ಕಿರಿಯ ಕಲಾವಿದರಲ್ಲಿ ಹಿರಿಯ ಕಲಾವಿದರ ಛಾಪು
Team Udayavani, Dec 14, 2018, 6:00 AM IST
ಉಡುಪಿ ಶ್ರೀಕೃಷ್ಣಮಠದಲ್ಲಿ ಈಗ ಪ್ರತಿನಿತ್ಯ ಬಾಲಕ, ಬಾಲಕಿಯರ ಯಕ್ಷಗಾನ. ಡಿ. 7ರಿಂದ ಪ್ರತಿಭೆ ಪ್ರದರ್ಶನಗೊಳ್ಳುತ್ತಿದೆ. ಮುಮ್ಮೇಳದಲ್ಲಿ ಪಾಲ್ಗೊಳ್ಳುವ ಮಕ್ಕಳು ಅಪರೂಪದಲ್ಲಿ ಹಿಮ್ಮೇಳದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ಕಲಾವಿದರ ಯಕ್ಷಗಾನ ಪ್ರದರ್ಶನಕ್ಕೆ ಅದರದ್ದೇ ಆದ ಪ್ರೇಕ್ಷಕ ವರ್ಗವಿದೆ. ಈ ವರ್ಗ ವಿದ್ಯಾರ್ಥಿಗಳ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಿದರೆ ಹಿರಿಯ ಕಲಾವಿದರ ಮಟ್ಟಕ್ಕೆ ಇವರೂ ಏರಲಿದ್ದಾರೆ.
11 ವರ್ಷಗಳ ನಿರಂತರ ಪ್ರದರ್ಶನ
ವಿದ್ಯುನ್ಮತಿ ಕಲ್ಯಾಣ, ರಾಣಿ ಶಶಿಪ್ರಭೆ, ಜಾಂಬವತಿ ಕಲ್ಯಾಣ, ರುಕ್ಮಿಣೀ ವಿವಾಹ, ಶ್ರೀಕೃಷ್ಣ ಪಾರಿಜಾತವೇ ಮೊದಲಾದ ಹಿರಿಯ ಕಲಾವಿದರು ಪ್ರದರ್ಶಿಸುವ ಪ್ರಸಂಗಗಳನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಆಡಿ ತೋರಿಸುತ್ತಿದ್ದಾರೆ. 12 ವರ್ಷಗಳ ಹಿಂದೆ ಆರಂಭಗೊಂಡ ಯಕ್ಷ ಶಿಕ್ಷಣ ಟ್ರಸ್ಟ್ 11 ವರ್ಷಗಳಿಂದ ಡಿಸೆಂಬರ್ ತಿಂಗಳಲ್ಲಿ ಯಕ್ಷಗಾನ ಮಾಸವೆಂಬಂತೆ ಆಚರಿಸುತ್ತಿದೆ. ರಾಜಾಂಗಣದಲ್ಲಿ ಉಡುಪಿ ಸನಿಹದ 30 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಡಿ. 22ರವರೆಗೆ 30 ಪ್ರದರ್ಶನವನ್ನು ಮತ್ತು ಬ್ರಹ್ಮಾವರ ಆಸುಪಾಸಿನ 14 ಶಾಲೆಗಳ ವಿದ್ಯಾರ್ಥಿಗಳು ಡಿ. 23ರಿಂದ 29ರವರೆಗೆ 15 ಪ್ರದರ್ಶನದ ಮೂಲಕ ತಮ್ಮ ಕಲಾಪ್ರೌಢಿಮೆ ಮೆರೆಯಲಿದ್ದಾರೆ. ಅಪರಾಹ್ನ 3.30ರಿಂದ 5 ಗಂಟೆ ಮತ್ತು ರಾತ್ರಿ 7 ಗಂಟೆಯಿಂದ 8.30ರವರೆಗೆ ಪ್ರದರ್ಶನ ನೀಡಿದರೆ, ಶನಿವಾರ- ರವಿವಾರ ದಿನವೂ ಮೂರು ಪ್ರದರ್ಶನ ಗಳು ನಡೆಯುತ್ತದೆ. ಬ್ರಹ್ಮಾವರದ ಬಸ್ ನಿಲ್ದಾಣ ಸಮೀಪದ ವೇದಿಕೆಯಲ್ಲಿ ಸಂಜೆ 5.30ರಿಂದ 7 ಮತ್ತು 7ರಿಂದ 8.30ರವರೆಗೆ ಎರಡು ಪ್ರದರ್ಶನ ನಡೆಯಲಿದೆ.
