ಐಎಎಸ್ಸೇತರ ಅಧಿಕಾರಿಗಳೆಂದರೆ ಕೇಂದ್ರಕ್ಕೇಕೆ ಅಲರ್ಜಿ?
Team Udayavani, Dec 19, 2018, 6:00 AM IST
ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಸ್ಥಾನಕ್ಕೆ ಇದೀಗ ಇನ್ನೋರ್ವ ನಿವೃತ್ತ ಐಎಎಸ್ ಅಧಿಕಾರಿಯ ನೇಮಕವಾಗಿದೆ. ಸರಕಾರದ ಈ ಕ್ರಮ, ಉನ್ನತ ಹುದ್ದೆಗಳಿಗೆ ನೇಮಕ ಮಾಡುವ ವಿಷಯದಲ್ಲಿ ಅಧಿಕಾರ ಶಾಹಿಯೇತರ ವ್ಯಕ್ತಿಗಳ, (ಅಭ್ಯರ್ಥಿಗಳ) ಮೇಲಿನ ರಾಜಕಾರಣಿಗಳ ಅಪನಂಬಿಕೆ ಹಾಗೂ ಐಎಎಸ್ ಅಧಿಕಾರಿಗಳ ಆಯ್ಕೆ ಕುರಿತ ಅವರು ಹೊಂದಿರುವ ಒಲವಿನ ದ್ಯೋತಕವೇ ಆಗಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಹುದ್ದೆಗೆ ಅರ್ಥಶಾಸ್ತ್ರಜ್ಞ ಡಾ| ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಇದೀಗ ಭೂತಪೂರ್ವ ಐಎಎಸ್ ಅಧಿಕಾರಿ ಶಶಿಕಾಂತ್ ದಾಸ್ ಅವರನ್ನು ನರೇಂದ್ರ ಮೋದಿ ಸರಕಾರ ನೇಮಕ ಮಾಡಿದೆ. ಎಲ್ಲರಿಗೂ ತಿಳಿದಿರುವಂತೆ ಡಾ| ರಘುರಾಮ ರಾಜನ್ ಅವರ ನಿವೃತ್ತಿ ಹಾಗೂ ಡಾ| ಊರ್ಜಿತ್ ಪಟೇಲ್ ಅವರ ರಾಜೀನಾಮೆಯ ಬಳಿಕ, ಇಂಥ ಉನ್ನತ ಹುದ್ದೆಗಳಲ್ಲಿ ಸ್ವತಂತ್ರ ಚಿಂತನೆಯ ವ್ಯಕ್ತಿಗಳಿದ್ದರೆ ಅವರ ಮೇಲೆ ವಿಶ್ವಾಸವಿಡುವಂತಿಲ್ಲವೆಂಬುದನ್ನು ಸರಕಾರ ಅರ್ಥ ಮಾಡಿಕೊಂಡಿದೆ. ಯಾವುದೇ ಪಕ್ಷದ ಯಾವ ರಾಜಕಾರಣಿಗಳೇ ಆಗಿರಲಿ, ಅವರು ಚಿಂತನೆಯ ಮಟ್ಟಿಗೆ ಸಂಪ್ರದಾಯ ಶರಣರೇ ಆಗಿರುತ್ತಾರೆ, ಉಳಿದ ಕ್ಷೇತ್ರಗಳವರಿಗಿಂತ ಅಧಿಕಾರಿಗಳನ್ನೇ – ಅವರ ನೇಮಕವನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಅವರಿಗೆ ಉನ್ನತ ಹುದ್ದೆಗಳಲ್ಲಿ ಹೌದಪ್ಪಗಳು ಬೇಕು ಅಥವಾ ತಮ್ಮ ಸಿದ್ಧಾಂತವಲ್ಲದಿದ್ದರೂ ತಮ್ಮ ಆಯೋಚನಾ ಸರಣಿಗೆ ಬದ್ಧರಾಗಿರುವವರು ಬೇಕು. ಇದು ಶಕ್ತಿಕಾಂತ್ ದಾಸ್ ಅವರ ಕುರಿತ ಪೂರ್ವಭಾವಿ ವಿಮರ್ಶೆಯೆಂದು ಯಾರೂ ಭಾವಿಸಕೂಡದು. ತಮ್ಮ ಇಬ್ಬರು ಪೂರ್ವಾ ಧಿಕಾರಿಗಳಿಗಿಂತಲೂ ಅವರು ಹೆಚ್ಚು ನಿರ್ಲಿಪ್ತರಾಗಿ, ಸ್ವತಂತ್ರವಾಗಿ ಯೋಚಿಸುವವರಾಗಿರಬಹುದು, ಕಾರ್ಯ ನಿರ್ವಹಿಸುವವರಾಗಿರಬಹುದು. ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗಗಳ ನಡುವಣ ಸಂಬಂಧ ಅತ್ಯಂತ ಬಲವಾಗಿದೆ; ವಾಸ್ತವವಾಗಿ ಅದು ಇನ್ನೂ ಬಲವತ್ತರವಾಗಿಯೇ ಬೆಳೆಯುತ್ತಿದೆ. ಒಂದು ರೀತಿಯಲ್ಲಿ ಈ ಎರಡೂ ವರ್ಗಗಳವರು (ರಾಜಕಾರಣ ಹಾಗೂ ಅಧಿಕಾರಿ) ತಾವು ಏನೇ ಮಾಡಲಿ, ಅದರಲ್ಲಿ ಇಬ್ಬರೂ ಸಮಾನಾಸಕ್ತಿಯ ಭಾಗೀದಾರರೇ. ನಾಗರಿಕ ಸೇವಾ ಹುದ್ದೆಗಳಲ್ಲೂ ಅಷ್ಟೇ – ಇತರ ಸೇವೆಗಳಿಗೆ (ಉದಾ – ಭಾರತೀಯ ಆಡಿಟ್ ಹಾಗೂ ಲೆಕ್ಕಪತ್ರ ನಿರ್ವಹಣಾ ಹುದ್ದೆ ಅಥವಾ ಭಾರತೀಯ ಪೊಲೀಸ್ ಸೇವೆ) ಹೋಲಿಸಿದಲ್ಲಿ ಐಎಎಸ್ ಸೇವೆಗೇ ಪ್ರಾಧಾನ್ಯ.
ಮೋದಿ ಸರಕಾರ ಭಾರೀ ಲೆಕ್ಕ ಹಾಕಿ ಆಯ್ಕೆ ಮಾಡಿದ ಊರ್ಜಿತ್ ಪಟೇಲ್ ತಿರುಗಿ ಬಿದ್ದಿದ್ದನ್ನು ನೋಡಿದ ಮೇಲೆ ಅದಕ್ಕೆ (ಸರಕಾರಕ್ಕೆ) ಸ್ವತಂತ್ರ ಚಿಂತನೆಯ ವ್ಯಕ್ತಿಗಳ ಮೇಲೆ ಅವಲಂಬಿತವಾಗಕೂಡದೆಂಬುದು ಅರ್ಥವಾಗಿರಬಹುದು. ಮೋದಿ ಸರಕಾರ ಹಿಂದಿನ ಯುಪಿಎ ಸರಕಾರದ ಮೇಲೆ ತಪ್ಪು ಹೊರಿಸಿ, ಡಾ| ರಘುರಾಮ ರಾಜನ್ ಅವರ ಸೇವಾವಧಿಯನ್ನು ಮೂರು ವರ್ಷಗಳಿಗೆ ಮೊಟಕುಗೊಳಿಸಿ, (ಅವರನ್ನು ಸಾಗಹಾಕುವುದಕ್ಕಾಗಿ) ಡಾ| ಊರ್ಜಿತ್ ಪಟೇಲ್‌ರನ್ನು ನೇಮಕ ಮಾಡಿತ್ತು.
