ಹಾರ ಹಾಕಿಸಿಕೊಂಡು ಮಿಂಚಿನಂತೆ ಮಾಯವಾದ!
Team Udayavani, Dec 11, 2018, 11:55 AM IST
ಸನ್ಮಾನಿತನಾಗಬೇಕಿದ್ದ ವಿದ್ಯಾರ್ಥಿ ಮುಗುಳ್ನಗುತ್ತಾ ಕೂತಿದ್ದ. “ಬೇಗ ಹಾರ ತನ್ನಿ’ ಎಂದು ನಿರೂಪಕರು ಹೇಳುತ್ತಿದ್ದರು. ಆದರೆ, ಹಾರ-ತುರಾಯಿ ನಾಪತ್ತೆಯಾಗಿದ್ದರಿಂದ ಕಾರ್ಯಕ್ರಮ ಆಯೋಜಿಸಿದ್ದವರು ಗೊಂದಲದ ನಡುವೆ ಕಂಗಾಲಾಗಿದ್ದರು…
ಅದು 70ರ ದಶಕ. ನಾನಾಗ ಪದವಿ ತರಗತಿಯಲ್ಲಿ ಓದುತ್ತಿದ್ದೆ. ನಮ್ಮದು ಕೋ ಎಜುಕೇಷನ್ ಕಾಲೇಜಾಗಿದ್ದರೂ, ಹುಡುಗಿಯರಿಗಿಂತ ಹುಡುಗರ ಸಂಖ್ಯೆಯೇ ಹೆಚ್ಚಾಗಿತ್ತು. ನಮ್ಮ ಕ್ಲಾಸಿನ ಹುಡುಗರಂತೂ ಬಹಳ ತರಲೆಗಳೆಂದು ಹೆಸರು ಪಡೆದವರು. ಪಾಠ ಮಾಡಲು ಲೆಕ್ಚರರ್ ಬಂದಾಗ ಅವರು ತಬ್ಬಿಬ್ಟಾಗುವಂತೆ ಏನೇನೋ ಪ್ರಶ್ನೆಗಳನ್ನು ಕೇಳಿ ಅವರನ್ನು ಕಂಗಾಲಾಗಿಸುತ್ತಿದ್ದರು.
ಒಮ್ಮೆ ರಾಜ್ಯಶಾಸ್ತ್ರದ ಲೆಕ್ಚರರ್ ಬಹಳ ಗಂಭೀರವಾಗಿ ಪಾಠ ಮಾಡುತ್ತಿದ್ದರು. ಪಾಠದ ಮಧ್ಯೆ “ಪ್ರಮೋಷನ್’ ಎಂಬ ಪದ ಬಂತು. ತಕ್ಷಣ ಒಬ್ಬ ಹುಡುಗ ಎದ್ದು ನಿಂತು, “ಸರ್, ಪ್ರಮೋಷನ್ ಪದದ ವಿರುದ್ಧ ಪದ ಯಾವುದು? ‘ ಎಂದು ಕೇಳಿದ. ಆಗ ಉಪನ್ಯಾಸಕರು, “ಡಿಮೋಷನ್ ಅಂತಾರೆ. ಮುಂಬಡ್ತಿ, ಹಿಂಬಡ್ತಿ ಎನ್ನುತ್ತಾರಲ್ಲ ಅದು. ಸರ್ಕಾರಿ ಕೆಲಸದಲ್ಲಿರುವ ಯಾರಾದರೂ ಕೆಲಸದಲ್ಲಿ ತಪ್ಪು ಮಾಡಿದರೆ, ಮೇಲಿನ ಅಧಿಕಾರದಿಂದ ವಜಾಗೊಳಿಸಿ ಕೆಳಗಿನ ಸ್ಥಾನಕ್ಕೆ ತಳ್ಳುತ್ತಾರೆ.
ಅದಕ್ಕೆ ಹಿಂಬಡ್ತಿ ಅನ್ನುತ್ತಾರೆ’ ಅಂತ ಹೇಳಿದರು. ಮರುಕ್ಷಣವೇ, ಅದ್ಸರಿ, ಯಾಕೆ ಈಗ ಈ ಪ್ರಶ್ನೆ ಬಂತು? ಅಂತ ಕೇಳಿದರು. ಅದಕ್ಕೆ ಅವನು, “ಯಾಕೂ ಇಲ್ಲ ಸರ್. ಇವ್ನಿದಾನಲ್ಲ, ಇವನ ತಂದೆಗೆ ಇತ್ತೀಚೆಗೆ ಡಿಮೋಷನ್ ಆಯ್ತು ಅಂತ ಗೊತ್ತಾಯ್ತು. ಅದಕ್ಕೇ ಕೇಳಿದೆ’ ಅಂತ ತನ್ನ ಪಕ್ಕ ಕುಳಿತಿದ್ದ ಸ್ನೇಹಿತನನ್ನು ತೋರಿಸಿ ಹೇಳಿದ. ಆ ಸ್ನೇಹಿತನಂತೂ, ಅವನ ಮಾತಿನಿಂದ ತನಗೇನೂ ಆಗಿಯೇ ಇಲ್ಲವೆಂಬಂತೆ ಕುಳಿತಿದ್ದ.
