ಪರ್ತ್‌ನಲ್ಲಿ ಭಾರತ ಪರದಾಟ
Team Udayavani, Dec 18, 2018, 6:00 AM IST
ಪರ್ತ್: ಅಡಿಲೇಡ್ ಟೆಸ್ಟ್‌ನಲ್ಲಿ ಅಡಿಬಿದ್ದ ಆತಿಥೇಯ ಆಸ್ಟ್ರೇಲಿಯವೀಗ ಪರ್ತ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಬಹುತೇಕ ಖಚಿತಪಟ್ಟಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕುಸಿತವನ್ನು ಕಂಡಿರುವ ಭಾರತ ಸೋಲಿನತ್ತ ಮುಖ ಮಾಡಿದ್ದು, ಸರಣಿ 1-1 ಸಮಬಲಕ್ಕೆ ಬರುವ ಸಾಧ್ಯತೆ ಬಲವಾಗಿದೆ.
ಬ್ಯಾಟಿಂಗಿಗೆ ಕಠಿನವಾಗಿ ಪರಿಣಮಿಸಿರುವ ನೂತನ “ಆಪ್ಟಸ್ ಸ್ಟೇಡಿಯಂ’ನಲ್ಲಿ ಗೆಲುವಿಗೆ 287 ರನ್ನುಗಳ ಗುರಿ ಪಡೆದಿರುವ ಕೊಹ್ಲಿ ಪಡೆ, 4ನೇ ದಿನದಾಟದ ಅಂತ್ಯಕ್ಕೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಕೇವಲ 112 ರನ್ ಗಳಿಸಿದೆ. ರಾಹುಲ್, ವಿಜಯ್, ಪೂಜಾರ, ಕೊಹ್ಲಿ ಮತ್ತು ರಹಾನೆ ಈಗಾಗಲೇ ಪೆವಿಲಿಯನ್ ಸೇರಿದ್ದು, ತಂಡದ ಅಂತಿಮ ಭರವಸೆಯಾಗಿರುವ ಹನುಮ ವಿಹಾರಿ (24)-ರಿಷಬ್ ಪಂತ್ (9) ಕ್ರೀಸಿನಲ್ಲಿದ್ದಾರೆ. ಅಂತಿಮ ದಿನವಾದ ಮಂಗಳವಾರ ಉಳಿದ 5 ವಿಕೆಟ್‌ಗಳಿಂದ 175 ರನ್ ಪೇರಿಸುವ ಸವಾಲು ಟೀಮ್ ಇಂಡಿಯಾ ಮುಂದಿದೆ. ಪವಾಡ ನಡೆಯುವ ಸಂಭವ ತೀರಾ ಕಡಿಮೆ.
ಇದು ಅಡಿಲೇಡ್ ಪಂದ್ಯದ ಪಡಿಯಚ್ಚಿನಂತೆಯೇ ಸಾಗಿದ್ದು, ಅಲ್ಲಿ ಆತಿಥೇಯ ಆಸ್ಟ್ರೇಲಿಯ ಚೇಸಿಂಗ್‌ನಲ್ಲಿ ಎಡವಿತ್ತು. ಇದೇ ಸ್ಥಿತಿ ಈಗ ಕೊಹ್ಲಿ ಪಡೆಗೆ ಎದುರಾಗಿದೆ. ಬೌಲರ್‌ಗಳು ಮಿಂಚಿದರೂ ಓಪನಿಂಗ್ ಸಹಿತ ಬ್ಯಾಟಿಂಗ್ ವೈಫಲ್ಯ ಭಾರತವನ್ನು ಸೋಲಿನ ಬಾಗಿಲಿಗೆ ತಂದು ನಿಲ್ಲಿಸಿದೆ.
ಶಮಿ ಜೀವನಶ್ರೇಷ್ಠ ಬೌಲಿಂಗ್
4ನೇ ದಿನದಾಟದ ಮೊದಲ ಅವಧಿಯನ್ನು ಉಸ್ಮಾನ್ ಖ್ವಾಜಾ-ಟಿಮ್ ಪೇನ್ ಯಶಸ್ವಿಯಾಗಿ ನಿಭಾಯಿಸಿದ್ದರು. 4ಕ್ಕೆ 132 ರನ್ ಮಾಡಿದ್ದ ಆಸೀಸ್ ಯಾವುದೇ ವಿಕೆಟ್ ನಷ್ಟಕ್ಕೊಳಗಾಗದೆ ಮೊತ್ತವನ್ನು 190ಕ್ಕೆ ಏರಿಸಿತು. ಲಂಚ್ ಬಳಿಕ ಭಾರತದ ಬೌಲಿಂಗ್ ದಾಳಿ ತೀವ್ರಗೊಂಡಿತು. ದ್ವಿತೀಯ ಅವಧಿಯಲ್ಲಿ ಆಸ್ಟ್ರೇಲಿಯದ ಉಳಿದ 6 ವಿಕೆಟ್‌ಗಳಲ್ಲದೆ, ಭಾರತದ 2 ವಿಕೆಟ್‌ಗಳೂ ಹಾರಿಹೋದವು! ಇಂಥದೊಂದು ನಾಟಕೀಯ ಕುಸಿತ ಪಂದ್ಯದ ಹಾದಿಯನ್ನು ಸ್ಪಷ್ಟಗೊಳಿಸಿತ್ತು.
ಮಧ್ಯಮ ವೇಗಿ ಮೊಹಮ್ಮದ್ ಶಮಿ ಆತಿಥೇಯರ ಮೇಲೆ ಘಾತಕವಾಗಿ ಎರಗಿ 6 ವಿಕೆಟ್ ಉಡಾಯಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್. ಶಮಿ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಕಿತ್ತ 4ನೇ ನಿದರ್ಶನ ಇದಾಗಿದೆ. ಪೇನ್ ಮತ್ತು ಚೇತರಿಸಿಕೊಂಡು ಕ್ರೀಸಿಗೆ ಆಗಮಿಸಿದ ಫಿಂಚ್ ಅವರನ್ನು ಶಮಿ ಸತತ ಎಸೆತಗಳಲ್ಲಿ ಕೆಡವಿದರು. ಅಲ್ಲಿಗೆ ಆಸೀಸ್ ವಿಕೆಟ್‌ಗಳು ಪಟಪಟನೆ ಬೀಳತೊಡಗಿದವು. ಖ್ವಾಜಾ ಸರ್ವಾಧಿಕ 72 ರನ್ ಹೊಡೆದರು (213 ಎಸೆತ, 5 ಬೌಂಡರಿ).
ರಾಹುಲ್ ಮತ್ತೆ ಸೊನ್ನೆ, ಮತ್ತೆ ಬೌಲ್ಡ್!
ಚೇಸಿಂಗ್ ವೇಳೆ ಭದ್ರ ಬುನಾದಿ ನಿರ್ಮಿಸಬೇಕಿದ್ದ ಭಾರತದ ಆರಂಭಿಕರು ಮತ್ತೆ ವಿಫಲರಾದರು. ಕಾಕತಾಳೀಯವೆಂಬಂತೆ ರಾಹುಲ್ ಮತ್ತು ವಿಜಯ್ ಪುನಃ ಬೌಲ್ಡ್ ಆದರು. ರಾಹುಲ್ ಮತ್ತೆ ಖಾತೆ ತೆರೆಯದೆ ನಿರಾಶೆ ಮೂಡಿಸಿದರು. ಪೂಜಾರ ಕೂಡ ನಿಲ್ಲಲಿಲ್ಲ. ಮೊದಲ ಸರದಿಯಲ್ಲಿ ಶತಕ ಬಾರಿಸಿ ತಂಡವನ್ನು ಆಧರಿಸಿದ ನಾಯಕ ಕೊಹ್ಲಿ 17, ಉಪನಾಯಕ ರಹಾನೆ 30 ರನ್ ಮಾಡಿ ಪೆವಿಲಿಯನ್ ಸೇರಿಕೊಂಡರು.
ಕೊಹ್ಲಿ-ಪೇನ್ ಚಕಮಕಿ!