ಐಎಎಸ್ ಅಧಿಕಾರಿಗಳು ಕೇವಲ ಮಹಾಲೇಖಪಾಲರಾಗಿ (ಸಿಎಜಿ) ರಾಜ್ಯ ಲೋಕಸೇವಾ ಆಯೋಗಗಳ ವ್ಯಾಪ್ತಿಯ ಅಧಿಕಾರಿಗಳಾಗಿ ಮಾತ್ರ ನೇಮಿಸಬಹುದೆಂಬ ಕ್ರಮ ಚಾಲ್ತಿಯಲ್ಲಿದೆಯಾದರೆ, ಇದಕ್ಕೆ ನಾವು ಆಕ್ಷೇಪಿಸಬೇಕಾದುದು ಸಂವಿಧಾನವನ್ನು! ಸಿಎಜಿ ಒಂದು ತಾಂತ್ರಿಕ ಕೌಶಲ ನಿರೀಕ್ಷಿಸುವ ಹುದ್ದೆಯೆಂಬುದನ್ನು ಹಾಗೆಯೇ, ಸರಕಾರಿ ಲೆಕ್ಕಪತ್ರ ತಪಾಸಣೆ ಹಾಗೂ ಲೆಕ್ಕಪತ್ರ ನಿರ್ವಹಣೆ ಬಲ್ಲ ಪರಿಣತರಷ್ಟೇ ಈ ಹುದ್ದೆಯಲ್ಲಿರಬೇಕೆಂಬುದನ್ನು ನಾವು ಅಲ್ಲಗಳೆಯುವ ಹಾಗಿಲ್ಲ. ಈ ವಿಷಯದಲ್ಲಿ ಕೂಡ ಖ್ಯಾತ ಪ್ರೊ| ಕೆ.ಟಿ. ಶಾ ಅವರು ಆಕ್ಷೇಪವೆತ್ತಿದ್ದುಂಟು; ನಾಗರಿಕ ಸೇವಾ ಅಧಿಕಾರಿಗಳನ್ನು ಸಿಎಜಿಗಳನ್ನಾಗಿ ನೇಮಿಸಿದ್ದನ್ನು ಸಂವಿಧಾನ ಸಭೆ (ಅಂದಿನ ಸಂಸತ್ತಿನಲ್ಲಿ) ತೀವ್ರವಾಗಿ ಟೀಕಿಸಿದ್ದುಂಟು.
ಸಿಎಜಿ ಹುದ್ದೆ ಇದೀಗ ಸುದ್ದಿಯಲ್ಲಿದೆ. ರಫೇಲ್ ಯುದ್ಧ ವಿಮಾನದ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರಕ್ಕೆ ನಿರ್ದೋಷಿ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಸಂಬಂಧಿಸಿದ ಸುದ್ದಿ ಇದು. ತೀರ್ಪಿನ ಬಗ್ಗೆ ವಿರೋಧ ಪಕ್ಷಗಳು ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಸರಕಾರ, ಈ ವಿಷಯದಲ್ಲಿ ಸಿಎಜಿಯವರ ಪಾತ್ರ ಕುರಿತ ತನ್ನ ಅಫಿದವಿತ್‌ನ ವಿವರಗಳನ್ನು ನ್ಯಾಯಾಲಯ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದಿದೆ. ತಾನು ಈ ವ್ಯವಹಾರದ ಪ್ರಕ್ರಿಯೆಗಳನ್ನಷ್ಟೆ ಉಲ್ಲೇಖೀಸಿದ್ದೇನೆಂದೂ, ಸಿಎಜಿ ಈ ವಿವರಗಳನ್ನು ಸಾರ್ವಜನಿಕ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿಯೊಂದಿಗೆ ಹಂಚಿಕೊಂಡಿದೆಯೆಂದೇನೂ ತಾನು ಹೇಳಿಲ್ಲವೆಂದೂ ಸರಕಾರ ತನ್ನ ಹೇಳಿಕೆಯಲ್ಲಿ ವಿವರಿಸಿದೆ. ಸಿ.ಎಜಿ ಹುದ್ದೆಯಲ್ಲಿರುವುದು ಕೂಡ (ರಾಜೀವ್ ಮಹರ್ಷಿ) ಓರ್ವ ನಿವೃತ್ತ ಐಎಎಸ್ ಅಧಿಕಾರಿಯೇ ಎಂದು ಪ್ರಸತ್ಯೇಕವಾಗಿ ಹೇಳುವ ಅಗತ್ಯವಿಲ್ಲ!
