ಪ್ರಬಂಧ: ಇಂಜೆಕ್ಷನ್ ಫೋಬಿಯಾ
Team Udayavani, Dec 16, 2018, 6:00 AM IST
ಹಾವು ತುಳಿದು ಸತ್ತವರಿಗಿಂತ ಹಗ್ಗ ತುಳಿದು ಸತ್ತವರ ಸಂಖ್ಯೆಯೇ ಹೆಚ್ಚು’ ಎಂಬ ಮಾತಿದೆ. ಭಯ ಮಾನವ ಸಹಜ ಗುಣ. ಕೆಲವರಿಗೆ ಹೆಂಡತಿಯ, ಗಂಡನ, ಅತ್ತೆಮಾವಂದಿರ, ನಾದಿನಿಯ, ದೆವ್ವ-ಭೂತದ ಭಯವಿದ್ದರೆ, ಹಲವರಿಗೆ ಕತ್ತಲೆ, ನೀರು, ಶಬ್ದ, ಎತ್ತರದ ಭಯವಿರುತ್ತದೆ. ಹೈಡ್ರೋಫೋಬಿಯಾ, ಹೀಮೋಫೋಬಿಯಾ, ಡೆಂಟೋಫೋಬಿಯಾ ಇದ್ದಂತೆ ನನ್ನದು ಇಂಜೆಕ್ಷನ್ ಫೋಬಿಯಾ. ನನ್ನ ಆರೋಗ್ಯದಲ್ಲಿ ಏನೇ ಏರುಪೇರಾದರೂ ಗುಳಿಗೆ ನುಂಗಿ ಪರಿಹರಿಸಿಕೊಂಡೇನು, ಆದರೆ ಇಂಜೆಕ್ಷನ್ ಎಂದರೆ ಎಗರಿ ಬಿದ್ದಂತಾಗುವುದು.
ದಶಕಗಳ ಹಿಂದೆ ಯಾವುದೇ ಕಾಯಿಲೆಯ ಲೇಬಲ… ಹೊತ್ತು ದವಾಖಾನೆಗೆ ಹೋದರೂ ಇಂಜೆಕ್ಷನ್ ಚುಚ್ಚುವುದು ಸಾಮಾನ್ಯವಾಗಿತ್ತು. ಇಲ್ಲದಿದ್ದರೆ ಕೆಲವು ಪೇಶೆಂಟುಗಳೇ ಖುದ್ದಾಗಿ, “”ಒಂದು ಸೂಜಿ ಹಾಕ್ಬಿಡಿ ಡಾಕ್ಟ್ರೇ, ಎಲ್ಲಾ ಸರಿಹೋಗುತ್ತೆ” ಎಂದು ತೀರ್ಪು ನೀಡಿ ವಸ್ತ್ರ ಸಡಿಲಿಸಿ ಮಲಗುತ್ತಿದ್ದರು. ಅವರ ಕೇಸ್ ಹಿಸ್ಟ್ರಿಗೂ, ಸೂಜಿಗೂ ಸಂಬಂಧವೇ ಇಲ್ಲದಿದ್ದರೂ ವೈದ್ಯರು ರೋಗಿಯ ದೇಹದೊಳಗೆ ಸೂಜಿಯನ್ನು ತೂರಿಸಲೇ ಬೇಕಿತ್ತು. ರೋಗಿಯೊಂದಿಗೆ ಅವರೂ ಬದುಕಬೇಕಾದ ಅನಿವಾರ್ಯ.
