ಅಪ್ಪ ಅಮ್ಮ ಕಳೆದುಕೊಂಡು ಪುತ್ರಿಯರು
Team Udayavani, Dec 18, 2018, 11:27 AM IST
ಮೈಸೂರು: ಕಿಚ್‌ಗುತ್ ಮಾರಮ್ಮನ ಪ್ರಸಾದವನ್ನು ಮನೆಗೆ ತಂದು ನನ್ನ ಕೈಗೆ ಕೊಟ್ಟ ಅಮ್ಮ, ಏನೋ ಕೆಲಸ ಹೇಳಿದ್ದರಿಂದ ಸ್ವಲ್ಪ ಪ್ರಸಾದವನ್ನು ಬಾಯಿಗೆ ಹಾಕಿಕೊಂಡು ನಾನು ಮನೆಯಿಂದ ಹೊರ ಹೋದೆ, ದೇವಸ್ಥಾನದಲ್ಲೇ ಪ್ರಸಾದ ತಿಂದು ಬಂದಿದ್ದ ನನ್ನ ಅಪ್ಪ-ಅಮ್ಮ ಬದುಕುಳಿಯಲಿಲ್ಲ.
ನಮ್ಮನ್ನು ಓದಿಸಲು ತುಂಬಾ ಕಷ್ಟಪಟ್ಟಿದ್ದ ನಮ್ಮ ಅಪ್ಪ-ಅಮ್ಮನನ್ನು ನಮ್ಮಿಂದ ಕಿತ್ತುಕೊಂಡು ಬಿಟ್ಟರು, ಮುಂದೆ ನಮಗ್ಯಾರು ದಿಕ್ಕು ಎಂದು ಘಟನೆಯಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಗಿರುವ ಪ್ರಿಯಾ, ಅಳಲು ತೋಡಿಕೊಂಡು ಕಣ್ಣೀರಾದಳು.
ಡಿ.14ರಂದು ಹನೂರು ತಾಲೂಕು ಸುಳ್ವಾಡಿ ಗ್ರಾಮದ ಕಿಚ್‌ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆ ಘಟನೆಯಲ್ಲಿ ಮಾರ್ಟಳ್ಳಿ ಸಮೀಪದ ಕೋಟೈಪೊದೆ ಗ್ರಾಮದ ಲಂಬಾಣಿ ಸಮುದಾಯದ ಕೃಷ್ಣನಾಯ್ಕ, ಅದೇ ದಿನ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಗಂಭೀರ ಪರಿಸ್ಥಿತಿಯಿಂದ ಅದೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದ ಕೃಷ್ಣನಾಯ್ಕ ಅವರ ಪತ್ನಿ ಮೈಲಿಭಾಯಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ನಿಧನರಾದರು.
ಲಂಬಾಣಿ ಸಮುದಾಯದ ಕೃಷ್ಣನಾಯ್ಕ-ಮೈಲಿಭಾಯಿ ದಂಪತಿಗೆ ಮೂವರು ಮಕ್ಕಳು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ದಂಪತಿ ನಮ್ಮ ಕಷ್ಟ ನಮ್ಮ ಮಕ್ಕಳಿಗೂ ಬರಬಾರದು ಎಂದು ಜೀವನಸಾಗಿಸಲು ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ವಿದ್ಯಾವಂತರನ್ನಾಗಿಸಬೇಕು ಎಂದು ಕೂಲಿ ಅರಸಿ ಎರಡು ವರ್ಷಗಳ ಹಿಂದೆ ದಂಪತಿ ಕೇರಳಕ್ಕೆ ಹೋಗಿದ್ದರು.
ಮೂವರು ಮಕ್ಕಳ ಪೈಕಿ ಮೊದಲ ಇಬ್ಬರು ಹೆಣ್ಣು ಮಕ್ಕಳು ಬಿಎಸ್ಸಿ ಓದುತ್ತಿದ್ದು, ಕೊನೆಯ ಮಗ ಮಂಡ್ಯದ ಕೆ.ಎಂ.ದೊಡ್ಡಿಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಹೆಣ್ಣು ಮಕ್ಕಳಾದ ರಾಣಿಭಾಯಿ ಹಾಗೂ ಪ್ರಿಯಾ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿಗೆ ದಾಖಲಾಗಿ ರಾಮಕೃಷ್ಣ ನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿದ್ದರು. ಈ ಪೈಕಿ ಪ್ರಿಯಾಗೆ ಬಿಎಸ್ಸಿ ನರ್ಸಿಂಗ್ ಸೀಟು ದೊರೆತಿದ್ದರಿಂದ ತಿಂಗಳ ಹಿಂದಷ್ಟೇ ಬಿಡದಿ ಬಳಿಯ ಕಾಲೇಜಿಗೆ ದಾಖಲಾಗಿದ್ದಳು.
