ದುಡಿಯುವ ಮಹಿಳೆ ದುಡಿಯದ ಮಹಿಳೆ
Team Udayavani, Dec 16, 2018, 10:09 AM IST
“ನೀನೇನು ಮಾಡಿದೆ, ಮನೆಯಲ್ಲಿ ಆರಾಮವಾಗಿ ಇರುವುದು ಬಿಟ್ಟು?’- ಪ್ರಶ್ನೆಯನ್ನು ವಿಶ್ಲೇಷಿಸಬೇಕಾದ ಕಾಲ ಬಂದಿದೆ.
ಇವತ್ತು ಮನೆಯಲ್ಲಿರುವ ಅನೇಕ ಮಂದಿ ಹೆಣ್ಣು ಮಕ್ಕಳು ಸದರಗೊಳ್ಳುವ ಅಪಾಯದಲ್ಲಿ ಇದ್ದಾರೆ. ಅವಮಾನ ಅನುಭವಿಸುತ್ತಿದ್ದಾರೆ. ಯಾರಿಗೂ ಹೇಳಲಾರದೆ ತಮ್ಮೊಳಗೇ ನೋವು ತಿನ್ನುತ್ತಿದ್ದಾರೆ. ಉದ್ಯೋಗಕ್ಕೆ ಹೋಗದ ಹೆಂಡತಿ ಅಥವಾ ಸೊಸೆ ನಿಷ್ಪ್ರಯೋಜಕ ಎನಿಸಿಕೊಳ್ಳುತ್ತಿದ್ದಾರೆ. ದುಡಿಯಲು ಹೊರಹೋಗದ ಹೆಣ್ಣನ್ನು ತೀರಾ ಕೀಳರಿಮೆಗೆ ತಳ್ಳುವ ಪ್ರಯತ್ನವಂತೂ ಅರಿವೇ ಇಲ್ಲದಂತೆ ಸತತವಾಗಿ ನಡೆಯುತ್ತಿದೆ. ಪರಿಚಯ ಆದ ತುಸು ಹೊತ್ತಿಗೇನೇ, “ನೀವು ಏನು ಮಾಡುತ್ತಿದ್ದೀರಿ?’ ಎಂದು ಕೇಳುವುದು ಸಾಮಾನ್ಯವಾಗಿ, ಈ ಪ್ರಶ್ನೆಗೆ “ಮನೆವಾರ್ತೆ’ ಎಂಬ ಉತ್ತರ ನೀಡಲು ಬಹುಮಂದಿ ಮಹಿಳೆಯರು ತಡವರಿಸುತ್ತಾರೆ. ಯಾರೂ ಏನೂ ಹೇಳದೆಯೂ ತಾನೊಬ್ಬಳು ಮನೆಯಲ್ಲಿರುವವಳು, ಕೆಲಸಕ್ಕೆ ಹೋಗದವಳು, ದುಡ್ಡು ದುಡಿದು ಗಂಡನ ಹೆಗಲಿಗೆ ಹೆಗಲು ಕೊಡಲಾರದವಳು ಮುಂತಾಗಿ ಹೆಣ್ಣು ತನ್ನನ್ನು ತಾನೆ ಕೀಳರಿಮೆಗೆ ದೂಡಿಕೊಳ್ಳುತ್ತಿದ್ದಾಳೆ. ಮನೆಯಲ್ಲಿರುವವಳು ತಂತಾನೇ ದಂಡದ ಲೆಕ್ಕಕ್ಕೆ ಸೇರಿಹೋಗಿದ್ದಾಳೆ. ಸಂಬಳ ಕೊಟ್ಟರೆ ಆಳುಗಳು ಮಾಡಿಯಾರು, ಅದೇನು ಮಹಾ ಎಂದು ಆಕೆಯ ದೈನಂದಿನ ಕೆಲಸಗಳನ್ನು ಯಃಕಶ್ಚಿತ್ ಎಂದು ಗಣಿಸುವ ಪ್ರವೃತ್ತಿಯಂತೂ ಸಾಮೂಹಿಕವಾಗಿದೆ.
ಇತ್ತೀಚೆಗೆ ಗೆಳತಿಯೊಬ್ಬಳು ಅಮೆರಿಕಕ್ಕೆ ಹೋದಾಗ ಅಲ್ಲಿ ನಮ್ಮೂರ ಹುಡುಗಿಯೊಬ್ಬಳ ಮನೆಗೆ ಹೋಗಿ ಬಂದ ವಿವರ ಹೇಳುತ್ತ, ಆಕೆ ಅಂಥಾ ಅಮೆರಿಕದಲ್ಲಿದ್ದೂ ಕೆಲಸಕ್ಕೆ ಹೋಗದೆ, ಮನೆಯಲ್ಲಿಯೂ ಆನ್‌ಲೈನ್ ಮಾಡದೆ ಸುಮ್ಮನೆ ಮನೆ, ಮಕ್ಕಳು ಗಂಡ ಅವರ ಅನುತನು ಅಂತ ಇದ್ದಾಳೆ ಕಣೇ. ಅದು ಹೇಗೆ ಇರುತ್ತಾಳ್ಳೋ ಅಂತ! ಎಂದು ಒಂದು ರೀತಿ ಕೀಳು ಭಾವದಿಂದ ನುಡಿದಳು.