ನನಗೆ ಹೊಟ್ಟೆನೋವೋ, ಶೀತ ನೆಗಡಿಯೋ ಆಗಿ ಜ್ವರ ಬಂದರೆ ಕಾಯಿಲೆಯ ಬೇನೆಗಿಂತ ಇಂಜೆಕ್ಷನ್ ಭಯಕ್ಕೇ ಟೆಂಪರೇಚರ್ ಏರುತ್ತಿತ್ತು. ಆಸ್ಪತ್ರೆಯ ಒಳಹೊಕ್ಕ ಕೂಡಲೇ ನನ್ನ ಕೈಕಾಲುಗಳು ಥರಥರ ನಡುಗುತ್ತಿದ್ದವು. ಟೋಕನ್ ಹಿಡಿದು ಕುಳಿತಿರುತ್ತಿದ್ದ ಅಮ್ಮನೆಡೆಗೆ ಕರುಣಾಪೂರಿತ ದೃಷ್ಟಿ ಬೀರುತ್ತಿದ್ದೆ. ನನ್ನನ್ನು ಕಾಪಾಡಲು ಸಿಗಬಹುದಾದ ಕೊನೆಯ ಅವಕಾಶಕ್ಕಾಗಿ ಅಮ್ಮನ ತೊಡೆಯ ಮೇಲೆ ತಲೆ ಇರಿಸಿ ಕಣ್ಣೀರಾಗುತ್ತಿದ್ದೆ. “”ಏನಾಗಲ್ಲ, ಸುಮ್ನಿರು ಕಂದಾ. ಎಷ್ಟೊಂದು ಜ್ವರ ಇದೆ ನೋಡು, ಹೇಗೆ ನಡುಗ್ತಾ ಇದೀಯಾ, ಒಂದು ಇಂಜೆಕ್ಷನ್‌ಹಾಕಿದ್ರೆ ನಾಳೆ ಎದ್ದು ಓಡಾಡೋ ಹಾಗೆ ಆಗ್ತಿàಯಾ” ಎಂದು ಸಮಾಧಾನ ಮಾಡುವಷ್ಟರಲ್ಲೇ ಒಳಗಡೆಯ ಕೊಠಡಿಯಿಂದ, “”ಅಯ್ಯೋ! ಅಮ್ಮಾ!” ಎಂಬ ಆರ್ತನಾದ ಕೇಳಿ ಬರುತ್ತಿತ್ತು. ಈಗಾಗಲೇ ಇಂಜೆಕ್ಷನ್ ಪಡೆದ ನನ್ನಂಥ ಅಳ್ಳೆದೆಯ ರೋಗಿಗಳು ಕುಂಟುತ್ತ¤ ಹೊರಬರುತ್ತಿದ್ದರೆ ನನ್ನಲ್ಲಿದ್ದ ಅಲ್ಪಸ್ವಲ್ಪ ಧೈರ್ಯವೂ ಮಾಯವಾಗಿ ಅಧೀರಳಾಗುತ್ತಿದ್ದೆ. ಆ ದೃಶ್ಯವನ್ನು ಕಂಡು ಟೋಕನ್ ಹಿಡಿದು ಕುಳಿತ ಅನೇಕ ಮರಿರೋಗಿಗಳು ಆಲಾಪ ಪ್ರಾರಂಭಿಸಿದರೆ ನಾನೂ ಅವರಿಗೆ ಸಾಥ್ ನೀಡುತ್ತಿದ್ದೆ. ಅಷ್ಟರಲ್ಲೇ ಮೇಲ… ನರ್ಸ್ ಹೊರಬಂದು, “”ಇದೇನ್ ಹಾಸ್ಪಿಟಲ್ಲೋ, ಸಂತೇನೋ… ಮುಚ್ಚಿ ಬಾಯಿ” ಎಂದು ಗದರುತ್ತಿದ್ದರು. ಇಷ್ಟೆಲ್ಲ ಕರ್ಮ ಅನುಭವಿಸುವುದಕ್ಕಿಂತ ಕಾಯಿಲೆಯ ಕಾಟವೇ ವಾಸಿ ಎನಿಸುತ್ತಿತ್ತು. “ಟೋಕನ್ ಸಂಖ್ಯೆ ಹದಿನಾರು, ಹದಿನೇಳು…’ ಎಂದು ಮೇಲೇರಿ ನಮ್ಮ ಸರದಿ ಹತ್ತಿರ ಬಂದಂತೆ ನನ್ನ ಹೃದಯಬಡಿತ ದುಪ್ಪಟ್ಟಾಗುತ್ತಿತ್ತು. ಯಾವುದೇ ನೋವಿಗಿಂತಲೂ ಅದರ ಕಲ್ಪನೆ ಹಾಗೂ ನಿರೀಕ್ಷೆಯೇ ಹೆಚ್ಚು ಭಯಾನಕ. ನಮ್ಮ ಟೋಕನ್ ಸಂಖ್ಯೆ ಬಂದಾಗ ಗುಬ್ಬಿಮರಿಯಂತೆ ಅಮ್ಮನ ಕೈ ಹಿಡಿದುಕೊಂಡು ಭಾರವಾದ ಹೆಜ್ಜೆಯೊಂದಿಗೆ ಒಳಹೋಗುತ್ತಿದ್ದೆ. ಪರೀಕ್ಷಿಸುವ ಮುನ್ನವೇ ಕಣ್ಣೀರಾಗುತ್ತಿದ್ದ ನನ್ನೆಡೆಗೆ ವೈದ್ಯರು ಸ್ಟೆತೋಸ್ಕೋಪ್ ಹಿಡಿದು ತೀಕ್ಷ್ಣವಾಗಿ ನೋಡಿದಾಗ ಅವರ ಪೊದೆಹುಬ್ಬು ಹಾಗೂ ಮೀಸೆಯನ್ನು ಕಂಡು ನನಗೆ ಚಲನಚಿತ್ರದಲ್ಲಿ ಪಾಶವನ್ನು ಹಿಡಿದು ಬರುವ ಯಮನಂತೆ ಅನ್ನಿಸಿ ಗಟ್ಟಿಯಾಗಿ ಕಣ್ಣುಮುಚ್ಚುತ್ತಿದ್ದೆ. ನನ್ನ ಬಿಸಿಯಾದ ಎದೆಯ ಮೇಲೆ ತಣ್ಣನೆಯ ಸ್ಟೆತೋಸ್ಕೋಪಿನ ಸ್ಪರ್ಶವಾದಾಗ ನಿಧಾನಕ್ಕೆ ಕಣ್ಣುತೆರೆಯುತ್ತಿದ್ದೆ. ಅಷ್ಟರಲ್ಲೇ ನರ್ಸ್ ಒಬ್ಬಳು ಲೋಡ್ ಮಾಡಿದ ಸಿರಿಂಜನ್ನು ಸೂರಿನೆಡೆಗೆ ಗುರಿಮಾಡಿ ಮೈಕನ್ನು ಪರೀಕ್ಷಿಸುವ ಭಾಷಣಕಾರನಂತೆ ಸಿರಿಂಜಿನ ಹಿಂಭಾಗವನ್ನು ಸ್ವಲ್ಪವೇ ಅಮುಕಿ ಚಿಮ್ಮುವ ಔಷಧವನ್ನು ಖಚಿತ ಪಡಿಸಿಕೊಂಡು ನನ್ನೆಡೆಗೆ ಬಂದರೆ ಸಮರ ಕೊನೆಯ ಘಟ್ಟ ತಲುಪಿದಂತೆ ಭಾಸವಾಗುತ್ತಿತ್ತು. ಪಕ್ಕಕ್ಕೆ ತಿರುಗಿ ಸೊಂಟ ಸಡಿಲಿಸಿ ಮಲಗಿದ ನನಗೆ ಇದಕ್ಕಿಂತ ಘೋರ, ಭಯಾನಕ ಸನ್ನಿವೇಶ ಮತ್ತೂಂದಿಲ್ಲ ಎನಿಸುತ್ತಿತ್ತು.