ಆಸ್ಟ್ರೇಲಿಯ-ಭಾರತ ಟೆಸ್ಟ್ ಪಂದ್ಯಗಳ ವೇಳೆ ಅಂಗಳದಲ್ಲಿ ಮಾತಿನ ಚಕಮಕಿ ಇದ್ದದ್ದೇ. ಐಸಿಸಿ ತನ್ನ ನಿಯಮಗಳನ್ನು ಬಿಗಿಗೊಳಿಸಿದ್ದರಿಂದ ಈ ಬಾರಿ ಅದು ನಡೆಯಲು ಸಾಧ್ಯವಿಲ್ಲ ಎಂದು ಬಹುತೇಕರು ಭಾವಿಸಿದ್ದರು. ಆದರೆ 2ನೇ ಟೆಸ್ಟ್ ಮುಕ್ತಾಯದತ್ತ ಸಾಗುತ್ತಿರುವ ಹೊತ್ತಿನಲ್ಲಿ ಎರಡೂ ತಂಡಗಳ ನಡುವೆ ಮತ್ತೆ ಇಂಥದೊಂದು ವರ್ತನೆ ಕಂಡುಬಂದಿದೆ.
ಇದು ಶುರುವಾಗಿದ್ದು 3ನೇ ದಿನದ ಅಂತ್ಯದ ವೆಇಳೆ. ಆಸ್ಟ್ರೇಲಿಯ ನಾಯಕ ಟಿಮ್ ಪೇನ್ ಹೊಡೆತವೊಂದು ವಿಕೆಟ್ ಕೀಪರ್‌ಗೆ ಕ್ಯಾಚ್ ಆಗುವುದರಲ್ಲಿತ್ತು. ಆಗ ಕೊಹ್ಲಿ ತಮ್ಮ ವಾಗ್ಬಾಣವನ್ನು ತೂರಿಬಿಟ್ಟು, ಒಂದು ವೇಳೆ ಈಗ ಆತ ಔಟಾದರೆ ಫಲಿತಾಂಶ 2-0 ಆಗುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದರು. ಇದರಿಂದ ಸಿಟ್ಟೆಗಿದ್ದ ಟಿಮ್ ಪೇನ್, ನೀನು ತಲೆಭಾರದ ವ್ಯಕ್ತಿ ಎಂದಿದ್ದರು.
4ನೇ ದಿನ ಬೆಳಗ್ಗೆಯೂ ಇದೇ ವಾತಾವರಣ ಮುಂದುವರಿಯಿತು. ಸೋಮವಾರ ಸ್ವತಃ ಟಿಮ್ ಪೇನ್, ಕೊಹ್ಲಿಯನ್ನು ಕೆಣಕಿದರು. ಆಗ ಅಂಪಾಯರ್ ಮಧ್ಯಪ್ರವೇಶಿಸಿದರು. ಕೆಲವು ಎಸೆತಗಳ ಅನಂತರ ಟಿಮ್ ಪೇನ್ ಓಡುವಾಗ ಕೊಹ್ಲಿ ಅಡ್ಡ ಓಡಿದರು. ಪರಿಣಾಮ ಇಬ್ಬರೂ ಎದೆಗೆ ಎದೆ ಮಿಲಾಯಿಸುವ ಮಟ್ಟಕ್ಕೆ ತಲುಪಿದ್ದರು. ಆಗ ಅಂಪಾಯರ್ ಮಧ್ಯಪ್ರವೇಶಿಸಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಕೊಹ್ಲಿ ವರ್ತನೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಟೀಕಿಸಿದ್ದರೆ, ಇನ್ನು ಕೆಲವರು ಬೆಂಬಲಕ್ಕೆ ನಿಂತಿದ್ದಾರೆ!
ಸ್ಕೋರ್ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ 326
ಭಾರತ ಪ್ರಥಮ ಇನ್ನಿಂಗ್ಸ್ 283
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್
(ನಿನ್ನೆ 4 ವಿಕೆಟಿಗೆ 132)
ಆರನ್ ಫಿಂಚ್ ಸಿ ಪಂತ್ ಬಿ ಶಮಿ 25
ಉಸ್ಮಾನ್ ಖ್ವಾಜಾ ಸಿ ಪಂತ್ ಬಿ ಶಮಿ 72
ಟಿಮ್ ಪೇನ್ ಸಿ ಕೊಹ್ಲಿ ಬಿ ಶಮಿ 37
ಪ್ಯಾಟ್ ಕಮಿನ್ಸ್ ಬಿ ಬುಮ್ರಾ 1
ಮಿಚೆಲ್ ಸ್ಟಾರ್ಕ್ ಬಿ ಬುಮ್ರಾ 14
ನಥನ್ ಲಿಯೋನ್ ಸಿ ವಿಹಾರಿ ಬಿ ಶಮಿ 5
ಜೋಶ್ ಹ್ಯಾಝಲ್‌ವುಡ್ ಔಟಾಗದೆ 17
ಇತರ 15
ಒಟ್ಟು (ಆಲೌಟ್) 243
ವಿಕೆಟ್ ಪತನ: 5-192, 6-192, 7-198, 8-198, 9-207.
ಬೌಲಿಂಗ್:
ಇಶಾಂತ್ ಶರ್ಮ 16-1-45-1
ಜಸ್‌ಪ್ರೀತ್ ಬುಮ್ರಾ 26.2-10-39-3
ಮೊಹಮ್ಮದ್ ಶಮಿ 24-8-56-6
ಉಮೇಶ್ ಯಾದವ್ 14-0-61-0
ಹನುಮ ವಿಹಾರಿ 14-4-31-0
ಭಾರತ ದ್ವಿತೀಯ ಇನ್ನಿಂಗ್ಸ್
(ಗೆಲುವಿನ ಗುರಿ 287 ರನ್)
ಕೆ.ಎಲ್. ರಾಹುಲ್ ಬಿ ಸ್ಟಾರ್ಕ್ 0
ಮುರಳಿ ವಿಜಯ್ ಬಿ ಲಿಯೋನ್ 20
ಚೇತೇಶ್ವರ್ ಪೂಜಾರ ಸಿ ಪೇನ್ ಬಿ ಹ್ಯಾಝಲ್‌ವುಡ್ 4
ವಿರಾಟ್ ಕೊಹ್ಲಿ ಸಿ ಖ್ವಾಜಾ ಬಿ ಲಿಯೋನ್ 17
ಅಜಿಂಕ್ಯ ರಹಾನೆ ಸಿ ಹೆಡ್ ಬಿ ಹ್ಯಾಝಲ್‌ವುಡ್ 30
ಹನುಮ ವಿಹಾರಿ ಬ್ಯಾಟಿಂಗ್ 24
ರಿಷಬ್ ಪಂತ್ ಬ್ಯಾಟಿಂಗ್ 9
ಇತರ 8
ಒಟ್ಟು (5 ವಿಕೆಟಿಗೆ) 112
ವಿಕೆಟ್ ಪತನ: 1-0, 2-13, 3-48, 4-55, 5-98.
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 10-2-28-1
ಜೋಶ್ ಹ್ಯಾಝಲ್‌ವುಡ್ 11-3-24-2
ಪ್ಯಾಟ್ ಕಮಿನ್ಸ್ 8-0-24-0
ನಥನ್ ಲಿಯೋನ್ 12-2-30-2
ಎಕ್ಸ್‌ಟ್ರಾ ಇನ್ನಿಂಗ್ಸ್
* ಕೆ.ಎಲ್. ರಾಹುಲ್ ಈ ವರ್ಷದ ಟೆಸ್ಟ್ ಪಂದ್ಯಗಳಲ್ಲಿ 4 ಸಲ ಸೊನ್ನೆಗೆ ಔಟಾದರು. ಇದರೊಂದಿಗೆ ವರ್ಷವೊಂದರಲ್ಲಿ ಅತ್ಯಧಿಕ ಸಲ ಖಾತೆ ತೆರೆಯದೆ ಔಟಾದ ಆಟಗಾರರ ಯಾದಿಯಲ್ಲಿ ಜಂಟಿ 2ನೇ ಸ್ಥಾನಿಯಾದರು.
* ರಾಹುಲ್ ವರ್ಷವೊಂದರಲ್ಲಿ 4 ಹಾಗೂ ಹೆಚ್ಚು ಸಲ ಡಕ್ ಔಟ್ ಆದ 12 ಆರಂಭಿಕರಲ್ಲೊಬ್ಬರು. ಭಾರತದ ಪಂಕಜ್ ರಾಯ್ 1952ರ 15 ಇನ್ನಿಂಗ್ಸ್‌ಗಳಲ್ಲಿ 5 ಸಲ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದು ದಾಖಲೆ.