ಇಂಥ ಸಂಸ್ಥೆಗಳನ್ನು ಹಾಗೂ ಸಂವಿಧಾನಾತ್ಮಕ ಘಟಕಗಳನ್ನು ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ; ತನ್ನ ವಿಚಾರಧಾರೆಗೆ ಒಗ್ಗುವವರನ್ನೇ ಇವುಗಳಲ್ಲಿ ತಂದು ಕೂರಿಸುತ್ತಿದೆ. ಎಂಬ ಟೀಕೆಯನ್ನು ಕೇಂದ್ರ ಸರಕಾರ ಈಗಾಗಲೇ ಎದುರಿಸುತ್ತಿದೆ. ಇಲ್ಲಿ ನಾನು ಸಿದ್ಧಾಂತ ಎಂಬ ಪದವನ್ನು (ವಿಚಾರಧಾರೆಯ ಬದಲಿಗೆ) ಬಳಸುತ್ತಿಲ್ಲ; ಯಾಕೆಂದರೆ ಭಾರತೀಯ ರಾಜಕಾರಣದಲ್ಲಿ ಇಂದು ಅದು ಇಲ್ಲ! ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ವಿವಿಧ ಹೈಕೋರ್ಟುಗಳಿಂದ ಸುಪ್ರೀಂಕೋರ್ಟಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ವಿಚಾರವನ್ನು ಕುರ್ಚಿಯಡಿ ತುರುಕಿ ಕುಳಿತಿರುವುದು. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆ (ನ್ಯಾಶನಲ್ ಜ್ಯುಡೀಶಿಯಲ್ ಅಪಾಯಿಂಟ್‌ಮೆಂಟ್ಸ್ ಕಮಿಶನ್ ಆ್ಯಕ್ಟ್ )ಯನ್ನು ಮತ್ತದಕ್ಕೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿಯನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ ಹೊರಡಿಸಿದ್ದ ತೀರ್ಪಿಗೆ ತಾನು ಪ್ರಕಟಿಸಿದ್ದ ಮನಸ್ತಾಪವನ್ನು ಕೇಂದ್ರ ಸರಕಾರ ಇನ್ನೂ ಬಗೆಹರಿಸಿಕೊಂಡಿಲ್ಲ. ತನ್ನ ಹಾಗೂ ಕೋರ್ಟಿನ ನಡುವೆ ಎದ್ದಿರುವ ಭಿನ್ನಾಭಿಪ್ರಾಯವನ್ನು ಮರು ಹೊಂದಾಣಿಕೆ ಪ್ರಕ್ರಿಯೆ ಮೂಲಕ ಸೂಕ್ತ ರೀತಿಯಲ್ಲಿ ಸಮನ್ವಯಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ. ಕೋರ್ಟು ಕೊಲಿಜಿಯಂ ವ್ಯವಸ್ಥೆಯ ಸಿಂಧುತ್ವವನ್ನೇ ಎತ್ತಿ ಹಿಡಿಯಿತು. ಇನ್ನು, ನ್ಯಾಯಾಧೀಶರುಗಳ ನೇಮಕಾತಿಗೆ ಸಂಬಂಧಿಸಿದ ಅನೌಪಚಾರಿಕ ಕಾನೂನು ಒಪ್ಪಂದದ ರೂಪುರೇಷೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಇನ್ನೂ ವಿಳಂಬ ಮಂತ್ರವನ್ನೇ ಪಠಿಸುತ್ತಿದೆ. ಸುಪ್ರೀಂ ಕೋರ್ಟಿನ ಭೂತಪೂರ್ವ ನ್ಯಾಯಾಧೀಶ ಕುರಿಯನ್ ಜೋಸೆಫ್ ಏನು ಹೇಳಿದ್ದಾರೆ ನೋಡಿ – ಹಿಂದಿನ (ಸುಪ್ರೀಂಕೋರ್ಟಿನ) ಶ್ರೇಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಬಾಹ್ಯ ಒತ್ತಡಗಳಿಗೆ ತಮ್ಮನ್ನು ತೆತ್ತುಕೊಂಡಿದ್ದರು ಎಂದಿದ್ದಾರೆ. ಕುರಿಯನ್ ಜೋಸೆಫ್, ಈ ಹೇಳಿಕೆಯ ಮೂಲಕ ಅವರು ಬಿಜೆಪಿ ಸರಕಾರ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂಬುದನ್ನು ಪರೋಕ್ಷವಾಗಿ ಸಾರಿದಂತಾಗಿದೆ. ಈ ನಡುವೆ, ಜೋಸೆಫ್ ಅವರು ಈ ಹೇಳಿಕೆಯನ್ನು ನ್ಯಾಯಾಧೀಶರಾಗಿದ್ದಾಗಲೇ ನೀಡಬೇಕಿತ್ತು; ನಿವೃತ್ತಿಯಾದ ಮೇಲಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ. ಈ ನಡುವೆ, ಈ ವಿದ್ಯಮಾನವನ್ನೂ ಗಮನಿಸಬೇಕು. ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟಿನ ಕೊಲಿಜಿಯಂ, ಸರಕಾರದ ವಿರೋಧದ ಹೊರತಾಗಿಯೂ ನ್ಯಾ| ಕೆ.ಎಂ. ಜೋಸೆಫ್ (ಮೊದಲಿಗೆ ಉತ್ತರಖಂಡದ ಮುಖ್ಯ ನ್ಯಾಯಾಧೀಶರಾಗಿದ್ದವರು) ಅವರಿಗೆ ಮುಂಭಡ್ತಿ ನೀಡಬೇಕೆಂಬ ದೀಪಕ್ ಮಿಶ್ರಾರ ನಿರ್ಧಾರಕ್ಕೆ ಅಂಟಿಕೊಂಡಿತ್ತು.
ಈ ನಡುವೆ ಕೇಂದ್ರ ಸರಕಾರದ ಮೇಲೆ ಇನ್ನೊಂದು ಟೀಕಾ ಪ್ರಹಾರವೂ ನಡೆದಿದೆ. ಇದು ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರನ್ನು ಹಾಗೂ ಇತರ ಆಯುಕ್ತರನ್ನು ನೇಮಕ ಮಾಡುವ ವಿಚಾರದಲ್ಲಿ . ಕೇಂದ್ರ ಸರಕಾರವಂತೂ ಇಂಥ ಯಾವುದೇ ಟೀಕೆ ಟಿಪ್ಪಣಿಗಳನ್ನು ಲೆಕ್ಕಿಸದೆ, ಮುಖ್ಯ ಕೇಂದ್ರ ಮಾಹಿತಿ ಆಯುಕ್ತರ ಹಾಗೂ ಇತರ ಆಯುಕ್ತರ ಹುದ್ದೆಗಳಿಗೆ ಅರ್ಹ ವ್ಯಕ್ತಿಗಳು