ಅವಳ ಮಾತನ್ನು ಕೇಳಿದವಳಿಗೆ ಆರ್ಥಿಕ ಸ್ವಾವಲಂಬನೆಯ ಅರ್ಥವನ್ನು ನಾವು ಕಂಡುಕೊಂಡಲ್ಲಿಯೇ ಏನಾದರೂ ತಪ್ಪಿದೆಯೇ, ಯೋಚಿಸುವಂತಾಯಿತು. ಉದ್ಯೋಗಕ್ಕೆ ಹೋಗುವ ತಾಯಿ ಈಗ ನಿತ್ಯದ ಚಿತ್ರವಾಗಿದ್ದಾಳೆ. ಕೇವಲ ಉದ್ಯೋಗಕ್ಕೆ ಹೋಗುತ್ತಿದ್ದರೆ ಸಾಲದು, ಅಲ್ಲಿಯೂ ಒಂದು ಪ್ರತಿಷ್ಠೆಯ ಆಯ್ಕೆಯಿದೆ. ಅದು ಎಮ್‌ಎನ್‌ಸಿ, ಮಾಹಿತಿ ತಂತ್ರಜ್ಞಾnನ, ವೈದ್ಯಕೀಯ, ಎಂಜಿನಿಯರಿಂಗ್, ಸಿಎ- ಇತ್ಯಾದಿ ಇತ್ಯಾದಿ. ಹಲವು. ಇಷ್ಟೇ ಅಲ್ಲ, ಮಹಿಳೆ ತನ್ನನ್ನು “ಪ್ರೂವ್’ ಮಾಡಿಕೊಳ್ಳುವುದು ಎಂಬ ಹೊಸ ಈಡಿಯಂ ತಲೆಯೆತ್ತಿದೆ. ಏನದು? ಪ್ರೂವ್ ಮಾಡಿಕೊಳ್ಳುವುದು ಎಂದರೆ?
“ನನ್ನ ಫ್ರೆಂಡಿನ ಅಮ್ಮಂದಿರೆಲ್ಲರೂ ಕೆಲಸಕ್ಕೆ ಹೋಗುತ್ತಾರೆ. ನೀನೇಕೆ ಅಮ್ಮ ಹೋಗುವುದಿಲ್ಲ?’ ತನ್ನ ಮಗನ ಪ್ರಶ್ನೆಯನ್ನು ವಿಮಲಾ ನನ್ನ ಬಳಿ ಹೇಳಿದಾಗ ಧ್ವನಿಯಲ್ಲಿ ಆತಂಕ ಕಂಡು ನನಗೂ ಆತಂಕವಾಯಿತು. ದೊಡ್ಡವರಾದ ಮೇಲೆ ಮಕ್ಕಳು, “ನೀನೇನು ಮಾಡಿದೆ? ಮನೆಯಲ್ಲಿ ಆರಾಮವಾಗಿ ಇರುವುದು ಬಿಟ್ಟು?’- ಎಂದೂ ಕೇಳಬಹುದಲ್ಲವೆ? ಆಗ ಏನುತ್ತರವಿದೆ?’ ಎಂದ ಅವಳು, “ಮಕ್ಕಳಿಗೂ ಈಗ ತಾಯಿ ಮುಂಚಿನಷ್ಟು ಬೇಕಾಗಿಲ್ಲವೇನೊ’ ಎಂದಳು.
ಮಹಿಳೆಯೊಬ್ಬಳು ಕೆಲಸಕ್ಕೆ ಹೋಗದಿರುವುದಕ್ಕೆ ಎಲ್ಲರಿಗೂ ತಿಳಿದೇ ಇರುವ ಹಲವು ಕಾರಣಗಳಿವೆ.
ಸ್ಥೂಲವಾಗಿ ಪಟ್ಟಿ ಮಾಡುವುದಾದರೆ-
.ಮನೆಯೊಳಗಿನ ಬದುಕನ್ನು ಜಾಸ್ತಿ ಪ್ರೀತಿಸುವುದು. ಮನೆವಾರ್ತೆ ಕೆಲಸವೇ ಆಕೆಗೆ ಹೆಚ್ಚು ಖುಷಿ ಕೊಡುವುದು.
.ಗಂಡನ ಸಂಪಾದನೆ ಚೆನ್ನಾಗಿಯೇ ಇದ್ದು ಇಬ್ಬರಲ್ಲಿಯೂ ಒಂದು ಒಪ್ಪಂದವಾಗಿ ಆಕೆ ಮನೆಯಲ್ಲಿರುವುದು.
.ದುಡ್ಡು ತಾರದ ಆಕೆ ಕಡಿಮೆ ಎಂಬ ಭಾವ ಮನೆಯಲ್ಲಿ ಇಲ್ಲದಿರುವುದು.
.ಅವಳ ವಿದ್ಯೆಗೆ ತಕ್ಕ ಉದ್ಯೋಗ ದೊರಕದಿರುವುದು.
.ಅವಳು ನೆಲೆಸಿರುವ ಊರಿನಲ್ಲಿ ತನ್ನ ಶಿಕ್ಷಣಕ್ಕೆ ತಕ್ಕ ಉದ್ಯೋಗಾವಕಾಶ ಇಲ್ಲದಿರುವುದು.
