ಫಲಾನುಭವಿ ಆಯ್ಕೆಯಲ್ಲಿ ತಾರತಮ್ಯ ಆರೋಪ
Team Udayavani, Dec 20, 2018, 1:25 AM IST
ಬೆಳ್ತಂಗಡಿ: ಬೆಳ್ತಂಗಡಿ ತಾ.ಪಂ.ನ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಸಭೆಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳಿಗೂ ನೀಡದೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಅನುಮೋದನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.
ಬುಧವಾರ ಇಲ್ಲಿನ ತಾ.ಪಂ. ಸಭಾಂಗಣ ದಲ್ಲಿ ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಪಶು ಸಂಗೋಪನೆ ಇಲಾಖೆಯ ಮಿಶ್ರ ತಳಿ ಹಸು ಘಟಕಕ್ಕೆ ಫಲಾನುಭವಿ ಗಳ ಆಯ್ಕೆಯ ತಾರತಮ್ಯದ ವಿಚಾರ ಪ್ರಸ್ತಾವಿಸಿದರು. ಈ ಸಂದರ್ಭದಲ್ಲಿ ನಿಮ್ಮ ಅವಧಿಯಲ್ಲೂ ಹಾಗೇ ಮಾಡಿದ್ದೀರಿ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಆಗ ಸದಸ್ಯ ಸುಧೀರ್ ಸುವರ್ಣ, ತನ್ನ ಅವಧಿಯಲ್ಲಿ ಯಾವ ಕ್ಷೇತ್ರಗಳಿಗೆ ನೀಡಿದ್ದೇನೆ ಎಂದು ವಿವರಿಸಿದರು. ಆರೋಪ-ಪ್ರತ್ಯಾರೋಪ ಬಳಿಕ ಮುಂದಿನ ಬಾರಿ ಹಾಲಿ ನೀಡಿದ ಕ್ಷೇತ್ರಗಳನ್ನು ಬಿಟ್ಟು ಫಲಾನುಭವಿಗಳ ಆಯ್ಕೆ ನಡೆಸುವ ನಿರ್ಣಯ ಕೈಗೊಂಡ ಬಳಿಕ ಅನುಮೋದನೆಗೆ ಅವಕಾಶ ನೀಡಲಾಯಿತು.
ಅಸಮಾಧಾನ
ತಾಲೂಕಿನ ಕಂದಾಯ ಇಲಾಖೆಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ವಿಜಯ, ಕೆರೆಗಳ ಒತ್ತುವರಿ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ 94ಸಿ ಯೋಜನೆ ಯನ್ನೂ ಅರ್ಹರಿಗೆ ನೀಡುತ್ತಿಲ್ಲ. ಪದೇ ಪದೇ ತಹಶೀಲ್ದಾರ್ ಬದಲಾಗುತ್ತಾರೆ. ಜತೆಗೆ ಸಾರ್ವಜನಿಕ ಸಮಸ್ಯೆಯ ಕುರಿತು ಮಾತನಾಡಿದರೆ ವೈಯಕ್ತಿಕ ಎಂಬ ಆರೋಪ ಬರುತ್ತದೆ ಎಂದರು.
