ಐಐಎಸ್ಸಿಯಿಂದ ನಮ್ಮ ಮೆಟ್ರೋ ಪರೀಕ್ಷೆ
Team Udayavani, Dec 22, 2018, 12:18 PM IST
ಬೆಂಗಳೂರು: ಮೆಟ್ರೋ ಸುರಕ್ಷತೆ ಬಗ್ಗೆ ಕೇಳಿಬರುತ್ತಿರುವ ವದಂತಿಗಳ ಹಿನ್ನೆಲೆಯಲ್ಲಿ ಸೆನ್ಸರ್ ಆಧರಿತ ಉಪಕರಣಗಳನ್ನು ಅಳವಡಿಸಿ ಸುರಕ್ಷತೆ ಸಾಮರ್ಥ್ಯ ಅಳೆಯಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮುಂದಾಗಿದ್ದು, ದೇಶದ ವಿವಿಧ ಮೆಟ್ರೋ ಯೋಜನೆಗಳಲ್ಲಿ ಇದೇ ಮೊದಲ ಬಾರಿ ಇಂತಹದ್ದೊಂದು ಪರೀಕ್ಷೆ ನಡೆಯುತ್ತಿದೆ.
ಟ್ರಿನಿಟಿ ನಿಲ್ದಾಣದ ಬಳಿ “ಹನಿಕಾಂಬ್’ ಪತ್ತೆಯಾದ ಜಾಗದಲ್ಲಿ ಅತ್ಯಾಧುನಿಕ ಸೆನ್ಸರ್ ಆಧಾರಿತ ಎಲೆಕ್ಟ್ರಿಕ್ ಮಾಪನಗಳನ್ನು ಅಳವಡಿಸಿ, ಆ ಉಪಕರಣಗಳಲ್ಲಿ ದಾಖಲಾಗುವ ದತ್ತಾಂಶಗಳನ್ನು ಕಂಪ್ಯೂಟರ್‌ನಲ್ಲಿ ವಿಶ್ಲೇಷಣೆ ಮಾಡಿ, ಮೆಟ್ರೋ ಮಾರ್ಗದ ಕಾಂಕ್ರೀಟ್ ಸ್ಟ್ರಕ್ಚರ್ (ವಯಾಡಕ್ಟ್, ಬೀಮ್ ಮತ್ತು ಗರ್ಡರ್)ಗಳ ಸಾಮರ್ಥ್ಯವನ್ನು ನಿಖರವಾಗಿ ಕಂಡುಹಿಡಿಯಲು ಐಐಎಸ್ಸಿ ತಜ್ಞರು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಉಪಕರಣಗಳನ್ನು ಅಳವಡಿಸುವ ಕಾರ್ಯ ನಡೆದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಲ್) ಮನವಿ ಮೇರೆಗೆ ಐಐಎಸ್ಸಿ ಈ “ಮೆಟ್ರೋ ಹೆಲ್ತ್ ಮಾನಿಟರಿಂಗ್ ಸ್ಟ್ರಕ್ಚರ್’ ನಡೆಸುತ್ತಿದೆ. ಈ ಉದ್ದೇಶಿತ ಪರೀಕ್ಷೆಯ ಫಲಿತಾಂಶಗಳನ್ನು ನೋಡಿಕೊಂಡು, ಅಗತ್ಯಬಿದ್ದರೆ ಉಳಿದ ನಿಲ್ದಾಣಗಳಿಗೂ ಈ ಪರೀಕ್ಷೆ ವಿಸ್ತರಿಸುವ ಚಿಂತನೆ ಇದೆ. ಆದರೆ, ಸದ್ಯಕ್ಕೆ ಹನಿಕಾಂಬ್ ಜಾಗಕ್ಕೆ ಇದನ್ನು ಸೀಮಿತಗೊಳಿಸಲಾಗಿದೆ ಎಂದು ನಿಗಮದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಪರೀಕ್ಷೆ ನಡೆಯುವುದು ಹೀಗೆ: ಉದ್ದೇಶಿತ ಟ್ರಿನಿಟಿ ನಿಲ್ದಾಣದಲ್ಲಿರುವ “ಶಾರ್ಟ್ ಸ್ಪ್ಯಾನ್’ (ಸಣ್ಣ ವಯಾಡಕ್ಟ್) ಮತ್ತು ಬೀಮ್ ಕಾಂಕ್ರೀಟ್‌ನಲ್ಲಿಯ ತರಂಗಗಳನ್ನು ಅಳೆಯುವ ಅತ್ಯಂತ ತೆಳುವಾದ “ಸ್ಟ್ರೈನ್ ಗೇಜ್’ಗಳನ್ನು ಅಂಟಿಸಲಾಗುತ್ತದೆ. ಅದಕ್ಕೆ ವೈರ್‌ಗಳನ್ನು ಜೋಡಿಸಿ, ಕಂಪ್ಯೂಟರ್‌ಗೆ ಸಂಪರ್ಕ ನೀಡಲಾಗುತ್ತದೆ. ಕಾಂಕ್ರೀಟ್‌ನ ಚಲನವಲನಗಳನ್ನು ಆಧರಿಸಿ ಉದ್ದೇಶಿತ ಮೆಟ್ರೋ ಮಾರ್ಗ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ.