ಅರ್ಜಿ ಹಾಕಿಕೊಳ್ಳಬಹುದೆಂದು ಆಹ್ವಾನವಿತ್ತಿದೆ. ಮುಖ್ಯ ಕೇಂದ್ರ ಮಾಹಿತಿ ಆಯುಕ್ತರಾಗಿದ್ದ ರಾಧಾಕೃಷ್ಣ ಮಾಥುರ್ ಮತ್ತಿತರ ಮೂವರು ಆಯುಕ್ತರು ನಿವೃತ್ತರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ ಕೇಂದ್ರ ಮಾಹಿತಿ ಆಯುಕ್ತರಲ್ಲೊಬ್ಬರಾದ ಡಾ| ಮಧುಭೂಷಿ ಶ್ರೀಧರ ಆಚಾರ್ಯಲು ತಮ್ಮ ನಿರ್ಭೀತಿ/ನಿರ್ಭಿಡೆಯ ಆದೇಶಗಳ ಮೂಲಕ ಕೇಂದ್ರಕ್ಕೆ ಹಾಗೂ ಇತರ ಸಂಸ್ಥೆಗಳಿಗೆ ಸಾಕಷ್ಟು ಇರಿಸುಮುರಿಸು ಉಂಟುಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ವಿವರಗಳನ್ನು ಆಯೋಗಕ್ಕೆ ಒದಗಿಸುವಂತೆ ಅವರು ದಿಲ್ಲಿ ವಿಶ್ವವಿದ್ಯಾಲಯಕ್ಕೆ ನಿರ್ದೇಶವಿತ್ತಿದ್ದರು; ಇದು ಸಾಧ್ಯವಿಲ್ಲವೆಂದು ವಿಶ್ವವಿದ್ಯಾಲಯ ಹೇಳಿದ ಬಳಿಕವೂ ತಮ್ಮ ನಿಲುವನ್ನು ಬದಲಿಸಿರಲಿಲ್ಲ . ಮೋದಿ ಅವರು 1978ರಲ್ಲಿ ಪದವಿಯೊಂದನ್ನು ಪಡೆದುಕೊಂಡಿದ್ದರು ಎಂದು ವಿ.ವಿ. ಹೇಳಿಕೊಂಡಿತ್ತು. ಇದೇ ರೀತಿ ಕೇಂದ್ರ ಸಚಿವೆ ಸ್ಮತಿ ಇರಾನಿಯವರ ಶೈಕ್ಷಣಿಕ ಅರ್ಹತೆ ಕುರಿತ ವಿವರಗಳನ್ನು ಕೂಡ ಸಲ್ಲಿಸುವಂತೆ ಆಯೋಗ, ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಿತ್ತು . ತೀರಾ ಇತ್ತೀಚಿನ ಸಂಗತಿಯೆಂದರೆ, ಡಾ| ಆಚಾರ್ಯಲು ಅವರು, ಬ್ಯಾಂಕುಗಳು ಎದುರಿಸುತ್ತಿರುವ “ವಸೂಲಾಗದ ಸಾಲ’ದ ಸಮಸ್ಯೆ ಕುರಿತ ಮಾಹಿತಿ ಒದಗಿಸುವಂತೆ ಪ್ರಧಾನಮಂತ್ರಿಗಳ ಕಚೇರಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿಗೆ ನಿರ್ದೇಶವಿತ್ತಿದ್ದರು.
ಡಾ| ಆಚಾರ್ಯಲು ಅವರಂತೆಯೇ ಇನ್ನೊಬ್ಬ ಆಯುಕ್ತ ಶೈಲೇಶ್ ಗಾಂಧಿ ಕೂಡ ಅಧಿಕಾರಶಾಹಿ ಹಿನ್ನೆಲೆಯವರಲ್ಲ. ಇವರಿಬ್ಬರ ಕಾರ್ಯವೈಖರಿಯೂ ನೆನಪಿನಲ್ಲಿರಿಸಬೇಕಾದಂಥದು.