.ವರ್ಗ ಇತ್ಯಾದಿಗಳಿಂದ ಗಂಡ-ಹೆಂಡತಿ-ಮಕ್ಕಳು ಚದುರಿಬಿಡುವ ಸಂಭವ ಇರುವುದು.
.ಮನೆಯಲ್ಲಿ ಬೇರೆ ದಿಕ್ಕು ಇಲ್ಲದೆ ಇರುವುದು.
ಇನ್ನೂ ಅನೇಕಾನೇಕ.
ಇದನ್ನು ಪ್ರಶ್ನಿಸುವ, ಛೇಡಿಸುವ, ವ್ಯಕ್ತಿತ್ವದ ಪುರಾವೆ ಕೇಳುವ ಹಕ್ಕು ಯಾರಿಗೂ ಇಲ್ಲ. ಕೆಲ ಬದುಕುಗಳು ಗಂಡಹೆಂಡತಿ ಇಬ್ಬರಲ್ಲಿ ಇಬ್ಬರೂ ನಿರಂತರವಾಗಿ ಹೊರಗೆ ಹೋಗುವುದನ್ನು ಜೀರ್ಣಿಸಿಕೊಳ್ಳಲು ಅಸಾಧ್ಯದ ಸ್ಥಿತಿಯಲ್ಲಿರುತ್ತವೆ. ಒಂದು ಕಾಲದಲ್ಲಿ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದವರು ನಾವು. ನಮ್ಮ ಆರ್ಥಿಕ ಸ್ವಾತಂತ್ರ್ಯದ ಕಲ್ಪನೆಯಲ್ಲಿ ಹೆಣ್ಣಿನ ಈ ಕೀಳರಿಮೆ ಚಿತ್ರದ ಊಹೆ ಕೂಡ ಇರಲಿಲ್ಲ. ಆರ್ಥಿಕವಾಗಿ ಸ್ವತಂತ್ರಳಾದ ಮಹಿಳೆಯ ಕುರಿತೇ ನಮ್ಮ ಚಿಂತನೆ ಹರಿಯುತಿತ್ತು. ಅವಳು ದುಡಿದರೆ ಮಾತ್ರ ಆಕೆ ಸ್ವತಂತ್ರ ಎಂಬ ಕಲ್ಪನೆ ಅರೆಸತ್ಯ ಅರೆಸುಳ್ಳು ಎಂಬ ಸತ್ಯ ಹೊಳೆದೇ ಇರಲಿಲ್ಲ. ಗಂಡು ತನಗೆ ಕೆಲಸಕ್ಕೆ ಹೋಗುವ ಹುಡುಗಿ ಬೇಡವೇ ಬೇಡ ಎಂಬಲ್ಲಿಂದ ಕೆಲಸಕ್ಕೆ ಹೋಗುವ ಹುಡುಗಿಯೇ ಬೇಕು ಎಂಬಲ್ಲಿಗೆ ಬಂದು ಮುಟ್ಟುವವರೆಗೂ ಉದ್ದಕ್ಕೂ ಇರುವುದು ಸ್ವಾರ್ಥವೇ. ಡತಿ ಕೆಲಸಕ್ಕೆ ಹೋಗುವುದು ಬೇಡ ಎಂಬಲ್ಲಿಯೂ ಅನೇಕ ಒಳ ಪದರಗಳಿವೆ. ಹೋಗಬೇಕು ಎಂದು ಬಯಸುವಲ್ಲಿಯೂ.
ಇದೊಂದು ರೀತಿಯ ಮಿಥ್ಯೆ
ಹೆಣ್ಣು ಆತ್ಮಗೌರವ ಅಥವಾ ಆತ್ಮವಿಶ್ವಾಸ ಗಳಿಸುವುದೇ ತಾನು ಹೊರಗೆ ದುಡಿಯುವುದರಿಂದ ಎಂಬ ಮಿಥ್ಯೆ ಸಮಾಜವನ್ನು ಆಳುತ್ತಿದೆ. ನನಗೆ ಚೆನ್ನಾಗಿ ಗೊತ್ತಿರುವ ಹುಡುಗಿಯೊಬ್ಬಳು ಹೇಳಿದ ಅಂತರಂಗದ ಮಾತು ಹೇಳಲೆ? “”ಮದುವೆಯಾದೊಡನೆ ಕೆಲಸ ಬಿಡು ಎಂಬವ ನನಗೆ ಬೇಕಿತ್ತು. ನನಗೆ ಸಿಕ್ಕಿದ್ದು ದುಡಿದ ದುಡ್ಡನ್ನೆಲ್ಲ ನನಗೆ ಕೊಡು