ಅಪ್ಪ-ಅಮ್ಮ ಬಂದಿದ್ದರು: ಕೇರಳದಲ್ಲಿ ಸರಿಯಾಗಿ ಕೂಲಿ ಕೆಲಸ ಸಿಗದ್ದರಿಂದ ಸಾಲ ತೀರಿಸಲು ಕಷ್ಟವಾಗುತ್ತಿದೆ ಎಂದು ಕೃಷ್ಣನಾಯ್ಕ -ಮೈಲಿಭಾಯಿ ದಂಪತಿ ತಮಿಳುನಾಡಿನ ತಿರುಪೂರ್‌ಗೆ ತೆರಳಿ ಅಲ್ಲಿನ ಬಟ್ಟೆ ಕಾರ್ಖಾನೆಗಳಲ್ಲಿ ಕೂಲಿ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಗುರುವಾರ ಕೇರಳದಿಂದ ಮನೆಗೆ ಬಂದಿದ್ದರು. ಅಪ್ಪ-ಅಮ್ಮ ಮನೆಗೆ ಬಂದಿದ್ದರಿಂದ ಮಕ್ಕಳೂ ಸಹ ಕಾಲೇಜಿಗೆ ರಜೆ ಹಾಕಿ ಮನೆಗೆ ಹೋಗಿದ್ದರು.
ಶುಕ್ರವಾರ ಕಿಚ್‌ಗುತ್ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಷ್ಟದಿಂದ ನಮ್ಮನ್ನು ಪಾರುಮಾಡು ಎಂದು ಬೇಡಿಕೊಳ್ಳಲು ಹೋಗಿದ್ದ ದಂಪತಿ ದೇವಸ್ಥಾನದಲ್ಲಿ ನೀಡಿದ ವೆಜಿಟೇಬಲ್ ಬಾತ್ ಹಾಗೂ ಪಂಚಾಮೃತ ಸೇವಿಸಿ, ಮನೆಗೂ ತಂದಿದ್ದರು. ಮನೆಗೆ ಬಂದ ಕೆಲ ಹೊತ್ತಿನಲ್ಲಿ ಮೈಲಿಭಾಯಿಗೆ ವಾಂತಿ ಆಗಿದೆ. ಬಿಸಿಲಲ್ಲಿ ನಡೆದು ಬಂದಿದ್ದರಿಂದ ಸುಸ್ತಾಗಿ ವಾಂತಿಯಾಗಿದೆ ಎಂದು ಅಪ್ಪ, ಅಮ್ಮನನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕರೆದುಕೊಂಡು ಬಂದರು,
ಆಸ್ಪತ್ರೆಗೆ ಬರುವಷ್ಟರಲ್ಲಿ ಅಪ್ಪನಿಗೂ ವಾಂತಿಯಾಗಿದ್ದರಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಇಲ್ಲಿಗೆ ಬಂದರೆ ವೆಂಟಿಲೇಟರ್ ಇಲ್ಲ ಎಂದು ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿಗೆ ಕರೆದೊಯ್ದ ಐದು ನಿಮಿಷದಲ್ಲಿ ಅಪ್ಪ ಹೋಗಿಬಿಟ್ಟರು. ಐಸಿಯುನಲ್ಲಿರಿಸಿದ್ದರಿಂದ ಮೂರು ದಿನಗಳಿಂದ ಅಮ್ಮನ ಮುಖವನ್ನೂ ನೋಡಲಾಗಿರಲಿಲ್ಲ. ಇವತ್ತು ನೋಡಿದರೆ ಅಮ್ಮನು ನಮ್ಮನ್ನು ಬಿಟ್ಟು ಹೋದರು, ಈಗ ನಮಗ್ಯಾರು ದಿಕ್ಕು ಎಂದು ಕಣ್ಣೀರಾದಳು ಪ್ರಿಯಾ.
ಅಪ್ಪ-ಅಮ್ಮನನ್ನು ಕಳೆದುಕೊಂಡು ಬರಸಿಡಿಲು ಬಡಿದಂತೆ ಕುಳಿತಿದ್ದ ಪ್ರಿಯಾಳನ್ನು ಮಹಾರಾಣಿ ಕಾಲೇಜಿನ ಆಕೆಯ ಗೆಳತಿಯರು ಸಂತೈಸುವ ಕೆಲಸ ಮಾಡಿದರು. ಘಟನೆಯಿಂದ ಅಸ್ವಸ್ಥಳಾಗಿರುವ ಪ್ರಿಯಾಳಿಗೆ ಡ್ರಿಪ್ ಹಾಕಿಕೊಂಡೇ ಆ್ಯಂಬುಲೆನ್ಸ್‌ನಲ್ಲಿ ಅಮ್ಮನ ಶವದೊಂದಿಗೆ ಕರೆದೊಯ್ಯಲಾಯಿತು.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.