1,300 ವಿದ್ಯಾರ್ಥಿಗಳ ಕಲಾ ಪ್ರತಿಭೆ
ಉಡುಪಿಯಲ್ಲಿ ಸುಮಾರು 900 ವಿದ್ಯಾರ್ಥಿಗಳು, ಬ್ರಹ್ಮಾವರದಲ್ಲಿ ಸುಮಾರು 400 ವಿದ್ಯಾರ್ಥಿಗಳು ಕಳೆದ ಹತ್ತು ವರ್ಷಗಳಿಂದ ಕಲಾರಾಧನೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಟ್ರಸ್ಟ್ ಗೌರವಾಧ್ಯಕ್ಷರಾಗಿ ಶ್ರೀಕೃಷ್ಣಮಠದ ಪರ್ಯಾಯ ಸ್ವಾಮೀಜಿ, ಕಾರ್ಯಾಧ್ಯಕ್ಷರಾಗಿ ಹಾಲಿ ಶಾಸಕರು, ಕಾರ್ಯದರ್ಶಿಗಳಾಗಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳು ಕಾರ್ಯನಿರ್ವಹಿಸುವ ಸ್ಥಾಯಿ ವ್ಯವಸ್ಥೆ ರೂಪಿಸಲಾಗಿದೆ. ಈ ಪ್ರದರ್ಶನದಲ್ಲಿ ಪಾಲ್ಗೊಂಡ ತಂಡಗಳು ಶಾಲಾ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡುವುದು, ಯಕ್ಷಗಾನ ಕಲಾರಂಗ ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಪ್ರಯತ್ನದಿಂದ ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನ ಪ್ರದರ್ಶನದ ಸೇರ್ಪಡೆ, ಕೆಲವೆಡೆ ಗಣೇಶೋತ್ಸವಗಳಲ್ಲಿಯೂ ವಿದ್ಯಾರ್ಥಿಗಳ ಪ್ರದರ್ಶನ ನಡೆಯುತ್ತಿರುವುದು ಟ್ರಸ್ಟ್‌ನ ಪಾರ್ಶ್ವ ಸಾಧನೆಗಳು.
ಒಟ್ಟು 18 ಯಕ್ಷಗಾನದ ಗುರುಗಳು ಜೂನ್‌ನಿಂದ ಡಿಸೆಂಬರ್ ತನಕ ವಾರದಲ್ಲಿ ಸಮಯ ಮಾಡಿಕೊಂಡು ಎರಡು ಮೂರು ತರಗತಿಗಳನ್ನು ನಡೆಸಿ ಈ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ತಂದಿರಿಸುತ್ತಾರೆ.
ಚೇರ್ಕಾಡಿಯ ಮಂಜುನಾಥ ಪ್ರಭು ಮತ್ತು ಶಶಿಕಲಾ ಪ್ರಭು ದಂಪತಿ ಇಬ್ಬರೂ ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬ್ರಹ್ಮಾವರ ಸರಕಾರಿ ಪ.ಪೂ. ಕಾಲೇಜಿನಲ್ಲಿ ಸುಮಾರು ನೂರು ವಿದ್ಯಾರ್ಥಿಗಳಿರುವ ಕಾರಣ ಅಲ್ಲಿ ಬಾಲಕ ಮತ್ತು ಬಾಲಕಿಯರ ಎರಡು ಪ್ರತ್ಯೇಕ ಪ್ರದರ್ಶನ ನಡೆಯಲಿದೆ. ಉಡುಪಿಯ ಬಾಲಕಿಯರ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗ, ಸೈಂಟ್ ಸಿಸಿಲೀಸ್ ಶಾಲಾ ತಂಡದಲ್ಲಿ ವಿಶೇಷವಾಗಿ ಬಾಲಕಿಯರೇ ಇದ್ದಾರೆ.
ಒಟ್ಟು ಸುಮಾರು 1,300 ವಿದ್ಯಾರ್ಥಿಗಳಲ್ಲಿ ಶೇ. 50 ಮಕ್ಕಳು ಯಕ್ಷಗಾನ ಸಂಪರ್ಕವಿಲ್ಲದ ಹೊರ ಜಿಲ್ಲೆಯವರು, ಶೇ. 60ರಷ್ಟು ಬಾಲಕಿಯರು.
ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡೂ ಶಾಲೆಗಳ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ವಿವಿಧ ಸಮುದಾಯಗಳ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶಿಸುತ್ತಿದ್ದಾರೆ.
ಹತ್ತು ವರ್ಷಗಳ ಪ್ರಯತ್ನದಿಂದಾಗಿ ಐದಾರು ವಿದ್ಯಾರ್ಥಿಗಳು ಮೇಳಗಳಿಗೆ ಸೇರಿ ಕಲಾವಿದರ ಮಟ್ಟಕ್ಕೆ ಏರಿದ್ದಾರೆ. ಪ್ರತಿಭೆಯನುಸಾರ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದವರೂ ಇದ್ದಾರೆ.
ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಕಲಿತ ಮೂಲತಃ ತೀರ್ಥಹಳ್ಳಿಯ ಶೈಲೇಶ್ ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದಲ್ಲಿಯೂ ಕಲಿತು ಪ್ರಸ್ತುತ ಮೂರು ಶಾಲೆಗಳಿಗೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹೋದ ವರ್ಷ ಸಿಕ್ಕಿತ್ತಾದರೂ ಈ ವರ್ಷ ಸಿಕ್ಕಿಲ್ಲ. ಆದ ಕಾರಣ ವಾರ್ಷಿಕ 16-17 ಲಕ್ಷ ರೂ. ಖರ್ಚನ್ನು ಟ್ರಸ್ಟಿಗಳೇ ಭರಿಸುತ್ತಿದ್ದಾರೆ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.