ಎಂಬವ! ನನಗಂತೂ ದಿನಾ ಬೆಳಿಗ್ಗೆಯಾಗುತ್ತಲೇ ಕೆಲಸಕ್ಕೆ ಹೊರಡದೆ ನಿರ್ವಾಹವಿಲ್ಲ. ಪ್ರತೀದಿನ ನಾನು ಮನೆಬಿಡುವುದು ಸಂಕಟದಿಂದಲೇ” ಹೀಗೂ ಇರುತ್ತದೆ ಎನ್ನಲಷ್ಟೇ ಇದನ್ನು ಉದಾಹರಿಸಿದೆ. ಕಿಂಚಿತ್ತೂ ಸಂಕಟವಿಲ್ಲದೆ ಮನೆಬಿಟ್ಟು ಉದ್ಯೊಗಕ್ಕೆ ತೆರಳುವ ಮಂದಿಯೂ ಬಹಳ ಇರಬಹುದು; ಇದ್ದಾರೆ, ನಿಜ. ಉದ್ಯೋಗ ದುಡಿಮೆ, ಸ್ವಂತ ಸಂಪಾದನೆ ಇತ್ಯಾದಿ ಫಿಲಾಸಫಿಯೂ ಇವತ್ತಿನ ಮಹಿಳೆಯ ವಾಸ್ತವವೇ. ಆದರೆ, ಆಕೆಗಿರುವುದು ಇದೊಂದೇ ಫಿಲಾಸಫಿ ಅಲ್ಲ, ಇದೊಂದೇ ವಾಸ್ತವವೂ ಅಲ್ಲ. ಬದಲು ವಾಸ್ತವಗಳು ಹಲವಿವೆ. ಅವುಗಳಲ್ಲಿ ಕೆಲಸಕ್ಕೆ ಹೋಗಲು ಮನಸ್ಸೇ ಇಲ್ಲದೆ ಮನೆಯಲ್ಲಿ ತಮಗೆ ಬೇಕಾದ್ದನ್ನು ಮಾಡಿಕೊಂಡಿರಲು ಬಯಸುವ ಮಹಿಳೆಯರ ಕನಸೂ ಸೇರಿದೆ. ಅವರು ಯಾರೂ ಹಣ ತರುವ ಉದ್ಯೋಗಕ್ಕೆ ಹೋಗುವವರಿಗಿಂತ ಕೀಳಲ್ಲ ಎಂಬುದನ್ನು ನಾವು ಮರೆಯುತ್ತಿದ್ದೇವೆ. ಚಂದದ ಬಾಳಿಗಾಗಿ ಹೋರಾಡುವ ವಿಧಾನಗಳೂ ಹಲವಿವೆ. ಮಹಿಳೆ ಉದ್ಯೋಗಕ್ಕೆ ಹೋಗುವುದು ಅವುಗಳಲ್ಲಿ ಒಂದು. ಅವುಗಳಲ್ಲಿ ಒಂದು ಅಷ್ಟೇ. ಮನೆಯಲ್ಲಿ ಉಳಿಯುವ ಮನೆಯ ಕಷ್ಟ-ಸುಖಗಳನ್ನು ಒಳಗಿದ್ದೇ ನಿಭಾಯಿಸುವ ಮಹಿಳೆಯರದೂ ಒಂದು ವಿಧಾನವೇ.
ಆದರೆ, ಅವರೇನೋ ಸುಮ್ಮನೆ ಸೋಮಾರಿಯಾಗಿ ಕುಳಿತಂತೆ, ತಂದೆಯೊಬ್ಬನೇ ಮನೆಯ ಖರ್ಚುವೆಚ್ಚಗಳ ಹೊರೆಹೊರುವ ಎತ್ತಿನಂತೆ ಮಕ್ಕಳ ಮನಸ್ಸಿನಲ್ಲಿಯೂ ಚಿತ್ರ ಅಚ್ಚೊತ್ತುತ್ತಿದೆ. ಮನೆಯಲ್ಲಿ ದುಡಿಯುವ ಅವಳ ದುಡಿಮೆ, ಬಿಡಿ, ಲಾಗಾಯ್ತಿನಿಂದಲೂ ಹೇಗೂ ಅದು ದುಡಿಮೆಯೇ ಅಲ್ಲ ಅನಿಸಿದೆ. ಕಲಿಯುವುದು ಮತ್ತು ಉದ್ಯೋಗಕ್ಕೆ ಹೋಗುವುದು ಒಟ್ಟಿಗೇ ಒಂದು ಸಂಯುಕ್ತ ನುಡಿಗಟ್ಟಾಗಿ, ಕಲಿಯುವುದು ಎಂಬುದರ ಇಂಗಿತ ನಾಳೆ ದುಡ್ಡು ದುಡಿಯುವುದು ಅಂತವೇ ಆಗಿಹೋಗಿದೆ.
