ಕಾಣೆಯಾದವಳಿಗಾಗಿ ಹುಡುಕಾಟ…
Team Udayavani, Dec 21, 2018, 6:00 AM IST
“ಕಾಣೆಯಾಗಿದ್ದಾರೆ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ…’ ಇಂತಹ ಸಾಲುಗಳನ್ನು ದಿನಪತ್ರಿಕೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿರುವ ಪೋಸ್ಟರ್‌ಗಳಲ್ಲಿ ನೋಡಿರುತ್ತೀರಿ. ಈಗ “ಕಾಣೆಯಾಗಿದ್ದಾಳೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ’ ಎನ್ನುವ ಇಂಥದ್ದೇ ಒಂದು ಸಾಲು ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಗೆ ಬರುತ್ತಿದೆ.
ರಾಜು ಹಲಗೂರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇತ್ತೀಚೆಗೆ ಬನಶಂಕರಿಯಲ್ಲಿರುವ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಮುಹೂರ್ತವನ್ನು ನೆರವೇರಿಸಿತು. ನಿರ್ದೇಶಕ ಚೇತನ್, ಕ್ಯಾಮೆರಾ ಸ್ವಿಚ್ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
“ಕಾಣೆಯಾಗಿದ್ದಾಳೆ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ’ ಚಿತ್ರದಲ್ಲಿ ನವನಟ ಆರ್ಯನ್ ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಕಿರುತೆರೆ ನಿರೂಪಕಿ ರಾಧನಾ ಲಕ್ಷ್ಮೀ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಹೇಮಲತಾ, ಜಯರಾಮ್, ಅಂಜನಾ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಬರುವ ಮುಖ್ಯಮಂತ್ರಿ ಪಾತ್ರಕ್ಕೆ, ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಪ್ರಭಾವಿ ರಾಜಕಾರಣಿಯೊಬ್ಬರನ್ನು ಕರೆತಂದು ಅವರಿಂದ ಬಣ್ಣ ಹಚ್ಚಿಸುವ ಆಲೋಚನೆ ಕೂಡ ಚಿತ್ರತಂಡಕ್ಕಿದೆ.
ಇನ್ನು ಚಿತ್ರದ ಕಥಾ ಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ರಾಜು ಹಲಗೂರು, “ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಾವೇರಿ ಎಂಬ ಹುಡುಗಿ ಮತ್ತು ಶಿವ ಎಂಬ ಹುಡುಗ ಪ್ರೀತಿಸುತ್ತಿರುತ್ತಾರೆ. ನಂತರ ಕಾವೇರಿ ತಾನು ಐಎಎಸ್ ಮಾಡಬೇಕು ಎಂಬ ಉದ್ದೇಶದಿಂದ, ಶಿವನನ್ನು ಮತ್ತು ತನ್ನ ಊರನ್ನು ಬಿಟ್ಟು ಬೆಂಗಳೂರಿಗೆ ಬರುತ್ತಾಳೆ. ಕಾವೇರಿ ಐಎಎಸ್ ಮುಗಿಸಿ ಊರಿಗೆ ಬರುವುದನ್ನೇ ಶಿವ ಕಾಯುತ್ತಿರುತ್ತಾನೆ. ಆದರೆ ಮೂರು ವರ್ಷಗಳು ಕಳೆದರೂ ಕಾವೇರಿ ಬರದಿರುವುದರಿಂದ, ಕೊನೆಗೆ ಶಿವ ಅವಳನ್ನು ಹುಡುಕಿಕೊಂಡು ಹೊರಡುತ್ತಾನೆ. ಅಷ್ಟರಲ್ಲಾಗಲೇ ಕಾವೇರಿ ಕಾಣೆಯಾಗಿರುತ್ತಾಳೆ. ಮುಂದೇನಾಗುತ್ತದೆ? ಕಾಣೆಯಾದ ಕಾವೇರಿ ಸಿಗುತ್ತಾಳಾ? ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್ ಅದನ್ನು ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ.
ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಥ್ರಿಲ್ಲರ್ ಜೊತೆಗೆ ಮೆಸೇಜ್ ಕೂಡ ಇರಲಿದ್ದು, ಚಿತ್ರ ನೋಡುಗರಿಗೆ ಸಂಪೂರ್ಣ ಮನರಂಜನೆ ನೀಡಲಿದೆ ಎನ್ನುವ ಮಾತುಗಳು ಚಿತ್ರತಂಡದ್ದು. ಇನ್ನು ಸೆಟ್ಟೇರಿರುವ “ಕಾಣೆಯಾಗಿದ್ದಾಳೆ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ’ ಚಿತ್ರವನ್ನು ಮಂಡ್ಯ, ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತ ಒಂದೇ ಶೆಡ್ನೂಲ…ನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ಏಪ್ರಿಲ್ ವೇಳೆಗೆ “ಕಾಣೆಯಾದವಳು’ ತೆರೆಮೇಲೆ ಬರಬಹುದು.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.