ಹಾಗಂತ, ಈಗಿರುವುದು ಅಸುರಕ್ಷಿತ ಮಾರ್ಗ ಎಂದಲ್ಲ. ಆದರೆ, ಅದು ಎಷ್ಟು ಒತ್ತಡವನ್ನು ತಡೆದುಕೊಳ್ಳಬಲ್ಲದು ಎಂಬುದನ್ನು ತಿಳಿಯುವ ಸಾಧನ ಇದಾಗಿದೆ ಎಂದು ಐಐಎಸ್ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಸ್ಟ್ರಕ್ಚರಲ್ ಇಂಜಿನಿಯರಿಂಗ್ ತಜ್ಞ ಡಾ.ಜೆ.ಎಂ. ಚಂದ್ರಕಿಶನ್ ಮಾಹಿತಿ ನೀಡಿದರು. ಇನ್‌ಸ್ಟ್ರೆಮೆಂಟೇಷನ್‌ನಲ್ಲಿ ಹಲವು ವಿಧಾನಗಳಿವೆ.
ನಮ್ಮ ಮೆಟ್ರೋದಲ್ಲಿ ನಾವು ಬಳಸುತ್ತಿರುವುದು ಸ್ಟ್ರೈನ್ ಗೇಜ್ ಮೂಲಕ ಅಳೆಯುವ ಪದ್ಧತಿ. ಈ ಪರೀಕ್ಷೆ ಒಂದು ತಿಂಗಳ ಕಾಲ ನಡೆಯಲಿದೆ. ನಿರಂತರವಾಗಿ ಕಾಂಕ್ರೀಟ್‌ನಲ್ಲಾಗುವ ಚಲನವಲನ ವಿಶ್ಲೇಷಿಸಲಾಗುವುದು. ಈ ರೀತಿಯ ಪರೀಕ್ಷೆಗಳು ನಮ್ಮ ಪ್ರಯೋಗಾಲಯಗಳಲ್ಲಿ ನಡೆಯುತ್ತಲೇ ಇರುತ್ತವೆ. ಅಷ್ಟೇ ಅಲ್ಲ, ಭಾರತೀಯ ರೈಲ್ವೆಯಲ್ಲೂ ಈ ಮಾದರಿಯ ಪರೀಕ್ಷೆ ನಡೆಸಿದ್ದಿದೆ. ಮೆಟ್ರೋದಲ್ಲಿ ಮಾತ್ರ ಇದೇ ಮೊದಲು ಎಂದು ಅವರು ಸ್ಪಷ್ಟಪಡಿಸಿದರು.
ಕೊಂಕಣ ರೈಲ್ವೆ ಸೇತುವೆಯಲ್ಲಿ ನಡೆದಿತ್ತು ಪರೀಕ್ಷೆ: ದೂದ್‌ಸಾಗರ್ ಮುಂದೆ ಹಾದುಹೋಗುವ ಕೊಂಕಣ ರೈಲ್ವೆ ಸೇತುವೆಯ ಸಾಮರ್ಥ್ಯ ಪರೀಕ್ಷೆಗೆ ಇದೇ ಪರೀಕ್ಷೆ ನಡೆಸಲಾಗಿತ್ತು ಎನ್ನಲಾಗಿದೆ. ಉದ್ದೇಶಿತ ಸೇತುವೆ ನಿರ್ಮಿಸಿ 120 ವರ್ಷ ಕಳೆದಿದ್ದು, ರೈಲ್ವೆ ಇಲಾಖೆಯು ಆ ಮಾರ್ಗದಲ್ಲಿ ಸರಕು-ಸಾಗಣೆ ಹೆಚ್ಚಿಸಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಅದರ ಸಾಮರ್ಥ್ಯ ಪರೀಕ್ಷೆ ನಡೆಸಬೇಕಾಗಿತ್ತು.
ಆಗ ಇದೇ ಐಐಎಸ್ಸಿ ತಂಡ ಸೆನ್ಸರ್ ಆಧಾರಿತ ಉಪಕರಣಗಳನ್ನು ಅಳವಡಿಸಿ ಪರೀಕ್ಷಿಸಿತ್ತು. ಮೂಲತಃ 16 ಟನ್‌ಗಳಷ್ಟು ಸರಕು ಸಾಗಿಸುವ ಉದ್ದೇಶದಿಂದ ಆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಪರೀಕ್ಷೆ ನಂತರ 35 ಟನ್‌ನಷ್ಟು ಸಾಗಿಸುವ ಸಾಮರ್ಥ್ಯವನ್ನು ಆ ಸೇತುವೆ ಹೊಂದಿರುವುದು ಗೊತ್ತಾಗಿತು!