ಹೊರ ದುಡಿಮೆಗೆ ಹೋಗದೆ ಮನೆಯಲ್ಲಿ ತನಗೆ ಬೇಕಾದ ಹಾಗೆ ಇರುವ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದು ಸಾಧ್ಯವಾದಲ್ಲಿ ಮಹಿಳೆಗೆ ಅದೊಂದು ವರದಾನವಾಗಲೂ ಬಹುದಲ್ಲವೆ? ಕಲೆ, ಸಾಹಿತ್ಯ, ಸಂಗೀತ ಕಲಿಯುವುದು ಅಥವಾ ಆಸ್ವಾದಿಸುವುದು ಅಥವಾ ಮನೆವಾರ್ತೆಯಲ್ಲಿ ಸೃಜನಶೀಲವಾಗಿರುವುದರಲ್ಲಿ ಖಂಡಿತವಾಗಿಯೂ ಖುಶಿಯಿದೆ. ಮಗುವಿನ ಬೆಳವಣಿಗೆಯ ಎಲ್ಲ ಕ್ಷಣಗಳಲ್ಲಿಯೂ ಜೊತೆಗಿರುವ ರೋಮಾಂಚವೇನು ಸಣ್ಣ ಸಂಭ್ರಮವಲ್ಲವಲ್ಲ. ಅನೇಕ ಸಂದರ್ಭಗಳಲ್ಲಿ ಉದ್ಯೋಗಿ ಮಹಿಳೆ ತನ್ನ ಸಹಜ ಬದುಕಿನ ಏನೆಲ್ಲವನ್ನು ಬಿಟ್ಟುಕೊಟ್ಟೆ ಎಂಬಂತಹ ಚಡಪಡಿಕೆಯಲ್ಲಿಯೂ ಇರುತ್ತಾಳೆ ಎಂಬುದನ್ನು ನೆನಪಿಡಬೇಕು.
ಗೆಳತಿಯೊಬ್ಬಳು ನಿವೃತ್ತಿಯಾದ ದಿನ ಹೀಗೆಂದಳು- “”ಅಂತೂ ರಿಟೈರ್ ಆದೆ ಮಾರಾಯ್ತಿ, ಈಗ ಕಣ್ತೆರೆದು ನೋಡುತ್ತೇನೆ, ಮಕ್ಕಳೆಲ್ಲ ದೊಡ್ಡವರಾಗಿ ಗೂಡು ಬಿಟ್ಟು ಹಾರಿವೆ. ಹೆತ್ತದ್ದು, ಮಕ್ಕಳನ್ನು ದೊಡ್ಡದು ಮಾಡಿದ್ದು, ಅವು ಚಿಕ್ಕವಿದ್ದದ್ದು ಎಲ್ಲ ಸುಳ್ಳು, ಈಗ ಎದುರಿಗಿರುವ ಈ ದೊಡ್ಡ ಮಕ್ಕಳೇ ಸತ್ಯ ಅನಿಸುತ್ತಿದೆ. ದೊಡ್ಡವರಾದ ಮೇಲಷ್ಟೇ ಅವು ನನಗೆ ದಕ್ಕಿದವಲ್ಲೇ. ಅದುವರೆಗೂ ನಾನು ಮಕ್ಕಳೊಂದಿಗೆ ಇದ್ದೂ ಇಲ್ಲದ ಹಾಗೆ ಅರೆಮಂಪರಿನಲ್ಲಿ ತರಾತುರಿಯಲ್ಲಿ ನಡೆದು ಬಂದ ಹಾಗೆ ನಡೆದು ಬಂದೆ. ಮಹತ್ವದ ಒಂದು ಅನುಭವವೇ ನನ್ನನ್ನು ಸದ್ದಿಲ್ಲದೆ ದಾಟಿ ಹೋಗಿಬಿಟ್ಟಿತು. ಬಿಡು. ಒಂದು ಬೇಕಿದ್ದರೆ ಒಂದನ್ನು ಬಿಡಲೇ ಬೇಕಷ್ಟೆ?”
ಇದರರ್ಥ ಮಹಿಳೆಯರೆಲ್ಲ ಮನೆಯಲ್ಲಿರಬೇಕು ಅಂತಲ್ಲ, ಉದ್ಯೋಗಕ್ಕೆ ಹೋಗುವುದು ತರವಲ್ಲ ಅಂತಲೂ ಅಲ್ಲ. ಉದ್ಯೋಗ ಮತ್ತು ಮನೆವಾರ್ತೆ ಈ ಎರಡರ ನಡುವೆ ಮಹಿಳೆಯ ವ್ಯಕ್ತಿತ್ವವನ್ನು ಹಿಗ್ಗಿಸುವ ಅಥವಾ ಕುಗ್ಗಿಸುವ ಮನೋಭಾವ ಬೆಳೆಯುತ್ತಿದೆಯಲ್ಲ, ಅದು ಆತಂಕಕಾರಿ. ಈ ಎರಡು ಸ್ಥಿತಿಯಲ್ಲಿಯೂ ಹೆಣ್ಣು ಸಮಾನ ಗೌರವಸ್ಥಳು ಎಂಬುದನ್ನು ಮರೆತರೆ ಹೇಗೆ?
ಒಪ್ಪಿಸಿಕೊಳ್ಳುವುದು ಸ್ವಾತಂತ್ರ್ಯಕ್ಕಲ್ಲ, ದುಡಿಮೆಗೆ!
ಮನೆಯೊಳಗಿನ ಪ್ರಪಂಚದಿಂದ ಬಿಡುಗಡೆ ಹೊಂದಿ ಯಾವುದನ್ನು ದುಡಿತ-ಸಂಬಳ ತರುವ ದುಡಿತ ಎಂದು ಸಮಾಜ ಒಪ್ಪಿಕೊಂಡಿದೆಯೋ ಅಂತಹ ದುಡಿತಕ್ಕೆ ತನ್ನನ್ನು ಕೊಟ್ಟುಕೊಳ್ಳುವ ಮೂಲಕ ಆಕೆ ಬಂಧಮುಕ್ತಳಾಗುವಳೇನು?