ಈ ಹಿಂದಿನ ಸಿದ್ದರಾಮಯ್ಯ ಸರಕಾರ ಮಾಹಿತಿ ಆಯುಕ್ತರ ನೇಮಕಾತಿ ವಿಷಯದಲ್ಲಿ ಅಭೂತಪೂರ್ವ ನಡೆಯನ್ನು ದಾಖಲಿಸಿರುವುದು ಶ್ಲಾಘನೀಯ. ಶಿಕ್ಷಕ, ಪತ್ರಕರ್ತ ಡಾ| ಸುಚೇತನ ಸ್ವರೂಪ ಅವರು ರಾಜ್ಯದ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಿಸಲ್ಪಟ್ಟಿದ್ದರು. ಸಿದ್ದರಾಮಯ್ಯರಿಗಿಂತ ಹಿಂದಿನ ಕಾಂಗ್ರೆಸ್ ಸರಕಾರಗಳು ಹಾಗೂ ಯಡಿಯೂರಪ್ಪ ಸರಕಾರ, ಮಾಜಿ ಐಎಎಸ್ ಅಧಿಕಾರಿಗಳನ್ನೇ ನೇಮಿಸಿಕೊಂಡಿದ್ದವು. ಒಂದು ಸರಕಾರವಂತೂ ಸಾರ್ವಜನಿಕರೊಂದಿಗೆ ತುಂಬಾ ಒರಟಾಗಿ ನಡೆದುಕೊಳ್ಳುತ್ತಿದ್ದ, ತನ್ನ ಕೈಕೆಳಗಿನ ಅಧಿಕಾರಿಗಳ ಮೇಲೆ ದೂರಿತ್ತವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವೆನೆಂದು ಬೆದರಿಕೆ ಹಾಕುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿತ್ತು. ಇನ್ನು ಸಿಎಜಿಗಳ ನೇಮಕಾತಿಯ ಸಂದರ್ಭದಲ್ಲೂ ಕೇಂದ್ರ ಸರಕಾರಗಳು ಇಂಡಿಯನ್ ಆಡಿಟ್ ಆ್ಯಂಡ್ ಅಕೌಂಟ್ಸ್ ಸರ್ವೀಸ್ ಹುದ್ದೆಯ ಅನುಭವಿಗಳನ್ನು ತೆಗೆದುಕೊಳ್ಳುವ ಬದಲಿಗೆ ಐಎಎಸ್ ಅಧಿಕಾರಿಗಳನ್ನೇ ಆಯ್ಕೆಮಾಡಿಕೊಂಡಿವೆ. ಬ್ರಿಟಿಷ್ ಕಾಲದ ಫೈನಾನ್ಶಿಯಲ್ – ಸಿವಿಲ್ ಸರ್ವೀಸ್ ಅಥವಾ ಐಎ ಹಾಗೂ ಎಎಸ್‌ಗೆ ಸೇರಿದ್ದವರಾದ (ವಿ. ನರಹರಿ ರಾವ್, ಅಶೋಕ್ ಚಂದಾ ಹಾಗೂ ಎ. ಕೆ. ರಾಯ್) ಸರಕಾರಿ ವ್ಯವಹಾರಗಳ ತಪಾಸಣ/ಪರೀಕ್ಷಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಲವಾದ ಬುನಾದಿ ಹಾಕಿದವರೆಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ನರಹರಿ ರಾವ್ ಅವರು ಕರ್ನಾಟಕ ಮೂಲದವರು. ಅದೇ ರೀತಿ, ಇನ್ನೋರ್ವ ಸಿಎಜಿ ಸಿ. ಜಿ. ಸೋಮಯ್ಯ ಅವರು ಐಎಎಸ್ ಅಧಿಕಾರಿಯಾಗಿದ್ದವರೇ; ಅವರೂ ಕರ್ನಾಟಕದವರೇ.
ಇನ್ನು , ಕೇಂದ್ರ ಜಾಗೃತ ಆಯೋಗ (ಸಿವಿಸಿ)ದ ಆಯುಕ್ತರನ್ನು ನೇಮಿಸುವಾಗ ಕೇಂದ್ರ ಸರಕಾರಗಳು ಐಎಎಸ್ ಅಧಿಕಾರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ ಹೊರತು ನಿವೃತ್ತ ನ್ಯಾಯಧೀಶರನ್ನಲ್ಲ . ಈಗ ಈ ಹುದ್ದೆಯಲ್ಲಿರುವವರು ಓರ್ವ ಐಪಿಎಸ್ ಅಧಿಕಾರಿ; ಸಿಬಿಐಯ ನಿರ್ದೇಶಕರನ್ನು ಕಿತ್ತುಹಾಕಿದ ಘಟನೆಗೆ ಸಂಬಂಧಿಸಿದಂತೆ ಇವರೀಗ ಸುದ್ದಿಯಲ್ಲಿದ್ದಾರೆ. ಪ್ರಪ್ರಥಮ ಕೇಂದ್ರ ಜಾಗೃತ ಆಯುಕ್ತರಾಗಿದ್ದವರು, ಮೈಸೂರಿನ ಹಿಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ , ನ್ಯಾ| ನಿಟ್ಟೂರು ಶ್ರೀನಿವಾಸ ರಾವ್.
