ಹೆತ್ತವರಿಲ್ಲದ ನಾಲ್ವರು ಹೆಣ್ಣು ಮಕ್ಕಳಿಗೆ ಸೂರೂ ಇಲ್ಲ!
Team Udayavani, Dec 19, 2018, 11:05 AM IST
ಕೆಯ್ಯೂರು : ಬದುಕಿಗೆ ಆಸರೆ ಆಗಬೇಕಿದ್ದ ಅಪ್ಪ-ಅಮ್ಮನಿಲ್ಲದ ಕೊರಗು ಒಂದೆಡೆಯಾದರೆ, ವಾಸಕ್ಕೆ ಸೂರಿಲ್ಲದ ನೋವು ಇನ್ನೊಂದಡೆ. ಈಗಿರುವ ಮನೆಗೆ ಬಾಗಿಲು, ಕಿಟಕಿಗಳೇ ಇಲ್ಲದೆ ಮುರುಕಲು ಸ್ಥಿತಿಯಲ್ಲಿದೆ. ಶೌಚಾಲಯ, ಸ್ನಾನಗೃಹ ಸೌಲಭ್ಯವಿಲ್ಲದೆ ದಿನ ದೂಡುತ್ತಿರುವ ಪರಿಶಿಷ್ಟ ಜಾತಿ ಕುಟುಂಬದ ನಾಲ್ವರು ಹೆಣ್ಣು ಮಕ್ಕಳ ಅಸಹಾಯಕ ಬದುಕಿನ ಚಿತ್ರಣವಿದು.
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ಕೆಯ್ಯೂರು ದ್ವಾರದಿಂದ ಅರ್ಧ ಕಿ.ಮೀ. ದೂರದಲ್ಲಿ ರಸ್ತೆ ಸನಿಹದಲ್ಲಿದಲ್ಲಿಯೇ ಈ ಕುಟುಂಬ ವಾಸಿಸುತ್ತಿದೆ. ಹೆಣ್ಣುಮಕ್ಕಳ ತಂದೆ ಹಲವು ವರ್ಷದ ಹಿಂದೆಯೇ ನಿಧನರಾಗಿದ್ದರು. ಮೂರು ವರ್ಷದ ಹಿಂದೆ ತಾಯಿ ಸುಂದರಿ ಅವರು ನಿಧನರಾದ ಬಳಿಕ ಈ ಹೆಣ್ಣು ಮಕ್ಕಳು ಅನಾಥರಂತಾದರು.
ಹಿರಿಯ ಮಗಳು ನೇತ್ರಾ ಪುತ್ತೂರಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದ್ವಿತೀಯ ಪುತ್ರಿ ಪರಮೇಶ್ವರಿ ಖಾಸಗಿಯಾಗಿ ಪಿಯುಸಿ ಕಟ್ಟಿದ್ದಾರೆ. ಶಾರದಾ ಕುಮಾರಿ ಪ್ರಥಮ ಪಿಯುಸಿ ಹಾಗೂ ಕಿರಿಮಗಳು ರಂಜಿನಿ 9ನೇ ತರಗತಿ ಓದುತ್ತಿದ್ದಾರೆ. ಪರಮೇಶ್ವರಿ ಅವರು ತನ್ನ ಅಜ್ಜಿಯ ಜತೆ ಮನೆಯಲ್ಲಿದ್ದಾರೆ. ಉಳಿದ ಮೂವರು ಹಾಸ್ಟೆಲ್‌ನಲ್ಲಿ ಆಸರೆ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮನೆ ಮಂಜೂರಾಗಿತ್ತು
ಕೆಯ್ಯೂರು ಗ್ರಾ.ಪಂ.ನಿಂದ ಮೂರು ವರ್ಷಗಳ ಹಿಂದೆ ಬಸವ ವಸತಿ ಯೋಜನೆಯಡಿ ಸುಂದರಿ ಅವರಿಗೆ ಮನೆ ಮಂಜೂರಾಗಿತ್ತು. ಅಡಿಪಾಯ ಆಗಿ ಒಂದು ಭಾಗದ ಗೋಡೆ ನಿರ್ಮಾಣ ಆರಂಭವಾಗಿತ್ತು. ಈ ವೇಳೆ ಸುಂದರಿ ಮೃತಪಟ್ಟಿದ್ದರು. ಇದರಿಂದ ಮನೆ ಕಾಮಗಾರಿ ಅರ್ಧದಲ್ಲೇ ನಿಂತಿತ್ತು. ಅಧಿಕಾರಿಗಳು ಮನೆ ಅಡಿಪಾಯದ ಫೊಟೋ ತೆಗೆದಿದ್ದರೂ, ಪ್ರಥಮ ಹಂತದಲ್ಲಿ ದೊರೆಯಬೇಕಾದ ಸಹಾಯಧನ ಹಣ ಇನ್ನೂ ಪಾವತಿಯಾಗಿಲ್ಲ. ಆರ್ಥಿಕ ಸಮಸ್ಯೆಯಿಂದಾಗಿ ಕಳೆದ ನಾಲ್ಕು ವರ್ಷದಿಂದ ಮನೆ ಅಪೂರ್ಣ ಸ್ಥಿತಿಯಲ್ಲಿಯೇ ಇದೆ.