ನಾನು ಸಂದರ್ಭ ಒದಗಿದಾಗೆಲ್ಲ ದುಡಿಯುವ ಮಹಿಳೆಯರೊಡನೆ ಮಾತುಕತೆಯಾಡುತ್ತ ಒಂದು ರೀತಿಯಲ್ಲಿ ಮರೆ-ಸಂದರ್ಶನ ಮಾಡುತ್ತಿರುತ್ತೇನೆ. ಈ ಮಾರ್ಗವಾಗಿ, ಕೆಲಸ ಸಿಕ್ಕಿದಾಗ ಮೊದಲಲ್ಲಿ ಸಂತೋಷಪಡುವ ಆದರೆ ತಮ್ಮ ಆ ಸಂತೋಷವನ್ನು ಬಹುಕಾಲ ಬಾಳಿಸಿಕೊಳ್ಳಲಾರದ ಅನೇಕ ಮಂದಿಯನ್ನು ಹತ್ತಿರದಿಂದ ಅರಿತೆ. ಮನೆಯ ದುಡಿತದಲ್ಲಿ ಪತಿ ಪಾಲ್ಗೊಳ್ಳದಿರುವುದು ಎರಡೂ ಕಡೆ ದುಡಿದು ಆಯಾಸಗೊಳ್ಳುವುದು ಇತ್ಯಾದಿ ಮೇಲಕ್ಕೆ ಎದ್ದು ಕಾಣುವಂತಹ ಉತ್ತರಗಳ ಜೊತೆಗೇ, ಆಳ ಕೆದಕಿದರೆ, ನಾವು ಆಕೆಯಿಂದ ಪಡೆಯುವ ಉತ್ತರಗಳು, ಬೇರೆಯೇ ಕಾರಣಗಳನ್ನು ಎತ್ತಿಕೊಡುತ್ತವೆ. ಬಹಳ ಸಂತೋಷದಿಂದ ಸ್ವಾವಲಂಬನೆ- ಸ್ವಾತಂತ್ರ್ಯ ಇತ್ಯಾದಿಗಳನ್ನು ಕೊನೆಯವರೆಗೂ ಗಂಭೀರವಾಗಿ ಮನಸ್ಸಿನಲ್ಲಿಟ್ಟುಕೊಂಡು, ಕೆಲಸಕ್ಕೆ ಹೋಗುವವರ (ಹೋಗಲು ಸಾಧ್ಯವಾಗುವವರ) ಸಂಖ್ಯೆಗಿಂತ ಅನಿವಾರ್ಯತೆ, ಅಸಹಾಯಕತೆ, ಇಲ್ಲವೇ ಅನುಕೂಲತೆಗಳ ವೃದ್ಧಿಗಾಗಿ ಹೊರದುಡಿತಕ್ಕೆ ಹೊರಡುವವರ ಸಂಖ್ಯೆಯೇ ಅಧಿಕ. ಗಂಡಸರ ಸಂಪಾದನೆ ಚೆನ್ನಾಗಿ ಇದ್ದರೆ (ಚೆನ್ನಾಗಿ ಎಂದರೆ ಅವರವರ ಆಶೋತ್ತರಗಳ, ಮಹತ್ವಾಕಾಂಕ್ಷೆಗಳ, ಆವಶ್ಯಕತೆಗಳ ಪ್ರಮಾಣಕ್ಕೆ ಸಂಬಂಧಿಸಿ) ಹೊರ ದುಡಿತ ಯಾರಿಗೆ ಬೇಕು ಎನ್ನುವ ಹಲಮಂದಿ ಇದ್ದಾರೆ. ಏರುತ್ತಿರುವ ಜೀವನ ಮಟ್ಟ , ಏರುದರದ ಪ್ರಪಂಚಕ್ಕೆ ಸವಾಲಾಗಿ ಆಕೆ ಅಥವಾ ಆಕೆಯ ಪತಿಯೋ ಮನೆಯವರೋ ತೆಗೆದುಕೊಳ್ಳುವ ನಿರ್ಧಾರ, ಮೊದಲಲ್ಲಿ ಸ್ಪಷ್ಟ ಕಾಣದಿದ್ದರೂ ಕಡೆಕಡೆಗೆ ಉದ್ಯೋಗಕ್ಕೆ ಹೋಗುವುದು ಹೆಚ್ಚಿನ ಸಂಪಾದನೆಗಾಗಿಯೇ ಎಂಬಲ್ಲಿಗೆ ನಿಲ್ಲುತ್ತದೆ. ಇಂಥಲ್ಲಿ ಆರ್ಥಿಕ ಸ್ವಾತಂತ್ರ್ಯವೆಂಬ ಪದಕ್ಕಾಗಲೀ ಸ್ವಾವಲಂಬನೆ ಎಂಬ ಪದಕ್ಕಾಗಲೀ ಯಾವ ಅರ್ಥ ಇದ್ದೀತು? ಆಕೆ ಇಲ್ಲಿ ತನ್ನನ್ನು ಒಪ್ಪಿಸಿಕೊಳ್ಳುವುದು ಸ್ವಾತಂತ್ರ್ಯಕ್ಕಲ್ಲ. ಅದಕ್ಕಿಂತ ಹೆಚ್ಚು ದುಡಿತಕ್ಕೆ, ದಣಿವಿಗೆ.