ಸೌಭಾಗ್ಯದಲ್ಲಿ ಅವಕಾಶ
ದೀನ್‌ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆ ಕುರಿತು ಸದಸ್ಯೆ ಧನಲಕ್ಷ್ಮೀ ಪ್ರಶ್ನಿಸಿದಾಗ ಉತ್ತರಿಸಿದ ಮೆಸ್ಕಾಂ ಎಇಇ ಶಿವಶಂಕರ್, ಯೋಜನೆ ಯಲ್ಲಿ ಈಗಾಗಲೇ 624 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಡಿ. 31ಕ್ಕೆ ಅವಧಿ ಮುಕ್ತಾಯಗೊಳ್ಳಲಿದೆ. ಉಳಿದಂತೆ ಸುಮಾರು 640 ಅರ್ಜಿ ಬಂದಿದ್ದು, ಅವುಗಳನ್ನು ಸೌಭಾಗ್ಯ ಯೋಜನೆಯಲ್ಲಿ ಸೇರಿಸಲಾಗುತ್ತಿದೆ. ಇದರಲ್ಲಿ 500 ರೂ. ಪಾವತಿಸಿದರೆ ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೂ ವಿದ್ಯುತ್ ಸಂಪರ್ಕಕ್ಕೆ ಅವಕಾಶವಿದೆ ಎಂದರು. ಸದಸ್ಯರಾದ ಕೊರಗಪ್ಪ ಗೌಡ, ಶಶಿಧರ ಕಲ್ಮಂಜ, ಕೃಷ್ಣಯ್ಯ ಆಚಾರ್ಯ ತಮ್ಮ ವ್ಯಾಪ್ತಿಯಲ್ಲಿನ ವಿದ್ಯುತ್ ಸಂಪರ್ಕ ಕುರಿತು ಪ್ರಸ್ತಾವಿಸಿದಾಗ, ಶೀಘ್ರ ಮುಗಿಸುವುದಾಗಿ ಎಇಇ ಭರವಸೆ ನೀಡಿದರು.
ಸ್ಪಷ್ಟನೆಗಾಗಿ ಆಗ್ರಹ
ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಅನುದಾನ ದುರುಪಯೋಗದ ಕುರಿತ ತನ್ನ ದೂರಿನ ತನಿಖೆಗೆ ಬರುವಾಗ ತನಗೆ ತಿಳಿಸಿಲ್ಲ. ಜತೆಗೆ ಗ್ರಾ.ಪಂ.ನವರು ನೀಡಿದ ಉತ್ತರವೂ ಸರಿಯಿಲ್ಲ. ಈ ಕುರಿತು ತನಗೆ ಸ್ಪಷ್ಟನೆ ನೀಡಬೇಕು ಎಂದು ಸದಸ್ಯ ಲಕ್ಷ್ಮೀನಾರಾಯಣ ಆಗ್ರಹಿಸಿದರು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತಮಗೆ ನೀಡುವುದಾಗಿ ಇಒ ಕುಸುಮಾಧರ್ ಸದಸ್ಯರಿಗೆ ತಿಳಿಸಿದರು.
ಶಿರ್ಲಾಲಿನಲ್ಲಿ ರಸ್ತೆ ಬದಿಯ ಅಪಾಯಕಾರಿ ಮರವೊಂದನ್ನು ತೆರವುಗೊಳಿಸಿಲ್ಲ. ಜತೆಗೆ ರೆಂಬೆಯನ್ನೂ ತೆರವು ಮಾಡದೆ ಅರಣ್ಯ ಇಲಾಖೆಯವರು ತೆರವುಗೊಳಿಸಲಾಗಿದೆ ಎಂಬ ಉತ್ತರ ನೀಡಿದ್ದಾರೆ ಎಂದು ಸದಸ್ಯೆ ಜಯಲಕ್ಷ್ಮೀ ಸಭೆಯ ಗಮನಕ್ಕೆ ತಂದರು. ಅದರ ಕುರಿತು ಶೀಘ್ರ ಕ್ರಮವಾಗಬೇಕು. ಜತೆಗೆ ಯಾವುದೇ ಅಧಿಕಾರಿಯೂ ಸಭೆಗೆ ಸುಳ್ಳು ಮಾಹಿತಿ ನೀಡಬಾರದು ಎಂದು ಅಧ್ಯಕ್ಷೆ ಎಚ್ಚರಿಸಿದರು.
ತಣ್ಣೀರುಪಂತ ಅಂಬೇಡ್ಕರ್ ಭವನ ನಿವೇಶನ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯೆ ಕೇಶವತಿ, 2 ದಿನಗಳೊಳಗೆ ತನಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗೆ ತಿಳಿಸಿದರು. ಓಡಿಲಾ°ಳ ಅಂಬೇಡ್ಕರ್ ಭವನದ ಕುರಿತು ಸದಸ್ಯ ಗೋಪಿನಾಥ್ ನಾಯಕ್ ಮಾಹಿತಿ ಕೇಳಿದರು. ತಾಲೂಕಿಗೆ ಅಂಬೇಡ್ಕರ್ ಭವನಗಳು ಮಂಜೂರಾಗಿ ಹಲವು ವರ್ಷಗಳೇ ಕಳೆದರೂ ನಿವೇಶನ ಅಂತಿಮಗೊಳ್ಳದ ಕುರಿತು ಎಲ್ಲ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು. ಜ. 15ರೊಳಗೆ ನಿವೇಶನ ಅಂತಿಮಗೊಳಿಸುವಂತೆ ಅಧ್ಯಕ್ಷರು ಸೂಚಿಸಿದರು.
