೆದ 24 ವರ್ಷಗಳಲ್ಲಿ ಆಸ್ಟ್ರೇಲಿಯದಲ್ಲಿ ಆಡಲಾದ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 200 ಪ್ಲಸ್ ಎಸೆತ ಎದುರಿಸಿದ ಮೊದಲ ಬ್ಯಾಟ್ಸ್ ಮನ್. 1994ರ ಅಡಿಲೇಡ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಪೀಟರ್ ಕರ್ಸ್ಟನ್ ಈ ಸಾಧನೆಗೈದಿದ್ದರು.
*ಭಾರತದ 5 ಮಂದಿ ಆಟಗಾರರು ತಮ್ಮ ಟೆಸ್ಟ್ ಬಾಳ್ವೆಯಲ್ಲಿ ನಥನ್ ಲಿಯೋನ್ ಎಸೆತಗಳಿಗೆ ಅತ್ಯಧಿಕ ಸಲ ವಿಕೆಟ್ ಒಪ್ಪಿಸಿ ಸುದ್ದಿಯಾದರು. ಇವರೆಂದರೆ ಪೂಜಾರ (8), ರಹಾನೆ (7), ಕೊಹ್ಲಿ (6), ಇಶಾಂತ್ ಶರ್ಮ (6) ಮತ್ತು ರೋಹಿತ್ ಶರ್ಮ (5).
*ಲಿಯೋನ್ ಭಾರತದ ವಿರುದ್ಧ ಅಡಿಲೇಡ್‌ನಲ್ಲಿ ಆಡಿದ 3 ಟೆಸ್ಟ್‌ಗಳಲ್ಲಿ 25 ವಿಕೆಟ್ ಉರುಳಿಸಿದರು. ಅವರು ಭಾರತದೆದುರು ಒಂದೇ ಅಂಗಳದಲ್ಲಿ ಅತ್ಯಧಿಕ ವಿಕೆಟ್ ಕಿತ್ತ 3ನೇ ಸಾಧಕನಾಗಿದ್ದಾರೆ. ಉಳಿದಿಬ್ಬರೆಂದರೆ ಮುತ್ತಯ್ಯ ಮುರಳೀಧರನ್ (ಕೊಲಂಬೋದ ಎಸ್.ಎಸ್.ಸಿ.ಯಲ್ಲಿ 29 ವಿಕೆಟ್) ಮತ್ತು ಜೇಮ್ಸ್ ಆ್ಯಂಡರ್ಸನ್ (ಲಾರ್ಡ್ಸ್‌ನಲ್ಲಿ 28 ವಿಕೆಟ್).
*ಭಾರತ ಈ ಟೆಸ್ಟ್‌ನಲ್ಲಿ ಒಟ್ಟು 9 ಸಿಕ್ಸರ್ ಬಾರಿಸಿತು. ಇದು ವಿದೇಶಿ ಟೆಸ್ಟ್‌ನಲ್ಲಿ ಭಾರತ ಹೊಡೆದ ಅತ್ಯಧಿಕ ಸಿಕ್ಸರ್‌ಗಳ ಜಂಟಿ ದಾಖಲೆ. ಪಾಕಿಸ್ಥಾನ ವಿರುದ್ಧದ 2006ರ ಫೈಸಲಾಬಾದ್ ಟೆಸ್ಟ್, ಇಂಗ್ಲೆಂಡ್ ಎದುರಿನ 2007ರ ಓವಲ್ ಟೆಸ್ಟ್ ಹಾಗೂ ಶ್ರೀಲಂಕಾ ಎದುರಿನ 2017ರ ಕೊಲಂಬೊ ಟೆಸ್ಟ್‌ನಲ್ಲೂ ಭಾರತ 9 ಸಿಕ್ಸರ್ ಹೊಡೆದಿತ್ತು.
*ಭಾರತ ಆಸ್ಟ್ರೇಲಿಯದಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ ಸರ್ವಾಧಿಕ ಸಿಕ್ಸರ್ ಸಿಡಿಸಿದ ದಾಖಲೆ ಸ್ಥಾಪಿಸಿತು. 2015 ಸಿಡ್ನಿ ಪಂದ್ಯದಲ್ಲಿ 8 ಸಿಕ್ಸರ್ ಬಾರಿಸಿದ್ದು ಹಿಂದಿನ ದಾಖಲೆ.
*ಈ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಆರನ್ ಫಿಂಚ್ ಅವರನ್ನು ಖಾತೆ ತೆರೆಯುವ ಮೊದಲೇ ಔಟ್ ಮಾಡುವ ಅವಕಾಶವೊಂದು ಇಶಾಂತ್ ಶರ್ಮ ಅವರಿಗೆ ಎದುರಾಗಿತ್ತು. ಆದರೆ ಅದು ನೋಬಾಲ್ ಆಗಿತ್ತು. ಇಲ್ಲವಾದರೆ 43 ವರ್ಷಗಳ ಬಳಿಕ ತವರಿನ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯ ತಂಡ ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದುಕೊಂಡ ದಾಖಲೆ ಬರೆಯುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.