ದುಡ್ಡು ಗಳಿಕೆಯ ಅನಿವಾರ್ಯ ಪರಿಸ್ಥಿತಿಯೊಂದೇ ಗಂಡು ಮತ್ತು ಹೆಣ್ಣಿನ ಸ್ವಾತಂತ್ರ್ಯದ ಕಲ್ಪನೆಯನ್ನು ಆಕ್ರಮಿಸಿ ಮಸುಕುಗೊಳಿಸಿದೆ ಮತ್ತು ನಾವು ಎಲ್ಲಿ ಸ್ವತಂತ್ರರಾಗಬೇಕು ಎಂಬುದನ್ನೇ ಗಲಿಬಿಲಿಗೊಳಿಸಿ ಬಿಟ್ಟಿದೆಯಾಗಿ. ದುಡ್ಡಿನ ಪ್ರಪಂಚವನ್ನೇ ಈಗ ಗುಮಾನಿಯಿಂದ ನೋಡುವಂತಾಗಿದೆ. ಮೌಲ್ಯಗಳು ನೇತ್ಯಾತ್ಮಕವಾಗಿ ಎಷ್ಟು ಬದಲಾಗಿವೆ ಎಂದರೆ ನಾವು ವ್ಯರ್ಥ ಅಟಾಟೋಪಿಸದೆ ನಮ್ಮ ಸಮಸ್ಯೆಗೆ ನಮ್ಮದೇ ಆದೊಂದು ಸಮರ್ಥ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಆಗದಷ್ಟು.
ಗಮನಿಸಬೇಕಾದ್ದು ಇನ್ನೂ ಒಂದಿದೆ. ಸಮಾನತೆಯ ವಿಪರೀತ ಕಲ್ಪನೆಯಲ್ಲಿ ತಾವು ಮನೆಯಲ್ಲಿ ದುಡಿಯುವುದನ್ನೇ ಬಗೆಬಗೆಯಾಗಿ ವರ್ಣಿಸುತ್ತ, ಹೊರಗೆಲಸಕ್ಕೆ ಹೋಗದೆಯೂ ಮನೆಗೆಲಸದಲ್ಲಿ ಪುರುಷನಿಂದ ಸಂಪೂರ್ಣ ಸಹಾಯವನ್ನು ನಿರೀಕ್ಷಿಸುವ ಮಹಿಳೆಯರು ಒಂದೆಡೆ. ಉದ್ಯೋಗಿ ಪತ್ನಿಗೆ ಮನೆಯಲ್ಲಿ ಸಹಕರಿಸದೆ ಮನೆಗೆ ಮರಳಿದೊಡನೆ ಸ್ವಸ್ಥ ಆಸೀನನಾಗುವ ಉದ್ಯೋಗಿ ಪುರುಷರು ಇನ್ನೊಂದೆಡೆ. (ಇತ್ತೀಚೆಗೆ ಇದು ತುಸು ಬದಲಾಗುತ್ತಿದೆ ಎನ್ನುವುದನ್ನೂ ಸಂತಸದಿಂದ ನೆನೆಯಬೇಕು) ದುಡಿಮೆಯ ಪ್ರಪಂಚದಲ್ಲಿ ಇಬ್ಬರೂ ಸಾಕಷ್ಟು ಸವಾಲುಗಳೊಂದಿಗೇ ಏಗಬೇಕಾಗುತ್ತದೆ ಮತ್ತು ಅಲ್ಲಿನ ಸ್ವಾತಂತ್ರ್ಯ ಹರಣದ, ದಬ್ಟಾಳಿಕೆಯ, ದಮನದ ಕಥೆಗಳೇ ಬೇಕಷ್ಟಿವೆ. ಇವು ಇಬ್ಬರನ್ನೂ ಹಣಿಯುತ್ತವೆ, ಬಳಲಿಸುತ್ತವೆ ಎಂಬುದನ್ನು ಸಮಾನತೆ ಮತ್ತು ಸ್ವಾತಂತ್ರ್ಯ ಸಾಧನೆಯ ಮಾರ್ಗದಲ್ಲಿ ಮರೆಯಲಾಗದು.
ಕಡೆಗೂ ಸಮಾನತೆ ಎಂಬುದು ಸ್ವತಂತ್ರ ಚಿಂತನೆಯಿಂದ, ಪರಸ್ಪರ ಅರಿವಿನಿಂದ ಸೌಹಾರ್ದದಿಂದ ಸಾಧಿಸುವ ಮತ್ತು ಗಂಡು-ಹೆಣ್ಣು ಎಂಬ ಎರಡು ಪ್ರಬಲ ಜಾಯಮಾನಗಳನ್ನು ಮಾನವೀಯವಾಗಿ ಸಮನ್ವಯಗೊಳಿಸಿ ಅರ್ಥವತ್ತಾದ ಬದುಕು ಕಟ್ಟುವ ಒಂದು ನಾಗರಿಕ ಪ್ರಜ್ಞೆಯಷ್ಟೆ?
.