ಅಧ್ಯಾಪಕರನ್ನೂ ಸೇರಿ, ಇಡೀ ವಿದ್ಯಾರ್ಥಿ ವೃಂದವೇ ನಗೆಗಡಲಿನಲ್ಲಿ ತೇಲಿತು. ಇಂಥ ಪೋಕರಿಗಳು ನಮ್ಮ ಸಹಪಾಠಿಗಳು. ಒಮ್ಮೆ, ನಮ್ಮ ತರಗತಿಯ ವಿದ್ಯಾರ್ಥಿಗಳೆಲ್ಲಾ ಸೇರಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಮ್ಮ ಕಾಲೇಜಿನ ಇತರೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಉದ್ದೇಶದಿಂದ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಅಂದು ಕಾಲೇಜಿನ ವಾರ್ಷಿಕೋತ್ಸವೂ ಇತ್ತು. ಹಾಗಾಗಿ, ಕಾಲೇಜಿನ ಕ್ಯಾಂಪಸ್ ಪ್ರೇಕ್ಷಕರಿಂದ ಕಿಕ್ಕಿರಿದಿತ್ತು.
ಸನ್ಮಾನಕ್ಕೆ ತಂದಿದ್ದುದು ಒಂದು ಹೂವಿನ ಮಾಲೆ, ಒಂದೇ ಒಂದು ಹೂಗುತ್ಛ ಮತ್ತು ಎಲ್ಲ ಸನ್ಮಾನಿತರಿಗೆ ಟ್ರೋಫಿಗಳು. ಮೊದಲನೆಯ ಸನ್ಮಾನಿತ ವಿದ್ಯಾರ್ಥಿ, ಸನ್ಮಾನ ಮುಗಿಸಿ ಒಳಗೆ ಹೋದ ತಕ್ಷಣ, ತನಗೆ ಹಾಕಿದ್ದ ಹೂಮಾಲೆ ಮತ್ತು ತುರಾಯಿಯನ್ನು ತೆಗೆದು, ವಾಪಸ್ ಕೊಡಬೇಕಿತ್ತು. ಅದೇ ಮಾಲೆ, ತುರಾಯಿಯಿಂದ ಇನ್ನೊಬ್ಬನಿಗೆ ಸನ್ಮಾನ ಮಾಡುವುದೆಂದು ಯೋಜನೆ ಹಾಕಿದ್ದರು. ಹೀಗೆಂದು ಅವರವರಲ್ಲೇ ಒಳ ಒಪ್ಪಂದ ನಡೆದಿತ್ತು.
ಈ ವಿಷಯ ಸನ್ಮಾನಿತರನ್ನೂ ಸೇರಿಸಿ, ನಮ್ಮಲ್ಲಿ ಕೆಲವರಿಗೆ ಮತ್ತು ವೇದಿಕೆಯ ಹಿಂಬದಿ ಇದ್ದವರಿಗೆ ಮಾತ್ರ ಗೊತ್ತಿತ್ತು. ಹಾಗಾಗಿ ಸನ್ಮಾನ ಆಗುತ್ತಿರುವಾಗ ನಾವೆಲ್ಲಾ ನಗುತ್ತಾ, ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದೆವು. ಹೀಗೆ, ಯಾವುದೇ ಅಡಚಣೆಯಿಲ್ಲದೆ ಕೆಲವಾರು ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ಮೊದಲನೆಯ ಬಿ.ಎ. ತರಗತಿಯ ವಿದ್ಯಾರ್ಥಿ ಒಬ್ಬ ಬಹಳ ಕಿಲಾಡಿ ಇದ್ದ. ಎಲ್ಲರೂ ಚಾಪೆ ಕೆಳಗೆ ತೂರಿದರೆ, ಅವನು ರಂಗೋಲಿ ಕೆಳಗೆ ತೂರುವಷ್ಟು ಚಾಣಾಕ್ಷ.