* ರಾಹುಲ್ ಕಳೆದ 12 ಇನ್ನಿಂಗ್ಸ್‌ಗಳಲ್ಲಿ 7 ಸಲ ಬೌಲ್ಡ್ ಆದರು.
* ರಾಹುಲ್-ಮುರಳಿ ಜೋಡಿ ಈ ವರ್ಷ ಮೊದಲ ವಿಕೆಟಿಗೆ 3ನೇ ಸಲ ಖಾತೆ ತೆರೆಯುವಲ್ಲಿ ವಿಫಲವಾಯಿತು. ಇದು ವರ್ಷವೊಂದರಲ್ಲಿ ಭಾರತದ ಆರಂಭಿಕ ಜೋಡಿಯೊಂದು ಅತೀ ಹೆಚ್ಚು 3 ಸಲ ಖಾತೆ ತೆರೆಯದ 3ನೇ ನಿದರ್ಶನ. 1983ರಲ್ಲಿ ಗಾವಸ್ಕರ್-ಗಾಯಕ್ವಾಡ್, 2010ರಲ್ಲಿ ಸೆಹವಾಗ್-ಗಂಭೀರ್ ಜೋಡಿ ಕೂಡ ಇದೇ ಸಂಕಟಕ್ಕೆ ಸಿಲುಕಿತ್ತು.
* ಮೊಹಮ್ಮದ್ ಶಮಿ ಈ ವರ್ಷದ ದ್ವಿತೀಯ ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್ ಕಿತ್ತರು. ಇದು ಏಶ್ಯದ ಪೇಸ್ ಬೌಲರ್ ಓರ್ವನ ನೂತನ ದಾಖಲೆ. 1982ರಲ್ಲಿ ಇಮ್ರಾನ್ ಖಾನ್, 1994ರಲ್ಲಿ ವಾಸಿಮ್ ಆಕ್ರಮ್ ತಲಾ 27 ವಿಕೆಟ್ ಕಿತ್ತ ದಾಖಲೆ ಪತನಗೊಂಡಿತು.
* ಶಮಿ 2018ರಲ್ಲಿ 44 ವಿಕೆಟ್ ಕಿತ್ತರು. ಇದರಲ್ಲಿ 42 ವಿಕೆಟ್ ವಿದೇಶಿ ಪಂದ್ಯಗಳಲ್ಲಿ ಉರುಳಿದ್ದವು. ಇದು ಕ್ಯಾಲೆಂಡರ್ ವರ್ಷವೊಂದರಲ್ಲಿ ಭಾರತದ ಬೌಲರ್ ಓರ್ವ ವಿದೇಶದಲ್ಲಿ ಉರುಳಿಸಿದ ಅತ್ಯಧಿಕ ವಿಕೆಟ್ ಆಗಿದೆ. 2006ರಲ್ಲಿ ಅನಿಲ್ ಕುಂಬ್ಳೆ 41 ವಿಕೆಟ್ ಹಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.
* ಆರನ್ ಫಿಂಚ್ ಗಾಯಾಳಾಗಿ ಬ್ಯಾಟಿಂಗ್ ಮುಂದುವರಿಸಲು ಬಂದು ಮೊದಲ ಎಸೆತದಲ್ಲೇ ಔಟಾದ ವಿಶ್ವದ ಕೇವಲ 3ನೇ ಕ್ರಿಕೆಟಿಗ. ಇಂಗ್ಲೆಂಡ್ ಎದುರಿನ 1962ರ ಲೀಡ್ಸ್ ಟೆಸ್ಟ್‌ನಲ್ಲಿ ಪಾಕಿಸ್ಥಾನದ ಜಾವೇದ್ ಬುರ್ಕಿ, ಭಾರತದೆದುರಿನ 1988ರ ಹರಾರೆ ಟೆಸ್ಟ್‌ನಲ್ಲಿ ಜಿಂಬಾಬ್ವೆಯ ಗವಿನ್ ರೆನ್ನಿ ಕೂಡ ಇದೇ ಸಂಕಟಕ್ಕೆ ಸಿಲುಕಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.