ಒಮ್ಮೆ ನಮ್ಮ ಸಾಕುನಾಯಿ ರೂಬಿಗೆ ಮುತ್ತಿಡಲು ಹೋಗಿ ಅದು ಸರಿಯಾಗಿ ನನ್ನ ತುಟಿಯನ್ನೇ ಕಚ್ಚಿ ಸೀಳುಗಾಯ ಮಾಡಿತು. ಅಂದು ನಾನ್‌ವೆಜ್ ತಿಂದು ಸುಖವಾಗಿ ಮಲಗಿದ್ದ ರೂಬಿಗೆ ನಾನು ಅವನ ಮೂತಿಯನ್ನು ಅಮುಕಿ ಮುತ್ತಿಟ್ಟಿದ್ದು ಪಿರಿಪಿರಿಯಾಗಿರಬೇಕು. ನನ್ನೆಲ್ಲ ಕಷ್ಟಸುಖಗಳಿಗೂ ಕಿವಿಯಾಗುತ್ತಿದ್ದ, ನನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದ ರೂಬಿ ಹೀಗೆ ಏಕಾಏಕಿ ನನ್ನ ತುಟಿಯನ್ನು ಸೀಳಿದಾಗ ಆತಂಕಗೊಂಡೆ. ಆಗಲೇ ನನ್ನ ತುಟಿಯಿಂದ ಬಿಸಿರಕ್ತ ಚಿಲುಮೆಯಂತೆ ಕೆಳಗಿಳಿಯುತ್ತಿತ್ತು. ನಿದ್ರೆಯ ಮತ್ತಿನಿಂದ ಹೊರಬಂದ ರೂಬಿ ತನ್ನಿಂದಾದ ಪ್ರಮಾದದ ಬಗ್ಗೆ ತೀವ್ರ ಸಂತಾಪ ಸೂಚಿಸಿ ಕುಂಯುಡುತ್ತ ನನ್ನ ಮೈಯನ್ನೆಲ್ಲ ನೆಕ್ಕಿ ಸಮಾಧಾನಿಸತೊಡಗಿತು. ಇದಾವುದರ ಪರಿವೆಯೂ ಇಲ್ಲದ ನನಗೆ ನಾಯಿ ಕಡಿದರೆ ಹೊಕ್ಕುಳಿನ ಸುತ್ತ ನೀಡಬಹುದಾದ ಇಪ್ಪತ್ತೂಂದು ಇಂಜೆಕ್ಷನ್ ನೆನಪಾಗಿ ಕುಸಿದು ಕುಳಿತೆ. ಇಂಜೆಕ್ಷನ್ ನೋವು ಅನುಭವಿಸಿ ಸಾಯುವುದಕ್ಕಿಂತ ರೋಗ ಬಂದು ಸಾಯುವುದೇ ವಾಸಿ ಎಂದು ತೀರ್ಮಾನಿಸಿದೆ. ಸುರಿಯುತ್ತಿದ್ದ ರಕ್ತವನ್ನೆಲ್ಲ ನನ್ನ ಲಂಗದ ಅಂಚಿನಿಂದ ನಾಜೂಕಾಗಿ ಒರೆಸಿದೆ. ಕೃತಕ ನಗೆ ಚಿಮ್ಮುತ್ತ ಒಳಗೆ ಹೋದೆ. ನನ್ನ ಅಸ್ವಾಭಾವಿಕ ನಡೆಯಿಂದ ಅನುಮಾನಗೊಂಡ ಅಮ್ಮ ನನ್ನ ಮೇಲೊಂದು ಕಣ್ಣಿರಿಸಿದರು. ತಣ್ಣಗೆ ಓದಲು ಕುಳಿತೆ. ತುಟಿಯ ಚಲನೆಯಿಂದ ಹೆಪ್ಪುಗಟ್ಟಿದ್ದ ರಕ್ತ ಮತ್ತೆ ಜಿನುಗಲಾರಂಭಿಸಿತು. ಗಾಬರಿಯಿಂದ ವಿಚಾರಿಸಿದ ಅಮ್ಮನಿಗೆ, “”ಎಡವಿ ಬಿದ್ದಿದ್ದರಿಂದ ಕಲ್ಲಿನ ಚೂರು ತುಟಿಗೆ ಬಡಿತು” ಎಂದೆಲ್ಲ ಹೇಳಿದೆ. ಅಮ್ಮ ನಂಬಲಿಲ್ಲ. ಕೊನೆಗೂ ಸುಳ್ಳು ಬಯಲಾಯಿತು. ಅಮ್ಮ ವೈದ್ಯರಲ್ಲಿಗೆ ನನ್ನನ್ನು ಎಳೆದೊಯ್ದಳು. ಯಥಾಪ್ರಕಾರ, ಇಂಜೆಕ್ಷನ್‌ಗಳ ಸುರಿಮಳೆ. ಈಗ ನೆನೆದರೆ ಬೆಚ್ಚಿಬೀಳುತ್ತೇನೆ.
ಕೆಲದಿನಗಳ ನಂತರ ತುಟಿಯ ಗಾಯ ಮಾಯಿತಾದರೂ ಕಲೆ ಇಂದಿಗೂ ಹಾಗೇ ಉಳಿದಿದೆ. ಮದುವೆಯ ನಂತರ ನನ್ನ ಪತಿ ಒಮ್ಮೆ ಆ ಕಲೆಯ ಬಗ್ಗೆ ವಿಚಾರಿಸಿದಾಗ ರೂಬಿಯ ಕತೆಯನ್ನೆಲ್ಲ ವಿವರಿಸಿ ಹಲವು ದಿನಗಳಿಂದ ಗೌಪ್ಯವಾಗಿರಿಸಿದ್ದ ವಿಷಯವನ್ನು ಬಹಿರಂಗಪಡಿಸಿ ಮನಸಾರೆ ನಕ್ಕಿದ್ದೆ. ಈಗಲೂ ಒಮ್ಮೊಮ್ಮೆ ಅವರು, “”ನೀನು ಆ್ಯಂಟಿರೇಬೀಸ್ ಇಂಜೆಕ್ಷನ್ ತಗೊಂಡದ್ದೇನೋ ಸರಿಯೇ. ಆದರೆ, ಸರಿಯಾಗಲಿಲ್ಲ ಎಂದು ತೋರುತ್ತೆ. ಒಮ್ಮೊಮ್ಮೆ ರೂಬಿಯ ನಂಜು ನೆತ್ತಿಗೇರಿ ತಿಕ್ಕಲು ಹಿಡಿದವ ಹಾಗೆ ಆಡ್ತೀಯ. ಸಾಕುನಾಯಿ ಅಲ್ವಾ ಅದಕ್ಕೇ ಹುಚ್ಚಿನ ಪ್ರಮಾಣ ನಾಲ್ಕು ಜನರಿಗೆ ತಿಳಿಯುವಷ್ಟು ತೀವ್ರವಾಗಿಲ್ಲ ಅನ್ಸುತ್ತೆ” ಎನ್ನುತ್ತ ಕಾಲೆಳೆಯುತ್ತಿರುತ್ತಾರೆ.
ನನ್ನ ಮೊದಲ ಹೆರಿಗೆಯ ಸಮಯದಲ್ಲಿ ಅಮ್ಮ ಬಹಳ ಆತಂಕಕ್ಕೆ ಒಳಗಾಗಿದ್ದರು. ಕೇವಲ ಇಂಜೆಕ್ಷನ್ನಿಗೆ ರಣರಂಪ ಮಾಡುವ ನಾನು ಹೆರಿಗೆ ಬೇನೆ ಹೇಗೆ ತಿನ್ನಬಹುದು ಎಂಬ ಸಹಜ ಆತಂಕವದು. ದೇಹದ ಹತ್ತಾರು ಮೂಳೆಗಳು ಒಂದೇ ಬಾರಿಗೆ ಮುರಿದಾಗ ಆಗುವ ನೋವಿನ ತೀವ್ರತೆ ಹೆರಿಗೆ ನೋವಿಗೆ ಸಮ ಎಂದು ಹಲವಾರು ಉತ್ತಮ ಪುಸ್ತಕಗಳನ್ನು ಓದಿ ಅರಿತಿದ್ದ ನಾನು ಮಾನಸಿಕವಾಗಿ ಸಿದ್ಧವಾಗಿ¨ªೆ. ಸಮಾಧಾನದ ವಿಷಯವೆಂದರೆ, ಇಷ್ಟೆಲ್ಲ ತಿಳಿದಿದ್ದರೂ ನನಗೆ ಹೆರಿಗೆ ಫೋಬಿಯಾ ಇದ್ದಂತೆ ಕಾಣಲಿಲ್ಲ. ಲೇಬರ್ ವಾರ್ಡಿನಲ್ಲಿ ಮುಲುಕುತ್ತಿದ್ದ ನನಗಿಂತ, ಹೊರಗೆ ಕುಳಿತ ನನ್ನ ಪತಿ ಹಾಗೂ ಅಮ್ಮನೇ ಹೆಚ್ಚು ನರಳುತ್ತಿದ್ದರು. ಆದರೂ ಹೆಚ್ಚೇನು ಅರಚಾಟ-ಕಿರುಚಾಟಗಳಿಲ್ಲದೆ ನಾನು ಒಂದು ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದಾಗ ತಾನೇ ಮೈಯಿಳಿಸಿಕೊಂಡವಳಂತೆ ಅಮ್ಮ ಹಗುರಾಗಿದ್ದರು. ನಾನೂ ಯುದ್ಧ ಗೆದ್ದ ಸಂಭ್ರಮದಿಂದ ಮಲಗಿದ್ದೆ. ಅಷ್ಟರಲ್ಲೇ ಸಿರಿಂಜ್ ಹಿಡಿದು ಬಂದ ನರ್ಸ್ ಚುಚ್ಚಲು ಮುಂದಾದಾಗ ಹೌಹಾರಿದ ನಾನು, “”ನನಗೆ ಇಂಜೆಕ್ಷನ್ ಅಂದ್ರೆ ಭಯ ಸಿಸ್ಟರ್, ಬೇಡ. ಇದ್ರ ಬದ್ಲು ಟ್ಯಾಬ್ಲೆಟ್ ಕೊಟ್ಟುಬಿಡಿ” ಎಂದೆ. ನನ್ನನ್ನೇ ವಿಚಿತ್ರವಾಗಿ ನೋಡಿದ ನರ್ಸ್ ತನ್ನ ಕೆಲಸ ಮುಗಿಸಿ ಹೊರಟಳು. ಲೇಬರ್ ವಾರ್ಡಿನಿಂದ ಮತ್ತೆ ಹೊರಟ ನನ್ನ ಆರ್ತನಾದಕ್ಕೆ ಬೆಚ್ಚಿದ ಅಮ್ಮ ಕೈಲಿದ್ದ ಮಗುವನ್ನು ಪತಿಯ ಕೈಗಿರಿಸಿ ಮತ್ತೂಂದರ ಸಾಧ್ಯತೆಯೇನಾದರೂ ಇರಬಹುದೇನೋ ಎಂಬ ಅನುಮಾನದಿಂದ ಒಳಬಂದಿದ್ದರು.
ಇಂಜೆಕ್ಷನ್ ಕೊಡುವ ರೂಢಿ ಈಗ ವೈದ್ಯರಿಗಾಗಲಿ, ತೆಗೆದುಕೊಳ್ಳುವ ಚಟ ರೋಗಿಗಳಿಗಾಗಲಿ ಇಲ್ಲ. ಈಗಿನ ಕಾಯಿಲೆಗಳೆಲ್ಲ ಬಹಳ ದುಬಾರಿ. ಕೇವಲ ಒಂದು ಇಂಜೆಕ್ಷನ್‌ನಿಂದ ಗುಣವಾಗುತ್ತಿದ್ದ ಕಾಯಿಲೆಗಳು ಇಂದು ಬ್ಲಿಡ್ ಟೆಸ್ಟ್ , ಸ್ಕ್ಯಾನಿಂಗ್, ಎಕ್ಸ್‌ರೇ ಎಂಬ ಹತ್ತಾರು ಇನ್ವೆಸ್ಟಿಗೇಷನ್‌ಗಳ ಮೂಲಕ ಗುರುತಿಸಲ್ಪಟ್ಟು ಚಿಕಿತ್ಸೆಗೆ ತೆರೆದುಕೊಳ್ಳುತ್ತಿವೆ. ಆದರೂ ಒಮ್ಮೊಮ್ಮೆ ಟಿ. ಟಿ. ಇಂಜೆಕ್ಷನ್ ಅನ್ನೋ ವ್ಯಾಕ್ಸಿನೇಷನ್ ಅನ್ನೋ ಹಾಕಿಸಿಕೊಳ್ಳುವ ಸಂದರ್ಭ ಬಂದಾಗ ನಮ್ಮ ಮಕ್ಕಳು ಜೂಸ್ ಕುಡಿದಷ್ಟೇ ಸಲೀಸಾಗಿ ತೆಗೆದುಕೊಳ್ಳುವುದನ್ನು ಕಂಡಾಗ ಮೂಕಳಾಗುತ್ತೇನೆ. ನನ್ನ ಈ ಇಂಜೆಕ್ಷನ್ ಫೋಬಿಯಾ ನನ್ನ ವರ್ಣತಂತುಗಳಿಂದ ಅನುವಂಶಿಕವಾಗಿ ನಮ್ಮ ಮಕ್ಕಳಿಗೆ ರವಾನೆಯಾಗಿಲ್ಲವಲ್ಲ ಎಂದು ಸಮಾಧಾನವಾಗುತ್ತದೆ.
ಸುಮಾ ರಮೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.