ಸಹಾಯಧನಕ್ಕೆ ಅಡ್ಡಿ
ಸುಂದರಿ ಅವರು ಆಧಾರ್ ಕಾರ್ಡ್ ನೀಡದ ಕಾರಣ ಹಣ ಪಾವತಿಗೆ ಅಡ್ಡಿ ಉಂಟಾಗಿತ್ತು. ಅವರ ನಿಧನದ ಬಳಿಕ ಸಮಸ್ಯೆ ಮತ್ತಷ್ಟು ಜಟಿಲವಾಯಿತು. ಆಗ ಮಕ್ಕಳು ವಯಸ್ಕರಾಗಿರಲಿಲ್ಲ. ಈಗ ಇಬ್ಬರು ಮಕ್ಕಳು ವಯಸ್ಕರಾಗಿದ್ದಾರೆ. ತಾಯಿ ಹೆಸರಿನಲ್ಲಿದ್ದ ಮನೆ ಹಿರಿಯ ಮಗಳು ನೇತ್ರಾ ಅವರ ಹೆಸರಿಗೆ ಆಗಿದೆ. ಆದರೆ ಬ್ಯಾಂಕ್ ಖಾತೆ, ಇತರ ದಾಖಲೆಗಳು ವರ್ಗಾವಣೆಯಾಗಿಲ್ಲ. ಆನ್‌ಲೈನ್‌ನಲ್ಲಿ ತಾಂತ್ರಿಕ ಅಡ್ಡಿ ಉಂಟಾಗಿದೆ. ಹಾಗಾಗಿ ಸರಕಾರದ ಸಹಾಯಧನ ಸಿಕ್ಕಿಲ್ಲ. ಪುತ್ತೂರು ತಾ.ಪಂ. ಅಧ್ಯಕ್ಷರ ಮನೆ ಸನಿಹದಲ್ಲೇ ಈ ಬಡ ಕುಟುಂಬ ಇದೆ. ಅವರ ಬಳಿಯೂ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಮನೆಗೂ ಬಂದು ಪರಿಶೀಲಿಸಿದ್ದಾರೆ. ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಆದರೆ ನಮ್ಮ ಸಮಸ್ಯೆಗೆ ಸ್ಪಂದನ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಈ ಮನೆಯ ಹೆಣ್ಣುಮಕ್ಕಳು.
ಕಿತ್ತು ತಿನ್ನುವ ಬಡತನ
ಈ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲಿ ಅಜ್ಜಿ ಇದ್ದಾರೆ. ಅವರಿಗೆ ದೃಷ್ಟಿ ಸಮಸ್ಯೆ ಇದೆ. ನಡೆದಾಡಲು ಕಷ್ಟ. ಮನೆ ಅಡಿ ಸ್ಥಳ ಬಿಟ್ಟು ಬೇರೇನೂ ಇಲ್ಲ. ತಿಂಗಳ ಪಡಿತರವೇ ಹಸಿವು ನೀಗಲು ಇರುವ ದಾರಿ. ಜೀವನೋಪಾಯಕ್ಕೆ ಯಾವುದೇ ಆದಾಯವಿಲ್ಲ ಎನ್ನುತ್ತಾರೆ ನೇತ್ರಾ.
ಶೌಚಾಲಯ ಕೆಲಸ ಶೀಘ್ರ ಆರಂಭ
ಈ ಕುಟುಂಬಕ್ಕೆ 25 ಸಾವಿರ ರೂ. ಮಂಜೂರಾಗಿದೆ. ಆದರೆ, ತುರ್ತಾಗಿ ತಮಗೆ ಶೌಚಾಲಯದ ಅಗತ್ಯವಿದ್ದು, ನಿರ್ಮಿಸಿಕೊಡುವಂತೆ ಅವರು ಮನವಿ ಮಾಡಿದ್ದರಿಂದ ಮುಂದಿನ ವಾರದಲ್ಲೇ ಕೆಲಸ ಪ್ರಾರಂಭಿಸಲಾಗುವುದು. ಗ್ರಾಮ ಪಂಚಾಯತ್ ವತಿಯಿಂದ ಮನೆ ಕಟ್ಟಿಸಲು ಪ್ರಯತ್ನಿಸಲಾಗುವುದು.
-ಭವಾನಿ ಚಿದಾನಂದ,
ತಾ.ಪಂ. ಅಧ್ಯಕ್ಷರು, ಪುತ್ತೂರು
ನೆರವಿಗೆ ಯೋಜನೆ
ಬೆಳ್ಳಾರೆ ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಆ ಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದೇವೆ. ಗ್ರಾ.ಪಂ. ಸಹಿತ ಇತರ ಇಲಾಖೆಗಳ ಜತೆಗೆ ಚರ್ಚಿಸಿದ್ದೇವೆ. ದಾನಿಗಳ ಸಹಕಾರ ಪಡೆದು ಅವರಿಗೆ ನೆರವು ನೀಡಲು ಯೋಜನೆ ರೂಪಿಸುತ್ತಿದ್ದೇವೆ.
– ಪ್ರವೀಣ್ ಕುಮಾರ್,
ಬಿಎಸ್‌ಡಬ್ಲ್ಯೂ ವಿದ್ಯಾರ್ಥಿ, ಬೆಳ್ಳಾರೆ ಕಾಲೇಜು
ಗೋಪಾಲಕೃಷ್ಣ ಸಂತೋಷ್‌ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.