ಸ್ಟ್ರೈನ್ ಗೇಜ್ ಎಷ್ಟು ಸೂಕ್ಷ್ಮ?: ಬೀಮ್ ಒಳಗಿನ ಸಂಪೂರ್ಣ ಚಿತ್ರಣವನ್ನು ನೀಡುವ ಈ ಸ್ಟ್ರೈನ್ ಗೇಜ್ (sಠಿrಚಜಿn ಜಚಜಛಿ), ಕಾಂಕ್ರೀಟ್‌ನಲ್ಲಿನ ಸಣ್ಣ ಚಲನವಲನವನ್ನೂ ಪತ್ತೆ ಮಾಡುತ್ತದೆ. ಅಂದರೆ, 1 ಮಿ.ಮೀ. ಅನ್ನು ಹತ್ತು ಲಕ್ಷ ತುಂಡುಗಳನ್ನಾಗಿ ಮಾಡಿ, ಅದರಲ್ಲಿ ಯಾವುದೇ ಸಣ್ಣ ಚಲನೆ ಕಂಡುಬಂದರೂ ಅದನ್ನು ದಾಖಲಿಸುತ್ತದೆ. ಇದರ ಬೆಲೆ ಅಂದಾಜು 40ರಿಂದ 50 ಲಕ್ಷ ರೂ.!
ಫೋಟೋದಲ್ಲೂ ಸೆರೆಹಿಡಿಯಬಹುದು ಬಿರುಕು!: ವಿವಿಧ ಭಂಗಿಯಲ್ಲಿ ಫೋಟೋಗಳನ್ನು ಸೆರೆಹಿಡಿಯುವ ಮೂಲಕವೂ ಬಿರುಕುಗಳನ್ನು ಕಂಡುಹಿಡಿಯುವ ತಂತ್ರಜ್ಞಾನ ಕೂಡ ಬಂದಿದೆ! ವಯಾಡಕ್ಟ್ ಮತ್ತು ಬೀಮ್‌ಗೆ ಬಣ್ಣ ಬಳಿದು, ಅದರ ಮೇಲೆ ರೈಲು ಹಾದುಹೋಗುವಾಗ ಆ ಬಣ್ಣಬಳಿದ ಜಾಗದ ಹತ್ತಾರು ಚಿತ್ರಗಳನ್ನು ಕ್ಷಣಾರ್ಧದಲ್ಲಿ ಸೆರೆಹಿಡಿಯಲಾಗುತ್ತದೆ. ನಂತರ ಆ ಫೋಟೋಗಳನ್ನು ಕಂಪ್ಯೂಟರ್‌ನಲ್ಲಿ ಹಾಕಿ, ಅದನ್ನು ವಿಶ್ಲೇಷಿಸಿದಾಗ ಬಿರುಕುಗಳನ್ನು ಪತ್ತೆಮಾಡಲು ಸಾಧ್ಯವಿದೆ. ಆದರೆ, ಸದ್ಯಕ್ಕೆ ಈ ಪ್ರಯೋಗವನ್ನು “ನಮ್ಮ ಮೆಟ್ರೋ’ದಲ್ಲಿ ಮಾಡುತ್ತಿಲ್ಲ.
ದೆಹಲಿಯಲ್ಲಿ ಅಳವಡಿಸಲು ಚಿಂತನೆ?: ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿಎಲ್) ಈ ಸೆನ್ಸರ್ ಆಧಾರಿತ ಉಪಕರಣಗಳನ್ನು ಕಾಯಂ ಆಗಿ ಅಳವಡಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಹಾಗೊಂದು ವೇಳೆ ಎಲ್ಲ ನಿಲ್ದಾಣಗಳಲ್ಲೂ ಈ ಉಪಕರಣಗಳನ್ನು ಅಳವಡಿಸಿದರೆ, ಕುಳಿತ ಸ್ಥಳದಿಂದಲೇ ಮೆಟ್ರೋ ಸ್ಟ್ರಕ್ಚರ್‌ಗಳ ಚಲನವಲನವನ್ನು ಗಮನಿಸಬಹುದು. ಯಾವುದೇ ಸ್ಪ್ಯಾನ್‌ನಲ್ಲಿ ಏರುಪೇರು ಕಂಡುಬಂದರೆ, ಮೊಬೈಲ್‌ಗೆ ಸಂದೇಶ ಬರುವ ವ್ಯವಸ್ಥೆಯೂ ಇದರಲ್ಲಿ ಇರುತ್ತದೆ ಎಂದು ತಜ್ಞರೊಬ್ಬರು ತಿಳಿಸಿದರು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.