ಇದುವರೆಗೂ ಮುಖ್ಯ ಚುನಾವಣಾ ಆಯುಕ್ತರಾಗಿ ಅಥವಾ ಚುನಾವಣಾ ಆಯುಕ್ತರಾಗಿ ಹೆಚ್ಚಾಗಿ ಐಎಎಸ್ ಅಧಿಕಾರಿಗಳೇ ನೇಮಕಗೊಳ್ಳುತ್ತ ಬಂದಿದ್ದಾರೆ. ಈ ಮಾತಿಗೆ ಪೆರಿ ಶಾಸ್ತ್ರಿ ಹಾಗೂ ವಿ. ಎಸ್. ರಮಾದೇವಿ (ಇಬ್ಬರೂ ಹಿಂದೆ ಕೇಂದ್ರದ ಕಾನೂನು ಕಾರ್ಯದರ್ಶಿಯಾಗಿದ್ದವರು)ಯವರಂಥ ಕೆಲವು ಅಪವಾದಗಳಿರಬಹುದು. ನಮ್ಮ ಕೆಲ ಅರ್ಥಶಾಸ್ತ್ರಜ್ಞರು ರಿಸರ್ವ್ ಬ್ಯಾಂಕಿನ ಗವರ್ನರ್ ಕೂಡ ಆಗಿದ್ದಾರೆ ; ಈ ಮಾತಿಗೆ ದೊಡ್ಡ ಉದಾಹರಣೆ, ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್. ಆದರೆ ಚಾಲ್ತಿಯಲ್ಲಿರುವ ಕ್ರಮವೆಂದರೆ, ಮಾಜಿ ಐಎಎಸ್ ಆಗಿರಬೇಕು, ಅರ್ಥಶಾಸ್ತ್ರಜ್ಞನಾಗಿರಕೂಡದು! ನಮ್ಮ ರಾಜಕಾರಣಿಗಳು ಸಾಮಾನ್ಯವಾಗಿ ಹೇಳಿದಂತೆ ಕೇಳುವ “ಹೌದಪ್ಪ’ ಅಧಿಕಾರಿಗಳೊಂದಿಗೆ ಆರಾಮವಾಗಿರುತ್ತಾರೆ; ಸ್ವಂತ ಚಿಂತನೆಯುಳ್ಳ ಬುದ್ಧಿಜೀವಿಗಳೆಂದರೆ “ಸಮಸ್ಯಾತ್ಮಕ’ ಪ್ರಶ್ನೆಗಳನ್ನೆತ್ತುವ ಅಧಿಕಾರಿಗಳೆಂದರೆ ಮುಜುಗರಪಡುತ್ತಾರೆ. ಇನ್ನಾದರೂ ನಮ್ಮ ರಾಜಕಾರಣಿಗಳು ದೊಡ್ಡ ಗಂಟಲಲ್ಲಿ ಛೀಮಾರಿ ಹಾಕುವುದನ್ನು ಬಿಟ್ಟು ಅಧಿಕಾರಿಗಳ ಸಲಹೆಗೆ ತಾಳ್ಮೆಯಿಂದ ಕಿವಿಗೊಡಬೇಕು. ಹೀಗೆ ಮಾಡಿದಲ್ಲಿ ನಮ್ಮ ಆಡಳಿತ ಉತ್ತಮಗೊಂಡೀತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.