ಅವನಿಗೂ ಕೂಡ ಸನ್ಮಾನ ನಡೆಯುವುದಿತ್ತು. ಆತ, ಎಲ್ಲರಿಗೂ ಬುದ್ಧಿ ಕಲಿಸುತ್ತೇನೆಂದು ಒಳಗೊಳಗೇ ನಿರ್ಧರಿಸಿಕೊಂಡು ಬಂದಿದ್ದ. ಅವನು ಸನ್ಮಾನಿತನಾಗಿ ಒಳಗೆ ಹೋದವನೇ ಹಾರ ತುರಾಯಿಯನ್ನು ವಾಪಸ್ ಕೊಡದೆ ಮಿಂಚಿನಂತೆ ಮಾಯವಾಗಿಬಿಟ್ಟ. ಅಷ್ಟರಲ್ಲಿ, ಇನ್ನೊಬ್ಬನನ್ನು ವೇದಿಕೆಗೆ ಕರೆದು, ಸನ್ಮಾನಿಸಲೆಂದು ಕುರ್ಚಿಯಲ್ಲಿ ಕುಳ್ಳಿರಿಸಿಯಾಗಿದೆ. ನಿರೂಪಕರು ಹಾರ ಕೊಡಿ ಅನ್ನುತ್ತಿದ್ದಾರೆ.
ಆದರೆ ಅಲ್ಲಿ ಹಾರವಿಲ್ಲ, ತುರಾಯಿಯೂ ಇಲ್ಲ. ಎಲ್ಲರೂ ಗಲಿಬಿಲಿಯಾಗಿ ಬಿಟ್ಟರು. ಹಾರ-ತುರಾಯಿಯೊಂದಿಗೆ ಮಾಯವಾದವನನ್ನು ಹುಡುಕುತ್ತಾ ಒಳ ಹೋಗುತ್ತಾರೆ, ಹೊರಗೆ ಬರುತ್ತಾರೆ. ಅವರ ಗಡಿಬಿಡಿ ನೋಡಿ ನಮಗೆಲ್ಲಾ ವಿಷಯ ತಕ್ಷಣ ಗೊತ್ತಾಯಿತು. ಕ್ರಮೇಣ ಇನ್ನುಳಿದ ವಿದ್ಯಾರ್ಥಿಗಳಿಗೂ ಗೊತ್ತಾಗಿ, ಎಲ್ಲರೂ ಶಿಳ್ಳೆ-ಕೇಕೆ ಹಾಕುತ್ತಾ ಗಲಾಟೆ ಮಾಡತೊಡಗಿದರು.
ಎಷ್ಟು ಹೊತ್ತು ಅವನನ್ನು ಸ್ಟೇಜಿನ ಕುರ್ಚಿಯ ಮೇಲೆ ಕೂರಿಸಿಟ್ಟುಕೊಳ್ಳುವುದು? ಕಡೆಗೆ, ಟ್ರೋಫಿಯೊಂದನ್ನೇ ಕೈಗಿಟ್ಟು ಕಳುಹಿಸಬೇಕಾಯ್ತು. ಕೊನೆಗೆ ಎಲ್ಲರ ಸನ್ಮಾನ ಕಾರ್ಯಕ್ರಮ ಮುಗಿದ ಮೇಲೆ, ಬಿ.ಎ. ತರಗತಿಯ ಆ ವಿದ್ಯಾರ್ಥಿ ಕ್ಯಾಂಪಸ್‌ನಲ್ಲಿ ಪ್ರತ್ಯಕ್ಷನಾದ. ಅವನ ಪರವಾಗಿ ಇರುವವರೆಲ್ಲರೂ ಅವರ ಬೆನ್ನು ತಟ್ಟುತ್ತಿದ್ದರೆ, ನಮ್ಮ ತರಗತಿಯವರು ಅವನತ್ತ ಕೆಂಗಣ್ಣು ಬೀರುತ್ತಾ,
ನಿನ್ನನ್ನು ಆಮೇಲೆ ನೋಡಿಕೊಳ್ಳುತ್ತೇವೆ ಎಂದು ಕಣ್ಣಲ್ಲೇ ಸೂಚನೆ ಕೊಡುತ್ತಿದ್ದರು. ಅಂತೂ ಇಂತೂ ಆ ಸಣ್ಣ ಕಿಲಾಡಿ, ದೊಡ್ಡ ಕಿಲಾಡಿಗಳಿಗೆ ಚಳ್ಳೆಹಣ್ಣು ತಿನ್ನಿಸಿಬಿಟ್ಟಿದ್ದ. ನಮ್ಮವರ ಜಿಪುಣತನಕ್ಕೆ ತಕ್ಕ ಶಾಸ್ತಿಯಾಗಿತ್ತು. ಈ ಘಟನೆ ನಡೆದು ಹಲವಾರು ವರ್ಷಗಳು ಕಳೆದು ಹೋಗಿದ್ದರೂ ಇಂದಿಗೂ ಯಾರಿಗಾದರೂ ಸನ್ಮಾನ ಎಂದರೆ ಸಾಕು ಈ ಸನ್ನಿವೇಶ ನೆನಪಾಗಿ ತುಟಿಯಂಚಿನಲ್ಲಿ ನಗೆ ಮೂಡುತ್ತದೆ.
* ಪುಷ್ಪ ಎನ್.ಕೆ. ರಾವ್, ವಿಠಲ್‌ನಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.