ವಿದ್ಯುತ್ ಬಿಲ್ ಪಾವತಿ
ಕೆಲವೊಂದು ಗ್ರಾ.ಪಂ.ಗಳು ಅಂಗನವಾಡಿ ಕೇಂದ್ರಗಳ ವಿದ್ಯುತ್ ಬಿಲ್ ಪಾವತಿ ಮಾಡುತ್ತಿಲ್ಲ. ಹೀಗಾಗಿ ಬಿಲ್ ಪಾವತಿಸುವಂತೆ ಪ್ರತಿ ಪಿಡಿಒಗಳಿಗೆ ಸೂಚನ ಪತ್ರ ನೀಡಲು ನಿರ್ಣಯ ಕೈಗೊಳ್ಳುವಂತೆ ಸದಸ್ಯ ಜೋಯಲ್ ಆಗ್ರಹಿಸಿದರು. ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳ್ತಿಗೆ ಅಕ್ಕಿಯ ಬದಲು ಕುಚ್ಚಲಕ್ಕಿ ನೀಡುವಂತೆ ಸಂಬಂಧಪಟ್ಟವರಿಗೆ ಬರೆಯಲು ಆಗ್ರಹಿಸಿದರು. ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್ ಉಪಸ್ಥಿತರಿದ್ದರು.
ಡಿ. 26ರೊಳಗೆ ದಾಖಲೆ ನೀಡಿ
ಮಾಲಾಡಿ ಗ್ರಾಮದ ಡಿಸಿ ಮನ್ನಾ ಭೂಮಿ ಹಾಗೂ ಶಾಲೆಯ ನಿವೇಶನದ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸದಸ್ಯ ಜೋಯಲ್ ಮೆಂಡೊನ್ಸಾ ವಿಷಯ ಪ್ರಸ್ತಾವಿಸಿ, ತಹಶೀಲ್ದಾರ್ ಆದೇಶಿಸಿದ ಸರ್ವೇ ವಿಚಾರ ಏನಾಯಿತು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಂಬಂಧಪಟ್ಟ ಅಧಿಕಾರಿ, ತಹಶೀಲ್ದಾರ್ ಸರ್ವೇಗೆ ಆದೇಶಿಸಿದ್ದಾರೆ. ಆದರೆ ದಾಖಲೆ ನೀಡದೆ ಸರ್ವೇ ಕಾರ್ಯ ಅಸಾಧ್ಯ ಎಂದರು. ಬಳಿಕ ಅಧ್ಯಕ್ಷೆ ದಿವ್ಯಜ್ಯೋತಿ ಅವರು ಡಿ. 26ರೊಳಗೆ ಸಂಬಂಧಪಟ್ಟ ದಾಖಲೆಗಳನ್ನು ಸರ್ವೇ ಇಲಾಖೆಗೆ ನೀಡುವಂತೆ ಕಂದಾಯ ಇಲಾಖೆಯ ಉಪತಹಶೀಲ್ದಾರ್ ಅವರಿಗೆ ಸೂಚಿಸಿದರು. ಕಲ್ಮಂಜ ಗ್ರಾಮದ ಡಿಸಿ ಮನ್ನಾ ಭೂಮಿಯ ಗಡಿ ಗುರುತು ಮಾಡಿ, ಅರ್ಜಿ ಹಾಕಿರುವ ಫಲಾನುಭವಿಗಳಿಗೆ ನೀಡುವಂತೆ ಸದಸ್ಯ ಶಶಿಧರ್ ಕಲ್ಮಂಜ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.