ಕೇಳಿದ್ದು 200 ಕೋ.ರೂ.; ಕೊಟ್ಟದ್ದು 20 ಕೋ.ರೂ.
Team Udayavani, Dec 18, 2018, 10:25 AM IST
ಮಂಗಳೂರು: ಈ ಬಾರಿಯ ಮುಂಗಾರು ಮಳೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಮೂಲಸೌಕರ್ಯಗಳಿಗೆ ಆಗಿರುವ ಹಾನಿಗೆ 213.67 ಕೋ.ರೂ.ಗಳ ಪರಿಹಾರ ನೀಡಬೇಕು ಎಂದು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರಕಾರದ ಮಾನದಂಡದಂತೆ ಜಿಲ್ಲೆಗೆ ಬಿಡುಗಡೆ ಮಾಡಲಾಗಿರುವುದು ಕೇವಲ 20 ಕೋ.ರೂ. ಆಗಿರುವ ನಷ್ಟವನ್ನು ಅವಲೋಕಿಸಿದರೆ ಈ ಮೊತ್ತ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿದೆ. ಅಲ್ಪ ಅನುದಾನವನ್ನು ಪರಿಹಾರ ಕಾರ್ಯಗಳಿಗೆ ಹೊಂದಿಸಿ ಕೊಳ್ಳಲು ಇಲಾಖೆಗಳು ಪರದಾಡುತ್ತಿವೆ.
ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿತ್ತು. ಆಗ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದಿಂದ ಅಪಾರ ಪ್ರಮಾಣದಲ್ಲಿ ಮೂಲ ಸೌಕರ್ಯಗಳಿಗೆ ಹಾನಿಯಾಗಿತ್ತು. ದಕ್ಷಿಣ ಕನ್ನಡದಲ್ಲಿ ಆಗಿರುವ ಹಾನಿಯ ಸಮೀಕ್ಷೆ ನಡೆಸಿದ ಜಿಲ್ಲಾಡಳಿತವು ಒಟ್ಟು 213.67 ಕೋ.ರೂ. ಪರಿಹಾರ ನೀಡಬೇಕು ಎಂಬ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು.
ಅಲ್ಪ ಮೊತ್ತ ಹಂಚಿಕೆ
ಜಿಲ್ಲಾಡಳಿತ ಸಲ್ಲಿಸಿರುವ ಮಳೆಹಾನಿ ಪರಿಹಾರ ಪ್ರಸ್ತಾವನೆಗೆ ಪ್ರತಿಯಾಗಿ ರಾಜ್ಯ ಸರಕಾರದ ಕಂದಾಯ ಇಲಾಖೆಯು ಅಕ್ಟೋಬರ್ ತಿಂಗಳಿನಲ್ಲಿ 20.88 ಕೋಟಿ ರೂ. ಬಿಡುಗಡೆ ಮಾಡಿ ಅದನ್ನು ಇಲಾಖಾವಾರು ಹಂಚಿಕೆ ಮಾಡಿದೆ. ಇದರಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಜಾಯತ್ ರಾಜ್ ಇಲಾಖೆಗೆ 5.40 ಕೋ.ರೂ., ಲೋಕೋಪಯೋಗಿ ಇಲಾಖೆಗೆ 10.46 ಕೋ.ರೂ., ಮೆಸ್ಕಾಂಗೆ (ಇಂಧನ) 1.17 ಕೋ.ರೂ., ನಗರಾಭಿವೃದ್ಧಿ ಇಲಾಖೆಗೆ 3.52 ಕೋ.ರೂ. ಹಾಗೂ ನೀರಾವರಿ ಇಲಾಖೆಗೆ 23 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹಂಚಿಕೆಯಾದ ಮೊತ್ತಕ್ಕೆ ಸೀಮಿತ ಗೊಳಿಸಿ ಕಾಮಗಾರಿಗಳನ್ನು ಕೈಗೊಳ್ಳ ಬೇಕು. ಬಿಡುಗಡೆ ಮಾಡಿರುವ ಅನುದಾನವನ್ನು ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ನಿರ್ದೇಶನವನ್ನು ನೀಡಲಾಗಿದೆ. ಪರಿಹಾರವಾಗಿ ಬಿಡುಗಡೆಯಾಗಿರುವ ಅಲ್ಪ ಮೊತ್ತದಿಂದ ದುರಸ್ತಿ ಮತ್ತಿತರ ಕಾಮಗಾರಿಗಳನ್ನು ನಡೆಸಲು ಇಲಾಖೆಗಳು ಪರದಾಡಬೇಕಾಗಿದೆ. ಮೂಲ ಸೌಕರ್ಯ ಅಲ್ಲದೆ ಎ.1ರಿಂದ ಆಗಸ್ಟ್ 14 ವರೆಗಿನ ಮೂರೂವರೆ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮಳೆಗೆ 12 ಮಂದಿ ಬಲಿ ಯಾಗಿದ್ದು, 1,163 ಮನೆಗಳಿಗೆ ಹಾನಿ ಸಂಭವಿಸಿತ್ತು.
ಮಂಗಳೂರು ತಾಲೂಕಿನಲ್ಲಿ ಅತಿಹೆಚ್ಚು ಹಾನಿ
ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಮತ್ತು ಭೂಕುಸಿತದಿಂದ ಮಂಗಳೂರು ತಾಲೂಕಿನಲ್ಲಿ ಮೂಲಸೌಕರ್ಯಗಳಿಗೆ ಗರಿಷ್ಠ ಪ್ರಮಾಣದ 91.14 ಕೋ.ರೂ. ಹಾನಿಯಾಗಿತ್ತು ಪುತ್ತೂರಿನಲ್ಲಿ 37.04 ಕೋ.ರೂ., ಸುಳ್ಯದಲ್ಲಿ 25.85 ಕೋ.ರೂ., ಬಂಟ್ವಾಳದಲ್ಲಿ 12.68 ಕೋ.ರೂ., ಬೆಳ್ತಂಗಡಿಯಲ್ಲಿ 16.04 ಕೋ.ರೂ., ಕಡಬದಲ್ಲಿ 25.85 ಕೋ.ರೂ. ಹಾಗೂ ಮೂಡುಬಿದಿರೆಯಲ್ಲಿ 18.98 ಕೋ.ರೂ. ಮೊತ್ತದ ಮೂಲಸೌಕರ್ಯಗಳಿಗೆ ಹಾನಿಯುಂಟಾಗಿದೆ ಎಂದು ಎಂದು ಸಮೀಕ್ಷೆಯಲ್ಲಿ ಅಂದಾಜಿಸಿ ವರದಿ ನೀಡಲಾಗಿತ್ತು.
ಹೆಚ್ಚಿನ ಅನುದಾನದ ಮಾಹಿತಿ ಸದ್ಯ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರಿನಲ್ಲಿ ಭಾರೀ ಮಳೆಯಿಂದ ಮೂಲ ಸೌಕರ್ಯಗಳಿಗೆ ಆಗಿರುವ ಹಾನಿಗೆ 20 ಕೋ.ರೂ. ಬಿಡುಗಡೆಯಾಗಿದೆ. ಅದನ್ನು ಪರಿಹಾರ ಕಾಮಗಾರಿಗಳಿಗಾಗಿ ವಿನಿಯೋಗಿಸಲಾಗುತ್ತಿದೆ. ಹೆಚ್ಚಿನ ಅನುದಾನ ಕುರಿತು ಸದ್ಯ ಯಾವುದೇ ಮಾಹಿತಿ ಬಂದಿಲ್ಲ.
ಶಶಿಕಾಂತ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ
ಕೇಶವ ಕುಂದರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.