ಒಟ್ಟಿನಲ್ಲಿ ನಾವು ಮಹಿಳೆಯರೂ ಪುರುಷರೂ ಸೇರಿ ಓಡಿಯೋಡಿ ಆಯ್ದುಕೊಳ್ಳುವ ಬದುಕು ನಮ್ಮ ಜೀವನವನ್ನು ಈ ದೇಶವನ್ನು ಇಡಿಗೆ ಇಡಿಯಾಗಿ, ಅನೇಕ ಪಾಶ್ಚಾತ್ಯ ದೇಶಗಳಂತೆ ಅರ್ಥವಿಲ್ಲದ ಗಡಿಬಿಡಿಯ ಗರಡಿಯನ್ನಾಗಿ ಮಾಡಿ ಬಿಡುವಂಥದು. ಬೆಳಿಗ್ಗೆಯನ್ನು ದಿಢೀರ್ ತಿಂಡಿಗೆ, ಮಧ್ಯಾಹ್ನವನ್ನು ಡಬ್ಬದೂಟಕ್ಕೆ, ಮಕ್ಕಳನ್ನು ಟಿ.ವಿ.ಗೆ ದೂಡಿಬಿಡುವಂತಹದು. ನಮ್ಮ ಸುತ್ತ ವೃದ್ಧಾಶ್ರಮದ ನಿಟ್ಟುಸಿರು ತುಂಬುವಂಥದು. ಈ ದೇಶಕ್ಕೆ ಅದರದೇ ಅದೊಂದು ಭಾವನಾತ್ಮಕ ಬದುಕಿನ ಚೌಕಟ್ಟಿದೆ. ಈ ಚೌಕಟ್ಟನ್ನು ಕೆಡವದೆಯೇ ನಾವು ಇಂದು ಅದರೊಳಗಿನ ದೋಷವನ್ನು ಕಳೆದುಕೊಳ್ಳಬೇಕಾಗಿದೆ. ವಿಮೋಚನೆಯ ಚಿಂತೆ ಆರಂಭವಾಗಬೇಕಾಗಿರುವುದು ಇಲ್ಲಿಂದಲೇ.
ಸಾಧ್ಯವಾದಷ್ಟೂ ಪರಿಶ್ರಮದ ವಿಭಜನೆಯನ್ನು ಉಳಿಸಿಕೊಂಡೇ ನಾವು ಪರಸ್ಪರ ಗೌರವದ ಬದುಕು ಕಾಣಲಾರೆವೆ? ಸ್ತ್ರೀಪುರುಷರಿಬ್ಬರೂ ತಮತಮಗೆ ದಕ್ಕಿದ ಜೀವನ ಕ್ರಮಕ್ಕೆ ಅನುಸಾರವಾಗಿ ತಮತಮ್ಮ ಆಸಕ್ತಿ ಮತ್ತು ಇಚ್ಛೆಗನುಸಾರ ತಮ್ಮ ಕ್ಷೇತ್ರವನ್ನು- ಅದು ಮನೆವಾರ್ತೆಯೋ ಉದ್ಯೋಗವೋ-ಚರ್ಚಿಸಿ ನಿರ್ಧರಿಸುವಷ್ಟರ ಮಟ್ಟಿಗೆ ಮುಕ್ತ ಹೃದಯಿಗಳಾಗಲಾರರೆ? ಯಾವುದೇ ಕ್ಷೇತ್ರವನ್ನು ಇಬ್ಬರಲ್ಲಿ ಯಾರೇ ಆರಿಸಿಕೊಂಡರೂ ವಿಭಜಿಸಿಕೊಂಡರೂ ಅವರು ಅಷ್ಟಕ್ಕೇ ಸೈ ಎಂಬಂತಹ ಅತಿರೇಕದ ತೀರ್ಮಾನದ ಬದಲು ಸಹಜವಾಗಿ ಸ್ವೀಕರಿಸಿದರೆ ಸಮಸ್ಯೆಯೇ ಇಂಗಿಹೋದೀತು.
.
ಇಂದು ಸಂಜೆ ವಾಕಿಂಗ್ ಹೋಗುವಾಗ ಒಂದು ಮನೆಯ ಅಂಗೈಅಗಲದ ತೋಟದಲ್ಲಿ ಬೆಳೆಸಿದ ಸಣ್ಣದೊಂದು ಹುಲ್ಲುಹಾಸಿನ ಮೇಲೆ ಮಹಿಳೆಯೊಬ್ಬಳು ಕಳೆ ಕೀಳುತ್ತ ಇದ್ದುದನ್ನು ನೋಡಿದೆ. ಅವಳ ಮುಖದ ಮೇಲೆ ಬೆಳಗುತ್ತಿದ್ದ ಆ ಸಾವಧಾನತೆಯು ವ್ಯವಧಾನವನ್ನೇ ಒಲ್ಲದ ಇವತ್ತಿನ ಪ್ರಪಂಚದ್ದಂತೂ ಅಲ್ಲ ಅನಿಸಿತು. ತದೇಕವಾಗಿ ಕಳೆಕೀಳುವ ಆ ಸುಖ ಕಳೆಕೀಳುವವರಿಗಷ್ಟೇ ಗೊತ್ತು. ನಾನು ಕ್ಷಣ ಹೊತ್ತು ಅವಳನ್ನೇ ನೋಡುತ್ತ ನಿಂತು ಮುಂದರಿದೆ.
ವೈದೇಹಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.